ವಿದ್ಯುತ್ ದರ ಇಳಿಕೆ ಶ್ಲಾಘನೀಯ
ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಸರಕಾರ ದಿವಾಳಿಯಾಗಿದೆ ಎಂಬ ಪ್ರತಿಪಕ್ಷಗಳ ಆರೋಪಗಳ ನಡುವೆಯೇ ವಿದ್ಯುತ್ ದರವನ್ನು ಗಣನೀಯ ಪ್ರಮಾಣದಲ್ಲಿ ಇಳಿಯಾಗಿದೆ. ಪರಿಷ್ಕೃತ ದರ ಮಾರ್ಚ್ ೧ರಿಂದಲೇ ಅನ್ವಯವಾಗಲಿದ್ದು, ಎಲ್ಲ ವರ್ಗದ ಗ್ರಾಹಕರಿಗೂ ವಿದ್ಯುತ್ ಬಿಲ್‌ನ ಬೆಲೆಯ ಭಾರ ತುಸು ಕಡಿಮೆಯಾಗಲಿದೆ.
ಕಳೆದ ಹಣ ಕಾಸು ವರ್ಷದಲ್ಲಿ ಎಸ್ಕಾಂಗಳಿಗೆ ೨೫೯ ಕೋಟಿ ರು. ಲಾಭವಾಗಿದ್ದು, ಇದರ ಲಾಭವನ್ನು ಬಳಕೆದಾರರಿಗೆ ನೀಡುವ ಉದ್ದೇಶದಿಂದ ದರ ಇಳಿಸಲಾಗಿದೆ. ಬಹಳ ಅಪರೂಪವಾಗಿ ನಡೆಯುವ ಈ ಇಳಿಕೆಯ ಲಾಭವನ್ನು ಗೃಹ ಬಳಕೆ ದಾರರು ಮಾತ್ರವಲ್ಲ, ವಾಣಿಜ್ಯ, ಕೈಗಾರಿಕೆ, ರೈತರು ಎಲ್ಲರಿಗೂ ನೀಡಲಾಗಿದ್ದು, ಇದೊಂದು ಶ್ಲಾಘನೀಯ ಕ್ರಮ. ವಿದ್ಯುತ್ ಬೆಲೆ ಮತ್ತು ವಿದ್ಯುತ್ತಿನ ಲಭ್ಯತೆ ರಾಜ್ಯದ ಆರ್ಥಿಕ ಬೆಳವಣಿಗೆಯಲ್ಲಿ ಮುಖ್ಯ ವಾದುದು. ವಿದ್ಯುತ್ ಬೆಲೆ ಏರಿದಂತೆಲ್ಲ ಕೈಗಾರಿಕೆಗಳ, ಕೃಷಿಯ ಉತ್ಪಾದನಾ ವೆಚ್ಚ ಹೆಚ್ಚಾಗುತ್ತದೆ.
ಇದರಿಂದ ಕೈಗಾರಿಕೆ ಹಾಗೂ ಕೃಷಿ ಉತ್ಪನ್ನಗಳು ಗ್ರಾಹಕನವರೆಗೆ ಬರುವಾಗ ಅದರ ಬೆಲೆ ವರ್ಧಿಸುತ್ತದೆ. ಪೆಟ್ರೋಲ್ ಬೆಲೆಯಂತೆಯೇ ವಿದ್ಯುತ್ ಬೆಲೆಹೆಚ್ಚಳವೂ ಹೀಗೆ ಹಣದುಬ್ಬರಕ್ಕೆ ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಸಕಾರಣವಾದ ವಿದ್ಯುತ್ ಬೆಲೆಯನ್ನು ಉಳಿಸಿಕೊಳ್ಳುವುದೊಂದೇ ದಾರಿ. ಗೃಹ ಜ್ಯೋತಿ ಯೋಜನೆಯ ಮೂಲಕ ಮಧ್ಯಮ ವರ್ಗದವರ ಒಂದು ಹೊರೆಯನ್ನು ಸರಕಾರ ಇಳಿಸಿದೆ. ವಿದ್ಯುತ್ ದರ ಇಳಿಕೆಯ ಮೂಲಕ ಅದನ್ನುಇನ್ನಷ್ಟು ಹಗುರವಾಗಿಸಿದೆ. ಈ ಶ್ಲಾಘನೀಯ ಕ್ರಮದಿಂದ ಉಂಟಾಗುವ ಉಳಿಕೆಯನ್ನು ಮಧ್ಯಮ, ಕೆಳಮಧ್ಯಮ ವರ್ಗದವರು ಇತರ ವೆಚ್ಚಗಳನ್ನುಸರಿದೂಗಿಸಲು ಬಳಸಬಹುದಾಗಿದೆ.
ಇಂಧನ ಉತ್ಪಾದನೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕವು ನಾಯಕತ್ವ ವಹಿಸಿದೆ. ಕರ್ನಾಟಕವು ನವೀಕರಿಸಬಹುದಾದ, ಹೆಚ್ಚುವರಿ ವಿದ್ಯುತ್ ಹೊಂದಿರುವ ರಾಜ್ಯವಾಗಿದೆ. ಆಧುನಿಕ ಗ್ರಿಡ್ ಸೌಲಭ್ಯಗಳನ್ನು ಅಳವಡಿಸಿಕೊಳ್ಳುವುದರ ಜತೆಗೆ ಕೋಟ್ಯಂತರ ಗ್ರಾಹಕರಿಗೆ ವಿವಿಧ ಸೇವೆಗಳನ್ನು ಒದಗಿಸಿದೆ. ಇನ್ನಷ್ಟು ಪರಿಣಾಮಕಾರಿ, ಸುಸ್ಥಿರವಾಗಿ ಬೆಳೆಯಬಲ್ಲ ಸಾಧ್ಯತೆಯನ್ನು ರಾಜ್ಯದ ಇಂಧನ ವಲಯ ಹೊಂದಿದೆ. ಆದರೆ ರಾಜ್ಯದ ಪೂರ್ಣ ಸಾಮರ್ಥ್ಯವನ್ನು ಇನ್ನೂ ಶೋಧಿಸಬೇಕಿದೆ. ಅದರ ಲಾಭವನ್ನು ಗ್ರಾಹಕರಿಗೆ ಒದಗಿಸಬೇಕಿದೆ.