ರಾಜಧಾನಿ ‘ವಿಷನ್’ ಮಹತ್ವದ ಯೋಜನೆ
ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಪ್ರಗತಿಯಿಂದಾಗಿ ದೇಶದ ಗಮನ ಸೆಳೆದಿರುವ ಬೆಂಗಳೂರು, ಮತ್ತಷ್ಟು ಅಭಿವೃದ್ಧಿ ಸಾಧಿಸುವ ಪ್ರಯತ್ನದಲ್ಲಿದೆ. ಮುಂದಿನ20ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ರೂಪಿಸಲಾಗಿರುವ ‘ಮಿಷನ್ ಬೆಂಗಳೂರು –2022’ ರೂಪಿಸಲಾಗಿದ್ದು, ಇದರ ಅನುಷ್ಠಾನದಿಂದ ಬೆಂಗಳೂರಿನ ಚಿತ್ರಣವೇ ಬದಲಾಗುವ ನಿರೀಕ್ಷೆಗಳು ವ್ಯಕ್ತ ವಾಗುತ್ತಿದೆ.
ಈ ಯೋಜನೆಯಿಂದ ಬೆಂಗಳೂರು ಸುಂದರ ನಗರವಾಗಿ ರೂಪುಗೊಳ್ಳುವುದು ಮಾತ್ರವಲ್ಲದೆ, ಉದ್ಯಮಸ್ನೇಹಿಯಾಗಿ ಬದಲಾಗಲು ಸಹ ಸಹಕಾರಿಯಾಗಲಿದೆ. ಈ ಯೋಜನೆಯ ಬಗ್ಗೆ ನೀಲನಕ್ಷೆ ತಯಾರಾಗಿದ್ದು, ಇನ್ನೆರಡು ವರ್ಷಗಳಲ್ಲಿ ಯೋಜನೆ ಅನುಷ್ಠಾನವಾಗಲಿದೆ. ಈ ಯೋಜನೆಯ ಅನುಷ್ಠಾನದಿಂದ ಬೆಂಗಳೂರು ವಿಶ್ವದರ್ಜೆಯ ನಗರವಾಗಿ ರೂಪುಗೊಳ್ಳಲಿದೆ.
ಈ ಯೋಜನೆಯಲ್ಲಿ ಸ್ವಚ್ಛತೆ, ಸುಗಮ ಸಂಚಾರ, ತ್ಯಾಜ್ಯ ನಿರ್ವಹನೆಗೆ ಆದ್ಯತೆ ನೀಡಿರುವುದರಿಂದ ಇದೊಂದು ಮಹತ್ವದ ಯೋಜನೆಯಾಗಿದೆ. ಪ್ರಧಾನಿ ಮೋದಿಯವರ ಮಾತುಗಳಿಂದ ಪ್ರೇರಿತರಾಗಿ ಈ ಯೋಜನೆಯನ್ನು ರಚಿಸಿರುವುದಾಗಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.
ಈಗಾಗಲೇ ಉದ್ಯಮಶೀಲತೆ – ತಂತ್ರಜ್ಞಾನದ ಕಾರಣದಿಂದ ಮಾತ್ರವಲ್ಲದೆ ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿರುವ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಮಾಲಿನ್ಯದ ಸಮಸ್ಯೆಯನ್ನು ಅನುಭವಿಸಿತ್ತು. ಲಾಕ್‌ಡೌನ್ ಸಮಯದಲ್ಲಿ ಶೇ.50ಪ್ರಮಾಣದ ವಾಯು ಮಾಲಿನ್ಯ ಕುಸಿತಕಂಡಿದ್ದು, ಇದೀಗ ಮತ್ತು ಏರಿಕೆಯತ್ತ ಸಾಗುತ್ತಿದೆ.
ಆದ್ದರಿಂದ ಈ ಹಿಂದೆ ಗಾರ್ಡನ್ ಸಿಟಿ ಎಂಬ ಪಾತ್ರವಾಗಿದ್ದ ಹೆಗ್ಗಳಿಕೆಯನ್ನು ಉಳಿಸಿಕೊಳ್ಳುವುದರ ಜತೆಗೆ ಮಾಲಿನ್ಯ ನಿಯಂತ್ರಣ, ಹಸಿರೀಕರಣಕ್ಕೂ ಆದ್ಯತೆ ನೀಡಬೇಕಿದೆ. ರಾಜ್ಯದ ಅಭಿವೃದ್ಧಿ ನಿಟ್ಟಿನಲ್ಲಿ ರಾಜಧಾನಿಯನ್ನು ಸುಂದರಗೊಳಿಸುವ ‘ಮಿಷನ್ ಬೆಂಗಳೂರು’ ಯೋಜನೆ ಮಹತ್ವದ್ದಾಗಿದೆ.