ಬರ ಪರಿಸ್ಥಿತಿ ನಿರ್ವಹಣೆ; ಅಧಿಕಾರಿಗಳ ಮೇಲಿದೆ ಹೊಣೆ
ರಾಜ್ಯದ ೨೨೩ ತಾಲೂಕುಗಳಲ್ಲಿ ಬರಗಾಲ ತಾಂಡವವಾಡುತ್ತಿದೆ. ಅದರಲ್ಲೂ, ೧೯೪ ತಾಲೂಕುಗಳು ತೀವ್ರ ಬರದ ಬರೆಗೆ ನಲುಗಿ ಹೋಗಿವೆ. ರೈತರಂತೂ ತಲೆಮೇಲೆ ಕೈ ಹೊತ್ತು ಕುಳಿತಿದ್ದಾರೆ. ಕುಟುಂಬಕ್ಕೆ ಕುಟುಂಬಗಳೇ ಗುಳೆ ಹೋಗುತ್ತಿವೆ. ಮಳೆ ಇಲ್ಲದೆ ಮುಂಗಾರು ಬೆಳೆ ಹಾನಿ, ಜಲಾಶಯ, ಕೆರೆಗಳಲ್ಲಿ ಹನಿ ನೀರಿಲ್ಲದೆ ಹಿಂಗಾರಿನಲ್ಲಿ ಬಿತ್ತನೆಯೇ ಆಗದಿರುವುದು ನಾಡಿನ ಬೆನ್ನೆಲುಬಾಗಿರುವ ರೈತರ ಬೆನ್ನೆಲುಬನ್ನೇ ಮುರಿದಂತಾಗಿದೆ.
ಕುಡಿಯುವ ನೀರಿನ ಸಮಸ್ಯೆಯೂ ಒಕ್ಕರಿಸಿದೆ. ೯೮ ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೆರೆ-ಕಟ್ಟೆಗಳು ಒಣಗಿಹೋಗಿ, ಬೋರ್‌ ವೆಲ್‌ಗಳಲ್ಲೂ ಹನಿ ನೀರು ಬರದಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಇಡೀ ಸಚಿವ ಸಂಪುಟ ಬರ ನಿರ್ವಹಣೆಗಾಗಿ ಟೊಂಕ ಕಟ್ಟಿ ನಿಂತಿದೆ. ಟ್ಯಾಂಕರ್ ಮೂಲಕ ನೀರು ಪೂರೈಕೆಗೆ ಸೂಚನೆ ನೀಡಿದ್ದಾರೆ, ಸಹಾಯವಾಣಿ ಹಾಗೂ ಕಂಟ್ರೋಲ್ ರೂಂ ಸ್ಥಾಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಆದರೆ ಬರ ನಿರ್ವಹಣೆಯ ವಿಚಾರದಲ್ಲಿ ಅಧಿಕಾರಿಗಳು ದಕ್ಷವಾಗಿ ಕಾರ್ಯನಿರ್ವಹಿಸದಿದ್ದರೆ ರಾಜ್ಯದ ಜನ ಪರದಾಡುವಂತಾಗುತ್ತದೆ. ಆದ್ದರಿಂದ ಅಧಿಕಾರಿಗಳು ಮೈಕೊಡವಿ ಎದ್ದೇಳಬೇಕು. ಕ್ಷಿಪ್ರವಾಗಿ ಪ್ರತಿದಿನ ಸರಿಯಾದ ಸಮಯಕ್ಕೆ ಗ್ರಾಮಗಳಿಗೆ ಕುಡಿಯು ನೀರು ಪೂರೈಕೆ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಜನರಷ್ಟೇ ಜಾನುವಾರುಗಳ ಸಂಖ್ಯೆಯೂ ಇರುವುದರಿಂದ ಅವುಗಳಿಗೂ ಕುಡಿಯುವ ನೀರಿನ ಪೂರೈಕೆಗೆ ಕ್ರಮ ತೆಗೆದುಕೊಳ್ಳಬೇಕು. ಗ್ರಾಮಗಳ ಜತೆಗೆ ಪಟ್ಟಣಗಳು, ನಗರಗಳ ಕಡೆಗೂ ಗಮನ ಹರಿಸಬೇಕು. ಪಟ್ಟಣ, ನಗರ ಹಾಗೂ ಮಹಾ ನಗರಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಲೇ ಟ್ಯಾಂಕರ್ ನೀರು ಪೂರೈಕೆಯ ದಂಧೆ ಶುರುವಾಗುತ್ತದೆ.
ಈಗಾಗಲೇ ನಗರಗಳಲ್ಲಿ ಒಂದು ಟ್ಯಾಂಕರ್ ನೀರಿಗೆ ೨-೩ ಸಾವಿರ ರುಪಾಯಿ ವಸೂಲಿ ಮಾಡುತ್ತಿzರೆ. ಲೆಕ್ಕವಿಲ್ಲದಷ್ಟು ಬೋರ್‌ವೆಲ್‌ಗಳನ್ನು ಕೊರೆದು,ಜನರ ಬಳಿ ೨-೩ ಪಟ್ಟು ಹಣ ವಸೂಲಿ ಮಾಡುವ ದಂಧೆ ಆರಂಭವಾಗಿದೆ. ಈ ದಂಧೆಗೆ ಕಡಿವಾಣ ಹಾಕುವಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಖಡಕ್ ಸೂಚನೆ ಕೊಟ್ಟರೂ ಎಗ್ಗಿಲ್ಲದೆ ದಂಧೆ ಮುಂದುವರಿದೇ ಇದೆ. ಆದ್ದರಿಂದ ಅಧಿಕಾರಿಗಳು ನೀರಿನ ದಂಧೆಯಲ್ಲಿ ತೊಡಗಿದವರ ವಿರುದ್ಧ ಕ್ರಮ ತೆಗೆದು ಕೊಳ್ಳಬೇಕು.