ತಂತ್ರಜ್ಞಾನದ ಭಯೋತ್ಪಾದನೆ ತಡೆಗೆ ವಿಶ್ವ ಒಂದಾಗಬೇಕಿದೆ
ಕಳೆದೆರಡು ವಾರಗಳಿಂದ ದೇಶಾದ್ಯಂತ ಡೀಪ್ ಫೇಕ್ ತಂತ್ರಜ್ಞಾನದ ಬಗೆಗೆ ತೀವ್ರ ಚರ್ಚೆ ಎದ್ದಿದೆ. ಸೆಲೆಬ್ರಿಟಿಗಳೆನಿಸಿಕೊಂಡವರು ಫೋಟೊ, ವಿಡಿಯೋ ಗಳನ್ನು ತಿರುಚಿ ಸಾಮಾಜಿಕ ಜಾಲತಾಣಗಳ ಮೂಲಕ ಪಸರಿಸುವ ಕೆಲಸ ಮಾಡಲಾಗುತ್ತಿದೆ. ನಮ್ಮದೇ ಕನ್ನಡದ ನಟಿ ರಶ್ಮಿಕಾ ಮಂದಣ್ಣ ಅವರಮುಖವನ್ನು ದೂರ ದೇಶದಲ್ಲಿರುವ ಎನ್‌ಆರ್‌ಐ ಯುವತಿಯೊಂದರ ದೇಹಕ್ಕೆ ಜೋಡಿಸಿ, ವಿಕೃತಿ ಮೆರೆಯುವ ಕೆಲಸವನ್ನು ಕಿಡಿಗೇಡಿಗಳು ಮಾಡಿದ್ದಾರೆ. ಆಧುನಿಕ ತಂತ್ರಜ್ಞಾನದ ದುರ್ಬಳಕೆಯ ಸ್ಪಷ್ಟ ನಿದರ್ಶನ ಇದು.
ಕೃತಕ ಬುದ್ಧಿಮತ್ತೆ(ಎಐ)ಗೆ ಸಂಬಂಧಿಸಿದ ಅಪಾಯಗಳನ್ನು ಆರಂಭದಲ್ಲಿ ಸಮಾಜದ ಒಂದು ವರ್ಗ ವ್ಯಕ್ತಪಡಿಸಿ, ಎಚ್ಚರಿಸುವ ಕೆಲಸ ಮಾಡಿದೆ, ಮಾಡುತ್ತಲೇ ಇದೆ. ಅದರ ಒಂದೊಂದೇ ಕರಾಳ ಮುಖ ಹೀಗೆ ಕಳಚಿಕೊಳ್ಳುತ್ತಿದೆ. ಇದು ನಿಜಕ್ಕೂ ನಾಗರಿಕ ಸಮಾಜದಲ್ಲಿ ಕಳವಳಕಾರಿ ಸಂಗತಿ. ಬಳಿಕಬಾಲಿವುಡ್ ನಟಿ ಕತ್ರಿನಾ ಕೈಫ್ ಸೇರಿದಂತೆ ಹಲವರ ಡೀಪ್ ಫೇಕ್ ಚಿತ್ರಗಳು ಹರಿದಾಡಿವೆ. ಇದೀಗ ರಶ್ಮಿಕಾ ಪ್ರಕರಣದಿಂದ ಇಂಥ ಕೃತ್ಯಗಳು ಹೆಚ್ಚುಸುದ್ದಿಯಾಗಿವೆಯಾದರೂ ಸಾಕಷ್ಟು ಸುದೀರ್ಘ ಸಮಯದಿಂದ ಸದ್ದಿಲ್ಲದೇ ತಂತ್ರಜ್ಞಾನದ ದುರ್ಬಳಕೆ, ಆ ಮೂಲಕ ವ್ಯಕ್ತಿತ್ವದ ತೇಜೋವಧೆ, ದುರ್ಬಳಕೆಕೆಲಸ ಸದ್ದಿಲ್ಲದೇ ನಡೆಯುತ್ತಲೇ ಬಂದಿದೆ. ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ತರುವ ಇಂಥ ಕೃತ್ಯವನ್ನು ಈ ಹಂತದಲ್ಲೇ ತಡೆಯವ, ಸ್ಪಷ್ಟ ನೀತಿ ರೂಪಿಸುವಕೆಲಸ ಸರಕಾರದ ಮಟ್ಟದಲ್ಲಿ ಆಗಬೇಕಿದೆ.
ಅದಿಲ್ಲದಿದ್ದರೆ ಇಡೀ ಸಮಾಜ ಕಟುಂಬ ವ್ಯವಸ್ಥೆ ವಿಘಟಿತ ಸ್ಥಿತಿಗೆ ಹೋಗಿ ತಲುಪುವ, ಬೃಹತ್ ಸಂಘರ್ಷವನ್ನೇ ಹುಟ್ಟು ಹಾಕುವ ಅಪಾಯಗಳಿವೆ. ಯಾವುದೇ ದೃಷ್ಟಿಯಿಂದ ನೋಡಿದರೂ ಇಂಥ ತಂತ್ರಜ್ಞಾನಗಳು ತೀವ್ರತರ ಅಪರಾಧ ಚಟುವಟಿಕೆಗಳನ್ನು ಉತ್ತೇಜಿಸುವ ಎಲ್ಲ ಸಾಧ್ಯತೆಗಳು ನಿಚ್ಚಳವಾಗಿ ಕಾಂಡುಬರುತ್ತಿದೆ. ಕೌಟುಂಬಿಕ, ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಮಾತ್ರವೇ ಅಲ್ಲ ರಾಜಕೀಯವಾಗಿಯೂ ಇದು ಪ್ರಭಾವ ಬೀರಬಲ್ಲುದು. ಇಡೀ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಹುನ್ನಾರ ನಡೆಯುತ್ತಿರುವುದನ್ನು ಗಮನಿಸಬೇಕು.
ಇಂದಿನ ಸಾಮಾಜಿಕ ಜಾಲತಾಣಗಳ ಯುಗದಲ್ಲಿ ಕೀಳು ಅಭಿರುಚಿಯ ಸಂಗತಿಗಳು ಬಲುಬೇಗ ಬೃಹತ್ ಸಂಖ್ಯೆಯ ಜನರನ್ನು ತಲುಪುತ್ತದೆ. ಇನ್ನೂಸಂಪ್ರದಾಯದ ಪೊರೆಯಿಂದ ಪೂರ್ಣ ಆಚೆ ಬಾರದ ಭಾರತೀಯ ಸನ್ನಿ ವೇಶದಲ್ಲಿ ಸಂವೇದನಾರಾಹಿತ್ಯ ಮನಃಸ್ಥಿತಿ ವಿಜೃಂಬಿಸಿದರೆ ಭವಿಷ್ಯದ ಅಪಾಯವನ್ನೂ ಊಹಿಸಲೂ ಸಾದ್ಯ. ಈ ಹಿನ್ನೆಲೆಯಲ್ಲಿ ಸರಕಾರ ಮಾಹಿತಿ ತಂತ್ರಜ್ಞಾನ ಕಾಯಿದೆಯ ಹಲ್ಲುಗಳನ್ನು ದೃಢಪಡಿಸಿ, ಅಗತ್ಯ ಇದ್ದಲ್ಲಿಇನ್ನಷ್ಟು ಬಲ ತುಂಬಬೇಕಿದೆ. ತಂತ್ರಜ್ಞಾನದ ಭಯೋತ್ಪಾದನೆ ತಡೆಗೂ ಇದಕ್ಕಾಗಿ ವಿಶ್ವ ಸಮುದಾಯ ಒಂದಾಗುವ ಅಗತ್ಯ ಇದೆ.