ಸೆ.೧೨ಕ್ಕೆ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಹಾವು ಏಣಿ ಆಟಕ್ಕೆ ಬ್ರೇಕ್ ಪಕ್ಕಾ!!
ಬಿಜೆಪಿಯ ಡಾರ್ಜಿಲಿಂಗ್ ಪ್ರವಾಸ ಫಲಪ್ರದವೋ, ಕಾಂಗ್ರೆಸ್‌ನ ರಾಜಸ್ಥಾನ ಪ್ರವಾಸ ಫಲಪ್ರದವೋ
ಮುನಿರಾಜು ಎಂ ಅರಿಕೆರೆ
ಚಿಕ್ಕಬಳ್ಳಾಪುರ:ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ದಿನಾಂಕ ಘೋಷಣೆ ಆದ ಮರುಗಳಿಗೆಯೇ ಸಂಸದ ಸುಧಾಕರ್ ಬೆಂಬಲಿತ ಬಿಜೆಪಿ, ಕಾಂಗ್ರೆಸ್ ಸದಸ್ಯರು ಪ್ರವಾಸದ ನೆಪದಲ್ಲಿಡಾರ್ಜಿಲಿಂಗ್‌ಗೆ ತೆರಳಿದರೆ, ಶಾಸಕ ಪ್ರದೀಪ್ ಈಶ್ವರ್ ಬೆಂಬಲಿತ ಕಾಂಗ್ರೆಸ್ ಸದಸ್ಯರು ರಾಜಸ್ಥಾನದ ಪಿಂಕ್ ಸಿಟಿ ಖ್ಯಾತಿಯ ಜೈಪುರದಲ್ಲಿ ಬೀಡುಬಿಟ್ಟಿ ದ್ದಾರೆ. 14 ತಿಂಗಳ ಅಧಿಕಾರದ ಸುಖಕ್ಕಾಗಿ ಹಾವು ಏಣಿ ಆಟಕ್ಕೆ ಇಳಿದಿರುವ ಮುಖಂಡರು ಮತ್ತು ಸದಸ್ಯರ ನವರಂಗಿ ಆಟಕ್ಕೆ ಸೆ.12ಕ್ಕೆ ಪಕ್ಕಾ ಬ್ರೇಕ್ ಬೀಳಲಿದೆ.
ರಾಜಸ್ಥಾನದ ರಾಜಧಾನಿ ಜೈಪುರದಲ್ಲಿ ಕಾಂಗ್ರೆಸ್ ಬೆಂಬಲಿತ ನಗರಸಭೆಯ ಸದಸ್ಯರು ತಂಗಿದ್ದು ತಮ್ಮದೇ ಆದ ಲೆಕ್ಕಾಚಾರದಲ್ಲಿ ಮುಳುಗಿದ್ದರೆ. ಇತ್ತು ಸುಂದರ ಕಣಿವೆ ನಾಡು ಡಾರ್ಜಲಿಂಗ್‌ನಲ್ಲಿ ಬಿಜೆಪಿ ಪಕ್ಷದ ಬೆಂಬಲಿತರು ಬೀಡು ಬಿಟ್ಟಿದ್ದು ಗೆಲವು ನಮ್ಮದೇ ಎನ್ನುತ್ತಿದ್ದಾರೆ.ಇದರ ಸೂತ್ರದಾರರು ಮಾತ್ರ ಬೆಂಗಳೂರಿನಲ್ಲಿದ್ದುಕೊಂಡೇ ಸದಸ್ಯರನ್ನು ನಿಯಂತ್ರಿಸುವ ಕೆಲಸ ಮಾಡುತಿರುವುದು ಗುಟ್ಟಾಗಿ ಉಳಿದಿಲ್ಲ.
ಹೀಗೆ ದಿನಕ್ಕೊಂದೊಂದು ಕಥೆಗಳ ಹಿಂದೆ ಬಿದ್ದಿರುವ ನಗರಸಭೆಯಲ್ಲಿ ಅಧಿಕಾರ ಹಿಡಿಯಲು ಹವಣಿಸಿರುವ ಸಂಸದರ ಬಣದಲ್ಲಿ ಬಿಜೆಪಿಯಿಂದ ಗೆದ್ದಿರುವ ೯ ಮಂದಿ, ಪಕ್ಷೇತರ ಸದಸ್ಯರು- 4 ಮಂದಿ, ಬಂಡಾಯ ಕಾಂಗ್ರೆಸ್‌ನ ೬ ಸದಸ್ಯರು ಇದ್ದಾರೆ ಎನ್ನಲಾಗಿದ್ದು,ಇದಕ್ಕೆ ಸಂಸದರ ಒಂದು ಮತ ಸೇರಿದರೆ 20 ಆಗಲಿದೆ. ಮೈತ್ರಿಯ ಕಾರಣ ಜೆಡಿಎಸ್‌ನ ಇಬ್ಬರು ಸದಸ್ಯರು ಬಿಜೆಪಿ ಬೆಂಬಲಿರನ್ನೇ ಬೆಂಬಲಿಸಬೇಕು. ಆದರೆ ಅವರು ಕೈಕೊಟ್ಟಿದ್ದಾರೆ ಎನ್ನುವ ಪುಕಾರಿರುವ ಕಾರಣ ಬಲ್ಲ ಮೂಲಗಳ ಪ್ರಕಾರ ಸದ್ಯ ಬಿಜೆಪಿ ಬಳಗದಲ್ಲಿ 20 ಸದಸ್ಯರ ಬೆಂಬಲವಿರುವುದು ಖಚಿತ ಎನ್ನಲಾಗುತ್ತಿದೆ.
ಇನ್ನು ಕಾಂಗ್ರೆಸ್ ಪಕ್ಷದ ಪಾಳೆಯದಲ್ಲಿ ಕಾಂಗ್ರೆಸ್‌ನ ೧೦, ಪಕ್ಷೇತರ ೧, ಜೆಡಿಎಸ್ ೨ ಸದಸ್ಯರು ಸೇರಿ ಒಟ್ಟು 13 ನಗರಸಭಾ ಸದಸ್ಯರ ಬೆಂಬಲವಿದೆ.ಇದರ ಜತೆಗೆ ಎಂಎಲ್‌ಎ ಪ್ರದೀಪ್ ಈಶ್ವರ್ ಮತ್ತು ಇಬ್ಬರು ವಿಧಾನಪರಿಷತ್ ಸದಸ್ಯರಾದ ಎಂ.ಆರ್.ಸೀತಾರಾಂ, ಅನಿಲ್‌ಕುಮಾರ್ ಸೇರಿದರೆ ೧೬ ಆಗಲಿದೆ. ಸರಳ ಬಹುಮತಕ್ಕೆ ೧೮ ಮಂದಿ ಸದಸ್ಯರ ಬೆಂಬಲ ಬೇಕೇ ಬೇಕಿದ್ದು,ಇದನ್ನು ಮೀರಿ ಬಿಜೆಪಿ ಬೆಂಬಲಿತರು ಇದ್ದಂತೆ  ಮೇಲ್ನೋಟಕ್ಕೆ ಕಾಣುತ್ತಿದ್ದರೂ, ಚುನಾವಣೆಯ ದಿನ ಯಾರ ಬಲಾಬಲ ಏನಾಗಲಿದೆಯೋ ಎಂಬುದನ್ನು ಸೆ.೧೨ ರಂದು ಮಾತ್ರ ಖಚಿತವಾಗಿ ಕಾಣಲು ಸಾಧ್ಯವಿದೆ.
ಕುತೂಹಲವೆಂದರೆ ಬಿಜೆಪಿ ಬೆಂಬಲಿತರೆಂದು ಗುರುತಿಸಿಕೊಂಡಿರುವ ಇಬ್ಬರು ಕೌನ್ಸಿರ‍್ಸ್ಗಳು ಬಿಜೆಪಿಯ ಡಾರ್ಜಲಿಂಗ್ ಪ್ರವಾಸಕ್ಕೋ ಅಥವಾ ಕಾಂಗ್ರೆಸ್‌ನ ರಾಜಾನಸ್ಥಾನ ಎರಡೂ ಟೀಮ್‌ನೊಂದಿಗೂ ಪ್ರವಾಸಕ್ಕೆ ಹೋಗಿಲ್ಲ. ಈ ಇಬ್ಬರೂ ಕೂಡ ಕಾಂಗ್ರೆಸ್ ಸದಸ್ಯರಾಗಿದ್ದರೂ ಇವರು ಅಡ್ಡಮತದಾನದ ಮೂಲಕ ಬಿಜೆಪಿಯನ್ನು ಬೆಂಬಲಿಸ ಲಿದ್ದಾರೆ ಎಂಬ ಲೆಕ್ಕಾಚಾರದಲ್ಲಿಯೇ ಕಾಂಗ್ರೆಸ್‌ನ ೬ ಮಂದಿ ಸದಸ್ಯರು ಬಿಜೆಪಿಯತ್ತ ಇದ್ದಾರೆ ಎಂದು ಬಿಜೆಪಿ ಮಂದಿಯ ಬಳಗದಲ್ಲಿ ಲೆಕ್ಕ ಹಾಕಲಾಗಿದೆ.
ಆದರೆ ಈ  ನಡುವೆ ಪ್ರವಾಸಕ್ಕೆ ಹೋಗಿರುವವರ ಕೈಬೆಚ್ಚಗೆ ಮಾಡುವ ಸಂದರ್ಭದಲ್ಲೇನಾದರೂ ಕೊಂಚ ಏರುಪೇರು ಅಸಮಾಧಾನ ತಲೆದೋರಿದರೆ ಮಾತ್ರ ಬಿಜೆಪಿ ಪಾಲಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎನ್ನುವುದು ರಾಜಕೀಯ ಪಡಸಾಲೆಯ ಮಾತಾಗಿದೆ. ಇದಕ್ಕೆ ಪುಷ್ಟಿ ನೀಡುವಂತೆ ಡಾರ್ಜಲಿಂಗ್ ಪ್ರವಾಸದಲ್ಲಿರುವ ಬಿಜೆಪಿ ಬೆಂಬಲಿತರಲ್ಲಿ ಅಧ್ಯಕ್ಷರು ಯಾರಾಗಬೇಕು ಎಂಬ ಚರ್ಚೆ ಬಂದಿದೆ.ಆಗ ಸೂಚಿತ ವ್ಯಕ್ತಿಯ ಪರ ಒಮ್ಮತ ಮೂಡದೆ ಕಾರಣ ಈಗಾಗಲೇ ಅಲ್ಲಿ ಅಸಮದಾನ ಶುರುವಾಗಿದೆ ಎನ್ನುವ ಬಗ್ಗೆ ಖಚಿತ ಮಾತುಗಳೂ ಕೂಡ ಕ್ಷೇತ್ರದಲ್ಲಿ ಜೋರಾಗಿ ಹರಿದಾಡುತ್ತಿವೆ.
ಜೆಡಿಎಸ್‌ನ ಇಬ್ಬರು ಸದಸ್ಯರ ಬೆಂಬಲ ಸೇರಿ ಕಾಂಗ್ರೆಸ್‌ಗೆ ಒಬ್ಬ ಶಾಸಕರು ಮತ್ತು ಇಬ್ಬರು ವಿಧಾನಪರಿಷತ್ ಸದಸ್ಯರು ಸೇರಿದರೆ ಆಗ ಕಾಂಗ್ರೆಸ್ ಬಲ ೧೬ಕ್ಕೆ ಏರಲಿದೆ. ಅಂಕಿ ಅಂಶಗಳಂತೆ ಕಾಂಗ್ರೆಸ್‌ಗೆ ಕೊರತೆ ಇರುವ ಸದಸ್ಯರ ಸಂಖ್ಯೆ ಕೇವಲ ಎರಡು ಮಾತ್ರ. ಹಾಗಾಗಿ ಬಿಜೆಪಿ ಇಂತಹ ಸಮಯದಲ್ಲಿ ಸ್ವಲ್ಪ ಯಾಮಾರಿದರೂ ಲೆಕ್ಕಾಚಾರಗಳು ತಲೆಕೆಳಗಾಗುವ ಆತಂಕ ಎದುರಾಗಿದ್ದು, ಬಿಜೆಪಿ ವರಿಷ್ಠರು ಪ್ರಸ್ತುತ ಪ್ರವಾಸದಲ್ಲಿರುವ ಸದಸ್ಯರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
ಕೈಯಲ್ಲಿದ್ದ ಅವಕಾಶವನ್ನು ದೂರದೃಷ್ಟಿ ಮತ್ತು ಅಪ್ರಬುದ್ಧತೆಯ ಕಾರಣಕ್ಕೆ ಕೈಚೆಲ್ಲಿರುವ ಕಾಂಗ್ರೆಸ್ ನಾಯಕರಿಗೆ ಕೊನೇ ಗಳಿಗೆಯಲ್ಲಿ ಜ್ಞಾನೋದಯವಾಗಿದ್ದರಿಂದ ಪ್ರವಾಸದಲ್ಲಿರುವ ಸದಸ್ಯರ ಮನವೊಲಿಕೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ. ಇದೇ ಕಾರಣಕ್ಕೆ ಪ್ರವಾಸ ಹೊರಟ ದಿನವೇ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ತೆರಳಿ ಕಾಂಗ್ರೆಸ್ ಪಕ್ಷದಿಂದ ಆರಿಸಿ ಬಂದವರನ್ನು ತಡೆಯುವ ಕಸರತ್ತು ಮಾಡಿದ್ದನ್ನು ಕೂಡ ಇಲ್ಲಿ ಸ್ಮರಿಸಬಹುದು. ಪರಿಸ್ಥಿತಿ ಹೀಗಿದ್ದರೂ ಕೂಡ ಡಾರ್ಜಲಿಂಗ್‌ಗೆ ತೆರಳಿ ಪ್ರವಾಸದಲ್ಲಿರುವ ತಮ್ಮ ಪಕ್ಷದ ಸದಸ್ಯರನ್ನು ಕರೆತರುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿದ್ದಾರೆ.ಇವರ ಪ್ರಯತ್ನ ಫಲನೀಡಿಲ್ಲ ಎಂಬ ಮಾತುಗಳೂ ಕೇಳಿಬರುತ್ತಿವೆ.
ಈ ಹಿಂದೆ ಇದೇ ಅಧ್ಯಕ್ಷರ ಆಯ್ಕೆ ವಿಚಾರಕ್ಕೆ ಸಂಬAಧಿಸಿ ಮೈಸೂರಿನ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ನಗರಸಭಾ ಸದಸ್ಯರ ಮೇಲೆ ಹಲವು ಸದಸ್ಯರು ಗೂಂಡಾವರ್ತನೆ ತೋರಿದ್ದ ಇತಿಹಾಸವೂ ಚಿಕ್ಕಬಳ್ಳಾಪುರ ನಗರಸಭೆಗೆ ಇದೆ. ಇದನ್ನು ಗ್ರಹಿಸಿರುವ ಬಿಜೆಪಿ ಮುಖಂಡರು ಇಲ್ಲದ ಉಸಾಬರಿ ನಮಗ್ಯಾಕೆ ಎನ್ನುತ್ತಾ ಬೆಂಬಲಿತ ಸದಸ್ಯರನ್ನು ಅಲ್ಲಿಂದ ನಿಗೂಢ ಸ್ಥಳಕ್ಕೆ ಶಿಫ್ಟ್ ಮಾಡಿರುವ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ ಎನ್ನಲಾಗಿದೆ.
ಪೈಪೋಟಿಯೇ ನೀಡಲಾಗದು ಎಂದು ಭಾವಿಸಿದ್ದ ಕಾಂಗ್ರೆಸ್ ಇದೀಗ ತನ್ನದೇ ಆದ ತಂತ್ರಗಳಿಂದ ಮುನ್ನೆಲೆಗೆ ಬಂದಿದ್ದು, ವಿಧಾನಪರಿಷತ್ ಸದಸ್ಯರನು ಸೇರಿಸುವ ಕೆಲಸಕ್ಕೆ ಮುಂದಾಗಿದ್ದರೂ ಅವರ  ಮತಗಳೆಷ್ಟು ಎಷ್ಟು ಎಂಬ ಬಗ್ಗೆ ಈವರೆಗೂ ಯಾರಿಗೂ ಸ್ಪಷ್ಟ ಮಾಹಿತಿ ಇಲ್ಲವಾಗಿದೆ. ಆದರೆ ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ಎಂಎಲ್ಸಿ ಅನಿಲ್, ಮತ್ತು ಎಂ.ಆರ್.ಸೀತಾರಾಮ್ ಅವರನ್ನು ಸೇರಿಸಿರುವ ಬಗ್ಗೆ ಪಕ್ಕಾ ಮಾಹಿತಿಯಿದ್ದು, ಇನ್ನೂ ಮೂವರನ್ನು ಸೇರಿಸುವ ಕಾಂಗ್ರೆಸ್ ಪ್ರಯತ್ನ ಸಫಲವಾಗುವುದೋ ಇಲ್ಲ ವಿಫಲವೋ ಎಂಬುದು ಇನ್ನೂ ನಿಗೂಢವಾಗಿಯೇ ಇದೆ.
ಹೆಚ್ಚುವರಿಯಾಗಿ ವಿಧಾನಪರಿಷತ್ ಸದಸ್ಯರ ಸೇರ್ಪಡೆಯಾಗಿದ್ದರೆ ಅದು ಕಾಂಗ್ರೆಸ್ ಪಾಲಿಗೆ ವರದಾನವಾಗುವು ದರಲ್ಲಿ ಅನುಮಾನವಿಲ್ಲ. ಮೇಲಾಗಿ ವಿಫ್ ಉಲ್ಲಂಘಿಸಿದರ ಉಚ್ಚಾಟನೆ ಖಚಿತ ಎನ್ನುವ ಎಚ್ಚರಿಕೆಯ ಸಂದೇಶ ವನ್ನೂ ನೀಡಿದೆ. ಇದೇ ಕಾರಣಕ್ಕಾಗಿ ಬಿಜೆಪಿ ತಮ್ಮ ಪಾಳೆಯದಲ್ಲಿ ಗುರುತಿಸಿಕೊಂಡಿರುವ ಸದಸ್ಯರನ್ನು ಎಚ್ಚರಿಕ ಯಿಂದ ಕಾಪಾಡಿಕೊಳ್ಳಲೇಬೇಕಾದ ಅನಗತ್ಯ ಒತ್ತಡಕ್ಕೆ ಸಿಕ್ಕಿಹಾಕಿಕೊಂಡಿದೆ.
ಒಟ್ಟಿನಲ್ಲಿ ದಿನಕ್ಕೊಂದು ತಿರುವು ಪಡೆಯುತ್ತಿರುವ ಚಿಕ್ಕಬಳ್ಳಾಪುರ ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು ಸೆ.೧೨ರ ಹೊತ್ತಿಗೆ ಏನೇನು ಬದಲಾವಣೆಗಳು ನಡೆಯಲಿದೆ ಎಂಬುದೇ ನಗರವಾಸಿಗಳ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.