ಬೆಳಗಾವಿ ಅಧಿವೇಶನದ ರೈಸಿಂಗ್‌ ಸ್ಟಾರ್‌ ಅನ್ನದಾನಿ !
ಕನ್ನಡ ಬಾವುಟ ಸುಟ್ಟ ಪ್ರಕರಣ, ಅಂಬೇಡ್ಕರ್ ಭಾವಚಿತ್ರ ವಿಚಾರದಲ್ಲಿ ಫುಲ್ ಮಾರ್ಕ್ಸ್
ವಿಶೇಷ ವರದಿ:ವೆಂಕಟೇಶ ಆರ್.ದಾಸ್ ಬೆಂಗಳೂರು
ಕ್ರಿಕೆಟ್‌ನಲ್ಲಿ ಮ್ಯಾನ್ ಆಪ್ ದಿ ಮ್ಯಾಚ್ ಇದ್ದಂತೆ, ಅಧಿವೇಶನದಲ್ಲಿ ಹವಾ ಎಬ್ಬಿಸುವ ಜನಪ್ರತಿನಿಧಿಗೆ ಅವಾರ್ಡ್ ಕೊಡಬೇಕು ಎಂದುಕೊಂಡರೆ, ಬೆಳಗಾವಿ ಅಧಿವೇಶನದ ಮ್ಯಾನ್ ಆಫ್ ದಿ ಸಿರೀಸ್ ಮಳವಳ್ಳಿ ಶಾಸಕ ಅನ್ನದಾನಿ ಎನ್ನಬಹುದು.
ಪ್ರತಿ ಪಂದ್ಯದಲ್ಲೂ ಒಬ್ಬೊಬ್ಬ ಬ್ಯಾಟ್ಸ್‌ಮೆನ್ ಉತ್ತಮವಾಗಿ ಪ್ರದರ್ಶನ ನೀಡುವ ರೀತಿಯಲ್ಲಿ ಈ ವರ್ಷದ ಅಧಿ ವೇಶನದಲ್ಲಿ ಅನ್ನದಾನಿ ಅವರು ಅತ್ಯುತ್ತಮ ಸದನಪಟುವಾಗಿ ಮಿಂಚಿದ್ದಾರೆ. ಬೆಂಗಳೂರಿನಲ್ಲಿ ನಡೆದ ಕಳೆದೆರೆಡು ಸಲದ ಅಧಿವೇಶನದಲ್ಲಿ ಜೆಡಿಎಸ್ ನವರೇ ಆದ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಮಿಂಚಿದ್ದರು. ಅದಕ್ಕಿಂದ ಹಿಂದಿನ ಅಧಿವೇಶನದಲ್ಲಿ ಮಾಧುಸ್ವಾಮಿ ಮಾಸ್ಟರ್‌ಫೀಸ್ ಆಗಿದ್ದರು. ಬೆಳಗಾವಿಯ ಚಳಿಗಾಲದ ಅಧಿ ವೇಶನದಲ್ಲಿ ಮಳವಳ್ಳಿಯ ಜೆಡಿಎಸ್ ಶಾಸಕ ಅನ್ನದಾನಿ ಮಿಂಚುವ ಮೂಲಕ ಮ್ಯಾನ್ ಆಫ್ ದಿ ಸಿರೀಸ್ ಆಗಿದ್ದಾರೆ ಎನ್ನಬಹುದು.
ಬೆಳಗಾವಿ ಅಧಿವೇನದಲ್ಲಿ ಕೂಡ ಅನ್ನದಾನಿ ಅವರು, ಎಂಇಎಸ್ ಪುಂಡರು ಕನ್ನಡ ಧ್ವಜ ಸುಟ್ಟ ಪ್ರಕರಣವನ್ನು ಕನ್ನಡ ಬಾವುಟವನ್ನು ಎತ್ತಿ ಹಿಡಿಯುವ ಮೂಲಕವೇ ಮೊದಲ ಬಾರಿಗೆ ಖಂಡಿಸಿದರು. ಅವರ ಖಂಡನೆಯ ನಂತರವೇ ಕನ್ನಡ ಬಾವುಟ ಸುಟ್ಟ ಪ್ರಕರಣ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ನಂತರದ ದಿನಗಳಲ್ಲಿ ಕನ್ನಡ ಸಂಘಟನೆಗಳು ಸಾಲುಸಾಲಾಗಿ ಬೆಳಗಾವಿಗೆ ಆಗಮಿಸಿ, ಎಂಇಎಸ್ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಸರಕಾರದ ಮೇಲೆ ಒತ್ತಡ ಹಾಕುವ ಯತ್ನ ನಡೆಸಿದವು.
ಮರುದಿನ ಜೆಡಿಎಸ್‌ನ ಎಲ್ಲ ಶಾಸಕರು ಕನ್ನಡ ಬಾವುಟವನ್ನು ತಮ್ಮ ಹೆಗಲಿಗೆ ಹಾಕಿಕೊಂಡು ಬಂದು ಸದನದಲ್ಲಿ ಪ್ರತಿಭಟನೆ ನಡೆಸುವ ಮೂಲಕ ಕನ್ನಡ ಧ್ವಜ ಸುಟ್ಟ ಪ್ರಕರಣವನ್ನು ಖಂಡಿಸಿದರು. ತಾವು ಕನ್ನಡಪರ ಇರುವ ಪ್ರಾದೇಶಿಕ ಪಕ್ಷ ಎಂದು ಬಿಂಬಿಸಿ ಕೊಳ್ಳುವ ಪ್ರಯತ್ನವನ್ನು ನಡೆಸಿದರು. ವಿಧಾನಸಭೆಯಲ್ಲಿ ಸಂವಿಧಾನಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರ ಅಳವಡಿಸುವ ಕುರಿತಂತೆ ಸ್ಪೀಕರ್ ಗಮನ ಸೆಳೆದ ಅನ್ನದಾನಿ ಅವರು, ಈ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಜಾಲತಾಣದಲ್ಲಿ ಹೀರೋ ಆದರು.
ಅಂಬೇಡ್ಕರ್ ಅಭಿಮಾನಿಗಳು ಮತ್ತು ಪ್ರಗತಿಪರ ಚಿಂತಕರೆಲ್ಲ ಅನ್ನದಾನಿ ಅವರ ಬದ್ಧತೆಯನ್ನು ಪ್ರಶಂಸಿಸಿದರು. ಅವರ ಒತ್ತಡವನ್ನು ಗಂಭೀರವಾಗಿಪರಿಗಣಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಶೀಘ್ರವೇ ಅಂಬೇಡ್ಕರ ಭಾವಚಿತ್ರವನ್ನು ವಿಧಾನಸಭೆಯಲ್ಲಿ ಅಳವಡಿಸುವ ಕುರಿತು ಅಧಿಕಾರಿ ಗಳಿಗೆ ಸೂಚನೆ ನೀಡಿದರು. ಆ ಮೂಲಕ ಅನ್ನದಾನಿ ಅವರು ತಮ್ಮ ಪ್ರಯತ್ನದಲ್ಲಿ ಯಶಸ್ವಿಯಾದರು.
ಮಾಧುಸ್ವಾಮಿ ಮಿಂಚಿದ್ದೇ ಹೀಗೆ !:ಹಿಂದಿನ ಕಾಂಗ್ರೆಸ್ -ಜೆಡಿಎಸ್ ಮೈತ್ರಿ ಸರಕಾರದ ಅವಧಿಯಲ್ಲಿ ಸದನದಲ್ಲಿ ಮಾಧುಸ್ವಾಮಿ, ಕಾನೂನು ಅಂಶಗಳನ್ನು ಎತ್ತುವ ಮೂಲಕ ಸದನದ ಹೀರೋ ಆಗಿ ಮರೆಯುತ್ತಿದ್ದರು. ಅವರು ಪ್ರತಿ ಅಧಿವೇಶನದಲ್ಲೂ ತೋರುತ್ತಿದ್ದ ಪ್ರೌಢಿಮೆಗೆ ಎಲ್ಲರೂ ಧಂಗಾಗುತ್ತಿದ್ದರು. ಇದೇ ಅವರಿಗೆ ಬಿಎಸ್‌ವೈ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಕಾನೂನು ಸಚಿವ ಸ್ಥಾನ ಸಿಗುವಂತೆ ಮಾಡಿತ್ತು. ನಂತರಬಿಎಸ್‌ವೈ ನೇತೃತ್ವದ ಸರಕಾರದ ಅವಧಿಯಲ್ಲಿ ನಡೆದ ಎರಡು ಅಧಿವೇಶನಗಳಲ್ಲಿ ಅರಸೀಕೆರೆ ಶಾಸಕ ಶಿವಲಿಂಗೇಗೌಡ ಸದನದ ಗಮನ ಸೆಳೆದರು. ಜನರ ಸಮಸ್ಯೆಗಳನ್ನು, ಕರೋನಾ ಕಷ್ಟಕಾಲದ ಬವಣೆಗಳನ್ನು ತಮ್ಮದೇ ಆದ ಗ್ರಾಮೀಣ ಭಾಷಾಶೈಲಿಯಲ್ಲಿ ಪ್ರಸ್ತುತ ಪಡಿಸುವ ಮೂಲಕ ಸದನದ ಹೀರೋ ಆಗಿ ಮಿಂಚುತ್ತಿದ್ದರು. ಈ ಸಾಲಿಗೆ ಇದೀಗ ಅನ್ನದಾನಿ ಸೇರಿದ್ದಾರೆ ಎನ್ನಬಹುದು.
***
ಹಿಂದಿ ಭಾಷಣ ವಿರೋಧಿಸಿದ್ದ ಶಾಸಕಮುಂದಿನ ಅಧಿವೇಶನದಲ್ಲಿ ತಮ್ಮ ಫಾರ್ಮ್ ಹೀಗಿರಲಿದೆ ಎಂಬ ಭರವಸೆಯನ್ನು ಅನ್ನದಾನಿ ಅವರು, ಬೆಂಗಳೂರಿನಲ್ಲಿ ನಡೆದ ಹಿಂದಿನ ಜಂಟಿಅಧಿವೇಶನದ ಅವಧಿಯಲ್ಲಿ ಲೋಕಸಭೆ ಸ್ಪೀಕರ್ ಭಾಷಣದ ವೇಳೆಯೇ ಮೂಡಿಸಿದ್ದರು. ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ, ಲೋಕಸಭೆ ಸ್ಪೀಕರ್ ಓಂ ಪ್ರಕಾಶ್ ಬಿರ್ಲಾ ಅವರು ಹಿಂದಿಯಲ್ಲಿ ಮಾತು ಆರಂಭಿಸುತ್ತಿದ್ದಂತೆಕನ್ನಡ ಬಾವುಟ ಹಿಡಿದು, ಪ್ರತಿಭಟಿಸುವ ಮೂಲಕ ಭಾಷಣ ವಿರೋಧಿಸಿ ಸದನಕ್ಕೆ ಹಾಜರಾಗದ ಕಾಂಗ್ರೆಸ್ ನಾಯಕರ ಮುಂದೆ ಅನ್ನದಾನಿಯೇ ಹೀರೋ ಆಗಿದ್ದರು. ಆಗ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ನಾಯಕರ ಪಲಾಯನ ಟೀಕಿಸಿದ್ದ, ನೆಟ್ಟಿಗರು ಅನ್ನದಾನಿ ಅವರ ಬದ್ಧತೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದರು. ಸದನದಲ್ಲಿ ಇದ್ದುಕೊಂಡೇ ಪ್ರಬಲ ಪ್ರತಿರೋಧ ತೋರುವ ಮೂಲಕ ಲೋಕಸಭೆ ಸ್ಪೀಕರ್ ಅವರ ಹಿಂದಿ ಭಾಷಣಕ್ಕೆ ಪ್ರತಿರೋಧ ತೋರಿದ್ದು,ಕನ್ನಡಿಗರ ಮನಗೆದ್ದಿತ್ತು.