ಕರುನಾಡ ಬೆಸೆಯಲಿದೆ ನಾಳೆ ಮಾನವ ಸರಪಳಿ
೨೫ ಲಕ್ಷ ಜನರಿಂದ ೨೫೦೦ ಕಿ.ಮೀ ಉದ್ದದ ಸರಪಳಿಪ್ರಜಾಪ್ರಭುತ್ವದ ಮೌಲ್ಯ ಸಾರಲು ಗಿನ್ನೆಸ್ ದಾಖಲೆ
ಶಿವಕುಮಾರ್ ಬೆಳ್ಳಿತಟ್ಟೆ
ಬೆಂಗಳೂರು:ರಾಜಕೀಯ ಗೊಂದಲಗಳ ನಡುವೆಯೂ ರಾಜ್ಯ ಸರಕಾರ ಪ್ರಜಾಪ್ರಭುತ್ವದ ಮೌಲ್ಯ ರಕ್ಷಣೆಯ ಹೊಣೆಗಾರಿಕೆಯ ಸಂದೇಶವನ್ನು ಜಗತ್ತಿಗೆ ಸಾರಿ ಹೇಳುವ ಮೂಲಕ ವಿಶ್ವ ದಾಖಲೆಯೊಂದನ್ನು ನಿರ್ಮಿಸಲು ಮುಂದಾಗಿದೆ.
ವಿಶ್ವ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಭಾನುವಾರ 2500 ಕಿ.ಮೀ. ಉದ್ದದ ಮಾನವ ಸರಪಳಿಯನ್ನು ರಾಜ್ಯಾದ್ಯಂತ ನಿರ್ಮಿಸುವ ಮೂಲಕ ವಿಶ್ವ ದಾಖಲೆ ಬರೆಯಲು ರಾಜ್ಯ ಸರಕಾರ ಸಕಲ ರೀತಿಯಲ್ಲಿ ಸಿದ್ಧವಾಗಿದೆ.
ರಾಜ್ಯ ಭೂಪಟದ ತುತ್ತತುದಿಯಲ್ಲಿರುವ ಬೀದರ್ ಜಿಲ್ಲೆಯಿಂದ ದಕ್ಷಿಣದ ಗಡಿ ಜಿಲ್ಲೆ ಚಾಮರಾಜನಗರ ತನಕ ಶಾಲಾಮಕ್ಕಳು, ಸಂಘ ಸಂಸ್ಥೆಗಳ ಕಾರ‍್ಯಕರ್ತರು, ಜನಪ್ರತಿನಿಧಿಗಳು ಮಂತ್ರಿಗಳು, ಅಧಿಕಾರಿಗಳು ಹಾಗೂ ಇತರ ಎಲ್ಲಾ ವರ್ಗದವರೂ ಸೇರಿದಂತೆ ಸುಮಾರು 25 ಲಕ್ಷ ಜನರು ಮಂದಿ ಕೈಕೈ ಹಿಡಿದು ಮಾನವ ಸರಪಳಿ ರಚಿಸುವ ಮೂಲಕ ವಿಶ್ವದ ಬೃಹತ್ ಮಾನವ ಸರಪಳಿಗೆ ಸಾಕ್ಷಿಯಾಗಲಿದ್ದಾರೆ. ಈ ಮೂಲಕ ಅಸ್ಪಶ್ಯತೆ ನಿವಾರಣೆ ಮಾಡಿ ಭ್ರಾತೃತ್ವ ಬೆಳೆಸುವ ಪ್ರಯತ್ನ ಮಾಡಿ ಸಮಾನತೆಯ ಹೆಜ್ಜೆ ಇಡಲಿದ್ದಾರೆ.
ಇದೇ ವೇಳೆ ಸಂವಿಧಾನದ ಮಹತ್ವ ಸಾರುವ ಪ್ರಸ್ತಾವನೆ ಓದುವುದು ಹಾಗೂ ಪ್ರಜಾಪ್ರಭುತ್ವದ ರಕ್ಷಣೆಯ ಹೊಣೆ ಗಾರಿಕೆ ನೆನಪಿಸುವ ಮಾತುಗಳನ್ನಾಡಿ ಜಾಗೃತಿ ಮೂಡಿಸಲಿದ್ದಾರೆ. ಇದರಲ್ಲಿ ಭಾಗವಹಿಸುವವರು ತಮ್ಮ ಸುತ್ತ ಮುತ್ತ ಗಿಡಗಳನ್ನು ನೆಡುವ ಮೂಲಕ ಅಂದು ರಾಜ್ಯಾದ್ಯಂತ 10 ಲಕ್ಷ ಗಿಡಗಳನ್ನು ನೆಡಲಿದ್ದಾರೆ. ಈ ಕಾರ್ಯ ಕ್ರಮದ ನೇತೃತ್ವವನ್ನು ಸಮಾಜ ಕಲ್ಯಾಣ ಇಲಾಖೆ ವಹಿಸಿದ್ದು ಸಚಿವ ಡಾ.ಮಹಾದೇವಪ್ಪ ಹೆಚ್ಚಿನ ಆಸಕ್ತಿ ವಹಿಸಿ ಸಿದ್ಧತೆಗಳನ್ನು ಪರಿಶೀಲನೆ ನೆಡಸಿದ್ದಾರೆ. ರಾಜ್ಯ ಸರಕಾರದ 32 ಇಲಾಖೆಗಳ ಸುಮಾರು ೮ಲಕ್ಷಕ್ಕೂ ಅಧಿಕ ಸಿಬ್ಬಂದಿ ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸುತ್ತಿದ್ದು, ರಾಜ್ಯಾದ್ಯಂತ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸುಮಾರು ೩ ಕೋಟಿ ಜನರು ಭಾಗಿಯಾಗಲಿದ್ದಾರೆ.
ಇದೇ ವೇಳೆ ಲಂಡನ್‌ನಿಂದ ಗಿನ್ನೆಸ್ ದಾಖಲೆ ಪರಿಶೀಲನೆ ಸಮಿತಿ ಆಗಮಿಸಲಿದ್ದು, ಎಲ್ಲವೂ ಅಂದುಕೊಂಡಂತೆ ನಡೆದರೆ ಕಾರ್ಯಕ್ರಮ ವಿಶ್ವದಾಖಲೆಗೆ ಸೇರಲಿದೆ. ಇದೆಲ್ಲದಕ್ಕೂ ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ಅವರು ತಮ್ಮದೇ ವಿಶ್ವ ಸುಧಾರಿತ ತಂತ್ರeನದ ಜಾಲದೊಂದಿಗೆ ಸಿದ್ಧತೆ ನಡೆಸಿದ್ದಾರೆ.
ಈ ವಿಶೇಷ ಮಾನವ ಸರಪಳಿ ಪ್ರತಿಜಿ, ತಾಲೂಕು ಹಾಗೂ ಪ್ರಮುಖ ಗ್ರಾಮಗಳಲ್ಲಿ ಹಾದು ಹೋಗುವ ಹೆದ್ದಾರಿಗಳಲ್ಲಿ ಹಾದು ಹೋಗಲಿದ್ದು, ಎಲ್ಲಾ ಹಳ್ಳಿಗಳಲ್ಲೂ ಇದೊಂದು ಹಬ್ಬದಂತೆ ಆಚರಿಸುವಂತೆ ಮಾಡಲು ಸರಕಾರ ಸಕಲ ರೀತಿಯಲ್ಲಿ ಸಿದ್ಧತೆ ನಡೆಸಿದೆ. ಈ ಮೂಲಕ ಕಳೆದೆರಡು ತಿಂಗಳಿನಿಂದ ಬರೀ ರಾಜಕೀಯ ಜಿದ್ದಾಜಿದ್ದಿ ಹೇಳಿಕೆಗಳು ಮತ್ತು ಅಧಿಕಾರದ ಅಳಿವು, ಉಳಿವುಗಳ ಚರ್ಚೆಯಿಂದ ಮಂಕಾಗಿದ್ದ ಸರಕಾರಕ್ಕೆ ಉತ್ಸಾಹದೊಂದಿಗೆ ವಿಶ್ವದ ಗಮನ ಸೆಳೆಯಲು ಮುಂದಾಗಿದೆ.
ಏನಿದು ಹೊಸ ಪ್ರಯೋಗ, ಏಕೆ?ವಿಶ್ವಸಂಸ್ಥೆ 2007ರ ಸೆ.15 ಅನ್ನು ವಿಶ್ವ ಪ್ರಜಾಪ್ರಭುತ್ವದ ದಿನ ಎಂದು ಘೋಷಿಸಿತ್ತು. ಇದರ ಅಂಗವಾಗಿ ವಿಶ್ವದಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವೆನಿಸಿದ ಭಾರತದಲ್ಲಿ ವಿನೂತನ ಕಾರ‍್ಯಕ್ರಮ ಹಮ್ಮಿಕೊಳ್ಳಲು ರಾಜ್ಯ ಸರಕಾರ ಮುಂದಾಗಿದೆ. ಇದರ ಅಂಗವಾಗಿ 2023ರ ಸೆ.15 ರಂದು ರಾಜ್ಯಾದ್ಯಂತ ಸಂವಿಧಾನದ ಪ್ರಸ್ತಾವನೆ ಓದುವ ಕಾರ್ಯಕ್ರಮ ನಡೆಸಲಾಗಿತ್ತು. ಇದರಲ್ಲಿ ಸುಮಾರು 2.3 ಲಕ್ಷ ಜನರು ಭಾಗವಹಿಸಿ ಗಮನ ಸೆಳೆದಿದ್ದರು. ಈ ಬಾರಿ 25 ಲಕ್ಷ ಜನರು ರಾಜ್ಯದುದ್ದಕ್ಕೂ ನಿಂತು ಸಂವಿಧಾನದ ಪೀಠಕೆ ಓದಲಿದ್ದಾರೆ.
ಎಲ್ಲಿ, ಹೇಗೆ ?ಸೆ.15ರ ಬೆಳಗ್ಗೆ 9 ಗಂಟೆ ಸಿಎಂ ಸಿದ್ದರಾಮಯ್ಯ ಅವರು ವಿಧಾನಸೌಧದ ಮುಂಭಾಗ ಸಂವಿಧಾನದ ಪೀಠಿಕೆ ಓದುವಮೂಲಕ ಚಾಲನೆ ನೀಡಲಿದ್ದಾರೆ. ನಂತರ ಜಿಲ್ಲೆಗಳಲ್ಲಿ ಡಿಸಿಗಳ ನೇತೃತ್ವದಲ್ಲಿ ಜಿಲ್ಲೆಗಳ ಸಮಸ್ತ ಜನರು ಸಂವಿಧಾನ ಪೀಠಿಕೆ ಓದಿ ಮಾನವ ಸರಪಳಿ ನಿರ್ಮಿಸುತ್ತಾರೆ. ಆ ಪ್ರದೇಶದ ಗಿಡ ನೆಡುತ್ತಾರೆ. ಪ್ರತಿ ಜಿಲ್ಲೆ, ತಾಲೂಕುಗಳಲ್ಲೂ ಕಾರ್ಯಕ್ರಮ ನಡೆಯಲಿದ್ದು, ದಕ್ಷಿಣ ಕನ್ನಡದಲ್ಲಿ ಕೆಲವರು ಸಮುದ್ರ ತೀರದಲ್ಲಿ ನಿಂತು ಮಾನವ ಸರಪಳಿ ರಚಿಸ ಲಿದ್ದಾರೆ.
ಇದೇ ರೀತಿ ವೇಷ, ಭೂಷಣ ಹಾಗೂ ವಿಶೇಷ ಸಂದೇಶ ಸಾರುವ ವಿಭಿನ್ನ ಪ್ರಯತ್ನ ಮಾಡಿದ ಜಿಲ್ಲೆಗೆ ಪ್ರಶಸ್ತಿ ನೀಡಲಾಗುತ್ತದೆ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಮಣಿವಣ್ಣನ್ ತಿಳಿಸಿದ್ದಾರೆ.
*
ಸಂವಿಧಾನದ ಆಶಯವಾದ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮಹತ್ವಗಳನ್ನು ಸಾರುತ್ತಾ ಜಾಗೃತಿ ಮೂಡಿಸಲು ಸರಕಾರ ಪ್ರಥಮ ಬಾರಿಗೆ ಇಂಥ ವಿಶ್ವಮಟ್ಟದ ಕಾರ್ಯಕ್ರಮ ರೂಪಿಸಿದೆ. ಇದರಲ್ಲಿ ಸಮಸ್ತ ಜನರೂ ಭಾಗಿಯಾಗಿ ಸಹಕಾರ ನೀಡುವ ಮೂಲಕ ಪ್ರಜಾಪ್ರಭುತ್ವ ಉಳಿಸಿ, ಬೆಳೆಸಬೇಕು.
-ಡಾ.ಎಚ್.ಸಿ.ಮಹಾದೇವಪ್ಪ, ಸಮಾಜ ಕಲ್ಯಾಣ ಸಚಿವ