ದುರುಳರ ಹೆಡೆಮುರಿ ಕಟ್ಟಿ
ರಾಷ್ಟ್ರ ರಾಜಧಾನಿ ದೆಹಲಿ ಮತ್ತು ನೋಯ್ಡಾದಲ್ಲಿನ ೫೦ಕ್ಕೂ ಹೆಚ್ಚು ಶಾಲೆಗಳಿಗೆ ಮೊನ್ನೆ ಬುಧವಾರ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದಿದ್ದು ನಿಜಕ್ಕೂ ಆತಂಕಕಾರಿ ಸಂಗತಿ. ಹೀಗೊಂದು ಬೆದರಿಕೆ ಬಂದ ಕೂಡಲೇ ಶಾಲೆಗಳು ಎಲ್ಲ ಮಕ್ಕಳನ್ನೂ ಮನೆಗೆ ಕಳುಹಿಸಿವೆ ಮತ್ತು ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ, ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದೂ ಆಗಿದೆ. ಜತೆಗೆ, ಇ-ಮೇಲ್ ಮೂಲಕ ಹೀಗೊಂದು ಬೆದರಿಕೆಯನ್ನು ಕಳಿಸಿದವರ ಮೂಲವೂ ಪತ್ತೆಯಾಗಿದೆ ಎಂದಿದ್ದಾರೆ ದೆಹಲಿ ಪೊಲೀಸರು.
ಆದಷ್ಟು ಬೇಗ ಅವರನ್ನು ವಶಕ್ಕೆ ತೆಗೆದುಕೊಂಡು ಹೆಡೆಮುರಿ ಕಟ್ಟಬೇಕಾಗಿದೆ ಮತ್ತು ಇದು ಇಂಥ ಮಿಕ್ಕ ದುರುಳರಿಗೂ ಪಾಠವಾಗಬೇಕಾಗಿದೆ. ಇದೊಂದು ಹುಸಿ ಬಾಂಬ್ ಬೆದರಿಕೆ ಎಂದು ತೋರಿದ್ದರೂ, ಅದು ಒದಗಿರುವ ಸಂದರ್ಭ ಮತ್ತು ಅದಕ್ಕಾಗಿ ಉದ್ದೇಶಿಸಲಾಗಿದ್ದ ತಾಣಗಳು ಎರಡನ್ನೂ ಪರಿಗಣನೆಗೆ ತೆಗೆದುಕೊಂಡಾಗ, ಈ ಬೆದರಿಕೆಯನ್ನು ನಿರ್ಲಕ್ಷಿಸುವಂತಿರಲಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಒಂದಿಡೀ ದೇಶವೇ ಸಾರ್ವತ್ರಿಕ ಚುನಾವಣೆಯಲ್ಲಿ ತಲ್ಲೀನವಾಗಿರುವ ಕಾಲಘಟ್ಟವಿದು. ಹೀಗಾಗಿ, ಸಹಜವಾಗಿಯೇ ಆಳುಗ ವ್ಯವಸ್ಥೆಯು ಸಂಬಂಧಿತ ಪ್ರಕ್ರಿಯೆಗಳ ನಿರ್ವಹಣೆಯಲ್ಲಿ ವ್ಯಸ್ತವಾಗಿರುತ್ತದೆ.
ಇದನ್ನು ಗಮನದಲ್ಲಿಟ್ಟುಕೊಂಡೇ ಹಾಗೂ ಆಳುಗ ವ್ಯವಸ್ಥೆಗೆ ಕಕ್ಕಾಬಿಕ್ಕಿ ಉಂಟುಮಾಡಲೆಂದೇ ದುರುಳರು ಹೀಗೊಂದು ಕುತ್ಸಿತ ಚಿಂತನೆಗೆ ಒಡ್ಡಿಕೊಂಡಿ ರುವ ಸಾಧ್ಯತೆಗಳಿವೆ. ಶಾಲೆಗಳು, ಮಾರುಕಟ್ಟೆಗಳಂಥ ದಟ್ಟಣೆ ಇರುವ ನೆಲೆಗಳಲ್ಲಿ ಬಾಂಬ್ ದಾಳಿಯಾದರೆ ಅಥವಾ ದಾಳಿಯಾಗುವುದಿರಲಿ ಅಂಥದೊಂದು ದಿಗಿಲು ಹಠಾತ್ತನೆ ಹುಟ್ಟಿಕೊಂಡರೂ ಉಂಟಾಗುವ ಕಂಗಾಲು ಮತ್ತು ಅಸ್ತವ್ಯಸ್ತತೆಯನ್ನು ಪದಗಳಲ್ಲಿ ವಿವರಿಸಲಾಗದು. ಶಾಂತಿಭಂಜಕ ಮತ್ತು ವಿಚ್ಛಿದ್ರಕಾರಕ ಶಕ್ತಿಗಳಿಗೆ ಬೇಕಿರುವುದೂ ಅದೇ ಎನಿಸುತ್ತದೆ. ಈ ನೆಲದ ಗಾಳಿ, ನೀರು, ಆಹಾರವನ್ನು ಸೇವಿಸಿ, ಸುತ್ತಲ ಸಮಾಜದಿಂದ ಮತ್ತು ಸರಕಾರದಿಂದ ಸಕಲ ಸವಲತ್ತುಗಳನ್ನೂ ಪಡೆದು, ಹೀಗೆ ಆಶ್ರಯ ಕೊಟ್ಟ ನೆಲಕ್ಕೇ ಎರಡು ಬಗೆಯುವ ದುಷ್ಟಶಕ್ತಿಗಳಿಗೆ ಕಾಲಾನುಕಾಲಕ್ಕೆ ಸರಿಯಾದ ಪಾಠ ಕಲಿಸಬೇಕು. ಇಲ್ಲವಾದಲ್ಲಿ ಇಂಥ ಸಂಚುಗಳು ಅಬಾಧಿತವಾಗಿ ಮುಂದುವರಿಯುತ್ತವೆ.