   : ದಾನಿಗಳಿಂದ ಪ್ರಗತಿ ಕಂಡ ಸರಕಾರಿ ಪ್ರೌಢಶಾಲೆ
ಬಸವರಾಜ್ ಎಸ್.ಉಳ್ಳಾಗಡ್ಡಿ, ವಿಜಯಪುರ
೪೦ ಲಕ್ಷಕ್ಕೂ ಅಧಿಕ ದೇಣಿಗೆ
ಹೈಟೆಕ್ ಶಾಲೆಯಾಗಿ ಬದಲಾದ ಕುಪಕಡ್ಡಿ ಶಾಲೆ
ವಿಜಯಪುರ (ಕೊಲ್ಹಾರ):ಜಿಲ್ಲೆಯ ಕೊಲ್ಹಾರ ತಾಲೂಕಿನ ಕುಪಕಡ್ಡಿ ಗ್ರಾಮಸ್ಥರು ಹಾಗೂ ಶಿಕ್ಷಣಪ್ರೇಮಿಗಳು ತಮ್ಮೂರಿನ ಸರ್ಕಾರಿ ಪ್ರೌಢಶಾಲೆ ಅಭಿವೃದ್ಧಿಗಾಗಿ ಸರಕಾರದ ನೆರವಿಗೆ ಕಾಯದೇ ಖುದ್ದು ತಾವೇ 10 ಸಾವಿರದಿಂದ 10 ಲಕ್ಷದವರೆಗೂ ಹೀಗೆ ಒಟ್ಟು 40 ಲಕ್ಷಕ್ಕೂ ಅಧಿಕ ದೇಣಿಗೆ ನೀಡಿ ಖಾಸಗಿ ಶಾಲೆಗಳನ್ನು ಮೀರಿಸುವಂತೆ ತಮ್ಮೂ ರಿನ ಸರಕಾರಿ ಶಾಲೆಯನ್ನು ಹೈಟೆಕ್ ಶಾಲೆಯಾಗಿ ಅಭಿವೃದ್ಧಿಪಡಿಸುವ ಮೂಲಕ ಇತರರಿಗೆ ಮಾದರಿ ಯಾಗಿದ್ದಾರೆ.
೨೦೧೧-೧೨ ರಲ್ಲಿ ಪ್ರಾರಂಭವಾದ ಕುಪಕಡ್ಡಿ ಸರಕಾರಿ (ಆರ್.ಎಂ.ಎಸ್.ಎ) ಪ್ರೌಢಶಾಲೆ ಸುಮಾರು 2017 ರವರೆಗೂ ಮೂಲಭೂತ ಸೌಲಭ್ಯಗಳ ಕೊರತೆ, ಶೈಕ್ಷಣಿಕವಾಗಿ ಹಿಂದುಳಿದಿತ್ತು. 2017 ರಿಂದಿಚೆ ಗ್ರಾಮಸ್ಥರು, ಶಿಕ್ಷಣಪ್ರೇಮಿಗಳು,ಸಂಘಸಂಸ್ಥೆಗಳ ಉದಾರ ದೇಣಿಗೆ, ಆರ್ಥಿಕ ನೆರವಿನಿಂದ ಹಾಗೂ ಶಾಲೆಯ ಎಸ್‌ಡಿಎಂಸಿ ಸಮಿತಿ, ಪ್ರಾಂಶುಪಾಲರು, ಶಿಕ್ಷಕರ ಇಚ್ಚಾಶಕ್ತಿಯಿಂದ ಶಾಲೆಯಲ್ಲಿ ಗುಣಮಟ್ಟದ ಬೋಧನೆಯೊಂದಿಗೆ, ಮೂಲಭೂತ ಸೌಕರ್ಯಗಳನ್ನೊಳ ಗೊಂಡ ಅತ್ಯುತ್ತಮ ಕಲಿಕಾ ವಾತಾವರಣ ಸೃಷ್ಟಿಯಾಗಿ ಅಲ್ಪಾವಧಿಯಲ್ಲೇ ಇಡಿ ಜಿಲ್ಲೆ ತಿರುಗಿ ನೋಡುವಂತೆ ಶೈಕ್ಷಣಿಕ ಪ್ರಗತಿ ಸಾಧಿಸಿದೆ.
ಸರಕಾರಿ ಶಾಲಾಭಿವೃದ್ಧಿಗೆ ೪೦ ಲಕ್ಷಕ್ಕೂ ಅಧಿಕ ದೇಣಿಗೆ:ಕುಪಕಡ್ಡಿ ಗ್ರಾಮದ ಸರಕಾರಿ ಪ್ರೌಢಶಾಲೆಗೆ 2017-18 ರಲ್ಲಿ ಶಾಲಾ ಕಟ್ಟಡ ಅಭಿವೃದ್ಧಿಯಾಗುತ್ತಿದ್ದಂತೆ ಗ್ರಾಮದ ಶಿಕ್ಷಣಪ್ರೇಮಿಗಳು, ದೂರದ ಕೆನಡಾದ ಮಾನಿಟೋಬೊ ಯೂನಿವರ್ಸಿಟಿಯಲ್ಲಿ ಪ್ರೊಫೆಸರ್ ಆಗಿರುವ -.ಶಿವಲಿಂಗಪ್ಪ ಹಳ್ಳಿ ಅವರು 5 ಲಕ್ಷ ದೇಣಿಗೆ ನೀಡಿ ಶಾಲೆಯ ವಿಜ್ಞಾನಮತ್ತು ಗಣಿತ ಪ್ರಯೋಗಾಲಯಕ್ಕೆ ಅತ್ಯಾಧುನಿಕ ಸಾಮಗ್ರಿಗಳನ್ನು ಒದಗಿಸಿದರು.
ಶಾಲೆಯ ಸಭಾಮಂಟಪ ನಿರ್ಮಾಣಕ್ಕೆ ಗ್ರಾಮದ ಹಿರಿಯರಾದ ಸಾಂಯವ್ವ ದುಂಡಪ್ಪ ಕೊಲ್ಹಾರ ಅವರು ಸುಮಾರು 2 ಲಕ್ಷ, ಗ್ರಾಮದವರಾದ ನಿವೃತ್ತ ಶಿಕ್ಷಣಾಧಿಕಾರಿ ಸಿದ್ದಪ್ಪ ದಾನಪ್ಪ ಉಗ್ರಾಣ ಅವರು ಶಾಲಾ ಮುಖ್ಯ ದ್ವಾರಕ್ಕೆ 2 ಲಕ್ಷದ ಜತೆಗೆ ಕಲಿಕಾ ಪೀಠೋಪಕರಣಗಳಿಗಾಗಿ 1.25 ಲಕ್ಷ ಒಟ್ಟು 3.25 ಲಕ್ಷ ಆರ್ಥಿಕ ನೆರವು ನೀಡಿ ದ್ದಾರೆ.
ಇನ್ನು ಮುಂಬೈನ ಕುಮದಿನಿದೇವಿ ಟ್ರಸ್ಟ್ ನವರು ಶಾಲೆಗೆ ಸ್ಮಾರ್ಟ್ ಕ್ಲಾಸ್ ಹಾಗೂ ಗ್ರಂಥಾಲಯ ಪೀಠೋಪಕರಣ ಕ್ಕೆ 5 ಲಕ್ಷ ದೇಣಿಗೆ ನೀಡಿದ್ದಾರೆ. ಹಿರಿಯರಾದ ಲಕ್ಷ್ಮೀ ಹನುಮಂತ ತೋಳಮಟ್ಟಿ ಅವರು ಕಟ್ಟಡ ಸಾಮಗ್ರಿಗೆ 1.15 ಲಕ್ಷ, ಬೆಂಗಳೂರಿನಲ್ಲಿ ಐಟಿಸಿ ಕಂಪನಿ ಉದ್ಯೋಗಿಯಾಗಿರುವ ಇದೇ ಗ್ರಾಮದ ಸಂಗಪ್ಪ ಸಾಳುಂಕೆ ಅವರು ಕಟ್ಟಡ ಸಾಮಗ್ರಿಗೆ 1.40 ಲಕ್ಷ, ಬೆಳಗಾವಿಯಲ್ಲಿ ನೆಲೆಸಿರುವ ಇದೇ ಗ್ರಾಮದ ಡಾ.ಜಗದೀಶ ಜಾಂಬೋಟಿ ದಂಪತಿ 1 ಲಕ್ಷ, ಅಮೇರಿಕಾದಲ್ಲಿ ನೆಲೆಸಿರುವ ಡಾ. ದಿನೇಶ ಜಯದೇವಪ್ಪ ಅವರು ಶಾಲಾ ದಾಸೋಹಭವನ, ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ೧೨ ಲಕ್ಷ ನೀಡುವ ವಾಗ್ದಾನ ನೀಡಿದ್ದಾರೆ.
ಅಲ್ಲದೇ ಗ್ರಾಮದ ಸಾಕಷ್ಟು ಮಹಾದಾನಿಗಳು ಶಾಲೆಯ ಮೂಲಭೂತ ಸೌಕರ್ಯಗಳು ಹಾಗೂ ಇತರೆ ಸಾಮಗ್ರಿ ಗಳಿಗಾಗಿ ಕನಿಷ್ಠ 10 ಸಾವಿರದಿಂದ 1 ಲಕ್ಷ ದವರೆಗೂ ಉದಾತ್ತ ದೇಣಿಗೆ ನೀಡಿದವರ ಪಟ್ಟಿ ದೊಡ್ಡದಿದೆ. ಖಾಸಗಿ ಶಾಲೆಗಳನ್ನು ಮೀರಿಸುವಂತೆ ಬೆಳೆದಿರುವ ಈ ಸರಕಾರಿ ಪ್ರೌಢಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಲು ಪಾಲಕರು ಪ್ರತಿವರ್ಷ ತುದಿಗಾಲಲ್ಲಿ ನಿಂತಿರುತ್ತಾರೆ ಎಂಬುದು ಅಶ್ಚರ್ಯವೆನಿಸಿದರೂ ಸತ್ಯ.
ಕುಪಕಡ್ಡಿ ಗ್ರಾಮಸ್ಥರ ಉದಾರ ದೇಣಿಗೆ ಜತೆಗೆ ಪ್ರತಿ ವಿಚಾರದಲ್ಲೂ ಗ್ರಾಮದ ಗುರುಹಿರಿಯರು, ಶಿಕ್ಷಣಪ್ರೇಮಿಗಳುನೀಡುತ್ತಿರುವ ಪ್ರೋತ್ಸಾಹ, ಕಾಳಜಿಯಿಂದಲ್ಲೇ ನಮ್ಮ ಸರಕಾರಿ ಆರ್‌ಎಂಎಸ್‌ಎ ಪ್ರೌಢಶಾಲೆ ಜಿಲ್ಲೆಯಲ್ಲೇ ಅತ್ಯು ತ್ತಮ ಶೈಕ್ಷಣಿಕ ಉನ್ನತಿ ಸಾಧಿಸಿದೆ. ಗ್ರಾಮಸ್ಥರು, ಎಸ್‌ಡಿಎಂಸಿ ಸಮಿತಿಯವರು ಮನಸ್ಸು ಮಾಡಿದರೆ ಎಂತಹಸರಕಾರಿ ಶಾಲೆಯಾದರೂ ಬದಲಾಯಿಸಬಹುದು ಎಂಬುದಕ್ಕೆ ಈ ಶಾಲೆ ತಾಜಾ ಉದಾಹರಣೆಯಾಗಿದೆ.
ಎನ್.ಪಿ.ಹೊನ್ನಾಕಟ್ಟಿ, ಪ್ರಾಂಶುಪಾಲರು,ಆರಎಂಎಸ್‌ಎ ಪ್ರೌಢಶಾಲೆ, ಕುಪಕಡ್ಡಿ