ವಂಚಕರಿದ್ದಾರೆ ಎಚ್ಚರಿಕೆ!
ಬೆಂಗಳೂರು ಮಹಾನಗರಿಯ ಟೆಕ್ಕಿಯೊಬ್ಬರು ಆನ್‌ಲೈನ್ ವಂಚನೆಗೊಳಗಾದ ಸುದ್ದಿ ಬಂದಿದೆ. ಕಸ್ಟಮ್ಸ್ ಅಧಿಕಾರಿಗಳ ಸೋಗಿ ನಲ್ಲಿ ಕರೆಮಾಡಿದ್ದ ವ್ಯಕ್ತಿಯೊಬ್ಬ, ಸದರಿ ಟೆಕ್ಕಿಗೆ ಬರೋಬ್ಬರಿ ೨.೨೪ ಕೋಟಿ ರುಪಾಯಿಗೆ ವಂಚಿಸಿದ್ದಾನಂತೆ. ಇನ್ನೊಂದು ಪ್ರಕರಣದಲ್ಲಿ, ಯುಪಿಐ ಸ್ಕ್ಯಾನರ್ ಅಪ್‌ಡೇಟ್ ಮಾಡುವ ನೆಪದಲ್ಲಿ ಅಪರಿಚಿತನೊಬ್ಬ ಹೋಟೆಲ್ ಮಾಲೀಕರೊಬ್ಬರಿಗೆ ೪೮ ಸಾವಿರ ರುಪಾಯಿಗೆ ಪಂಗನಾಮ ಹಾಕಿದ್ದಾನಂತೆ.
ಮತ್ತೊಂದೆಡೆ, ಮ್ಯಾಟ್ರಿಮೊನಿ ಜಾಲತಾಣದಲ್ಲಿ ನಕಲಿ ಪ್ರೊಫೈಲ್ ಸೃಷ್ಟಿಸಿ ಯುವತಿಯರನ್ನು ಪರಿಚಯಿಸಿಕೊಂಡು ಮದುವೆ ಯಾಗುವುದಾಗಿ ಹೇಳಿ ವಂಚಿಸುತ್ತಿದ್ದ ಆಸಾಮಿಯನ್ನು ಪೊಲೀಸರು ಬಂಽಸಿದ್ದಾರೆ. ಇವನ್ನೆಲ್ಲ ಒಮ್ಮೆ ಅವಲೋಕಿಸಿದರೆ, ನಮ್ಮ ಮೈಮರೆವು ಅಥವಾ ಮಾಹಿತಿಯ ಕೊರತೆಯಿಂದಾಗಿ ಏನೆಲ್ಲಾ ಅಪಾಯಗಳನ್ನು ಮೈಮೇಲೆ ಎಳೆದುಕೊಳ್ಳುತ್ತೇವಲ್ಲವೇ ಎನಿಸುತ್ತದೆ.
ರಂಗೋಲಿ ಕೆಳಗೆ ತೂರಿಕೊಳ್ಳುವಷ್ಟು ಚಾಣಾಕ್ಷರಾಗಿರುವ ವಂಚಕರು, ತಂತ್ರಜ್ಞಾನದ ಏರುಗತಿಯೊಂದಿಗೆ ತಾವೂ ಅಪ್‌ಡೇಟ್ ಆಗುತ್ತಿರುವುದನ್ನು ಬಿಡಿಸಿ ಹೇಳಬೇಕಿಲ್ಲ. ಸೇಫ್ಟಿ ಪಿನ್ ಬಳಸಿ ಬೀಗ ಮುರಿದು ಲೂಟಿ ಮಾಡುತ್ತಿದ್ದವರೂ ಆಧುನಿಕ ತಂತ್ರಜ್ಞಾನ ವನ್ನು ಬಳಸಿ ‘ಕಸುಬುಗಾರಿಕೆ’ ತೋರುತ್ತಿರುವುದರ ವರದಿಗಳನ್ನು ಆಗಾಗ ಓದುತ್ತೇವೆ. ಹೀಗೆ ವಂಚಕರು ವಿವಿಧ ವೇಷಗಳನ್ನು ಧರಿಸಿ ಅಮಾಯಕರ ಮೇಲೆ ದಾಂಗುಡಿ ಇಡುತ್ತಿದ್ದಾರೆ.
ತಾವು ವಂಚನೆಗೊಳಗಾಗಿದ್ದೇವೆ ಎಂಬುದು ಸಂತ್ರಸ್ತರಿಗೆ ಅರಿವಾಗುವಷ್ಟರಲ್ಲಿ ಅದನ್ನು ಎಸಗಿದ ವಂಚಕರು ಅವರಿಂದ ಸಾಕಷ್ಟು ದೂರ ಸಾಗಿರುತ್ತಾರೆ. ಇಂಥ ಮೋಸದ ಪ್ರಕರಣಗಳಿಂದ ಅಮಾಯಕರನ್ನು ರಕ್ಷಿಸಲೆಂದೇ ಪೊಲೀಸ್ ವ್ಯವಸ್ಥೆಯಿದೆ, ನಿರ್ದಿಷ್ಟ ಪ್ರಕರಣಗಳಲ್ಲಿ ಸೈಬರ್ ಅಪರಾಧ ತಡೆ ವಿಭಾಗವೂ ಒತ್ತಾಸೆಯಾಗಿ ನಿಲ್ಲುವುದಿದೆ. ಆದರೆ ಜನಸಾಮಾನ್ಯರು ಎಲ್ಲ  ಸಂದರ್ಭದಲ್ಲೂ ಅವರ ಕಡೆಗೇ ನೋಡಿಕೊಂಡು ನೆರವಿಗಾಗಿ ನಿರೀಕ್ಷಿಸಲಾಗದು.
ಅದು ಕಾರ್ಯತಃ ಸಾಧ್ಯವೂ ಅಲ್ಲ. ಹೀಗಾಗಿ, ಜನರು ತಮ್ಮ ಸುರಕ್ಷತೆಯನ್ನು ತಾವು ನೋಡಿಕೊಳ್ಳುವಷ್ಟರ ಮಟ್ಟಿಗೆ ಸಜ್ಜು ಗೊಳ್ಳಬೇಕಿದೆ. ‘ಇಲ್ಲಿ ನೀಡಲಾಗಿರುವ ಲಿಂಕ್ ಒತ್ತಿದರೆ ನಿಮ್ಮ ಬ್ಯಾಂಕ್ ಖಾತೆಗೆ ದಂಡಿಯಾಗಿ ಹಣ ಬಂದು ಬೀಳುತ್ತದೆ’ ಎಂಬರ್ಥದ ಆನ್‌ಲೈನ್/ಮೊಬೈಲ್ ಪ್ರಲೋಭನೆಗಳಿಂದ ಮೊದಲ್ಗೊಂಡು ಎಲ್ಲ ತೆರನಾದ ವಂಚನೆಗಳಿಂದಲೂ ಜನರು ತಮ್ಮನ್ನು ರಕ್ಷಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಜನಜಾಗೃತಿಯಾಗಲಿ.