ತೂಕದ ಮಾತಿಂದ ವ್ಯಕ್ತಿತ್ವಕ್ಕೂ ತೂಕ
ಭಾರತೀಯ ಚಲನಚಿತ್ರನಟಿ ಐಶ್ವರ್ಯ ರೈ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾದ ನಂತರ ಎಚ್ಚೆತ್ತು ಕ್ಷಮೆ ಕೇಳಿರುವುದರ ಜತೆಗೆ, ತಮ್ಮ ಹೇಳಿಕೆ ಉದ್ದೇಶಪೂರ್ವಕವಾಗಿರಲಿಲ್ಲ ಎಂದು ತಿಪ್ಪೆ ಸಾರಿಸಿದ್ದಾರೆ.
ಒಂದಿಡೀ ಜಗತ್ತಿಗೆ ಗೊತ್ತಾಗುವಂತೆ ಮೊದಲಿಗೆ ವಿವಾದಾತ್ಮಕ ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುವುದು, ಅದಕ್ಕೆ ಟೀಕೆ-ಟಿಪ್ಪಣಿ ವ್ಯಕ್ತವಾಗುತ್ತಿದ್ದಂತೆ ಹೀಗೆ ಕ್ಷಮೆ ಕೋರಿ ಕೈತೊಳೆದುಕೊಳ್ಳುವುದು ಇತ್ತೀಚೆಗೆ ಮಾಮೂಲಾಗುತ್ತಿದೆ. ಈವರ್ತನೆ ಸಲ್ಲ. ಸ್ವತಃ ಓರ್ವ ಸೆಲೆಬ್ರಿಟಿಯಾಗಿರುವ ಅಬ್ದುಲ್ ರಜಾಕ್ ಅವರು, ಪ್ರಸಿದ್ಧಿಯಲ್ಲಿ ತಮ್ಮನ್ನೂ ಮೀರಿಸಿದ ವ್ಯಕ್ತಿಯೊಬ್ಬರ ಬಗ್ಗೆ, ಅದ ರಲ್ಲೂ ಓರ್ವ ಮಹಿಳೆಯ ಬಗ್ಗೆ ಹೀಗೆ ಹದತಪ್ಪಿ ಮಾತಾಡಿದ್ದು ನಿಜಕ್ಕೂ ಅವರಿಗೆ ಶೋಭೆ ತರುವ ಸಂಗತಿಯಲ್ಲ.
ಅದರಲ್ಲೂ ದೇಶ-ದೇಶಗಳ ನಡುವಿನ ಬಾಂಧವ್ಯವು ಚಿಕ್ಕಪುಟ್ಟ ಕಾರಣಗಳಿಂದಲೇ ಕುಸಿಯುತ್ತಿರುವುದನ್ನು ಮನಗಂಡಾದರೂ ಅವರು ತಮ್ಮ ಮಾತಿ ನಲ್ಲಿ ಎಚ್ಚರ ವಹಿಸಬೇಕಿತ್ತು. ಇದು ನಮ್ಮ ದೇಶದ ಒಂದಷ್ಟು ತಥಾಕಥಿತ ಜನನಾಯಕರಿಗೂ ಅನ್ವಯವಾಗುವ ಎಚ್ಚರಿಕೆಯ ಮಾತು. ಜನಸಂಖ್ಯಾ ನಿಯಂತ್ರಣದ ವಿಷಯದಲ್ಲಿ ಮಹಿಳಾ ಶಿಕ್ಷಣದ ಪ್ರಾಮುಖ್ಯವನ್ನು ಒತ್ತಿಹೇಳುವಾಗಿನ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಮಾತು ಹಾಗೂ ಆಂಗಿಕಗಳು ವಿವಾದವನ್ನು ಹುಟ್ಟುಹಾಕಿರುವುದು ಇದಕ್ಕೆ ಇತ್ತೀಚಿನ ಸೇರ್ಪಡೆ.
ಸಾರ್ವಜನಿಕ ವೇದಿಕೆ ಗಳಲ್ಲಿ ಮಾತನಾಡುವಾಗ ದುಡುಕದೆ, ಒಂದಷ್ಟು ವಿವೇಚನೆಯರಿತು ವರ್ತಿಸಿದರೆ ಇಂಥ ತಪ್ಪುಗಳಾಗುವುದಿಲ್ಲ ಎಂಬುದು ಅನುಭವಿಗಳ ಮಾತು. ಅದರಲ್ಲೂ ಮಹತ್ವದ ಹೊಣೆಗಾರಿಕೆಯ ಹುದ್ದೆಗಳನ್ನು ಅಲಂಕರಿಸಿರು ವವರು, ಸೆಲೆಬ್ರಿಟಿಗಳು ಎನಿಸಿಕೊಂಡವರು ಮತ್ತು ಗಣನೀಯ ಸಂಖ್ಯೆಯಲ್ಲಿ ಅನುಯಾಯಿಗಳನ್ನು ಹೊಂದಿರುವವರು ತಮ್ಮ ಒಂದೊಂದು ಮಾತನ್ನೂ ‘ಅಳೆದು-ತೂಗಿ’ ಆಡಬೇಕಾಗುತ್ತದೆ ಎಂದರೆ ಅತಿಶಯೋಕ್ತಿಯಲ್ಲ.
‘ನುಡಿದರೆ ಮುತ್ತಿನ ಹಾರದಂತಿರಬೇಕು, ನುಡಿದರೆ ಸಟಿಕದ ಶಲಾಕೆಯಂತಿರಬೇಕು, ನುಡಿದರೆ ಲಿಂಗ ಮೆಚ್ಚಿ ಅಹುದಹುದೆನಬೇಕು’ ಎಂದು ಬಸವಣ್ಣ ನವರು ೧೨ನೇ ಶತಮಾನದಲ್ಲೇ ಹೇಳಿರುವುದು ಈ ಕಾರಣಕ್ಕೇ ಅಲ್ಲವೇ ?