ಅಭಿಮಾನ ಅತಿರೇಕಕ್ಕೆ ಹೋಗದಿರಲಿ
ಸ್ಯಾಂಡಲ್‌ವುಡ್ ನಟ ಯಶ್ ಅವರ ಹುಟ್ಟುಹಬ್ಬದ ಶುಭಾಶಯಕ್ಕೆಂದು ದೊಡ್ಡದೊಂದು ಬ್ಯಾನರ್ ಕಟ್ಟಲು ಹೋಗಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಮೂವರು ಯುವಕರು ಮೃತರಾಗಿದ್ದು, ಯಶ್ ಅವರೂ ಸೋಮವಾರ ಸಂಜೆ ಸಂತ್ರಸ್ತ ಕುಟುಂಬಸ್ಥರ ಜತೆ ಮಾತನಾಡಿದ್ದಾರೆ. ಈ ಮೊದಲೇ ಈ ಬಾರಿಯ ಜನ್ಮದಿನಕ್ಕೆ ತಾವು ಊರಲ್ಲಿ ಇರುವುದಿಲ್ಲ ಎಂದಿದ್ದ ಯಶ್, ಕುಟುಂಬ ಸಮೇತರಾಗಿ ಪ್ರವಾಸ ಹೋಗಿದ್ದರು.
ಆದರೆ, ಈ ಗ್ರಾಮದಲ್ಲಿ ಭಾನುವಾರ ತಡರಾತ್ರಿ ಯಶ್ ಅವರ ಮೇಲಿನ ಅಭಿಮಾನದ ಮೇಲಿನಿಂದ ಬೃಹತ್ತಾದ ಬ್ಯಾನರ್ ಮಾಡಿಸಿ ಕಟ್ಟುವಾಗ ವಿದ್ಯುತ್ ತಗುಲಿ ಮೃತಪಟ್ಟರು. ವಿಚಿತ್ರವೆಂದರೆ ಮೂವರ ವಯಸ್ಸೂ ೨೦ರ ಆಸುಪಾಸು. ಮುಂದೆ ಬದುಕಿ ಬಾಳಬೇಕಾದ ಅವರು, ಒಂದು ಸಣ್ಣ ತಪ್ಪಿನಿಂದಾಗಿ ಜೀವವನ್ನೇ ಕಳೆದುಕೊಂಡಿದ್ದಾರೆ. ಈ ಘಟನೆ ಇಡೀ ರಾಜ್ಯಕ್ಕೇ ದಂಗು ಬಡಿಸಿತ್ತು. ನೆಚ್ಚಿನ ನಟನ ಮೇಲಿನ ಅಭಿಮಾನ ತೋರಿಸಲು ಹೋಗಿ ಪ್ರಾಣ ಕಳೆದುಕೊಂಡ ಬಗ್ಗೆರಾಜ್ಯವೇ ಮರುಗಿತ್ತು. ಬೆಳಗ್ಗೆಯಿಂದಲೂ ಮೃತ ಯುವಕರ ಗೋಳೂ ಕೇಳದಾಗಿತ್ತು.
ಈ ಗ್ರಾಮಕ್ಕೆ ಸೋಮವಾರ ಸಂಜೆ ತೆರಳಿದ್ದ ಯಶ್, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ಸಂದರ್ಭದಲ್ಲಿ ಅವರು ಹೇಳಿರುವ ಮಾತುಗಳನ್ನು ಎಲ್ಲ ನಟರ ಅಭಿಮಾನಿಗಳೂ ಕೇಳಿಸಿಕೊಳ್ಳಲೇಬೇಕು. ಅಂದರೆ, ಅಭಿಮಾನ ಇರಲಿ, ಆದರೆ ಈ ರೀತಿ ಅಭಿಮಾನ ತೋರಿಸುವುದು ಬೇಡ. ಜೀವ ಮತ್ತು ಜೀವನ ಎರಡೂ ದೊಡ್ಡದು. ಅಭಿಮಾನಿಗಳು ಹುಷಾರಾಗಿರಬೇಕು. ಯಾರೇ ಬೇಜಾರು ಮಾಡಿಕೊಂಡರು ಸರಿಯೇ, ಬ್ಯಾನರ್ ಸೇರಿದಂತೆ ಯಾವುದೇ ಕೆಲಸ ಮಾಡಬೇಡಿ ಎಂದು ಯಶ್ ನೋವಿನಿಂದಲೇ ಹೇಳಿದ್ದಾರೆ.
ಹೌದು, ಯಶ್ ಹೇಳಿದ್ದರಲ್ಲೂ ಸತ್ಯವಿದೆ. ನಟರ ಮೇಲಿನ ಅಭಿಮಾನವನ್ನು ಯಾರೊಬ್ಬರೂ ವಿರೋಽಸುವುದಿಲ್ಲ. ಆದರೆ, ಇಂಥ ಘಟನೆಗಳಾದಾಗ ಮಾತ್ರ ಎಲ್ಲರ ನೋವಿಗೂ ಕಾರಣವಾಗುವುದಲ್ಲದೇ, ಇವರನ್ನು ನಂಬಿಕೊಂಡಿದ್ದ ಕುಟುಂಬಗಳೂ ಬೀದಿ ಪಾಲಾಗುವಂಥ ಸನ್ನಿವೇಶ ಎದುರಾಗುತ್ತದೆ. ಹಾಗೆಯೇ, ಜೀವಕ್ಕೆ ಸಂಚಕಾರ ತಂದುಕೊಂಡು, ಅಭಿಮಾನ ತೋರಿಸಿ  ಎಂದು ಯಾರೂ ಹೇಳುವುದಿಲ್ಲ. ಎಲ್ಲರ ಅಭಿಮಾನಕ್ಕೆ ಒಂದು ಸ್ಥೀಮಿತತೆ ಇರಲೇಬೇಕು. ಇಲ್ಲದಿದ್ದರೆ ಇಂಥ ಅನಾಹುತಗಳಿಗೆ ಕಾರಣವಾಗಬೇಕಾಗುತ್ತದೆ. ಹಾಗೆಯೇ, ಈ ವಿಚಾರದಲ್ಲಿ ಅಭಿಮಾನಿಗಳು ಸ್ಪರ್ಧೆ ಮಾಡುವ ಅಗತ್ಯವೂ ಇಲ್ಲ. ನಿಮ್ಮ ನೆಚ್ಚಿನ ನಟನಿಗೆ ನೀವು ಯಾವ ರೀತಿಯಲ್ಲಿ ಬೇಕಾದರೂ ಅಭಿಮಾನ ತೋರ್ಪಡಿಸಬಹುದು. ಅದು ಅವರಿಗೆ ಇಷ್ಟವಾಗೇ ಆಗುತ್ತದೆ.
ಇನ್ನು ಮುಂದಾದರೂ, ಎಲ್ಲ ನಟರ ಅಭಿಮಾನಿಗಳು ತುಸು ಎಚ್ಚರಿಕೆಯಿಂದ ಹೆಜ್ಜೆ ಇಡುವುದು ತೀರಾ ಅತ್ಯಗತ್ಯ.