ಸ್ಟಾಪ್ ಲಾಗ್ ಗೇಟ್ ನಿರ್ಮಾಣ ಕಾರ್ಯ ಚುರುಕು
ಶರಣಬಸವ ಹುಲಿಹೈದರ್ ಕೊಪ್ಪಳ
ತುಂಗಭದ್ರಾ ಜಲಾಶಯದಲ್ಲಿ ೨೦ ಟಿಎಂಸಿ ನೀರು ಖಾಲಿ
ಡ್ಯಾಂಗೆ ಪ್ರತಿಪಕ್ಷ ನಾಯಕರ ಭೇಟಿ
೪ ದಿನದಲ್ಲಿ ಹೊಸ ಗೇಟ್ ಸಿದ್ಧ
ಕೊಚ್ಚಿ ಹೋಗಿದ್ದ ತುಂಗಭದ್ರಾ ಜಲಾಶಯದ ಗೇಟ್ ಪರಿಶೀಲಿಸಿದ ತಜ್ಞರ ತಂಡ. ಸಮರೋಪಾದಿಯಲ್ಲಿ ನಡೆದಿರುವ ಗೇಟ್ ನಿರ್ಮಾಣ ಕಾರ್ಯ. ರಾತ್ರಿಯಿಡೀ ಡ್ಯಾಂನಲ್ಲೇ ಕಳೆದ ಸಚಿವ ಶಿವರಾಜ ತಂಗಡಗಿ. ಡ್ಯಾಂ ಪರಿಶೀಲಿಸಿ, ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕರ ದಂಡು. ತುಂಗಭದ್ರಾ ಜಲಾಶಯದ ೧೯ನೇ ಕ್ರಸ್ಟ್ ಗೇಟ್ ಕೊಚ್ಚಿಹೋದ ೨ನೇ ದಿನ ಜಲಾಶಯ ಪ್ರದೇಶದಲ್ಲಿ ಕಂಡುಬಂದ ದೃಶ್ಯಗಳಿವು.
ತಜ್ಞರ ಸಲಹೆಯಂತೆ ಡ್ಯಾಂನಲ್ಲಿನ ೬೫ ಟಿಎಂಸಿ ನೀರು ಖಾಲಿಮಾಡುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಆ.೧೨ರ ಬೆಳಗ್ಗೆಯಿಂದ ೧.೪೦ ಲಕ್ಷ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗುತ್ತಿದ್ದು, ಆ.೧೩ರ ಬೆಳಗಿನವರೆಗೆ ಡ್ಯಾಂನಲ್ಲಿದ್ದ ಸುಮಾರು ೨೦ ಟಿಎಂಸಿ ನೀರು ಖಾಲಿ ಆಗಿದೆ. ಇದೇ ಪ್ರಮಾಣದ ನೀರು ಕ್ರಸ್ಟ್ ಗೇಟ್ ಮೂಲಕ ನದಿಗೆ ಹರಿಸಿದರೆ ಗರಿಷ್ಠ ೪ ದಿನಕ್ಕೆ, ಹೊಸಗೇಟ್ ಅಳವಡಿಕೆಗೆ ಅಗತ್ಯವಿರುವ ೬೫ ಟಿಎಂಸಿ ನೀರು ಡ್ಯಾಂನಿಂದ ಹೊರಹೋಗಲಿದೆ ಎಂದು ಅಂದಾಜಿಸಲಾಗಿದೆ.
ನದಿಪಾತ್ರದ ಗ್ರಾಮಗಳ ಸುರಕ್ಷತೆ ಹಾಗೂ ಸಾಧ್ಯವಾದಷ್ಟೂ ನೀರು ಉಳಿಸಿಕೊಂಡೇ ಸ್ಪಾಪ್ ಲಾಗ್ ಗೇಟ್ ಅಳವಡಿಸುವ ಚಿಂತನೆ ಹಿನ್ನೆಲೆ ನದಿಗೆ ಬಿಡುಗಡೆ ಮಾಡುವ ನೀರಿನ ಪ್ರಮಾಣ ಹೆಚ್ಚಿಸದಿರಲು ಸರಕಾರ ನಿರ್ಧರಿಸಿದೆ. ನದಿಗೆ ನೀರು ಬಿಡುಗಡೆ ಪ್ರಮಾಣ ಹಂತಹಂತವಾಗಿ ಹೆಚ್ಚಿಸಿ, ಗರಿಷ್ಠ ೨ ರಿಂದ ೨.೫ ಲಕ್ಷ ಕ್ಯುಸೆಕ್ ವರೆಗೆ ನೀರು ಬಿಡುಗಡೆ ಮಾಡಬೇಕು. ದುರಸ್ತಿ ಕೈಗೊಳ್ಳಲು ಆದಷ್ಟೂ ಬೇಗ ೬೫ ಟಿಎಂಸಿ ನೀರು ಖಾಲಿ ಮಾಡಬೇಕು ಎಂದು ನಿರ್ಧರಿಸಲಾಗಿತ್ತು. ಆದರೆ, ಇದೀಗ ಸರಕಾರ ನೀರು ಉಳಿಸಿಕೊಂಡೇ ಗೇಟ್ ಅಳವಡಿಸುವ ಕಾರ್ಯಾಚರಣೆಗೆ ಚಾಲನೆ ನೀಡಿದೆ. ಈ ಹಿನ್ನೆಲೆ ನದಿಗೆ ನೀರು ಬಿಡುಗಡೆ ಪ್ರಮಾಣ ೧.೪೦ ಲಕ್ಷ ಕ್ಯೂಸೆಕ್ ಗೆ ಸೀಮಿತಗೊಳಿಸಲಾಗಿದೆ.
ಪ್ರತಿಪಕ್ಷ ನಾಯಕರ ದೌಡು:ಪ್ರತಿಪಕ್ಷದ ನಾಯಕ ಆರ್.ಅಶೋಕ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ ಹಾಗೂ ಸಂಸದಬಸವರಾಜ ಬೊಮ್ಮಾಯಿ ಅವರು ಸೋಮವಾರತುಂಗಭದ್ರಾ ಜಲಾಶಯಕ್ಕೆ ಭೇಟಿ ನೀಡಿದರು. ಕೊಚ್ಚಿ ಹೋಗಿರುವ ಗೇಟ್ ಪರಿಶೀಲಿಸಿ, ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಿರುಸಿನಿಂದ ಗೇಟ್ ನಿರ್ಮಾಣ ಕಾರ್ಯ:ಕೊಚ್ಚಿ ಹೋಗಿರುವ ಗೇಟ್ ನ ಜಾಗದಲ್ಲಿ ಅಳವಡಿಸಲು, ಹೊಸಗೇಟ್ ನಿರ್ಮಾಣ ಕಾರ್ಯ ಕ್ಷಿಪ್ರಗತಿಯಲ್ಲಿನಡೆದಿದೆ. ೬೦ ಅಡಿ ಅಗಲ ಮತ್ತು ೨೦ ಅಡಿ ಎತ್ತರದ ಕ್ರಸ್ಟ್ ಗೇಟನ್ನು ೩ ಭಾಗವಾಗಿ ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ಮೂರು ಕಡೆ ಗೇಟ್ತಯಾರಿ ಕಾರ್ಯ ಆರಂಭವಾಗಿದೆ. ಜಿಂದಾಲ್ ಕಾರ್ಖಾನೆ, ಹೊಸಪೇಟೆಯ ನಾರಾಯಣ ಎಂಜಿನಿಯರಿಂಗ್ ಕಂಪನಿ ಹಾಗೂ ಕೊಪ್ಪಳ ತಾಲೂಕು ಹೊಸಳ್ಳಿ ಗ್ರಾಮದ ಹಮೀದ್ ಎಂಜಿನಿಯರ್ ನಲ್ಲಿ ಗೇಟ್ ನಿರ್ಮಾಣ ನಡೆದಿದೆ. ಗೇಟ್ ನಿರ್ಮಾಣ ಕಾರ್ಯದ ಸ್ಥಳಕ್ಕೆ ತೆರಳಿದ ಸಚಿವ ಶಿವರಾಜ ತಂಗಡಗಿ, ಶಾಸಕ ರಾಘವೇಂದ್ರ ಹಿಟ್ನಾಳ ಹಾಗೂ ಸಂಸದ ರಾಜಶೇಖರ ಹಿಟ್ನಾಳ ಅಧಿಕಾರಿಗಳಿಂದ ಮಾಹಿತಿ ಪಡೆದರು.
ಜಲಾಶಯಕ್ಕೆ ತಜ್ಞರ ದಂಡು ಆಗಮನತುಂಗಭದ್ರಾ ಜಲಾಶಯದ ೧೯ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ತಜ್ಞರ ದಂಡು ಡ್ಯಾಂ ಪ್ರದೇಶಕ್ಕೆ ಬಂದಿದೆ. ದೇಶದ ವಿವಿಧ ಜಲಾಶಯಗಳ ಕ್ರಸ್ಟ್ ಗೇಟ್ ಬಗ್ಗೆ ಮಾಹಿತಿ ಇರುವ ಹೈದ್ರಾಬಾದ್ ಮೂಲದ ಕನ್ನಯ್ಯ ನಾಯ್ಡು, ಪ್ಲೇಟ್ ನಿರ್ಮಾಣ ಜವಾಬ್ದಾರಿ ಹೊತ್ತಿರುವ ಜೆಎಸ್ ಡಬ್ಲೂ, ಹಮೀದ್ ಎಂಜಿನಿಯರಿಂಗ್ಸ್ ಹಾಗೂ ಹೊಸಪೇಟೆಯ ನಾರಾಯಣಎಂಜಿನಿಯರಿಂಗ್ ಕಂಪನಿಯ ಎಂಜಿನಿಯರ್ ಗಳು ಮತ್ತು ತಜ್ಞರು ಕೊಚ್ಚಿ ಹೋದ ಗೇಟ್ ಪರಿಶೀಲಿಸಿ, ಮುಂದಿನ ಕಾರ್ಯಾಚರಣೆ ಬಗ್ಗೆ ಸಮಾಲೋಚಿಸಿದರು. ನೀರು ಉಳಿಸಿಕೊಂಡು ಏನೆಲ್ಲಾ ಮಾಡಬಹುದು? ಒಂದೊಮ್ಮೆ ನೀರು ಇರುವಾ ಗಲೇ ಗೇಟ್ ಅಳವಡಿಕೆ ಯಶಸ್ವಿ ಆಗದಿದ್ದರೆ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಬೇರೆ ಬೇರೆ ತಂಡಗಳ ತಜ್ಞರು ಚರ್ಚಿಸಿದರು.
ನೀರು ಇದ್ದಾಗಲೇ ಗೇಟ್ಅಳವಡಿಕೆ ಚಿಂತನೆಕಿತ್ತುಹೋಗಿರುವ ೧೯ನೇ ಗೇಟ್ ಜಾಗದಲ್ಲಿ ಸ್ಟಾಪ್‌ಲಾಗ್ ಗೇಟ್ ಅಳವಡಿಕೆಗೆ ಡ್ಯಾಂನಲ್ಲಿನ ೬೫ ಟಿಎಂಸಿ ನೀರು ಖಾಲಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ನಿಗದಿತ ನೀರು ಖಾಲಿಯಾದ ನಂತರ ಅಳವಡಿಸಬೇಕಿದ್ದ ಗೇಟ್ ನಿರ್ಮಾಣ ಆರಂಭವಾಗಲಿದೆ. ಈ ನಡುವೆ ಸಾಧ್ಯವಾದಷ್ಟು ನೀರು ಉಳಿಸಿಕೊಂಡೇ ಗೇಟ್ ಅಳವಡಿಸುವ ಪ್ಲಾನ್ ‘ಬಿ’ ಬಗ್ಗೆಯೂ ಚಿಂತನೆ ನಡೆದಿದೆ. ಡ್ಯಾಂ ಗೇಟ್ ಗಳ ಬಗ್ಗೆ ಪರಿಣಿತಿ ಹೊಂದಿರುವ ಕನ್ನಯ್ಯ ನಾಯ್ಡು ಜತೆಗೆ ಸಚಿವ ಶಿವರಾಜ ತಂಗಡಗಿ ಸಭೆ ಮಾಡಿದ್ದಾರೆ. ನೀರು ಉಳಿಸಿಕೊಂಡೇ ಗೇಟ್ ಅಳವಡಿಸುವ ಪ್ಲಾನ್ ’ಬಿ’ ಗೆ ಅಗತ್ಯವಿರುವ ‘ಸ್ಟಾಪ್‌ಲಾಗ್ ಗೇಟ್’ನ ಪ್ಲೇಟ್ ನಿರ್ಮಾಣ ಕಾರ್ಯವೂ ಮತ್ತೊಂದೆಡೆ ಆರಂಭಿಸಲು ತಯಾರಿ ನಡೆದಿದೆ.
ಇಂದು ಸಿಎಂ ಸಿದ್ದರಾಮಯ್ಯ ಭೇಟಿ
ಟಿಬಿ ಡ್ಯಾಂನ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿರುವ ಹಿನ್ನೆಲೆ ಸಿಎಂ ಸಿದ್ದರಾಮಯ್ಯ ಮಂಗಳವಾರ ಜಲಾಶಯಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ. ಸಿಎಂ ಸಿದ್ದರಾಮಯ್ಯ ತುಂಗಭದ್ರಾ ಡ್ಯಾಂಗೆ ಬಾಗಿನ ಅರ್ಪಿಸುವ ಕಾರ್ಯಕ್ರಮ ನಿಗದಿ ಆಗಿತ್ತು. ಅವಘಡ ಸಂಭವಿಸಿದ ಹಿನ್ನೆಲೆಯಲ್ಲಿ ಜಲಾಶಯವನ್ನು ಮಾತ್ರ ಪರಿಶೀಲಿಸಲಿದ್ದಾರೆ.
*
ತುಂಗಭದ್ರಾ ಜಲಾಶಯದ ಎಲ್ಲ ಗೇಟ್ ಗಳ ನಿರ್ವಹಿಸುವುದು ತುಂಗಭದ್ರಾ ಬೋರ್ಡ್. ಕರ್ನಾಟಕ ಮತ್ತು ಆಂಧ್ರಪ್ರದೇಶ-ತೆಲಂಗಾಣ ಸರಕಾರಗಳು ಟಿಬಿಬೋರ್ಡ್ ಗೆ ಸೂಕ್ತ ಅನುದಾನ ಮಾತ್ರ ನೀಡುತ್ತವೆ. ಟಿಬಿ ಬೋರ್ಡ್ ಗೆ ಕರ್ನಾಟಕ, ಆಂಧ್ರ- ತೆಲಂಗಾಣ ಮೂಲದವರನ್ನು ಅಧ್ಯಕ್ಷ, ಕಾರ್ಯದರ್ಶಿಯಾಗಿನೇಮಕ ಮಾಡಬಾರದು ಎಂಬ ನಿಯಮ ಇದೆ. ಆದಾಗ್ಯೂ ಕೇಂದ್ರ ಸರಕಾರ ಕಳೆದ ೧೦ ವರ್ಷದಿಂದ ಆಂಧ್ರ ಮೂಲದವರನ್ನೇ ಕಾರ್ಯದರ್ಶಿಯಾಗಿನೇಮಕ ಮಾಡುತ್ತಿದೆ. ಇದಕ್ಕೆ ವಿರೋಧಪಕ್ಷಗಳು ಮೊದಲು ಉತ್ತರ ನೀಡಲಿ.– ಶಿವರಾಜ ತಂಗಡಗಿ, ಸಚಿವ