ವಾಯುಮಾಲಿನ್ಯದ ಗಂಡಾಂತರ
ಯಾವುದೇ ದೇಶಗಳಲ್ಲಿ ಅಭಿವೃದ್ಧಿ ಬಗ್ಗೆ ಚರ್ಚೆಗಳು ನಡೆದಷ್ಟು, ನ್ಯೂನತೆಗಳ ಬಗ್ಗೆ ಚರ್ಚೆ ನಡೆಯುವುದಿಲ್ಲ. ಆದರೆ ಇಂದುಯಾವುದೇ ದೇಶ ಅಭಿವೃದ್ಧಿ ಜತೆಗೆ ಆರೋಗ್ಯ ಕಾಳಜಿಗೆ ಹೆಚ್ಚಿನ ಆದ್ಯತೆ ನೀಡಬೇಕಿರುವುದು ಮುಖ್ಯ.
ಚೀನಾದಲ್ಲಿ ಕಂಡುಬಂದ ಕರೋನಾ ವೈರಸ್ ಬಗ್ಗೆ ಆರಂಭದಲ್ಲಿ ನಿರ್ಲಕ್ಷ್ಯತೆ ವಹಿಸಿದ್ದರಿಂದ ಎಷ್ಟು ಪ್ರಮಾಣದಲ್ಲಿ ಸಮಸ್ಯೆ ಎದುರಿಸಬೇಕಾಯಿತು ಎಂಬ ಚಿತ್ರಣ ಕಣ್ಣ ಮುಂದಿದೆ. ಇಂಥ ಬೆಳವಣಿಗೆಯಿಂದ ಪ್ರತಿ ದೇಶಗಳು ಜಾಗ್ರತೆವಹಿಸಬೇಕಿರುವ ಅವಶ್ಯಕತೆ ಎದುರಾಗಿದೆ. ಇದೀಗ ಪ್ರಪಂಚದಲ್ಲಿ ವಾಯು ಮಾಲಿನ್ಯದಿಂದಾಗಿ ಶಿಶು ಮರಣ ಗಳ ಪ್ರಮಾಣ ಹೆಚ್ಚಾಗುತ್ತಿರುವ ಬೆಳವಣಿಗೆ ಕಂಡುಬಂದಿದೆ. ಇದಕ್ಕೆ ಭಾರತವೂ ಹೊರತಾಗಿಲ್ಲ.
೨೦೧೯ನೇ ಸಾಲಿನಲ್ಲಿ ವಾಯುಮಾಲಿನ್ಯದಿಂದಾಗಿ ಭಾರತ ದಲ್ಲಿ ಶೇ.೨೧ರಷ್ಟು ನವಜಾತ ಶಿಶುಗಳ ಸಾವು ಸಂಭವಿಸಿದೆ. ಅಂದರೆಮೃತಪಟ್ಟ ನವಜಾತ ಶಿಶುಗಳ ಸಂಖ್ಯೆ೧,೧೬,೦೦೦. ಇದೀಷ್ಟೇ ಅಲ್ಲದೆ೨೦೧೯ನೇ ಸಾಲಿನಲ್ಲಿ೧೬,೬೭,೦೦೦ಕ್ಕೂ ಅಧಿಕ ಮಂದಿಯ ಸಾವಿಗೆ ವಾಯುಮಾಲಿನ್ಯವೇ ಕಾರಣವಾಗಿದೆ.
ಜನವಸತಿ ಪ್ರದೇಶಗಳು ಹೆಚ್ಚಿದಂತೆಲ್ಲ ಗಿಡ ಮರಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಇದರಿಂದ ವಾತಾವರಣದಲ್ಲಿ ಆಮ್ಲಜನಕದ ಪ್ರಮಾಣ ಕ್ಷೀಣಿಸುತ್ತಿರುವುದರಿಂದ ಮಾಲಿನ್ಯದ ಪ್ರಮಾಣ ಹೆಚ್ಚಾಗುತ್ತಿದೆ. ಇದುವರೆಗೆ ಹೆಚ್ಚಿನ ಪ್ರಮಾಣದ ವಾಯು ಮಾಲಿನ್ಯಕ್ಕೆ ಕೈಗಾರಿಕೆಗಳು, ವಾಹನಗಳು ಕಾರಣವಾಗಿದ್ದವು. ಆದರೆ ಇಂದು ಜನವಸತಿ ಹೆಚ್ಚಾಗಿರುವುದರಿಂದ ಮನೆಗಳಿಂದ ಉಂಟಾ ಗುತ್ತಿರುವ ಮಾಲಿನ್ಯದ ಪ್ರಮಾಣವೂ ಹೆಚ್ಚುತ್ತಿದೆ. ಇದನ್ನು ಸ್ಟೇಟ್ ಆಫ್ ಗ್ಲೋಬಲ್ ಏರ್(ಎಸ್‌ಒಜಿಎ) ಸ್ಪಷ್ಟಪಡಿಸಿದ್ದು, ತನ್ನ೨೦೨೦ನೇ ಸಾಲಿನ ವರದಿಯಲ್ಲಿ ಮನೆಗಳಿಂದ ಉಂಟಾಗುತ್ತಿರುವ ವಾಯುಮಾಲಿನ್ಯದ ಪರಿಣಾಮಗಳನ್ನು ವಿವರಿಸಿದೆ.
ದೇಶದಲ್ಲಿ ಸಂಭವಿಸುತ್ತಿರುವ ಬಹುತೇಕ ಪಾರ್ಶ್ವವಾಯು, ಹೃದಯಾಘಾತ, ಮಧುಮೇಹ, ಶ್ವಾಸಕೋಶದ ಕ್ಯಾನ್ಸರ್ ದೀರ್ಘ ಕಾಲದ ಶ್ವಾಸಕೋಶ ಸಂಬಂಧಿತ ಕಾಯಿಲೆಗಳಿಗೆ ವಾಯು ಮಾಲಿನ್ಯವೇ ಪ್ರಮುಖ ಕಾರಣವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ದೇಶದ ಪ್ರಮುಖ ಸಮಸ್ಯೆಗಳಲ್ಲಿ ವಾಯುಮಾಲಿನ್ಯವೂ ಒಂದಾಗಿದೆ.