ಸ್ವಾತಂತ್ರ‍್ಯ ದಿನ ಲಕಪತಿ ದೀದಿಗೆ ದಿಲ್ಲಿಗೆ ಬುಲಾವ್
ದೇಶ ಹಾಗೂ ರಾಜ್ಯದಲ್ಲಿ ಅತಿ ಹಿಂದುಳಿದ ತಾಲೂಕನ್ನು ಗುರುತಿಸಿ, ಸಂಘಟನೆಯೊಂದಿಗೆ ಕಾರ್ಯ ಸಾಧನೆ ಮಾಡುತ್ತಿರುವ ಮಹಿಳೆಯರಿಗೆ ನರೇಂದ್ರ ಮೋದಿ ಆಹ್ವಾನ
ವಿನುತಾ ಹೆಗಡೆ ಶಿರಸಿ
ಅಯ್ಯೋ.. ಅಕ್ಕಾರ ನಾನು ಕನಸಲ್ಲೂ ಅನ್ಕಂಡಿರ‍್ಲಿಲ್ಲಾರಿ, ಮೋದಿ ಕರಿತಾರ ನಾ ಹೋಗ್ತೀನಿ ದೆಲ್ಲಿಗಂತ. ನನ್ನ ಕರದಾರು ನಾ ಹೋಗ್ತೀದಿನಿ ಡೆಲ್ಲಿಗ ಬಾ ಅಂತ ಮೋದಿ ಕರೆದಿರಾ ಅಂದ್ರೂ ನಮ್ಮ ನೆಂಟ್ರಾರು ನಂಬಾಂಗೇ ಇಲ್ರಿ..ಆದ್ರೂ ನನಗಂತೂ ಬಾಳ ಅಂದ್ರ ಬಾಳ ಖುಷಿ ಆತ್ರಿ.
ನನಗ ಇವೆಲ್ಲ ಹೊಸಾದ್ರಿ. ಜನ ತೊಟ್ಟಿಲ ಮೇಲ ಹೋದಾಂಗಕ್ಕೇತಂದ್ರಿ ಇಮಾನ ಮ್ಯಾಗ ಹೋಗೋದು..ಯಪ್ಪಾ, ಮೇಡಂರ್ರಿ ನಂಗೂ ಭಯ ಐತ್ರಿ. ಆದ್ರೂ ಖುಷಿ ತಡಿಯಾಕಾಗಾದಿಲ್ರಿ. ನಮ್ಮನೆಯವ್ರೂ ಹೋಗು ಅಂದಾರ…ನಾಳೇನೆ ಹೊಕ್ಕೀವ್ರಿ. ಇದು ಉತ್ತರ ಕನ್ನಡ ಜಿಲ್ಲೆಯ ಮುಂಡ ಗೋಡ ತಾಲೂ ಕಿನ ಹುನಗುಂದ ಮಹಿಳೆಯ ಮಾತು. ಈಕೆ ಮಹಿಳೆಯರ ಜತೆಗಿನ ಉತ್ತಮ ಒಡನಾಟ, ಎನ್‌ಎಲ್‌ಎಂಆರ್ ನ ಸ್ವಸ್ವಹಾಯ ಸಂಘದ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಲಕ್ಷ್ಮೀ ಮುಳೆ.
ದೆಹಲಿಯ ಕೆಂಪುಕೋಟೆಯ ಮೇಲೆ ಧ್ವಜಾರೋಹಣ ಮಾಡುವ ದಿನಕ್ಕೆ ಇವರನ್ನು ಪ್ರಧಾನಿ ಮೋದಿಯವರು ವಿಶೇಷ ಅತಿಥಿಯಾಗಿ ಆಹ್ವಾನಿಸಿದ್ದಾರೆ. ನಿಜಕ್ಕೂ ಅವಳ ಮಾತು ಕೇಳಿ ನನಗೂ ಒಮ್ಮೆ ಅಸೂಯೆ ಮೂಡುವಷ್ಟು ಖುಷಿ ಆಕೆಯ ಮಾತಿನಲ್ಲಿತ್ತು. ಕೋಟ್ಯಂತರ ಜನ ಭಾರತೀಯರು ಮೋದಿ ಯವರ ಹತ್ತಿರದಿಂದ ನೋಡಲು, ಅವರನ್ನು ಭೇಟಿ ಮಾಡಲು ಕಾಯುತ್ತಿರುತ್ತಾರೆ. ಆದರೆ ಅದು ಸಾಧ್ಯವಾಗದ ಮಾತು.
ದೇಶದ ಪ್ರಧಾನಿಯವರು ಆ.೧೫ ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವದ ದಿನಾಚರಣೆಯನ್ನು ಆಚರಿಸಲು, ಕೆಂಪು ಕೋಟೆಯ ಆ ಸುಂದರಕ್ಷಣವನ್ನು ಕಣ್ಣ ತುಂಬಿಕೊಳ್ಳಲು ನಮ್ಮ ಕರ್ನಾಟಕ ರಾಜ್ಯದ ೬೫ ಜನರನ್ನು ಆಹ್ವಾನಿಸಿದ್ದು, ಉತ್ತರ ಕನ್ನಡ ಜಿಲ್ಲೆಯಿಂದ ಮೂವರನ್ನು ಕರೆದಿದ್ದಾರೆ.ರಾಜ್ಯ ಹಾಗೂ ದೇಶದಲ್ಲಿ ಅತೀ ಹಿಂದುಳಿದ ತಾಲೂಕನ್ನು ಗುರುತಿಸಿ ಅಲ್ಲಿ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸುವ ಪ್ರಮುಖರಿಗೆ ಈ ಅವಕಾಶಕಲ್ಪಿಸಲಾಗಿದೆ. ಇವರಲ್ಲಿ ಯಾರೊಬ್ಬರಿಗೂ ಇಂಗ್ಲಿಷ್ ಅಥವಾ ಹಿಂದಿ ಬರದು. ಕನ್ನಡ ಹಾಗೂ ತೀರಾ ಗ್ರಾಮೀಣ ಭಾಷೆಯನ್ನು ಬಲ್ಲವರಾಗಿದ್ದಾರೆ. ಆದರೆ ತಮ್ಮ ಕ್ಷೇತ್ರದಲ್ಲಿ ಮಾಡುವ ಕೆಲಸವನ್ನು ಗುರುತಿ ಸಿದ ಪ್ರಧಾನಿ ಮೋದಿಯವರಿಗೆ ನಿಜವಾಗಿಯೂ ಅಭಿನಂದನೆ ಸಲ್ಲಬೇಕು. ಉತ್ತರ ಕನ್ನಡ ಜಿಲ್ಲೆ ಪಶ್ಚಿಮಘಟ್ಟ ಪ್ರದೇಶವಾಗಿದ್ದು, ಅದರಲ್ಲೂ ಯಲ್ಲಾಪುರ, ಮುಂಡಗೋಡು ಹಾಗೂ ಜೋಯಿಡಾ ಹಿಂದುಳಿದ ತಾಲೂಕೆಂದೇ ಗುರುತಿಸಿಕೊಂಡಿದೆ.
ಅಂಥ ತಾಲೂಕಿನಂದಲೇ ಮೂವರು ವ್ಯಕ್ತಿಗಳನ್ನು ಆರಿಸಿಕೊಳ್ಳಲಾಗಿದೆ. ಜಿಲ್ಲೆಯ ಯಲ್ಲಾಪುರ ತಾಲೂಕಿನ ಲಿಂಗದ ಬೈಲ್ ನಲ್ಲಿ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಪ್ರವಾಸೋ ದ್ಯಮ ಇಲಾಖೆಯಿಂದ ನಿರ್ಮಾಣ ಮಾಡಲಾದ ಡಮಾಮಿ ಸಿದ್ದಿ ಹೋಂ ಸ್ಟೇಯ ಸುಧಾ ಸಿದ್ದಿಯೂ ಲಕಪತಿ ದೀದಿ ಎಂದು ಆಯ್ಕೆ ಯಾಗಿದ್ದಾರೆ. ಇವರು ಸಿದ್ದಿ ಜನಾಂಗದ ಸಂಸ್ಕೃತಿ ಕಲೆ, ಸಂಪ್ರದಾಯ ವನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ಈ ಡಮಾಮಿ ಹೋಂ ಸ್ಟೇನಲ್ಲಿ ಕಾರ್ಯನಿರ್ವಹಿಸುತ್ತಾರೆ. ಇವರ ಜತೆಗೆ ಇವರ ಪತಿ ಗಣೇಶ ಸಿದ್ದಿ ಅವರನ್ನೂ ಸಹ ಮೋದಿಯವರು ಆಹ್ವಾನಿಸಿದ್ದಾರೆ.
ಅಂತೆಯೇ ಜೋಯಿಡಾ ತಾಲೂಕಿನ ಇಂದಿರಾ ಕಾಮತ್ ಎನ್ನುವರನ್ನೂ ಲಕಪತಿ ದೀದಿ ಎಂದು ದೆಹಲಿಗೆ ಕರೆಯಲಾಗಿದೆ. ಇವರು ಕಾಳಿ ರೈತ ಉತ್ಪಾದನಾ ಕಂಪನಿ ಆರಂಭಿಸಿದ್ದು, ಇದೂ ಮಹಿಳೆಯರ ಒಗ್ಗೂಡುವಿಕೆಯ ಕಾರ್ಯ ದ್ದಾಗಿದೆ. ಇವರೂ ಸಹ ತಮ್ಮ ಮನೆಯವರನ್ನು ಕರೆದುಕೊಂಡುಹೋಗುವ ಅವಕಾಶ ಕಲ್ಪಿಸಲಾಗಿದೆ.
ಎಲ್ಲ ಖರ್ಚನ್ನೂ ಕೇಂದ್ರವೇ ಭರಿಸಲಿದೆ
ಯಲ್ಲಾಪುರದ ಸುಧಾ ಸಿದ್ದಿ ಹಾಗೂ ಗಣೇಶ ಸಿದ್ದಿ ಯಲ್ಲಾಪುರದಿಂದ ಬಸ್ ಮೂಲಕ ಬೆಂಗಳೂರು ತಲುಪಿ ಅಲ್ಲಿಂದ ವಿಮಾನದಲ್ಲಿ ಪ್ರಯಾಣಿಸಲಿದ್ದಾರೆ. ಬಸ್ ಹಾಗೂ ವಿಮಾನದ ಟಿಕೆಟ್ ಈಗಾಗಲೇ ಇವರ ಹೆಸರಲ್ಲಿ ಕೇಂದ್ರದಿಂದ ಬುಕ್ ಮಾಡಲಾಗಿದೆ. ಇನ್ನು ಲಕ್ಷ್ಮೀ ಹಾಗೂ ಇಂದಿರಾ ಅವರಿಗೆ ಹುಬ್ಬಳ್ಳಿ ಯಿಂದ ವಿಮಾನದ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲಿ ಉಳಿಯುವ, ಊಟದ ವ್ಯವಸ್ಥೆಯನ್ನು ಅಲ್ಲಿ ಮಾಡಲಾಗಿದೆ.
*
ನನಗೆ ಇಂತದ್ದೊಂದು ಅವಕಾಶ ಬರುತ್ತದೆ ಎಂದು ಅಂದು ಕೊಂಡಿರಲಿಲ್ಲ. ನಮ್ಮ ಇಓ ಟಿ.ವೈ ದಾಸನಕೊಪ್ಪ ಅವರು ನನ್ನ ಕೆಲಸ ಗಮನಿಸಿ ನನ್ನ ಹೆಸರು ಸೇರಿಸಿದ್ದಾರೆ. ಅದೂ ಆಯ್ಕೆಯೂ ಆಗಿದೆ. ನಮ್ಮಲ್ಲಿ ಹಲವಾರು ಸ್ವಸಹಾಯ ಸಂಘಗಳಿದ್ದು, ಉತ್ತಮವಾಗಿ ಕಾರ್ಯ ನಡೆಯುತ್ತಿದೆ. ಕೇಂದ್ರ ಸರಕಾರದ ಸಾಕಷ್ಟು ಯೋಜನೆಗಳನ್ನು ನಾವು ಬಳಸಿಕೊಂಡಿದ್ದೇವೆ. ಈ ಆಹ್ವಾನಕ್ಕಾಗಿ ನಾನು ಮೋದಿಯವರಿಗೆ ಧನ್ಯವಾದ ಸಲ್ಲಿಸುತ್ತೇನೆ.-ಲಕ್ಷ್ಮೀ ಮುಳೆ ಹುನಗುಂದ