ಇನ್ನೂ ನಿಂತಿಲ್ಲ ಹಾಹಾಕಾರ
ಜಗತ್ತಿನ ಕೆಲವು ಭಾಗಗಳಲ್ಲಿ ಶಾಂತಿಮಂತ್ರವನ್ನು ಪಠಿಸುವ ಪರಿಪಾಠವೇ ಕೈಬಿಟ್ಟು ಹೋದಂತಿದೆ. ಪರಸ್ಪರ ಮಾತುಕತೆಗಳ ಮೂಲಕ ಸರಿಮಾಡಿ ಕೊಳ್ಳಬೇಕಾದ ಸಮಸ್ಯೆಗಳ ಪರಿಹಾರಕ್ಕೆ ಶಸಾಸಗಳ ಮೊರೆಹೋಗುವುದಕ್ಕೆ ಏನನ್ನುವುದು? ರಷ್ಯಾ ಮತ್ತು ಉಕ್ರೇನ್ ನಡುವಣ ೨ ವರ್ಷಗಳ ಹಿಂದೆ ಶುರುವಾದ ಸಂಘರ್ಷ ಅದ್ಯಾಕೋ ತಗ್ಗುವ ಲಕ್ಷಣವೇ ಕಾಣುತ್ತಿಲ್ಲ.
ಸಾಕಷ್ಟು ಪ್ರಾಣಹಾನಿ ಹಾಗೂ ಸ್ವತ್ತುನಷ್ಟ ಸಂಭವಿಸಿದ್ದರ ಹೊರತಾಗಿಯೂ ಉಭಯ ದೇಶಗಳು ತಮ್ಮ ಪಟ್ಟು ಸಡಿಲಿಸುತ್ತಿಲ್ಲ, ಹಠವನ್ನು ಬಿಡುತ್ತಿಲ್ಲ. ರಷ್ಯಾದ ಇಂಧನ ಮೂಲಸೌಕರ್ಯಗಳನ್ನು ಗುರಿಯಾಗಿಸಿ ಉಕ್ರೇನ್ ಡ್ರೋನ್ ದಾಳಿ ನಡೆಸಿರುವುದು ಇದಕ್ಕೆ ಇತ್ತೀಚಿನ ಸಾಕ್ಷಿ. ಸಾಲದೆಂಬಂತೆ, ರಷ್ಯಾದ ಒಟ್ಟು ೫೦ ಡ್ರೋನ್‌ಗಳನ್ನು ಉಕ್ರೇನ್ ಹೊಡೆದುರುಳಿಸಿದೆ ಎನ್ನಲಾಗುತ್ತಿದೆ. ಇದಕ್ಕೆ ಪ್ರತಿಯಾಗಿ ರಷ್ಯಾ ಕೂಡ ತೀವ್ರ ಪ್ರತಿದಾಳಿ ನಡೆಸುವ ಸಾಧ್ಯತೆದಟ್ಟವಾಗಿರುವುದರಿಂದ, ಉಕ್ರೇನ್‌ನ ಹಾರ್ಕಿವ್ ಮತ್ತು ಸುತ್ತಲಿನ ಪ್ರದೇಶಗಳ ಜನರು ಈಗಾಗಲೇ ತಮ್ಮ ಮನೆಗಳನ್ನು ತೊರೆಯುತ್ತಿದ್ದಾರಂತೆ.
ವರ್ಷಗಳಷ್ಟು ಕಾಲ ತಮಗೆ ಆಶ್ರಯ ನೀಡಿದ್ದ ನೆಲೆಯನ್ನು, ಮದ್ದು-ಗುಂಡುಗಳ ದಾಳಿಯ ಭಯದಿಂದ ತಲ್ಲಣಗೊಂಡು ಏಕಾಏಕಿ ಬಿಟ್ಟುಹೋಗ ಬೇಕಾದರೆ ಅವರೆಲ್ಲರ ಮನದಲ್ಲಿ ಅದೆಷ್ಟು ನೋವು ಮಡುಗಟ್ಟಿರಬೇಕು? ಆದರೆ ರಕ್ತದಾಹಿಗಳಿಗೆ ಇಂಥ ಸೂಕ್ಷ್ಮಗಳು ಅರಿವಾದರೆ ತಾನೆ? ಮತ್ತೊಂದೆಡೆ, ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವಿನ ಕಿತ್ತಾಟವೂ ತಾರಕಕ್ಕೇರಿದೆ. ಇಸ್ರೇಲ್ ಪಡೆಗಳು ಗಾಜಾದ ಮನೆಯೊಂದರ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ೬ ಮಕ್ಕಳು ಸೇರಿದಂತೆ ೯ ಮಂದಿ ಅಸುನೀಗಿರುವ ಘೋರ ಘಟನೆ ಸಂಭವಿಸಿದೆ. ಈ ಎರಡು ಪಾಳಯಗಳ ತಿಕ್ಕಾಟದಿಂದಾಗಿ ಇದುವರೆಗೆ ಸಂಭವಿಸಿರುವ ಸಾವು-ನೋವುಗಳ ಲೆಕ್ಕದ ಮೇಲೆ ಒಮ್ಮೆ ಕಣ್ಣು ಹಾಯಿಸಿದರೆ ಮನಸ್ಸು ವಿಹ್ವಲಗೊಳ್ಳುತ್ತದೆ; ಈ ಯುದ್ಧೋನ್ಮಾದದ ಪರಿಣಾಮವಾಗಿ ಈವರೆಗೆ ಪ್ಯಾಲೆಸ್ತೀನ್‌ನ ೩೪,೦೪೯ ಮಂದಿ ಅಸುನೀಗಿ ೭೬,೯೦೧ ಮಂದಿ ಗಾಯಗೊಂಡಿದ್ದಾರೆ ಎಂಬ ಅಂಕಿ-ಅಂಶವೊಂದೇ ಸಾಕು ಅಲ್ಲಿ ಮಡುಗಟ್ಟಿರುವನೋವನ್ನು ಅಳೆಯಲು.
ಇಷ್ಟಾಗಿಯೂ ರಕ್ತದಾಹಿಗಳ ರಣಕೇಕೆ ಇನ್ನೂ ನಿಂತಿಲ್ಲವೇಕೆ? ಎಂಬುದು ಶಾಂತಿಪ್ರಿಯರನ್ನು ಕಾಡುತ್ತಿರುವ ಪ್ರಶ್ನೆ. ಉತ್ತರ ನೀಡಬೇಕಾದವರು ಮೌನಕ್ಕೆ ಶರಣಾಗಿದ್ದಾರೆ ಬಿಡಿ!