ಮೇಕೆದಾಟು: ಬಿಜೆಪಿಗೆ ಶಸ್ತ್ರಾಸ್ತ್ರ ಸಮಸ್ಯೆ
ಯುದ್ಧಕಾಲದಲ್ಲಿ ಶಸ್ತ್ರ ಹುಡುಕಾಟಕ್ಕೆ ನಿಂತ ನಾಯಕರು, ಸಚಿವ ಕಾರಜೋಳ ಬಳಿ ಕಾಂಗ್ರೆಸ್ ವಿರುದ್ಧ ಸ್ಫೋಟಕ ದಾಖಲೆ
ಟೀಕೆ ತಪ್ಪಿಸಿಕೊಳ್ಳುವ ತಂತ್ರವಿಧಾನಕ್ಕೆ ತಡಕಾಟ, ಕಾಂಗ್ರೆಸ್ ವಿರುದ್ಧ ಬಿಜೆಪಿಯ ಮಾಹಿತಿ ಸಂಗ್ರಹ
ವಿಶೇಷ ವರದಿ:ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಸರಕಾರದ ವಿರುದ್ಧ ಕಾಂಗ್ರೆಸ್ ಪ್ರಯೋಗಿಸುತ್ತಿರುವ ಮೇಕೆದಾಟು ಅಸ್ತ್ರಕ್ಕೆ ಪ್ರತಿಯಾಗಿ ಪ್ರಯೋಗಿಸಲು ಬಿಜೆಪಿ ಬಳಿ ಸೂಕ್ತ ಅಸ್ತ್ರಗಳೇ ಕಾಣುತ್ತಿಲ್ಲ.  ಕುಡಿಯುವ ನೀರಿನ ಈ ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ಪಾದ ಯಾತ್ರೆ ನಡೆಸಲು ಎಲ್ಲ ರೀತಿಯಲ್ಲೂ ಸಜ್ಜಾಗಿದ್ದು, ಇದಕ್ಕೆ ಪ್ರತಿಯಾಗಿ ಬಿಜೆಪಿ ಪ್ರಯೋಗಿಸಬೇಕಿರುವ ಶಸ್ತ್ರಾಸ್ತ್ರಗಳ ಕೊರತೆ ಕಾಣುತ್ತಿದ್ದು, ಪಕ್ಷದ ನಾಯಕರು ಸಮರ ಕಾಲದಲ್ಲಿ ಹುಡುಕಾಟ ಆರಂಭಿಸಿದ್ದಾರೆ.
ಇದರಿಂದ ಬಿಜೆಪಿಯಲ್ಲೇ ಆಂತರಿಕ ಆಸಮಾಧಾನಗಳು ಶುರವಾಗಿದ್ದು, ಪಕ್ಷದಲ್ಲಿ ಬರೀ ಸಂಘಟನಾತ್ಮಕ ಸಭೆಗಳು, ಚರ್ಚೆಗಳಷ್ಟೇ ನಡೆಯುತ್ತಿದ್ದು, ಪಕ್ಷದ ವತಿಯಿಂದ ಮತ್ತು ಸರಕಾರದ ಕಡೆಯಿಂದ ಕಾಂಗ್ರೆಸ್ ವಿರುದ್ಧ ಸೂಕ್ತ ಕಾರ್ಯಕ್ರಮಗಳು ಮತ್ತು ಕಾರ್ಯತಂತ್ರಗಳು ರೂಪಿಸುವ ಕೆಲಸ ವಾಗುತ್ತಿಲ್ಲ ಎನ್ನುವ ಅಸಮಾಧಾನ ವಿದೆ. ಇದನ್ನರಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತರಾತುರಿಯಲ್ಲಿ ಕಾಂಗ್ರೆಸ್ ವಿರುದ್ಧ ಕೊನೆ ಘಳಿಗೆ ಕಾರ್ಯತಂತ್ರಗಳನ್ನು ರೂಪಿಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಏನಿದು ಮೇಕೆದಾಟು ತಂತ್ರ, ಪ್ರತಿತಂತ್ರ:ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದ ಜನರಿಗೆ ಕುಡಿಯುವ ನೀರು ಒದಗಿಸುವ ಮೇಕೆದಾಟು ಯೋಜನೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಜ.೯ರಿಂದ ೧೧ದಿನಗಳ ಕಾಲ ಸಂಗಮದಿಂದ ಬಸವನಗುಡಿ ವರೆಗೂ ಪಾದಯಾತ್ರೆ ನಡೆಸಲಿದೆ. ಆದರೆ ಈ ವಿಚಾರ ಸುಪ್ರೀಂ ನಲ್ಲಿರುವ ಕಾರಣ ಇದರಲ್ಲಿ ನಮ್ಮದೇನು ಪಾತ್ರವಿಲ್ಲ ಎಂದು ಬಿಜೆಪಿ ವಾದಿಸುತ್ತಿದೆ. ಇದನ್ನು ಒಪ್ಪದ ಕಾಂಗ್ರೆಸ್, ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಸರಕಾರವಿದೆ. ಇದರ ಬಗ್ಗೆ ಕೇಂದ್ರವನ್ನು ಒಪ್ಪಿಸಿ ಯೋಜನೆ ಜಾರಿಗೊಳಿಸಿ ಎಂದು ಆಗ್ರಹಿಸುತ್ತಿದೆ. ಇದಕ್ಕೆ ಬಿಜೆಪಿ ಬಳಿ ಸೂಕ್ತ ಉತ್ತರ ಸಿಗದೆ ಇಕ್ಕಟ್ಟಿಗೆ ಸಿಲುಕಿದ್ದು, ಇದರ ಲಾಭ ಪಡೆಯಲು ಕಾಂಗ್ರೆಸ್ ತಯಾರಿ ಮಾಡಿಕೊಂಡಿದೆ.
ಬಿಜೆಪಿಯ ಒಳಬೇಗುದಿ?ಕಾಂಗ್ರೆಸ್ ಪಾದಯಾತ್ರೆಗೆ ಪ್ರತಿಯಾಗಿ ಪ್ರಯೋಗಿಸೋಣ ಎಂದರೆ ಬಿಜೆಪಿ ಬಳಿ ಸಾಧನೆಗಳೇ ಸಿಗುತ್ತಿಲ್ಲ. ಏಕೆಂದರೆ, ಇದನ್ನು ಒದಗಿಸುವ ಪಕ್ಷದ ನಾಯಕ ಬಿಎಸ್‌ವೈ ಮತ್ತು ಅವರ ಬಣ, ರಾಮನಗರ ಮತ್ತು ಬೆಂ.ಗ್ರಾಮಾಂತರ ಭಾಗದ ಬಿಜೆಪಿ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ನಡೆದಿಲ್ಲ. ಅದರಲ್ಲೂ ಆ ಭಾಗದ ಬಿಜೆಪಿ ನಾಯಕರಾದ ಸಿ.ಪಿ.ಯೋಗೇಶ್ವರ್, ಯಡಿಯೂರಪ್ಪ ಬಣದ ಬಿಜೆಪಿ ನಾಯಕ ರುದ್ರೇಶ್, ಪರಿಷತ್ ಮಾಜಿ ಸದಸ್ಯ ಅಶ್ವತ್ಥ್ ನಾರಾಯಣ ಹಾಗೂ ತುಳಸಿಮುನಿ ರಾಜುಗೌಡ ಅವರನ್ನು ಒಗ್ಗೂಡಿಸಿ ಕಾರ್ಯತಂತ್ರ ರೂಪಿಸಿಲ್ಲ.
ಬಿಜೆಪಿಯಲ್ಲಿ ಸಂಘಟಿತ ಹೋರಾಟ ಕಷ್ಟವಾಗುತ್ತಿದೆ. ಹೀಗಾಗಿ ಸಿಎಂ ಅವರು ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಮೂರು ದಿನಗಳ ಪ್ರವಾಸ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾಂಗ್ರೆಸ್ ಪಾದಯಾತ್ರೆ ಆರಂಭಕ್ಕೂ ಮುನ್ನವೇ ಆ ಭಾಗದಲ್ಲಿ ಜಾಗೃತಿಗೆ ಚಿಂತನೆ ನಡೆಸಿದ್ದಾರೆ. ಆದರೆ ಯಶಸ್ವಿಯಾಗುತ್ತದೆ ಎನ್ನಲಾಗದು ಎನ್ನುತ್ತಾರೆ ಪಕ್ಷದವರು.
ಸ್ಫೋಟಕ ದಾಖಲೆಯಿದೆ:ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಮಾಡಿರುವ ಪ್ರಮಾದಗಳನ್ನು ತೋರಿಸುವ ಅನೇಕ ದಾಖಲೆಗಳನ್ನು ಸಚಿವ ಕಾರಜೋಳ ಇಟ್ಟುಕೊಂಡಿದ್ದಾರೆ. ಇದನ್ನು ಶನಿವಾರ ಅವರೇ ಹೇಳಿಕೊಂಡಿದ್ದಾರೆ. ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ ಅಕ್ರಮಗಳನ್ನು ನಡೆಸಿದ್ದು, ಇದರಲ್ಲಿ ಯಾರೆಲ್ಲಾ ಹೇಗೆಲ್ಲಾ ಭಾಗಿಯಾಗಿದ್ದಾರೆ ಎಂದು ತೋರಿಸಲು ಅವರು ಸಿದ್ಧರಾಗಿದ್ದಾರೆ.
ಇದನ್ನು ಬಹಿರಂಗ ಪಡಿಸಿ ತನಿಖೆಗೆ ಒಪ್ಪಿಸುವಂಥ ಅನೇಕ ದಾಖಲೆಗಳನ್ನು ಅವರು ಪಾದ ಯಾತ್ರೆ ಸಂದರ್ಭದಲ್ಲಿ ಅವರು ಬಿಡುಗಡೆ ಮಾಡಲಿದ್ದಾರೆ ಎಂದು ಮೂಲಗಳು ಹೇಳಿವೆ. ಅಷ್ಟೇ ಅಲ್ಲ. ಇದರಲ್ಲಿ ಬಿಜೆಪಿ ಮಾಡಿರುವ ಸಾಧನೆಗಳ ಪಟ್ಟಿಯನ್ನು ಸಚಿವರು ಸಿದ್ಧಪಡಿಸಿಕೊಂಡಿದ್ದಾರೆ. ಆದರೆ ಇದನ್ನು ಸಿಎಂ ಅವರು ಹೇಗೆ ಬಳಿಸಿಕೊಳ್ಳುತ್ತಾರೆ ಎನ್ನುವುದನ್ನು ನೋಡಬೇಕಿದೆ.