ಮಹಿಳಾ ಪ್ರಯಾಣಿಕರ ಜತೆ ಸೌಜನ್ಯದಿಂದ ವರ್ತಿಸಿ
ರಾಜ್ಯ ಸರಕಾರ ಜಾರಿಗೆ ತಂದ ‘ಶಕ್ತಿ’ ಯೋಜನೆಗೆ ರಾಜ್ಯಾದ್ಯಂತ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಕೆಎಸ್‌ಆರ್‌ಟಿಸಿಗೆ ಆದಾಯವೂ ಬರುತ್ತಿದೆ. ಆದರೆ, ಯೋಜನೆಯ ಬಗ್ಗೆ ಸಾರಿಗೆ ಇಲಾಖೆಯ ಕೆಲವು ಸಿಬ್ಬಂದಿ ತಾತ್ಸಾರ ಮಾಡುತ್ತಿದ್ದಾರೆ ಎಂಬ ದೂರುಗಳು ಕೇಳಿಬರುತ್ತಿವೆ.
ಹೆಚ್ಚು ಮಹಿಳೆಯರಿದ್ದರೆ ಬಸ್ ನಿಲ್ಲಿಸದೇ ಹೋಗುತ್ತಾರೆ. ಮಹಿಳೆಯರನ್ನು ಏಕವಚನದಲ್ಲಿ ಮಾತನಾಡಿಸುತ್ತಾರೆ. ವಿದ್ಯಾರ್ಥಿಗಳನ್ನು ಹತ್ತಿಸಿ ಕೊಳ್ಳುವುದಿಲ್ಲ ಎಂಬ ದೂರುಗಳು ಸಾಮಾನ್ಯವಾಗಿವೆ. ಯೋಜನೆ ಜಾರಿಗೂ ಮುನ್ನ ನಿರ್ವಾಹಕರು ಹಾಗೂ ಚಾಲಕರು ಮೊದಲು ಮಹಿಳಾ ಪ್ರಯಾಣಿಕರನ್ನು ಸ್ನೇಹ ಬಾಂಧವ್ಯದಲ್ಲಿ ಮಾತನಾಡಿಸುತ್ತಿದ್ದರು. ಆದರೆ, ಈ ಯೋಜನೆ ಜಾರಿಯಾದ ನಂತರ ಕೆಲವು ಸಿಬ್ಬಂದಿ ಮಹಿಳೆಯರನ್ನುಏಕವಚನದಲ್ಲಿ ಮಾತನಾಡಿಸುತ್ತಿರುವ ಬಗ್ಗೆ ಅಲ್ಲಲ್ಲಿ ದೂರುಗಳು ಕೇಳಿಬರುತ್ತಿವೆ. ಮಹಿಳೆಯರು ಹತ್ತಿದರೆ ಅಸಹನೆ ವ್ಯಕ್ತಪಡಿಸುತ್ತಾರೆ.
ಮಾರ್ಗ ಮಧ್ಯದ ನಿಲ್ದಾಣ, ತಂಗುದಾಣಗಳಲ್ಲಿ ಬಸ್‌ಗೆ ಕಾಯುತ್ತಿರುವವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದ್ದರೆ, ಕೆಲವು ಚಾಲಕರು ಬಸ್ ನಿಲ್ಲಿಸುವು ದಿಲ್ಲ. ನಿಲ್ಲಿಸಿದರೂ, ಸ್ವಲ್ಪ ಜನರನ್ನು ಹತ್ತಿಸಿಕೊಂಡು, ಹಿಂದಿನ ಬಸ್‌ನಲ್ಲಿ ಬನ್ನಿ ಎಂದು ಹೇಳುತ್ತಾರೆ. ಇದೆಲ್ಲವನ್ನೂ ನೋಡಿದರೆ ಚಾಲಕರು ಮತ್ತು ನಿರ್ವಾಹಕರು ಶಕ್ತಿ ಯೋಜನೆಯನ್ನು ಸಾರಿಗೆ ಸಂಸ್ಥೆಗಳಿಗೆ ಮಾರಕ ಎಂಬಂತೆ ಭಾವಿಸಿದಂತಿದೆ. ವಾಸ್ತವವಾಗಿ ಶಕ್ತಿ ಯೋಜನೆಯಿಂದ ಪ್ರಯಾಣಿಕ ರಿಗಷ್ಟೇ ಅಲ್ಲ, ಸಾರಿಗೆ ಸಂಸ್ಥೆಗಳಿಗೂ ಬಹಳ ಅನುಕೂಲವಾಗಿದೆ ಎಂಬುದನ್ನು ಬಸ್ ಚಾಲಕರು ಮತ್ತು ನಿರ್ವಾಹಕರು ಮೊದಲು ಅರ್ಥ ಮಾಡಿ ಕೊಳ್ಳಬೇಕು. ನಷ್ಟದ ಹಾದಿಯಲ್ಲಿದ್ದ ಸಾರಿಗೆ ಸಂಸ್ಥೆಗಳು ಶಕ್ತಿ ಯೋಜನೆ ಜಾರಿಯಾದ ನಂತರ ಲಾಭದ ದಾರಿಗೆ ಮರಳಿವೆ.
ಖಾಸಗೀಕರಣದ ಹುನ್ನಾರಕ್ಕೆ ಸಿಲುಕಿ ಮುಚ್ಚಿ ಹೋಗುವ ಭೀತಿಯಲ್ಲಿದ್ದ ಸಾರಿಗೆ ಇಲಾಖೆ ಈಗ ತಲೆ ಎತ್ತಿ ನಿಂತಿದೆ ಎಂದರೆ ಅದಕ್ಕೆ ಮಹಿಳಾ ಪ್ರಯಾಣಿಕರೇ ಕಾರಣ ಎಂಬುದನ್ನು ಅರಿಯಬೇಕು. ಅಷ್ಟಕ್ಕೂ ಬಸ್‌ನಲ್ಲಿ ಪ್ರಯಾಣಿಸುವ ಯಾವ ಮಹಿಳೆಯರೂ ಪುಕ್ಕಟೆ ಪ್ರಯಾಣಿಸುತ್ತಿಲ್ಲ, ಅವರ ಪ್ರಯಾಣದ ಹಣವನ್ನು ರಾಜ್ಯ ಸರಕಾರ ಸಾರಿಗೆ ಸಂಸ್ಥೆಗಳಿಗೆ ಪಾವತಿಸುತ್ತಿದೆ ಎಂಬುದನ್ನು ತಿಳಿದುಕೊಳ್ಳಬೇಕು. ಮಹಿಳೆಯರೊಂದಿಗೆ ಹೇಗೆ ನಡೆದುಕೊಳ್ಳಬೇಕು ಎಂಬ ಬಗ್ಗೆ ಚಾಲಕರಿಗೆ ಮತ್ತು ನಿರ್ವಾಹಕರಿಗೆ ಸಾರಿಗೆ ಇಲಾಖೆ ತಿಳಿಸಬೇಕು