ಕಾಟಾಚಾರಕ್ಕೆ ಶೈಕ್ಷಣಿಕ ಸಮ್ಮೇಳನ ಬೇಕೇ?
ವಿಶ್ವವಿದ್ಯಾಲಯ ಧನಸಹಾಯ ಆಯೋಗ, ರಾಷ್ಟ್ರೀಯ ವೈದ್ಯಕೀಯ ಆಯೋಗ, ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತಿನಂತಹ ಸಂಸ್ಥೆಗಳು ಬೋಧಕರು ಶೈಕ್ಷಣಿಕ ಸಮ್ಮೇಳನಗಳಲ್ಲಿ ಭಾಗವಹಿಸುವುದು ಮತ್ತು ಸಂಶೋಧನಾ ಲೇಖನ ಮಂಡಿಸುವುದನ್ನು ಕಡ್ಡಾಯಗೊಳಿಸಿವೆ.
ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತಾ ಮಂಡಳಿ ಕೂಡ ಪದವಿ ಕಾಲೇಜುಗಳಲ್ಲಿ ಶೈಕ್ಷಣಿಕ ಗುಣಮಟ್ಟದ ಸುಧಾರಣೆಗಾಗಿ ಹಲವಾರು ನಿಯಮ ಗಳನ್ನು ಜಾರಿಗೆ ತಂದಿದ್ದು, ಪದವಿ ಕಾಲೇಜುಗಳಲ್ಲಿ ಪ್ರತಿವರ್ಷ ಶೈಕ್ಷಣಿಕ ಸಮ್ಮೇಳನಗಳ ಆಯೋಜನೆಯನ್ನು ಕಡ್ಡಾಯಗೊಳಿಸಲಾಗಿದೆ. ಹೀಗಾಗಿ ಉಪನ್ಯಾಸಕರು ವರ್ಷದಲ್ಲಿ ನಿರ್ದಿಷ್ಟ ಸಂಖ್ಯೆಯ ಸಮ್ಮೇಳನಗಳಲ್ಲಿ ಪಾಲ್ಗೊಳ್ಳುವುದು ಮತ್ತು ಸಂಶೋಧನಾ ಲೇಖನ ಮಂಡಿಸುವುದು ಅಗತ್ಯವಾಗಿದೆ. ಆದರೆ ಹೆಚ್ಚಿನ ಸಂಖ್ಯೆಯ ಬೋಧಕರು ಆಸಕ್ತಿಗಿಂತ ಹೆಚ್ಚಾಗಿ ಇದನ್ನೊಂದು ಅನಿವಾರ್ಯ ನಿಯಮ ಎನ್ನುವಂತೆ ಪಾಲಿಸುತ್ತಾರೆ. ಪರಿಣಾಮವಾಗಿ ಗುಣಮಟ್ಟದ ಸಂಶೋಧನಾ ಲೇಖನಗಳು ಯಾವೊಂದು ಶೈಕ್ಷಣಿಕ ಸಮಾವೇಶದಲ್ಲೂ ಮಂಡನೆಯಾಗುತ್ತಿಲ್ಲ.
ಸಮಾವೇಶಗಳಿಗೆ ಹೋಗುವ ಬಹುತೇಕರು ‘ಒಂದು ಒಳ್ಳೆಯ ಪ್ರವಾಸವಾಗುತ್ತದೆ’ ಎಂದೇ ಭಾವಿಸಿರುತ್ತಾರೆ. ಸಮಾವೇಶದಲ್ಲಿ ಯಾವ ವಿಷಯ ಮಂಡನೆ ಮಾಡಬೇಕು ಎಂಬುದರ ಅಧ್ಯಯನ ಮಾಡುವುದಕ್ಕಿಂತ ಹೆಚ್ಚಾಗಿ ಆ ಊರಿನ ಸುತ್ತಮುತ್ತ ಇರುವ ಪ್ರೇಕ್ಷಣಿಯ ಸ್ಥಳಗಳ ಬಗ್ಗೆಯೇ ಹೆಚ್ಚು ಮಾಹಿತಿ ಕಲೆ ಹಾಕುತ್ತಾರೆ. ಹೀಗಾಗಿ ಚರ್ಚೆ ಮತ್ತು ಸಂವಾದ ಇಂದಿನ ಬಹುಪಾಲು ಶೈಕ್ಷಣಿಕ ಸಮ್ಮೇಳನಗಳಲ್ಲಿ ಗೋಚರಿಸುತ್ತಿಲ್ಲ. ಶೈಕ್ಷಣಿಕ ಸಮ್ಮೇಳನಗಳ ಉದ್ದೇಶ ವಿಫಲವಾಗುತ್ತಿರುವುದಕ್ಕೆ ಪ್ರತಿನಿಧಿಗಳು ತಮ್ಮ ಪೂರ್ಣ ಸಮಯವನ್ನು ಸಮ್ಮೇಳನದ ಚಟುವಟಿಕೆಗಳಿಗೆ ವಿನಿ ಯೋಗಿಸದಿರುವುದೇ ಕಾರಣ.
ಆಯೋಜಕರು ಕೂಡ ಪ್ರತಿನಿಧಿಗಳ ಸಂಖ್ಯೆ ಹೆಚ್ಚಿಸಬೇಕೆಂಬ ಕಾರಣಕ್ಕೆ ಹಾಜರಿಯಲ್ಲಿ ವಿನಾಯಿತಿ ಕೊಡುವುದರಿಂದ, ಸಮ್ಮೇಳನಗಳು ಪ್ರವಾಸಕೇಂದ್ರಿತ ಆಗುತ್ತಿವೆ. ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿ ಇರುವ ಕಾಲೇಜುಗಳಲ್ಲಿ ಆಯೋಜಿಸುವ ಸಮ್ಮೇಳನಗಳು ಕೂಡ ಅಂತಾರಾಷ್ಟ್ರೀಯ ಸಮ್ಮೇಳನವಾಗಿ ಮಾರ್ಪಡುತ್ತಿವೆ. ನಮ್ಮ ಅಕ್ಕಪಕ್ಕದ ದೇಶಗಳ ಒಂದಿಬ್ಬರು ಪ್ರತಿನಿಧಿಗಳು ಭಾಗವಹಿಸುವಂತೆ ಮಾಡಿ, ಸಮ್ಮೇಳನಕ್ಕೆ ಅಂತಾರಾಷ್ಟ್ರೀಯ ಮಾನ್ಯತೆ ಪ್ರಾಪ್ತವಾಗುವಂತೆ ಮಾಡಲಾಗುತ್ತಿದೆ.
ಇದರಿಂದ ನಿಜಕ್ಕೂ ವಿದ್ಯಾರ್ಥಿಗಳಿಗೆ, ಬೋಧಕರಿಗೇ ನಷ್ಟ. ಆದ್ದರಿಂದ ಹೊಸ ಹೊಳಹುಗಳು ಹಾಗೂ ಚಿಂತನೆಗಳು ಸಮ್ಮೇಳನಗಳ ಫಲಶ್ರುತಿಯಾಗ ಬೇಕು. ಆಗಮಾತ್ರ ಶೈಕ್ಷಣಿಕ ಸಮ್ಮೇಳನಗಳ ಉದ್ದೇಶ ಸಾಕಾರಗೊಂಡು ಅವುಗಳಿಗೆ ಒಂದು ಘನತೆ ಮತ್ತು ಅರ್ಥ ಪ್ರಾಪ್ತವಾಗುವುದು.