ದೀಪವು ನಿನ್ನದೆ, ಗಾಳಿಯು ನಿನ್ನದೆ
ಕತ್ತಲು ಮತ್ತು ಬೆಳಕಿನ ನಡುವಿನ ಹೋರಾಟ ಅಥವಾ ಅದಕ್ಕೆ ಪ್ರತಿಮೆಯಾಗಿರುವ ಹಿತಾಸಕ್ತಿಗಳ ನಡುವಿನ ಹೋರಾಟ ಕೆಲವೆಡೆ ತಾರಕಕ್ಕೇರಿರುವ ಸಂದರ್ಭದಲ್ಲೇ ಮತ್ತೊಂದು ದೀಪಾವಳಿ ಬಂದಿದೆ.
ಇಲ್ಲಿ ಕತ್ತಲು ಎಂದಿದ್ದು ಯುದ್ಧಕ್ಕೆ ಹಾಗೂ ಬೆಳಕು ಎಂದಿದ್ದು ಶಾಂತಿಗೆ. ಉಕ್ರೇನ್ ಮತ್ತು ರಷ್ಯಾ ನಡುವಿನ ಹಿತಾಸಕ್ತಿಯ ಸಮರವನ್ನು ಜಗತ್ತು ಜೀರ್ಣಿಸಿಕೊಳ್ಳುವುದಕ್ಕೆ ಮುಂಚೆಯೇ ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ದ್ವೇಷ ತಾರಕಕ್ಕೇರಿ ಬೀದಿಬೀದಿಗಳಲ್ಲಿ ರಕ್ತಪಾತವಾಗಿದೆ. ‘ಇದರಿಂದ ಭಾರತೀಯರ ದೀಪಾವಳಿಯ ಆಚರಣೆಗೇನೂ ಬಾಧಕವಿಲ್ಲವಲ್ಲಾ?’ ಎಂದು ಕೆಲವರಿಗೆ ಅನ್ನಿಸಬಹುದು.
ಆದರೆ ಯುದ್ಧ ಎಂಬ ಕತ್ತಲು ಮತ್ತು ಅದನ್ನು ಮತ್ತೊಂದು ದೇಶದ ಮೇಲೆ ಹೇರುವ ತಮಂಧದ ಚಿತ್ತಸ್ಥಿತಿ ಯಾರಲ್ಲಿ ಯಾವಾಗ ಬೇಕಿದ್ದರೂ ಆವರಿಸಬಹುದು ಎಂಬುದಕ್ಕೆ ವರ್ತಮಾನದ ಬೆಳವಣಿಗೆಗಳೇ ಸಾಕ್ಷಿಯಾಗಿವೆ. ಇದು ನಕಾರಾತ್ಮಕ ಚಿಂತನೆಯಲ್ಲ, ಮನುಕುಲದ ಮೇಲಿನಸಂಭಾವ್ಯ ತೂಗುಕತ್ತಿಯ ತಲ್ಲಣ. ‘ಹೇ ಯುದ್ಧ..ನೀನೇಕೆ ಬರುವೆ ಈ ಭೂಮಿಗೆ, ತೊಲಗಾಚೆ ನೀನು ಧರೆಯಾಚೆಗೆ, ಮಾನವನ ಮಾರಣಹೋಮಕ್ಕೆಸಿದ್ಧ.. ಜಗ ನುಂಗೋ, ಯಮದೂತ! ಜನ ನುಂಗೋ, ರಣಭೂತ!
ನಿನಗಿನ್ನೂ ದಾಹ ಹಿಂಗಿಲ್ವಾ?’ ಎಂದು ಪ್ರಶ್ನಿಸುತ್ತದೆ ಒಂದು ಚಲನಚಿತ್ರಗೀತೆ. ಈ ಸಾಲುಗಳ ಒಳಕ್ಕಿಳಿದರೆ ಯುದ್ಧಾನಂತರದ ಪರಿಸ್ಥಿತಿಯು ಸಂತ್ರಸ್ತರ ಪಾಲಿಗೆ ನಿಜಕ್ಕೂ ‘ಕತ್ತಲೆ’ಯೇ ಆಗಿರುತ್ತದೆ ಎಂಬ ಕಹಿಸತ್ಯದ ಅರಿವಾಗುತ್ತದೆ. ಆದರೆ ಸಮರೋನ್ಮಾದದಲ್ಲಿ ಮೈಮರೆತವರಿಗೆ ಇದು ಅರ್ಥವಾಗಬೇಕಲ್ಲ! ‘ದ್ವೇಷ ಎಂಬ ವೈರಾಣು ಮನಸ್ಸಿನಲ್ಲಿ ಜನಿಸಿದಾಕ್ಷಣ ಅದನ್ನು ತೊಡೆದು ಹಾಕದಿದ್ದರೆ ಅಥವಾ ಲಸಿಕೆ ನೀಡಿ ಅದರ ಶಕ್ತಿಗುಂದಿಸದಿದ್ದರೆ ಅದೇ ಮುಂದೆ ಪೆಡಂಭೂತವಾಗಿ ಬೆಳೆದು ಸರ್ವನಾಶಕ್ಕೆ ಕಾರಣವಾಗುತ್ತದೆ’ ಎಂಬ ಅರಿವನ್ನು ಮೂಡಿಸಿಕೊಂಡು ಶಾಂತಿ-ನೆಮ್ಮದಿಯ ಪಥದಲ್ಲಿ ಹೆಜ್ಜೆಹಾಕುವಂತಾಗಲು ಈ ದೀಪಾವಳಿ ಪರ್ವಕಾಲವಾಗಲಿ ಮತ್ತು ಆ ಅರಿವಿನ ಪಥಕ್ಕೆ ಮತ್ತಷ್ಟು ಬೆಳಕು ಚೆಲ್ಲಲಿ ಎಂದು ಆಶಿಸೋಣ.