ಪೊಲೀಸರು-ವಕೀಲರ ಸಂಘರ್ಷ ಕೊನೆಯಾಗಲಿ
ಚಿಕ್ಕಮಗಳೂರಿನಲ್ಲಿ ವಕೀಲರೊಬ್ಬರಿಗೆ ಪೊಲೀಸರು ಥಳಿಸಿದ್ದ ಪ್ರಕರಣಕ್ಕೆ ಸಂಬಂಧಿಸಿ ಆದ ರಂಪಾಟ ರಾಜ್ಯಾದ್ಯಂತ ಸದ್ದು ಮಾಡಿತ್ತು. ಆ ಪ್ರಕರಣ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಅಂತಹದ್ದೇ ಪ್ರಕರಣ ಸದ್ದು ಮಾಡುತ್ತಿದೆ. ೪೦ ವಕೀಲರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆಎಂದು ಆರೋಪಿಸಿ ರಾಮನಗರದಲ್ಲಿ ಕಳೆದ ೧೦ ದಿನಗಳಿಂದ ವಕೀಲರು ಹೋರಾಟಕ್ಕಿಳಿದಿದ್ದು, ವಕೀಲರ ಹೋರಾಟಕ್ಕೆ ಮಣಿದ ಸರಕಾರ ಐಜೂರುಪೊಲೀಸ್ ಠಾಣೆಯ ಪಿಎಸ್‌ಐ ಸಯ್ಯದ್ ತನ್ವೀರ್ ಹುಸೇನ್ ಅವರನ್ನು ಅಮಾನತು ಮಾಡಿದೆ.
ಸದ್ಯಕ್ಕೆ ಈ ಪ್ರಕರಣ ತಣ್ಣಗಾದಂತಾಗಿದೆ. ಆದರೆ ಕಳೆದ ೧೦ ದಿನಗಳಲ್ಲಿ ಕೋರ್ಟ್ ಕಲಾಪ ಬಹಿಷ್ಕಾರ, ಜಿಲ್ಲಾಡಳಿತ ಕಚೇರಿಗೆ ಮುತ್ತಿಗೆ, ಬೈಕ್ ರ‍್ಯಾಲಿ, ಬೃಹತ್ ಪ್ರತಿಭಟನೆ ಸೇರಿದಂತೆ ಎಲ್ಲ ಅನಪೇಕ್ಷಿತ ಬೆಳವಣಿಗೆಗಳೂ ಅಲ್ಲಿ ನಡೆದವು. ಇದು ಬೇಲಿಯೇ ಎದ್ದು ಹೊಲ ಮೇಯ್ದಂತಹ ಪರಿಸ್ಥಿತಿ. ಕಾನೂನು ರಕ್ಷಣೆ ಹಾಗೂ ನ್ಯಾಯದಾಕ್ಕಾಗಿಯೇ ಇರುವ ಎರಡು ಪ್ರಮುಖ ವೃತ್ತಿಪರರು ಸಂಘರ್ಷಕ್ಕೆ ಇಳಿದದ್ದು ಎಷ್ಟರ ಮಟ್ಟಿಗೆ ಸರಿ? ಕಾರಣ ಏನೇ ಇದ್ದರೂ ಕಾನೂನು-ಶಿಸ್ತು ಪರಿಸ್ಥಿತಿ ಮತ್ತು ನ್ಯಾಯಪ್ರeಯನ್ನು ಕಾಪಾಡಬೇಕಾದವರೇ ಪರಸ್ಪರ ಕಾದಾಟದಲ್ಲಿ ತೊಡಗಿದರೆ ಹೇಗೆ? ನ್ಯಾಯದಾನ ಪ್ರಕ್ರಿಯೆಯಲ್ಲಿ ಪೊಲೀಸರು ಮತ್ತು ವಕೀಲರದು ಸಮಪಾಲಿದೆ.
ಜನರಿಗೆ ನ್ಯಾಯ ಒದಗಿಸಲು ಮತ್ತು ಅಪರಾಧಿಗಳಿಗೆ ಶಿಕ್ಷೆ ದೊರಕಿಸಲು ಇಬ್ಬರೂ ಜತೆಗೂಡಿ ಕೆಲಸ ಮಾಡಬೇಕು. ಸಣ್ಣಪುಟ್ಟ ಭಿನ್ನಮತಗಳನ್ನು ಸೂಕ್ತ ವೇದಿಕೆಯಲ್ಲಿ ಮಾತುಕತೆಯ ಮೂಲಕ ಬಗೆಹರಿಸಿ ಕೊಳ್ಳಬೇಕು. ರಾಜಕಾರಣಿಗಳು ಇದರಲ್ಲಿ ಮೂಗು ತೂರಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿರುವ ಆರೋಪಗಳೂ ಕೇಳಿಬಂದಿರುವುದು ಯಾರಿಗೂ ಶೋಭೆ ತರುವ ಸಂಗತಿಯಲ್ಲ. ಅಲ್ಲದೆ, ಪ್ರತಿಭಟನೆ, ರ‍್ಯಾಲಿಗಳಿಗೆ ಹೆದರಿ ಪೊಲೀಸರ ನೈತಿಕ ಸ್ಥೈರ್ಯ ಕುಸಿಯದಂತೆ ನೋಡಿಕೊಳ್ಳಬೇಕಾದ ಹೊಣೆ ಗಾರಿಕೆಯನ್ನು ರಾಜ್ಯ ಸರಕಾರ ಪ್ರದರ್ಶಿಸಬೇಕಿದೆ. ಇಲ್ಲವಾದರೆ ಕಟ್ಟುನಿಟ್ಟಿನ ಶಿಸ್ತು ಅಗತ್ಯವಿರುವ ಪೊಲೀಸ್ ಇಲಾಖೆಯಲ್ಲಿ ಅಸಮಾಧಾನ ಉಂಟಾಗು ವುದು ಸಹಜ. ಅದು ಒಳ್ಳೆಯ ಬೆಳವಣಿಗೆಯಲ್ಲ.
ಹೀಗಾಗಿ ರಾಜ್ಯದ ಹಲವೆಡೆ ಪೊಲೀಸ್ ಮತ್ತು ವಕೀಲರ ನಡುವೆ ನಡೆಯುವ ಸಂಘರ್ಷಗಳು ನಿಲ್ಲಲಿ. ಇನ್ನು ಮುಂದಾದರೂ ಎರಡೂ ವೃತ್ತಿಪರರು ಪರಸ್ಪರ ಸಹಕಾರ ದೊಂದಿಗೆ ಸಾಗಿ ನೈಜ ಅಪರಾಽಗಳಿಗೆ ಶಿಕ್ಷೆ ಕೊಡಿಸಿ ನ್ಯಾಯ ರಕ್ಷಣೆಯತ್ತ ಗಮನ ಹರಿಸಲಿ.