ಈ ಸಲ ಕಪ್ ನಮ್ದೇ
ಎಲ್ಲೆಡೆ ಈಗ ವಿಶ್ವಕಪ್‌ನದ್ದೇ ಹವಾ. ಇನ್ನೊಂದು ದಿನ ಕಳೆದರೆ ವಿಶ್ವಕಪ್ ಫೈನಲ್ ಹಣಾಹಣಿ ನಡೆಯಲಿದೆ. ಈ ಪಂದ್ಯಕ್ಕಾಗಿ ಇಡೀ ಜಗತ್ತೇ ಎದುರು ನೋಡುತ್ತಿದೆ. ಒಂದೆಡೆ ಈ ಬಾರಿಯ ವಿಶ್ವಕಪ್‌ನಲ್ಲಿ ಭಾರತ ಆಡಿರುವ ಹತ್ತಕ್ಕೆ ಹತ್ತೂ ಪಂದ್ಯಗಳಲ್ಲಿ ಗೆಲುವು ಪಡೆದು ಅದ್ಭುತ ಪ್ರದರ್ಶನ ನೀಡಿದೆ.
ಜತೆಗೆ ಎಲ್ಲ ಪಂದ್ಯಗಳನ್ನು ಗೆದ್ದ ಏಕೈಕ ತಂಡವಾದ ಕಾರಣ ಅತಿಹೆಚ್ಚು ರನ್‌ರೇಟ್‌ನೊಂದಿಗೆ ೧೮ ಅಂಕ ಗಳಿಸಿ, ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ. ಬ್ಯಾಟಿಂಗ್, ಬೌಲಿಂಗ್ ಸೇರಿ ಎಲ್ಲ ವಿಭಾಗ ಗಳಲ್ಲೂ ಭಾರತ ತಂಡ ತನ್ನ ಅತ್ಯದ್ಭುತ ಸಾಮರ್ಥ್ಯವನ್ನು ತೋರ್ಪಡಿಸಿದೆ. ವಿಶ್ವಕಪ್ ತನ್ನದಾಗಿಸಿಕೊಳ್ಳಲು ಭಾರತಕ್ಕಿರುವುದು ಇನ್ನೊಂದೇ ಹೆಜ್ಜೆ. ಭಾರತ ತಂಡ ಕಪ್ ಪಡೆಯುವ ಕ್ಷಣಕ್ಕಾಗಿ ಇಡೀ ದೇಶ ಕಾಯುತ್ತಿದೆ. ಇನ್ನೊಂದೆಡೆ ಏಕದಿನ ವಿಶ್ವಕಪ್‌ನಲ್ಲಿ ಐದೈದು ಬಾರಿ ಚಾಂಪಿಯನ್‌ಗಳಾಗಿರುವ ಆಸ್ಟ್ರೇಲಿಯಾ ತಂಡ, ಆಡಿರುವ ೯ ಪಂದ್ಯಗಳಲ್ಲಿ ೭ ಪಂದ್ಯಗಳನ್ನು ಗೆದ್ದು ೧೪ ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
೨ನೇ ಸೆಮಿ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಿದೆ. ಆದರೆ ಕಡಿಮೆ ರನ್‌ರೇಟ್‌ನ ಕಾರಣ ದಕ್ಷಿಣ ಆಫ್ರಿಕಾ ೨ನೇ ಸ್ಥಾನ ಪಡೆದುಕೊಂಡಿದೆ. ಐದು ಬಾರಿಯ ಚಾಂಪಿಯನ್ ಕಾಂಗರೂಗಳನ್ನು ಮಣಿಸಲು ಮೆನ್ ಇನ್ ಬ್ಲ್ಯೂ ಸರ್ವ ರೀತಿಯಲ್ಲೂ ತಯಾರಿ ನಡೆಸಿದೆ. ವಿಶ್ವದಾಖಲೆ ಮಾಡಿರುವ ವಿರಾಟ್ ಕೊಹ್ಲಿ, ಯುವ ಆಟಗಾರರಾದ ಶುಭ್ ಮನ್ ಗಿಲ್, ಶ್ರೇಯಸ್ ಅಯ್ಯರ್ ಸೇರಿದಂತೆ ೫ನೇ ಕ್ರಮಾಂಕದ ವರೆಗೂ ಭಾರತದ ಬ್ಯಾಟಿಂಗ್ ಶಕ್ತಿ ಅದ್ಭುತವಾಗಿದೆ. ಇನ್ನು ಬೌಲಿಂಗ್ ವಿಭಾಗದಲ್ಲಿ ನೋಡುವುದಾದರೆ ಸದ್ಯ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ೨ನೇ ಸ್ಥಾನ ಪಡೆದಿರುವ ಮೊಹಮ್ಮದ್ ಸಿರಾಜ್, ೭ ವಿಕೆಟ್ ಕಬಳಿಸಿ ಸೆಮೀಸ್ ಗೆಲ್ಲಿಸಿದ ಮೊಹಮ್ಮದ್ ಶಮಿ, ಎಂತಹ ಅನುಭವಿ ಬ್ಯಾಟ್ಸ್‌ಮನ್‌ಗೂ ಬೆವರಿಳಿಸಬಲ್ಲ ಬುಮ್ರಾ, ಅದ್ಭುತ ಆಲ್‌ರೌಂಡರ್ ಜಡೇಜಾ ಇದ್ದಾರೆ.
ಇಷ್ಟೆಲ್ಲ ಚಾಣಾಕ್ಷರನ್ನು ತಯಾರು ಮಾಡುತ್ತಿರುವ ಕನ್ನಡಿಗ ರಾಹುಲ್ ದ್ರಾವಿಡ್‌ರನ್ನು ನೆನೆಯಲೇಬೇಕು. ಅವರ ಮಾರ್ಗದರ್ಶನದಲ್ಲಿ ಹಾಗೂ ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ವಿಶ್ವಕಪ್ ಗೆದ್ದೇ ಗೆಲ್ಲುವುದೆಂಬ ಆತ್ಮವಿಶ್ವಾಸ ತಂಡಕ್ಕಷ್ಟೇ ಅಲ್ಲದೇ ಇಡೀ ದೇಶಕ್ಕಿದೆ. ಎಲ್ಲರ ಮನದಲ್ಲೂ ಈಗ ‘ಈ ಸಲ ಕಪ್ ನಮ್ದೇ’ ಎಂಬ ಗುನುಗು. ಅದೇ ರೀತಿ ಬಾರಿ ಅಜೇಯರಾಗಿ ಮುನ್ನುಗ್ಗುತ್ತಿರುವ ಟೀಂ ಇಂಡಿಯಾ ಜಯಶಾಲಿಯಾಗಲೆಂದು ಆಶಿಸೋಣ.