ಕ್ರಷರ್‌ ಲಾರಿ ಮಾಫಿಯಾದಿಂದ ಸಾವಿರಾರು ಕೋಟಿ ರು. ನಷ್ಟ
ನಕಲಿ ಪರವಾನಗಿ ತೋರಿಸಿ ರಾಜಧನ ವಂಚನೆ
ಸರಕಾರದ ಗಮನಕ್ಕೆ ಬಂದಿದ್ದರೂ ಕ್ರಮ ಇಲ್ಲ
ವಿಶೇಷ ವರದಿ:ಮಂಜುನಾಥ್ ಕೆ. ಬೆಂಗಳೂರು
ತಮಿಳುನಾಡಿನ ಹೊಸೂರಿನಿಂದ ಬೆಂಗಳೂರಿಗೆ ಬರುವ ಕ್ರಷರ್ ಲಾರಿಗಳ ಮಾಫಿಯಾದಿಂದ ರಾಜ್ಯ ಸರಕಾರಕ್ಕೆ ಕಳೆದ ಒಂದು ವರ್ಷದ ಅವಧಿಯಲ್ಲಿ ಸುಮಾರು ಒಂದು ಸಾವಿರ ಕೋಟಿಯಷ್ಟು ರಾಜಧನ ನಷ್ಟ ಉಂಟಾಗುತ್ತಿದೆ.
ಅದಕ್ಕಿಂತಲೂ ಅಚ್ಚರಿಯ ಸಂಗತಿ ಎಂದರೆ ಈ ಬಗ್ಗೆ ಸರಕಾರಕ್ಕೆ ಸಂಪೂರ್ಣ ಮಾಹಿತಿ ಇದ್ದರೂ ನಿಯಂತ್ರಿ ಸಲು ಯಾವುದೇ ಕ್ರಮ ಕೈಗೊಳ್ಳದೆ ಜಾಣ ಕುರುಡಿನ ರೀತಿ ವರ್ತಿಸುತ್ತಿದೆ. ಈ ಅಕ್ರಮದ ಕುರಿತು ಕಾರ್ಯಾ ಚರಣೆ ನಡೆಸಿ ಆರೋಪಿಗಳನ್ನುಬಂಧಿಸಬೇಕಾಗಿರುವ ಕೆಲ ಅಧಿಕಾರಿಗಳು ನಮಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೈಕಟ್ಟಿ ಕುಳಿತ್ತಿದ್ದಾರೆ. ಇದರಿಂದಾಗಿ ಪ್ರತಿದಿನ ರಾಜ್ಯ ಸರಕಾರಕ್ಕೆ ಸುಮಾರು 1 ಕೋಟಿಗೂ ಅಧಿಕ ರಾಜಧನ ನಷ್ಟವಾಗುತ್ತಿದೆ. ಆರ್‌ಟಿಒ ಅಧಿಕಾರಿಗಳು ಅಸಹಾಯಕರಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸರಕಾರಕ್ಕೆ ವಂಚನೆ ಹೇಗೆ?:ತಮಿಳುನಾಡಿನ ಹೊಸೂರಿನಿಂದ ರಾಜ್ಯಕ್ಕೆ ಕ್ರಷರ್ ಸಾಮಗ್ರಿಗಳು ಬರುತ್ತವೆ. ತಮಿಳುನಾಡಿನಲ್ಲಿ ಒಂದು ಟನ್ ಕ್ರಷರ್ ಸಾಮಗ್ರಿಗೆ 34 ರು. ರಾಜಧನ ನಿಗದಿಪಡಿಸಲಾಗಿದೆ. ನಮ್ಮ ರಾಜ್ಯ ದಲ್ಲಿ ಈ ಮೊತ್ತ 94 ರು. ಇದೆ. ತಮಿಳುನಾಡಿನಲ್ಲಿ ಕೈನಲ್ಲಿ ಬರೆದಿರುವ ರಸೀದಿ ಕೊಡುತ್ತಿದ್ದು, ಒಂದು ರಸೀದಿಯನ್ನು ವಾರಗಟ್ಟಲೆ ಇಟ್ಟುಕೊಂಡು ಆ ಮೂಲಕವೇ ಕ್ರಷರ್ ಸಾಮಗ್ರಿಗಳನ್ನು ಸಾಗಿಸಿ ಅಕ್ರಮ ನಡೆಸುತ್ತಿದ್ದಾರೆ. ಇದಕ್ಕೆ ಕಾರಣ ನಮ್ಮ ರಾಜ್ಯದಲ್ಲಿ ಆನ್‌ಲೈನ್ ಮೂಲಕ ಪರವಾನಗಿ ತೆಗೆದುಕೊಳ್ಳಬೇಕು. ಜತೆಗೆ ಒಂದು ಪರವಾನಗಿಗೆ ಇಂತಿಷ್ಟು ಸಮಯ ನಿಗದಪಡಿಸ ಲಾಗುತ್ತದೆ. 40 ಕಿಲೋ ಮೀಟರ್‌ಗೆ 2 ಗಂಟೆಗಳಅವಧಿನೀಡುತ್ತಾರೆ. ಆ ಅವಧಿಯಲ್ಲಿ ಅನ್‌ಲೋಡ್ ಮಾಡಿ ಲಾರಿಗಳು ವಾಪಸ್ ಬರಬೇಕಾಗುತ್ತದೆ.
ಆದರೆ, ಹೊಸೂರಿನಿಂದ ಬರುವ ಕ್ರಷರ್ ಲಾರಿಗಳು ಒಂದು ಲೋಡ್‌ಗೆ 40 ಟನ್ ತುಂಬಿಕೊಂಡು ಬರುತ್ತಾರೆ. ಕೇವಲ 10 ಟನ್‌ಗೆ ಮಾತ್ರ ಪರವಾನಗಿ ಶುಲ್ಕಪಾವತಿಸುತ್ತಾರೆ. ಪ್ರತಿ ಲಾರಿಗಳು ಸುಮಾರು 30 ಟನ್‌ನಷ್ಟು ರಾಜಧನ ವನ್ನು ರಾಜ್ಯ ಸರಕಾರಕ್ಕೆ ವಂಚಿಸು ತ್ತಿವೆ. ಇದರಿಂದ  ಕ್ರಷರ್ ಮಾಲೀಕರು ಹಾಗೂ ಸರಕಾರಕ್ಕೆ ಕೋಟ್ಯಂತರ ರು. ನಷ್ಟ ಉಂಟಾಗುತ್ತಿದೆ. ಹೊಸೂರು ಒಂದ ರಿಂದಲೇ ಸರಕಾರಕ್ಕೆ ದಿನಕ್ಕೆ 1 ಕೋಟಿ ರು, ರಾಜಧನ ನಷ್ಟವಾಗುತ್ತಿದೆ ಎಂದು ಮೂಲಗಳು ಹೇಳುತ್ತವೆ.
ದಂಧೆಯಲ್ಲಿ ಕಾರಣಿಗಳು ಶಾಮೀಲು!:ಬಿ.ಎಸ್ .ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದ ವೇಳೆ ಇದನ್ನು ಸ್ಥಗಿತಗೊಳಿಸಿ, ರಾಜ್ಯದ ದರ ನಿಗದಿಮಾಡಿ ಟನ್‌ಗೆ 100 ರು. ರಾಜಧನ ಬರುವ ಹಾಗೆ ಮಾಡಿದ್ದರು. ಆದರೆ, ಅವರು ಅಧಿಕಾರದಿಂದ ಇಳಿದ ಮೇಲೆ ಅಕ್ರಮ ಆರಂಭವಾಗಿದ್ದು, ಇದರಲ್ಲಿ ಕೆಲವು ರಾಜಕಾರಣಿಗಳ ಕೈವಾಡ ವಿದೆ. ಶಾಸಕರ ಹೆಸರು ಹೇಳಿಕೊಂಡು ಪ್ರತಿದಿನ ಸುಮಾರು 2 ಸಾವಿರ ಟ್ರಕ್‌ಗಳು ಸಂಚರಿಸುತ್ತವೆ. ರಾಜಕಾರಣಿ ಗಳಿಗೂ ಪ್ರತಿನಿತ್ಯ ಪಾಲು ಸಂದಾಯ ವಾಗುತ್ತದೆ ಎಂಬ ಆರೋಪ ಕೇಳಿಬಂದಿದೆ.
ಒಂದು ಪರ್ಮಿಟ್‌ನಲ್ಲಿ ನಾಲ್ಕೈದು ಲಾರಿಗಳ ಸಂಚಾರಕೇವಲ ಒಂದು ಲಾರಿಗೆ ಪರ್ಮಿಟ್ ಪಡೆದು ಅದೇ ಸಂಖ್ಯೆಯ 4 ರಿಂದ 5 ಲಾರಿಗಳಲ್ಲಿ ಕ್ರಷರ್ ಸಾಮಗ್ರಿಗಳನ್ನು ಸಾಗಿಸುತ್ತಾರೆ. ಹೊಸೂರಿ ನಿಂದ ಎಲೆಕ್ಟ್ರಾನಿಕ್ ಸಿಟಿ, ಕುಂಬಳಗೂಡು, ಪೀಣ್ಯ ದಾಸರಹಳ್ಳಿ, ಜಿಗಣಿ, ಸದಾಶಿವನಗರ ಸೇರಿದಂತೆ ಬೆಂಗಳೂರಿನ ಶೇ.75 ಭಾಗಗಳಿಗೆ ರಾಜಧನವನ್ನು ವಂಚಿಸಿ ಕ್ರಷರ್ ಸಾಮಾಗ್ರಿ ಗಳನ್ನು ಸಾಗಿಸುತ್ತಿದ್ದಾರೆ. ಈ ಸಂಬಂಧ ಇತ್ತೀಚೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಅಽಕಾರಿಗಳು ಕಾರ್ಯಾಚರಣೆ ನಡೆಸಿ ಓವರ್ ಲೋಡ್ ಮಾಡಿಕೊಂಡು ಬರುತ್ತಿದ್ದ ಹಾಗೂ ಒಂದೇ ನೋಂದಣಿ ಸಂಖ್ಯೆಯ ನಾಲ್ಕು ಲಾರಿಗಳನ್ನು ಜಪ್ತಿ ಮಾಡಿ ಕುಂಬಳಗೂಡು ಪೊಲೀಸರ ವಶಕ್ಕೆ ನೀಡಿದ್ದಾರೆ.
ಸರಕಾರ ಏನು ಮಾಡಬೇಕು?? ಆನ್‌ಲೈನ್ ಪರ್ಮಿಟ್ ಇದ್ದರೆ ಮಾತ್ರ ಕ್ರಷರ್ ಲಾರಿಗಳು ರಾಜ್ಯ ಪ್ರವೇಶಿಸುವಂತೆ ಮಾಡಬೇಕು? ಕರ್ನಾಟಕದ ಪರ್ಮಿಟ್ ಇದ್ದರೆ ಮಾತ್ರ ಕ್ರಷರ್ ಲಾರಿಗಳಿಗೆ ಮಾತ್ರ ಅವಕಾಶ ನೀಡಬೇಕು? ಆರ್‌ಟಿಒ ಅಧಿಕಾರಿಗಳು ಮತ್ತಷ್ಟು ಬಿಗಿ  ಕ್ರಮಗಳನ್ನು ಕೈಗೊಳ್ಳಬೇಕು