ನಾಮ ನಿರ್ದೇಶಿತ ಸದಸ್ಯರ ಬದಲಾವಣೆ ?
ವಿಶೇಷ ವರದಿ:ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ಬಿಎಸ್‌ವೈ ಅಧಿಕಾರಾವಧಿಯಲ್ಲಿ ನೇಮಕವಾಗಿದ್ದ ನಾಮ ನಿರ್ದೇಶಿತರಿಗೆ ಗೇಟ್‌ಪಾಸ್‌ಗೆ ಸಿದ್ಧತೆ
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಯಡಿಯೂರಪ್ಪ ಅವರ ಅವಧಿಯಲ್ಲಿ ನೇಮಕವಾಗಿದ್ದ ಹಲವುನೇಮಕಗಳನ್ನು ರದ್ದುಗೊಳಿಸುವ ಸಿದ್ಧತೆ ನಡೆದಿದೆ.
ಈಗಾಗಲೇ ನಿಗಮ ಮಂಡಳಿ ಅಧ್ಯಕ್ಷ-ಉಪಾಧ್ಯಕ್ಷರ ಬದಲಾವಣೆಗೆ ವೇದಿಕೆ ಸಜ್ಜಾಗಿರುವ ಬೆನ್ನಲೆ ಇದೀಗ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ನೇಮಿಸಲಾಗಿದ್ದ ನಾಮನಿರ್ದೇಶಿತ ಸದಸ್ಯರನ್ನು ಬದಲಾವಣೆ ಮಾಡುವ ಲೆಕ್ಕಾಚಾರ ಶುರುವಾಗಿದೆ. ಬೊಮ್ಮಾಯಿ ಅವರ ಮೂಲಕ ಬಿಜೆಪಿ ವರಿಷ್ಠರು ಹಾಗೂ ಸಂಘ ಪರಿವಾರದವರು ಈ ಕಾರ್ಯಕ್ಕೆ ಮುಂದಾಗಿದ್ದಾರೆ. ಇದರಿಂದ ಸ್ಥಳೀಯ ಮಟ್ಟದಲ್ಲಿ ಅಸಮಾಧಾನ ಭುಗಿಲೇಳುವ ಸಾಧ್ಯತೆಯಿದ್ದರೂ, ಈ ಪ್ರಯತ್ನಕ್ಕೆ ಮುಂದಾಗಿರುವುದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಮುಂದಿನ ಕೆಲವೇ ತಿಂಗಳಲ್ಲಿ ಸ್ಥಳೀಯ ಸಂಸ್ಥೆ ಹಾಗೂ ವಿಧಾನ ಪರಿಷತ್ ಚುನಾವಣೆ ನಡೆಯಲಿದ್ದು, ಈ ಹಂತದಲ್ಲಿ ಈ ರೀತಿಯ ನಿರ್ಧಾರದಿಂದ ಚುನಾವಣೆಗಳ ಮೇಲೆಯೂ ಪರಿಣಾಮ ಬೀರುವ ಸಾಧ್ಯತೆಯಿದೆ ಎನ್ನುವ ಮಾತುಗಳು ಕೇಳಿಬಂದಿವೆ.
ವರ್ಷಾಂತ್ಯದವರೆಗೂ ಅವಕಾಶ ನೀಡಲಿ:ಬದಲಾವಣೆ ಬಗ್ಗೆ ಗುಸುಗುಸು ಆರಂಭವಾಗುತ್ತಿದ್ದಂತೆ ಹಲವು ನಾಮನಿರ್ದೇಶಿತ ಸದಸ್ಯರು, ‘ನಮ್ಮನ್ನು ನೇಮಿಸಿದ ದಿನದಿಂದ ಕರೋನಾ ಕಾಟ ಶುರುವಾಗಿದೆ. ಹೀಗಾಗಿ ಕೆಲಸ ಮಾಡಲು ಸಾಧ್ಯವಾಗಿಲ್ಲ. ಕಳೆದ ಕೆಲ ತಿಂಗಳಿಂದ ಕೆಲಸ ಮಾಡುವುದಕ್ಕೆ ಅವಕಾಶ ಸಿಕ್ಕಿದೆ. ಇದೀಗ ಪುನಃ ಅಧಿಕಾರವನ್ನು ಕಿತ್ತುಕೊಂಡರೆ ಸಮಸ್ಯೆಯಾಗಲಿದೆ. ಆದ್ದರಿಂದ ಈ ವರ್ಷದ ಅಂತ್ಯದವರೆಗೂ ಬದಲಾವಣೆಮಾಡುವುದು ಬೇಡ. ಆ ವೇಳೆ ವಿವಿಧ ಸ್ಥಳೀಯ ಸಂಸ್ಥೆಗಳ ಚುನಾವಣೆಗಳೂ ಆರಂಭವಾಗಲಿವೆ. ಆ ಸಮಯದಲ್ಲಿ ಬೇಕಿದ್ದರೆ ಬದಲಾವಣೆ ಮಾಡಲಿ’ ಎಂದು ಮನವಿ ಮಾಡಿದ್ದಾರೆ ಎನ್ನಲಾಗಿದೆ. ‘ಜನವರಿಯಿಂದ ಬೇರೆಯವರಿಗೆ ಅವಕಾಶ ನೀಡಿದರೂ, ಅವರಿಗೆ ಒಂದೂವರೆ ವರ್ಷ ಕೆಲಸ ಮಾಡಲು ಅವಕಾಶವಿರುತ್ತದೆ. ಆದ್ದರಿಂದ ಇನ್ನೆರಡು ತಿಂಗಳಲ್ಲಿ ಮಾಡುವುದು ಬೇಡ. ಅದರಲ್ಲಿಯೂ ಉಪಚುನಾವಣೆ ನಡೆಯುತ್ತಿರುವ ಈ ಸಮಯದಲ್ಲಿ ಈ ರೀತಿಯ ಕಾರ್ಯಕ್ಕೆ ಮುಂದಾದರೆ ಪಕ್ಷಕ್ಕೆ ದೊಡ್ಡಮಟ್ಟದ ಸಮಸ್ಯೆಯಾಗಲಿದೆ’ ಎನ್ನುವ ಮಾತುಗಳನ್ನು ಹಲವರು ಆಡಿದ್ದಾರೆ.
ಸಿಎಂ ಕಚೇರಿಯಲ್ಲಿ ಫೈಲ್ :ಯಡಿಯೂರಪ್ಪ ಅವರ ಸರಕಾರದಲ್ಲಿ ನೇಮಕ ಮಾಡಲಾಗಿದ್ದ ನಾಮನಿರ್ದೇಶಿತ ಸದಸ್ಯರನ್ನು ವಜಾಗೊಳಿಸಿ, ಆ ಸ್ಥಾನಕ್ಕೆ ನೂತನ ಸದಸ್ಯರನ್ನು ನೇಮಿಸುವ ನಿಟ್ಟಿನಲ್ಲಿ ಈಗಾಗಲೇ ಮುಖ್ಯಮಂತ್ರಿ ಬಸರವಾಜ ಬೊಮ್ಮಾಯಿ ಅವರ ಕಚೇರಿಗೆ ಫೈಲ್ ತಲುಪಿದೆ. ಆದರೆ ಉಪಚುನಾವಣೆ ಇರುವ ಕಾರಣಕ್ಕೆ ಈ ಕಡತವನ್ನು ಮುಟ್ಟಿಲ್ಲ. ಚುನಾವಣೆ ಬಳಿಕ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿ ದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಅಸಮಾಧಾನ ಭುಗಿಲೇಳುವ ಸಾಧ್ಯತೆಈ ಸಂದರ್ಭದಲ್ಲಿ ನಾಮನಿರ್ದೇಶಿತ ಸದಸ್ಯರನ್ನು ಬದಲಾಯಿಸಲು ಸರಕಾರ ಹೊರಟರೆ, ಪಕ್ಷದಲ್ಲಿ ಕೆಟ್ಟ ಸಂದೇಶ ರವಾನೆಯಾಗಲಿದೆ. ಅದರಲ್ಲಿಯೂ ಯಡಿಯೂರಪ್ಪ ಆಪ್ತರನ್ನು ತಗೆದು ಹಾಕಲಾಗಿದೆ ಎನ್ನುವ ಸಂದೇಶ, ಪಕ್ಷದಲ್ಲಿ ಇನ್ನಷ್ಟು ಬಿಕ್ಕಟ್ಟು ಸೃಷ್ಟಿಸುವ ಸಾಧ್ಯತೆಯಿದೆ. ಆದ್ದರಿಂದ ಈ ವಿಷಯ ಜೇನುಗೂಡಿಗೆ ಕೈಹಾಕಿದಂತೆ ಎನ್ನುವುದು ಬೊಮ್ಮಾಯಿ ಅವರಿಗೆ ಗೊತ್ತಿದೆ. ಆದರೆ ಬಿಜೆಪಿ ವರಿಷ್ಠರು ಹಾಗೂ ಆರ್‌ಎಸ್‌ಎಸ್ ಪ್ರಮುಖರು ಈ ವಿಷಯದಲ್ಲಿ ತಮ್ಮ ನಿಲುವನ್ನು ಬದಲಾಯಿಸದೇ ಇರುವುದು ಸಮಸ್ಯೆಗೆ ಕಾರಣವಾಗಿದೆ.