ಆಸಿಡ್ ಮಾರಾಟ ನಿಷೇಧ ಚಿಂತನೆ ಸ್ವಾಗತಾರ್ಹ
ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಸರಕಾರಿ ಪದವಿಪೂರ್ವ ಕಾಲೇಜಿನ ಮೂವರು ದ್ವಿತೀಯ ಪಿಯು ವಿದ್ಯಾರ್ಥಿನಿಯರ ಮೇಲೆ ಕೇರಳದಲ್ಲಿ ಎಂಬಿಎ ಮಾಡುತ್ತಿರುವ ಯುವಕನೊಬ್ಬ ಆಸಿಡ್ ದಾಳಿ ನಡೆಸಿದ್ದು ಆಘಾತಕಾರಿ ಘಟನೆ. ದೇಶಾದ್ಯಂತ ಆಸಿಡ್ ದಾಳಿ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಬರುತ್ತಿವೆ. ೨೦೧೧ರಲ್ಲಿ ೮೩ ದಾಳಿಗಳು ನಡೆದಿದ್ದರೆ, ೨೦೨೧ರಲ್ಲಿ ಇದು ೧೭೬ಕ್ಕೆ ಏರಿತು.
ಕಳೆದ ವರ್ಷ ದೇಶದಲ್ಲಿ ಮಹಿಳೆಯರ ಮೇಲೆ ನಡೆದ ಆಸಿಡ್ ದಾಳಿಗಳ ಪೈಕಿ ಅತ್ಯಂತ ಹೆಚ್ಚಿನ ಘಟನೆಗಳು ಬೆಂಗಳೂರಿನಲ್ಲಿ ನಡೆದಿವೆ ಎನ್ನುವುದು ಆಘಾತಕಾರಿ ಅಂಶ. ೨೦೨೨ರಲ್ಲಿ ಬೆಂಗಳೂರಿನಲ್ಲಿ ಒಟ್ಟು ಎಂಟು ಮಹಿಳೆಯರು ಆಸಿಡ್ ದಾಳಿಗೆ ಒಳಗಾಗಿದ್ದಾರೆ. ದಿಲ್ಲಿ ಮತ್ತು ಅಹಮದಾಬಾದ್ ಎರಡನೇ ಸ್ಥಾನದಲ್ಲಿದೆ. ದಿಲ್ಲಿಯಲ್ಲಿ ಏಳು ಮಹಿಳೆಯರು ಆಸಿಡ್ ದಾಳಿಗೊಳಗಾಗಿದ್ದರೆ ಅಹ್ಮದಾಬಾದ್‌ನಲ್ಲಿ ಐವರು ಮಹಿಳೆಯರು ಈ ದಾಳಿಯ ಸಂತ್ರಸ್ತರಾಗಿದ್ದಾರೆ.
ಇದೇ ಸಂದರ್ಭದಲ್ಲಿ ದಿಲ್ಲಿಯಲ್ಲಿ ಆಸಿಡ್ ದಾಳಿ ನಡೆಸುವ ಪ್ರಯತ್ನದಲ್ಲಿ ವಿಫಲವಾಗಿರುವ ಏಳು ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ. ಹೈದರಾಬಾದ್ ಮತ್ತು ಅಹ್ಮದಾಬಾದ್‌ನಲ್ಲಿ ಇಂತಹ ತಲಾ ಎರಡು ಪ್ರಕರಣಗಳು ವರದಿಯಾಗಿವೆ. ವಿಶೇಷವೆಂದರೆ ಮಹಿಳಾ ದೌರ್ಜನ್ಯಗಳಿಗೆ ಉತ್ತರ ಪ್ರದೇಶ ಕುಖ್ಯಾತವಾಗಿದ್ದರೂ, ಆಸಿಡ್ ದಾಳಿಯಂತಹ ಪ್ರಕರಣಗಳಿಗೆ ಬಹುತೇಕ ದಿಲ್ಲಿ, ಬೆಂಗಳೂರು, ಅಹ್ಮದಾಬಾದ್‌ ನಂತಹ ನಗರಗಳೇ ಗುರುತಿಸಲ್ಪಟ್ಟಿವೆ. ಆಸಿಡ್ ದಾಳಿಯ ಭೀಕರತೆಯ ಬಗ್ಗೆ ಅರಿವಿದ್ದೂ ಇದನ್ನು ತಡೆಯುವಲ್ಲಿ ಅಥವಾ ಕಡಿವಾಣ ಹಾಕುವಲ್ಲಿಸರಕಾರ ವಿಫಲವಾಗಿವೆ.
ಕಡಬದಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ರಾಜ್ಯದಲ್ಲಿ ಆಸಿಡ್ ಮಾರಾಟ ನಿಷೇಽಸುವ ಬಗ್ಗೆ ಚಿಂತನೆ ನಡೆಸಿದ್ದು ಸ್ವಾಗತಾರ್ಹ. ಆದರೆ ಅದಕ್ಕಿಂತಲೂ ಮುಖ್ಯವಾದದ್ದು, ಶಾಲಾ ಕಾಲೇಜು ಗಳಿಗೆ ತೆರಳಿ ಇಂತಹ ಕೃತ್ಯಗಳ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಜೀವ ರಕ್ಷಣಾ ಕಲೆ ಕಲಿಸಿ, ಇಂತಹ ಒತ್ತಡ ಪರಿಸ್ಥಿತಿ ನಿಭಾಯಿಸುವ ಬಗ್ಗೆ ಸ್ಥೈರ್ಯ ತುಂಬುವ ಅಗತ್ಯವಿದೆ. ಇಂತಹ ಅಪರಾಧ ಕೃತ್ಯಗಳಿಗೆ ಏನೆಲ್ಲ ಶಿಕ್ಷೆಯಾಗುತ್ತದೆ. ಅದರ ಗಂಭೀರತೆ ಬಗ್ಗೆಯೂ ತಿಳಿವಳಿಕೆ ನೀಡಬೇಕಿದೆ.