ಸರಳ ಆಚರಣೆ ಜತೆಗೆ ಜವಾಬ್ದಾರಿಯೂ ಇದೆ
ರಾಜ್ಯದಲ್ಲಿ ರಾಜ್ಯೋತ್ಸವ ಆಚರಣೆ ವೈಭವಯುತವಾಗಿ ಆಚರಿಸಲು ಕರೋನಾ ಅಡ್ಡಿಯುಂಟುಮಾಡಿದೆ. ಆದರೆ ಸರಳ ಹಾಗೂ ಸಾಂಕೇತಿಕ ಆಚರಣೆ ನಿಟ್ಟಿನಲ್ಲಿ ಸರಕಾರದ ಮಟ್ಟದಲ್ಲಿ ಸಿದ್ಧತಾ ಪ್ರಕ್ರಿಯೆಗಳು ಆರಂಭಗೊಂಡಿವೆ. ಇಂಥ ಸಂದರ್ಭದಲ್ಲಿ ರಾಜ್ಯ ಸರಕಾರಕ್ಕೆ ರಾಜ್ಯೋತ್ಸವ ಆಚರಣೆ ಎಂಬುದು ಒಂದು ಜವಾಬ್ದಾರಿಯಾಗಿ ಪರಿಣಮಿಸಿದೆ. ಈ ಹಿಂದೆ ನವೆಂಬರ್ ಸಂದರ್ಭದಲ್ಲಿ ಬಹಳಷ್ಟು ವ್ಯಕ್ತವಾಗುತ್ತಿದ್ದ ಅಭಿಪ್ರಾಯವೆಂದರೆ ಕನ್ನಡಕ್ಕೆ ಶಾಸೀಯ ಸ್ಥಾನಮಾನ ಅಗತ್ಯವಿದೆ ಎಂಬುದಾಗಿತ್ತು.
ಅನೇಕ ಹೋರಾಟಗಳ, ಜನತೆಯ ಆಗ್ರಹದ ಹಾಗೂ ಸರಕಾರದ ಇಚ್ಛಾಶಕ್ತಿಯ ಫಲವಾಗಿ ಸ್ಥಾನಮಾನವೂ ದೊರೆಯಿತು. ಆದರೆ ನಂತರದಲ್ಲಿ ನಡೆದ ಕನ್ನಡದ ಅಭಿವೃದ್ಧಿ ಕಾರ್ಯಗಳೇನು ಎಂಬುದರ ಅವಲೋಕನದ ಅಗತ್ಯವಿದೆ. ಈ ಬಾರಿ ಕನ್ನಡರಾಜ್ಯೋತ್ಸವವನ್ನು ಕರೋನಾದ ಕಾರಣದಿಂದಾಗಿ ಸರಳವಾಗಿ ಆಚರಿಸಿದರೂ ಸಹ ಕನ್ನಡದ ನಾನಾ ಸಮಸ್ಯೆಗಳ ನಿವಾರಣೆಗೆ ಆದ್ಯತೆ ನೀಡುವ ಮೂಲಕ ಉತ್ಸವಕ್ಕೆ ಸಾರ್ಥಕತೆ ಒದಗಿಸಬೇಕಿದೆ.
ಶಿಕ್ಷಣದಲ್ಲಿ ತಮಿಳು ಭಾಷೆಯನ್ನು ಕಡ್ಡಾಯ ಮಾಡುವಂತೆ ತಮಿಳುನಾಡು ಸರಕಾರ ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ಇದು ತಮಿಳುನಾಡಿನ ಸಮಸ್ಯೆಯಾದರೂ, ಅಲ್ಲಿನ ಕನ್ನಡಿಗರಿಗೆ ಒದಗಿರುವ ಸಮಸ್ಯೆ ನಿವಾರಿಸಿ ಕನ್ನಡಿಗರಲ್ಲಿ ಭರವಸೆ ಮೂಡಿಸುವ ಪ್ರಯತ್ನಕ್ಕೆ ರಾಜ್ಯ ಸರಕಾರದ ಪ್ರಯತ್ನ ಪೂರಕ.೧ರಿಂದ೧೦ನೇ ತರಗತಿ ವಿದ್ಯಾರ್ಥಿಗಳಿಗೆ ತಮಿಳು ಭಾಷೆಯನ್ನು ಕಡ್ಡಾಯವಾಗಿ ಹೇರಿರುವ ಹಿನ್ನೆಲೆಯಲ್ಲಿ ತಮಿಳು ನಾಡು ಸರಕಾರದ ವಿರುದ್ಧ ಈರೋಡ್ ಮತ್ತು ಕೃಷ್ಣಗಿರಿ ಗಡಿಯಲ್ಲಿರುವ ಕನ್ನಡಿಗರರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈರೋಡ್ ಜಿಯ ತಳವಾಡಿ ತಾಲೂಕಿನಲ್ಲಿ ಶೇ.೮೦ರಷ್ಟು ಕನ್ನಡಿಗರಿದ್ದಾರೆ ಎನ್ನಲಾಗುತ್ತದೆ.
ತಮಿಳುನಾಡು ಸರಕಾರವು ಕನ್ನಡವನ್ನು ಬೋಧನಾ ಮಾಧ್ಯಮವಾಗಿ ಮತ್ತು ಮೊದಲ ಭಾಷೆಯಾಗಿ ಕನ್ನಡವನ್ನೇ ಉಳಿಸ ಬೇಕೆಂಬುದು ಅಲ್ಲಿನ ಜನರ ಒತ್ತಾಯ. ಇಂಥ ಕನ್ನಡಿಗರ ನೆರವಿಗೆ ಸ್ಪಂದಿಸುವುದು ಸಹ ಕನ್ನಡದ ಕೆಲಸವೆ. ಇದುವೆ ರಾಜ್ಯೋ ತ್ಸವಕ್ಕೆ ಸಲ್ಲಿಸುವ ಸಾರ್ಥಕತೆ.