ನಾಗರಿಕ ಭಯೋತ್ಪಾದನೆಯ ಪರಿ
ಸಂಸತ್ತಿನಲ್ಲಿ ಮತ್ತೊಮ್ಮೆ ತೀವ್ರ ಭದ್ರತಾ ಲೋಪವಾಗಿದೆ. ದೇಶದ ಶಕ್ತಿ ಕೇಂದ್ರದ ಮೇಲೆ ದಾಳಿಯಾದ ೨೨ ವರ್ಷಗಳ ಬಳಿಕ ಅದೇ ದಿನ ಇಬ್ಬರು ಆಗಂತುಕರು ಸಂಸತ್ತಿನ ಸಂದರ್ಶಕರ ಗ್ಯಾಲರಿಯಿಂದ ಲೋಕಸಭೆಯ ಸದಸ್ಯರ ಪೀಠಕ್ಕೆ ಜಿಗಿದು ಹಳದಿ ಬಣ್ಣದ ಆಶ್ರುವಾಯು ಸಿಡಿಸುತ್ತ ಬುಧವಾರ ತೀವ್ರ ಆತಂಕ ಸೃಷ್ಟಿಸಿದ್ದಾರೆ.
ಹೀಗೆ ಏಕಾಏಕಿ ನುಗ್ಗಿದ ವ್ಯಕ್ತಿಗಳಲ್ಲಿ ಮೈಸೂರು ಮೂಲದ ವಿದ್ಯಾರ್ಥಿ ಮನೋರಂಜನ್ ಸಹ ಒಬ್ಬನೆಂಬುದು ಒಂದೆಡೆಯಾದರೆ, ಆರೋಪಿಗಳಿಬ್ಬರೂ ಮೈಸೂರು ಸಂಸದ ಪ್ರತಾಪ್‌ಸಿಂಹ ಅವರಿಂದಲೇ ಪ್ರೇಕ್ಷಕರ ಗ್ಯಾಲರಿಯ ಪಾಸ್ ತೆಗೆದುಕೊಂಡಿದ್ದು ಬಂದಿದ್ದರೆಂಬುದು ಚರ್ಚೆಗೆ ಗ್ರಾಸವಾಗುತ್ತಿದೆ. ಇವೆರಲ್ಲದೇ ಇನ್ನೂ ನಾಲ್ವರು ಸಂಸತ್ತಿನ ಹೊರಗೆ ಪ್ರತಿಭಟನೆ ನಡೆಸುತ್ತಿದ್ದು, ಈ ಪೈಕಿ ಇಬ್ಬರು ಪರಾರಿಯಾಗಿದ್ದರೆ, ಇನ್ನಿಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾಕಿಸ್ತಾನ ಮೂಲದ ಲಷ್ಕರ್ -ಎ-ತಯ್ಯಬ ಮತ್ತು ಜೈಶ್-ಎ-ಮೊಹಮ್ಮದ್ ಸಂಘಟನೆಗಳ ಭಯೋತ್ಪಾದಕರು ೨೦೦೧ರಲ್ಲಿ ಇದೇ ದಿನ ಸಂಸತ್ತಿನ ಮೇಲೆ ದಾಳಿ ಮಾಡಿ ಒಂಬತ್ತು ಜನರನ್ನು ಕೊಂದು ಹಾಕಿದ್ದ ಕರಾಳ ನೆನಪು ಜನರ ಮನಸ್ಸಿನಲ್ಲಿ ನ್ನೂ ಮಾಸಿಲ್ಲ.
ಅದರ ಬೆನ್ನಲ್ಲೇ ದೇಶದ ಆಡಳಿತ ಸ್ಥಾನವಾದ ಸಂಸತ್‌ನ ಭದ್ರತೆಯ ಬಗೆಗೆ ಮತ್ತೊಮ್ಮೆ ಪ್ರಶ್ನೆಗಳೆದ್ದಿವೆ. ಆಗಂತುಕರ ಕೃತ್ಯದ ಹಿಂದಿನ ಉದ್ದೇಶ ಏನಾಗಿತ್ತು ಎಂಬುದು ಸ್ಪಷ್ಟವಾಗಿಲ್ಲ. ತೀರಾ ಭಯಾತ್ಪಾದನಾ ಸಂಘಟನೆಗಳ ಜತೆಗಿನ ಸಂಪರ್ಕವಾಗಲೀ, ಕ್ರಿಮಿನಲ್ ಅಪರಾಧದ ಹಿನ್ನೆಲೆಯಾಗಲೀ ಅವರಿಗಿಲ್ಲವಾದರೂ ಇಂಥ ಕೃತ್ಯವನ್ನು ನಿರ್ಲಕ್ಷಿಸವಂತಿಲ್ಲ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಸಂಸತ್‌ನಲ್ಲಿ ಅವರು ಕೇವಲ ದಟ್ಟಹೊಗೆಯನ್ನಷ್ಟೇ ಹೊಮ್ಮಿಸಿದ್ದಾರೆ.
ಸೋಟದಂಥ ಕೃತ್ಯವಾಗಲೀ, ವಿಧ್ವಂಸಕ ಸಂಚಾಗಲೀ ಕಂಡು ಬಂದಿಲ್ಲ. ಅಂದರೆ ಕೇವಲ ಆತಂಕ-ಗೊಂದಲ ಸೃಷ್ಟಿಸುವ ಮೂಲಕ ದೇಶದ ಆಡಳಿತವ್ಯವಸ್ಥೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಖಭಂಗ ಉಂಟುಮಾಡುವ ಭಾರೀ ಸಂಚೊಂದು ರೂಪುಗೊಂಡಿತ್ತೆಂಬುದು ಸ್ಪಷ್ಟ. ಇದು ಸಹ ‘ನಾಗರಿಕಭಯೋತ್ಪಾದನೆ’ಯೇ. ಆರೋಪಿಗಳಲ್ಲಿ ಕೆಲವರು ಹೆಸರಿಗೆ ವಿದ್ಯಾರ್ಥಿ ಗಳಾಗಿದ್ದರೂ, ಸರಕಾರದ ವಿರುದ್ಧ ಸದಾ ಒಂದಿಲ್ಲೊಂದು ಪ್ರತಿಭಟನೆ, ಹೋರಾಟಗಳಲ್ಲಿ ಪಾಲ್ಗೊಳ್ಳುತ್ತ, ‘ಕ್ರಾಂತಿ’ಯ ಹೆಸರಿನಲ್ಲಿ ದೊಂಬಿ ಗದ್ದಲ ಎಬ್ಬಿಸುತ್ತಿದ್ದರೆಂಬುದು ಗೊತ್ತಾಗಿದೆ. ಈ ಪೈಕಿ ಹೊರಗೆ ಘೋಷಣೆ ಕೂಗಿದಮಹಿಳೆ ನೀಲಂ ಪಂಜಾಬ್‌ನ ತಥಾಕಥಿತ ‘ರೈತ ಹೋರಾಟ’ದಲ್ಲೂ ಕಾಣಿಸಿಕೊಂಡಿದ್ದಳೆನ್ನಲಾಗಿದೆ.
ರೈತ ಪ್ರತಿಭಟನೆಗೆ ಖಲಿಸ್ತಾನಿಗಳ ಪರೋಕ್ಷ ಬೆಂಬಲ ಇದ್ದುದು ಗುಟ್ಟಾಗಿ ಉಳಿದಿಲ್ಲ. ಇದೇ ಸಂದರ್ಭದಲ್ಲಿ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನು ಇತ್ತೀಚೆಗಷ್ಟೇ ಮೋದಿ ಸರಕಾರದ ವಿರುದ್ಧ ದ್ವೇಷದ ಮಾತನಾಡಿ, ಸಂಸತ್ತಿಗೆ ಮತ್ತೆ ದಾಳಿ ಮಾಡುವ ಬೆದರಿಕೆ ಒಡ್ಡಿದ್ದಕ್ಕೂ,ಬುಧವಾರದ ಬೆಳವಣಿಗೆಗೂ ಸಂಬಂಧವಿದೆಯೇ ಎಂಬ ಅನುಮಾನಗಳೂ ಕಾಡುತ್ತಿವೆ. ಒಟ್ಟಾರೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಆರೋಪಿಗಳ ಹಿಂದಿರುವ ಕಾಣದ ಕೈಗಳನ್ನು ಬಯಲು ಮಾಡ ಬೇಕಿದೆ.