ಲ್ಯಾಬ್‌ನಲ್ಲೂ ರಾಜಕಾರಣ, ರಿಪೋರ್ಟ್ ಸಿಗೋದು ಬಲು ಕಠಿಣ
ಸುಸಜ್ಜಿತ ಲ್ಯಾಬ್ ಎತ್ತಂಗಡಿ, ಪರೀಕ್ಷೆಗಳಿಲ್ಲದೆ ರೋಗಿಗಳ ಪರದಾಟ, ವಿದ್ಯಾರ್ಥಿಗಳಿಗೂ ಕಾಟ
೨೦ ಕೋಟಿ ರು. ಅಧಿಕ ಅನುದಾನ
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ವಿಕ್ಟೋರಿಯಾ ಕ್ಯಾಂಪಸ್‌ನಲ್ಲಿರುವ ಸುಮಾರು ೧೦ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಈಗ ಪ್ರಯೋಗಾಲಯ ರೋಗ ಪತ್ತೆಯಾಗಿದೆ!
ವಿಕ್ಟೋರಿಯಾ, ಸೂಪರ್ ಸ್ಪೆಷಾಲಿಟಿ ಸೇರಿದಂತೆ ಅನೇಕ ಆಸ್ಪತ್ರೆಗಳಲ್ಲಿ ರೋಗ ಲಕ್ಷಣಗಳನ್ನು ಪತ್ತೆ ಮಾಡುವ ರಕ್ತ, ಮೂತ್ರ ಹಾಗೂ ವಿವಿಧ ಸ್ಕಾನಿಂಗ್ಮಾಡುವ ಲ್ಯಾಬ್ ತಲೆನೋವು ತೀವ್ರವಾಗಿದ್ದು, ಸಾವಿರಾರು ರೋಗಿಗಳು ವೈದ್ಯರ ಚೀಟಿ ಹಿಡಿದು ಅಕ್ಷರಶಃ ಬೀದಿಗಳಲ್ಲಿ ಅಲೆಯುವಂತಾಗಿದೆ.
ಕಾರಣ ಕಳೆದ ೮ ವರ್ಷಗಳಿಂದ ದಿನದ ೨೪ ಗಂಟೆಯೂ ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದ್ದ ಸುಸಜ್ಜಿತ ಲ್ಯಾಬ್ ವೈದ್ಯ ಮುಖ್ಯಸ್ಥರ ರಾಜಕಾರಣ ದಿಂದ ರಾತ್ರೋರಾತ್ರಿ ಎತ್ತಂಗಡಿಯಾಗಿದೆ. ಇದರ ಮಧ್ಯೆ, ವೈದ್ಯಕೀಯ ಪರೀಕ್ಷೆಗಳಲ್ಲಿ ಪದವಿ ಪಡೆಯಲು ಬಂದಿರುವ ಸುಮಾರು ೧೦೦ಕ್ಕೂ ಹೆಚ್ಚು (ಎಂ.ಡಿ. ಕಲಿಯುತ್ತಿರುವ ) ವೈದ್ಯ ವಿದ್ಯಾರ್ಥಿಗಳು ಕಲಿಕೆಗೆ ಲ್ಯಾಬ್‌ಗಳಿಲ್ಲದೆ ಅವರ ಭವಿಷ್ಯಕ್ಕೂ ಅಪಾಯದ ಬಿಸಿ ತಟ್ಟುತ್ತಿದೆ.
ಅಂದರೆ ಇಷ್ಟೆಲ್ಲ ಸಮಸ್ಯೆಗಳು ಬೆಂಗಳೂರು ವೈದ್ಯಕೀಯ ಶಿಕ್ಷಣ ಸಚಿವರಿಗೆ ತಿಳಿದಿದ್ದರೂ ಅವರು ಪರಿಹಾರಕ್ಕೆ ಮುಂದಾಗುತ್ತಿಲ್ಲ. ಏಕೆಂದರೆ ಇರುವ ಪ್ರಯೋಗಾಲಯವನ್ನು ವೈದ್ಯಕೀಯ ಕಾಲೇಜು (ಬಿಎಂಸಿ) ಮುಖ್ಯಸ್ಥರ ಸಲಹೆಯಂತೆ ಹೊರ ಹಾಕಲಾಗಿದೆ ಎನ್ನಲಾಗಿದೆ. ಹೀಗಾಗಿ ಇಲ್ಲಿನ ಎಲ್ಲ ೧೦ ಆಸ್ಪತ್ರೆಗಳಿಗೂ ಹೊಸ ಲ್ಯಾಬ್ ಸ್ಥಾಪಿಸಬೇಕಿದ್ದು, ಇದಕ್ಕೆ ಸುಮಾರು ೩೦ಕೋಟಿ ರು.ಗಳಿಗೂ ಹೆಚ್ಚಿನ ಅನುದಾನ ಬೇಕಿದೆ. ಹಾಗೆಯೇ ಅವುಗಳಿಗೆ ವೈದ್ಯಕೀಯ ತಂತ್ರಜ್ಞರು, ಸಿಬ್ಬಂದಿ ನೇಮಕ ಮಾಡಬೇಕಾದ ಅನಿವಾರ್ಯವಿದೆ. ಇದೆಲ್ಲ ಸೇರಿ ೮೦ ಕೋಟಿಗೂ ಹೆಚ್ಚಿನ ಅನುದಾನ ಬೇಕಿದ್ದು, ಸದ್ಯ ಸರಕಾರದಿಂದ ಇದು ಅಲಭ್ಯ. ಆದ್ದರಿಂದ ಆಸ್ಪತ್ರೆಗಳಲ್ಲಿ ಈಗ ಪ್ರಯೋಗಾಲಯದ ಪರದಾಟ ವಿಪರೀತಕ್ಕೆ ಹೋಗುವ ಸಾಧ್ಯತೆ ಇದು ಎಂದು ವೈದ್ಯರು ತಿಳಿಸಿದ್ದಾರೆ.
ಏನಿದು ಲ್ಯಾಬ್ ರಾಜಕಾರಣ?:ವಿಕ್ಟೋರಿಯಾ ಆಸ್ಪತ್ರೆ ಕ್ಯಾಂಪಸ್ ನಲ್ಲಿ ಪ್ರಧಾನಮಂತ್ರಿ (ಪಿಎಂಎಸ್ ಎಸ್ ವೈ) ಆಸ್ಪತ್ರೆ, ವಿಕ್ಟೋರಿಯಾ ಆಸ್ಪತ್ರೆ,ವಾಣಿವಿಲಾಸ ಆಸ್ಪತ್ರೆ, ವೆಂಕಟೇಶ್ವರ ಇಎನ್ ಟಿ ಆಸ್ಪತ್ರೆ, ಮಿಂಟೋ ಆಸ್ಪತ್ರೆ, ಐಡಿಒಟಿ (ಯಕೃತ್ ಜೋಡಣೆ) ಆಸ್ಪತ್ರೆ, ಇದೇರೀತಿ ನೆಫ್ರಾಯುರಾಲಾಜಿ, ಟ್ರಾಮಾ ಸೇರಿದಂತೆ ಸುಮಾರು ೧೦ ಪ್ರಮುಖ ಆಸ್ಪತ್ರೆಗಳಿದ್ದು, ಇವುಗಳಿಗೆ ಬಿಎಂಸಿ ಸುಸಜ್ಜಿತ ಲ್ಯಾಬ್ ಒದಗಿಸಬೇಕಿತ್ತು. ಆದರೆ ಅದುವಿಫಲವಾಗಿದ್ದರಿಂದ ೨೦೧೫ರಲ್ಲಿ ಮಾಜಿ ಶಾಸಕ ರಾಜೇಶ್ ಗೌಡ ಪಾಲುದಾರಿಯ ಸಂಸ್ಥೆ ವಿಕ್ಟೋರಿಯಾ ಕ್ಯಾಂಪಸ್‌ನಲ್ಲಿ ಅತ್ಯಾಧುನಿಕ ಲ್ಯಾಬ್ಆರಂಭಿಸಿತ್ತು.
ಮಾಸಿಕ ಒಂದು ಕೋಟಿ ರು.ಗಳಿಗೂ ಹೆಚ್ಚು ವ್ಯವಹಾರ ನಡೆಸುತ್ತಿದ್ದ ಈ ಲ್ಯಾಬ್‌ನಲ್ಲಿ ನಿತ್ಯ ೩೦೦೦ಕ್ಕೂ ಹೆಚ್ಚು ರೋಗಿಗಳ ಎಂಆರ್‌ಐ ಸೇರಿದಂತೆವಿವಿಧ ಪರೀಕ್ಷೆಗಳು ನಡೆದು ತಕ್ಷಣವೇ ವರದಿಗಳು ಸಿಗುತ್ತಿತ್ತು. ಆದರೆ ಈ ಲ್ಯಾಬ್ ಗಳಿಸುತ್ತಿದ್ದ ಲಾಭವನ್ನು ಗಮನಿಸುತ್ತಿದ್ದ ಬಿಎಂಸಿಯ ಫೆಥಾಲಾಜಿಹಾಗೂ ಮೈಕ್ರೋ ಬಯಾಲಾಜಿ ವಿಭಾಗದ ಕೆಲವರು ಗುತ್ತಿಗೆ ಅವಧಿ ಮುಗಿದಿದೆ ಎಂಬ ನೆಪದಲ್ಲಿ ಚನ್ನಾಗಿ ನಡೆಯುತ್ತಿದ್ದ ಲ್ಯಾಬ್ ಎತ್ತಂಗಡಿಗೆ ಯತ್ನಿಸಿ ದರು. ಇದಕ್ಕೆ ಬಿಎಂಸಿ ಡೀನ್ ಸಹಕಾರ ನೀಡಿದರು ಎಂದೂ ಹೇಳಲಾಗಿದೆ.
ಅಷ್ಟೇ ಅಲ್ಲದೆ, ಲ್ಯಾಬ್ ಗುತ್ತಿಗೆಯನ್ನು ಪ್ರಭಾವಿ ರಾಜಕಾರಣಿ ಪುತ್ರನಿಗೆ ಕೊಡಿಸಲು ಯತ್ನಿಸಲಾಗಿತ್ತು. ಆದರೆ ಭಾರತೀಯ ವೈದ್ಯಕೀಯ ಪರಿಷತ್ ನಿಯಮದ ಪ್ರಕಾರ, ಇಲ್ಲಿ ಹೊರಗುತ್ತಿಗೆ ನೀಡುವಂತಿಲ್ಲ. ಹೀಗಾಗಿ ಲ್ಯಾಬ್ ಸಮಸ್ಯೆ ತೀವ್ರಗೊಂಡಿದೆ.
*
ಲ್ಯಾಬ್ ವರದಿಗಳು ಸದ್ಯಕ್ಕೆ ಸಿಗೋಲ್ಲಲ್ಯಾಬ್ ಸಮಸ್ಯೆ ತಲೆದೋರಿರುವ ಕಾರಣ, ಸದ್ಯ ಎಲ್ಲ ಆಸ್ಪತ್ರೆಗಳಿಗೂ ಲ್ಯಾಬ್ ಸೌಲಭ್ಯ ನೀಡಬೇಕಾದ ರೇಡಿಯೋಲಾಜಿ, ಫೆಥಾಲಾಜಿ, ಬಯೋಕೆಮಿಸ್ಟ್ರಿ ಹಾಗೂ ಮೈಕ್ರೋ ಬಯೋ ಲಾಜಿ ಸಂಸ್ಥೆಗಳಲ್ಲಿ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಆದರೆ ಇಲ್ಲಿ ಸಿಬ್ಬಂದಿಯೂ ಇಲ್ಲ. ಸೇವೆಯೂ ಸಿಗುತ್ತಿಲ್ಲ. ಹೀಗಾಗಿ ಎಂಆರ್‌ಐ ಸೇರಿದಂತೆ ಅನೇಕ ಪ್ರಮುಖ ಪರೀಕ್ಷೆಗಳ ವರದಿ ಪಡೆಯಲು ತಿಂಗಳೇ ಕಾಯಬೇಕಾಗಿದೆ ಎಂದು ವಿಭಾಗದ ವೈದ್ಯರೇ ಹೇಳುತ್ತಿದ್ದಾರೆ.