ನೀರಿನ ಸಮಸ್ಯೆಗೆ ಕೊಳವೆಬಾವಿ ಒಂದೇ ಪರಿಹಾರವಲ್ಲ
ನೀರಿನ ಅಭಾವದಿಂದ ಕಂಗೆಟ್ಟಿರುವ ಜನರು ಎಲ್ಲೆಂದರಲ್ಲಿ ಕೊಳವೆ ಬಾವಿ ಕೊರೆಸುತ್ತಿದ್ದಾರೆ. ಇದರಿಂದಾಗಿ ಅಂತರ್ಜಲ ನಾಶವಾಗುವದರ ಬಗ್ಗೆ ಯಾರಿಗೂ ಅರಿವಿಲ್ಲವಾಗಿದೆ. ಅಂತರ್ಜಲ ಭೂಮಿಯ ಒಳಗಿರುವ ಬೃಹತ್ ಸರೋವರ, ಹರಿಯುವ ನದಿ ಎಂಬ ತಪ್ಪು ಕಲ್ಪನೆಗಳಿವೆ. ಅಂತರ್ಜಲ ಕುಸಿದಿದೆ ಎಂದರೆ, ಎಲ್ಲಿವರೆಗೂ ಕುಸಿದಿದೆಯೋ ಅಲ್ಲಿಂದಲೇ ಪೈಪ್ ಹಾಕಿ ನೀರು ಎತ್ತೋಣ ಎಂದು ಅರ್ಥೈಸಿಕೊಂಡು, ಜಮೀನಿನ ತುಂಬಾ ಕೊಳವೆ ಬಾವಿ ಕೊರೆಸುವವರೇ ಹೆಚ್ಚಾಗಿದ್ದಾರೆ.

ಇಂಥ ಅವೈಜ್ಞಾನಿಕ ಅರಿವು ಅಂತರ್ಜಲ ಬರಿದಾಗಲು ಕಾರಣ. ಅಂತರ್ಜಲ ಎಂದರೆ ಭೂ ಮೇಲ್ಪದರದಿಂದ ನಿರ್ದಿಷ್ಟ ಆಳದಲ್ಲಿ ಮಣ್ಣಿನ ಕಣಗಳನಡುವಿನ ಖಾಲಿ ಜಾಗದಲ್ಲಿ ಶಿಲಾಪದರಗಳ ನಡುವೆ ಸಂಗ್ರಹವಾಗಿರುವ ನೀರು. ಇದೊಂದು ರೀತಿ ಸ್ಪಂಜಿನಲ್ಲಿ ಶೇಖರಿಸಿಟ್ಟ ನೀರಿನಂತೆ. ನೀರು ಕಣ್ಣಿಗೆ ಕಾಣದಿದ್ದರೂ, ಅದನ್ನು ಹಿಂಡಿ ಹೊರತೆಗೆಯಬಹುದು. ಭೂಗರ್ಭದ ಶಿಥಿಲ ಪದರ ಮತ್ತು ಕಲ್ಲು ಟೊಳ್ಳು ಪದರದಲ್ಲಿ ನೀರು ಲಭ್ಯವಿದೆ. ಆದರೆ ಶೀತಲ ಪದರದಲ್ಲಿರುವ ನೀರು ಮಾತ್ರ ಬಳಕೆಗೆ ಯೋಗ್ಯ. ಉಳಿದ ಎರಡು ಪದರಗಳಲ್ಲಿರುವ ನೀರಿನಲ್ಲಿ ರಾಸಾಯನಿಕಗಳು ಬೆರೆತಿರುತ್ತವೆ.
ಅದೇ ಗಡಸು ನೀರು, ಪ್ಲೊರೈಡ್, ಆರ್ಸೆನಿಕ್‌ನಂತಹ ರಾಸಾಯನಿಕಯುಕ್ತ ನೀರು. ರಾಜ್ಯದಲ್ಲಿ ಬಹುತೇಕ ಕಡೆ ಎಲ್ಲ ಪದರಗಳ ನೀರು ಬರಿದಾಗಿದೆ. ಇಂಥನೀರಿನಿಂದ ಕುಡಿಯಲು, ಕೃಷಿಗಷ್ಟೇ ಅಲ್ಲ, ಕಟ್ಟಡ ನಿರ್ಮಾಣಕ್ಕೂ ಅಪಾಯ. ಆದರೂ ಬಹುತೇಕರು ಕಿಲೊಮೀಟರ್ ದೂರದ ಬೆಟ್ಟದಿಂದ ಪೈಪ್‌ಲೈನ್ ಹಾಕಿ ನೀರು ತರಲು ಪೈಪೋಟಿಗಿಳಿದಿದ್ದಾರೆ. ೫೦ ಅಡಿಗೆ ಒಂದೊಂದು ಕೊಳವೆಬಾವಿ ಕೊರೆಸಿ, ನೀರು ಎತ್ತುತ್ತಿದ್ದಾರೆ. ಮಣ್ಣಿನ ಗುಣಮಟ್ಟ, ಭೂಗರ್ಭದ ರಚನೆ, ಜಲ ಸೆಲೆ ಹರಿಯುವ ಅರಿವಿಲ್ಲದೇ, ಯಾರೋ ಅಂದಾಜಿಸಿ ಗುರುತಿಸುವ ಜಾಗದಲ್ಲಿ ಕೊಳವೆ ಬಾವಿ ಕೊರೆಸುತ್ತಿದ್ದಾರೆ.
ಇಂಥ ಅವೈಜ್ಞಾನಿಕ ಮನಸ್ಥಿತಿ ಅಂತರ್ಜಲದ ಮೇಲೆ ಪರಿಣಾಮ ಬೀರುತ್ತಿದೆ. ಹೀಗೆ ಎಲ್ಲೆಂದರಲ್ಲಿ ಅವೈಜ್ಞಾನಿಕವಾಗಿ ಕೊಳವೆ ಬಾವಿ ಕೊರೆಸಿದ್ದ ರಿಂದಲೇ ರಾಜ್ಯದಲ್ಲಿ ಎಲ್ಲೂ ಕೊಳವೆಬಾವಿಗಳ ಕಾರ್ಯಕ್ಷಮತೆ ಉತ್ತಮವಾಗಿಲ್ಲ. ನೀರಿನ ಸಮಸ್ಯೆಗೆ ಕೊಳವೆಬಾವಿ ಒಂದೇ ಪರಿಹಾರವಲ್ಲ. ಈ ಪರಿಹಾರಕ್ಕೆ ಕೆರೆ ಕಟ್ಟೆಗಳಂತಹ ಜಲಸಂರಕ್ಷಣಾ ತಾಣಗಳನ್ನು ಜೋಡಿಸಬೇಕು. ಗುಡ್ಡಗಾಡು ಪ್ರದೇಶಗಳಲ್ಲೂ ನೀರು ಇಂಗಿಸುವ ಚೆಕ್ ಡ್ಯಾಮ್‌ಗಳು ನಿರ್ಮಾಣವಾಗಬೇಕು.