ಅಧ್ಯಯನಕ್ಕೆ ಪರ್ವಕಾಲವಾಗಲಿ
ಬೆಂಗಳೂರಿನಲ್ಲಿ ನಾಳೆಯಿಂದ (ಫೆ.೨೯) ಮಾರ್ಚ್ ೭ರವರೆಗೆ ೧೫ನೇ ಆವೃತ್ತಿಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ನಡೆಯಲಿರುವುದು ಹೆಮ್ಮೆಯ ಸಂಗತಿ. ಕನ್ನಡ ವಿಶೇಷ ವಿಭಾಗದ ೩೦ ಚಲನಚಿತ್ರಗಳು ಸೇರಿದಂತೆ ೫೦ಕ್ಕೂ ಹೆಚ್ಚಿನ ದೇಶಗಳ ೧೮೫ ಚಲನಚಿತ್ರಗಳು ಈ ಬಾರಿ ಪ್ರದರ್ಶನಗೊಳ್ಳಲಿರು ವುದು ವಿಶೇಷ. ಮಾಹಿತಿ ಮತ್ತು ಮನರಂಜನೆಯನ್ನು ನೀಡುವ ಮಾಧ್ಯಮಗಳ ಯಾದಿಯಲ್ಲಿ ಚಲನಚಿತ್ರಗಳಿಗೆ ಮಹತ್ವದ ಸ್ಥಾನವಿರುವುದನ್ನು ತಳ್ಳಿಹಾಕುವಂತಿಲ್ಲ. ಆದರೆ, ಇತ್ತೀಚಿನ ದಿನಗಳಲ್ಲಿ ಮನರಂಜನೆಯ ಹೆಸರಲ್ಲಿ ಕೀಳು ಅಭಿರುಚಿಯ ಚಿತ್ರಗಳು ಬೆಳ್ಳಿತೆರೆಯನ್ನು ಅಪ್ಪಳಿಸುತ್ತಿರುವುದಕ್ಕೆ ಜನರು ಸಾಕ್ಷಿಯಾಗಿದ್ದಾರೆ.
ಇಲ್ಲವೇ, ಮತ್ತದೇ ಮರಸುತ್ತುವ ಚರ್ವಿತ-ಚರ್ವಣ ವಿಷಯಗಳುಳ್ಳ ಚಿತ್ರಗಳು ನಮ್ಮಲ್ಲಿ ಪುನರಾವರ್ತನೆಯಾಗುತ್ತಿವೆ. ಈ ಏಕತಾನತೆಯನ್ನು ಹೊಡೆ ದೋಡಿಸಲು ನಮ್ಮ ಚಿತ್ರಕರ್ಮಿಗಳು ಕಟಿಬದ್ಧರಾಗಬೇಕು. ಜಗತ್ತಿನ ವಿವಿಧ ಮೂಲೆಗಳ ಚಲನಚಿತ್ರಗಳು ಒಳಗೊಂಡಿರುವ ವಿಷಯ ವೈವಿಧ್ಯ, ಅದನ್ನು ದೃಶ್ಯರೂಪದಲ್ಲಿ ಕಟ್ಟಿಕೊಟ್ಟಿರುವ ರೀತಿ, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಅದರ ನಿರ್ಮಾತೃಗಳು ಅನುಸರಿಸಿರುವ ತಂತ್ರಗಳು ಇವೆಲ್ಲವೂ ನಮ್ಮ ಚಿತ್ರರಂಗದ ಕಲಾವಿದರು ಮತ್ತು ತಂತ್ರಜ್ಞರಿಗೆ ಕೈಪಿಡಿಯಂತಾಗಬೇಕು. ಅದರಲ್ಲೂ ವಿಶೇಷವಾಗಿ, ಚಿತ್ರರಂಗವನ್ನು ಕೇವಲ ದುಡ್ಡು ಮಾಡುವ ದಂಧೆ ಯಾಗಿ ನೋಡದೆ, ಅಭಿವ್ಯಕ್ತಿಗಿರುವ ಬಲಿಷ್ಠ ಮಾಧ್ಯಮವಾಗಿ ಗಂಭೀರವಾಗಿ ಪರಿಗಣಿಸಿರುವ ಚಿತ್ರಕರ್ಮಿಗಳು ಈ ಚಿತ್ರೋತ್ಸವದಲ್ಲಿ ಪ್ರದರ್ಶಿತಗೊಳ್ಳುವ ಒಂದೊಂದು ಚಲನಚಿತ್ರವನ್ನೂ ಒಂದು ಅಧ್ಯಯನ ಸಾಮಗ್ರಿಯಂತೆ ಅವಲೋಕಿಸಬೇಕಿದೆ.
ಇಂಥ ವಾತಾವರಣವನ್ನು ಸರಕಾರ ಮತ್ತು ಚಿತ್ರೋದ್ಯಮ ರೂಪಿಸಬೇಕಿದೆ. ಹಾಲಿವುಡ್ ಚಿತ್ರೋದ್ಯಮ ಸೇರಿದಂತೆ ವಿಶ್ವದ ವಿವಿಧ ಮುಂದುವರಿದ ದೇಶಗಳ ಚಲನಚಿತ್ರಗಳಲ್ಲಿ ಬಳಸಲಾಗುವ ಅತ್ಯಾಧುನಿಕ ಉಪಕರಣಗಳು ಹಾಗೂ ತಂತ್ರಜ್ಞಾನ, ಹೂಡಿಕೆಯಾಗುವ ಅಗಾಧ ಬಂಡವಾಳ ನಮ್ಮಲ್ಲಿನ್ನೂಅಲಭ್ಯವಿರಬಹುದು; ಆದರೆ ವಿದೇಶಿ ಚಿತ್ರಗಳ ಹೂರಣದ ವೈವಿಧ್ಯಕ್ಕೆ ತೆರೆದುಕೊಂಡು, ಅದರ ಕುರಿತಾಗಿ ಚಿಂತನ-ಮಂಥನ ಮಾಡಲಿಕ್ಕಾದರೂ ಸಾಧ್ಯವಿದೆಯಲ್ಲವೇ? ಈ ಬಾರಿಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಇಂಥ ಅಧ್ಯಯನಕ್ಕೆ ಪರ್ವಕಾಲವಾಗಲಿ. ಒಂದು ಕಾಲಕ್ಕೆ ಪುಟ್ಟಣ್ಣ ಕಣಗಾಲರ ‘ಗೆಜ್ಜೆಪೂಜೆ’ ಚಲನಚಿತ್ರವು ಬೈಲೋ ರಷ್ಯಾದಂಥ ವಿದೇಶಿ ನೆಲೆಗಳಲ್ಲಿ ಜನಮೆಚ್ಚುಗೆ ದಕ್ಕಿಸಿಕೊಂಡ ನಿದರ್ಶನಗಳಿವೆ. ಅಂಥ ಗತವೈಭವಮರಳುವುದಕ್ಕೆ ಈ ಚಲನಚಿತ್ರ ಸಂತೆ ಸ್ಪೂರ್ತಿ ತುಂಬಲಿ.