ಸಿಬ್ಬಂದಿ ಕೊರತೆಯಿಂದ ನಲುಗಿದ ಸ್ಥಳೀಯ ಸಂಸ್ಥೆಗಳು
ಮೂರನೇ ಒಂದರಷ್ಟು ಹುದ್ದೆಗಳಿಗೂ ಕಾಯಂ ಸಿಬ್ಬಂದಿ ಇಲ್ಲ
ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಯಾಗಿರುವ ಸರಕಾರದ ನಿಲುವು
ವಿಶೇಷ ವರದಿ:ಬಾಲಕೃಷ್ಣ ಎನ್. ಬೆಂಗಳೂರು
ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ಸರಕಾರದಿಂದ ಪ್ರತಿ ವರ್ಷ ಕೋಟ್ಯಂತರ ರು. ಅನುದಾನ ಬಿಡುಗಡೆಯಾದರೂ ಅಭಿವೃದ್ಧಿಯಾಗುತ್ತಿಲ್ಲ ಎಂಬ ಕೊರಗು ಇದ್ದೇ ಇದೆ. ಸರಕಾರ ಕೊಟ್ಟ ಹಣ ಬಳಸಿಕೊಳ್ಳುತ್ತಿಲ್ಲ, ದುರುಪಯೋಗವಾಗುತ್ತಿದೆ ಎಂಬ ಆರೋಪ ಸರ್ವೇ ಸಾಮಾನ್ಯ.
ಇಂತಹ ಆರೋಪಗಳು ಹೌದಾದರೂ ಅದಕ್ಕೆ ಮುಖ್ಯ ಕಾರಣ ಸಿಬ್ಬಂದಿ ಕೊರತೆ. ಇದರಿಂದ ನಲುಗಿ ಹೋಗಿರುವ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ನೌಕರರ ನೇಮಕಕ್ಕೆ ಆದ್ಯತೆ ನೀಡುತ್ತಿರುವುದರಿಂದ ಅವ್ಯವಹಾರ, ಅಕ್ರಮಗಳಿಗೆ ಕಡಿವಾಣ ಹಾಕಲು ಸಾಧ್ಯವಾಗದೆ ಅಭಿವೃದ್ಧಿ ಕಾರ್ಯಗಳು ನೆನೆಗುದಿಗೆ ಬೀಳುತ್ತಿವೆ.
ಹೌದು, ರಾಜ್ಯದಲ್ಲಿ ೬೧ ನಗರಸಭೆ, ೧೨೩ ಪುರಸಭೆ ಹಾಗೂ ೧೧೭ ಪಟ್ಟಣ ಪಂಚಾಯಿತಿಗಳಿದ್ದು, ಇವುಗಳಲ್ಲಿ ೩೭,೭೫೮ ಮಂಜೂರಾದ ಹುದ್ದೆಗಳಿವೆ. ಇದರಲ್ಲಿ ಕಾಯಂ ನೌಕರರು ಇರುವುದು ೧೦,೮೫೮ ಮಂದಿ ಮಾತ್ರ. ಬರೋಬ್ಬರಿ ೨೬,೯೦೦ ಹುದ್ದೆಗಳು ಖಾಲಿ ಉಳಿದಿವೆ. ಇದರಿಂದ ಕಾಯಂ ಸಿಬ್ಬಂದಿಗೆ ಹೆಚ್ಚುವರಿ ಕೆಲಸದ ಒತ್ತಡ ಜತೆಗೆ ಸ್ಥಳೀಯ ಸಂಸ್ಥೆಗಳ ಆಡಳಿತಾತ್ಮಕ ಕಾರ್ಯಗಳಿಗೆ ತೀವ್ರ ಹಿನ್ನೆಡೆಯಾಗಿದೆ. ಖಾಲಿ ಉಳಿದಿರುವ ಹುದ್ದೆಗಳ ಭರ್ತಿಗೆ ಸರಕಾರ ನಿರ್ಲಕ್ಷ್ಯವಹಿಸಿದೆ.
ಗುತ್ತಿಗೆ ನೌಕರರಿಗೆ ಮಣೆ:ಖಾಲಿ ಹುದ್ದೆಗಳಿಗೆ ಕಾಯಂ ನೌಕರರನ್ನು ನೇಮಿಸುವ ಬದಲು ಗುತ್ತಿಗೆ ನೌಕರರಿಗೆ ಹೆಚ್ಚು ಮಣೆ ಹಾಕಲಾಗಿದೆ. ಇದರ ಪರಿಣಾಮದಿಂದ ರಾಜದ್ಯಂತ ಖಾಲಿ ಉಳಿದಿರುವ ವಿವಿಧ ಹುದ್ದೆಗಳಿಗೆ ೧೩,೨೦೮ ಮಂದಿಯನ್ನು ಹಂತ ಹಂತವಾಗಿ ಗುತ್ತಿಗೆ, ಹೊರಗುತ್ತಿಗೆ, ನೇರಪಾವತಿ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನದಡಿ ನೇಮಕ ಮಾಡಿಕೊಳ್ಳಲಾಗಿದೆ.
ಗ್ರೂಪ್ ಎ ಹುದ್ದೆಗೆ ೩೪, ಗ್ರೂಪ್ ಸಿ ಹುದ್ದೆಗೆ ೨೪೧೯ ಹಾಗೂ ಗ್ರೂಪ್ ಡಿ ಹುದ್ದೆಗೆ ೯೮೦೩ ಸೇರಿ ಒಟ್ಟು ೧೩,೨೦೮ ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಗ್ರೂಪ್ ಬಿ ಹುದ್ದೆಗಳಿಗೆ ಗುತ್ತಿಗೆ ನೌಕರರನ್ನು ನೇಮಕ ಮಾಡಿಕೊಂಡಿಲ್ಲ.
ಗುತ್ತಿಗೆ ನೌಕರರಿಗೆ ವೇತನ ಕಡಿಮೆ ಇರುತ್ತದೆ ಮತ್ತು ಯಾವುದೇ ಹೆಚ್ಚುವರಿ ಸೌಲಭ್ಯದ ಅಗತ್ಯವಿಲ್ಲ. ಹೀಗಾಗಿ ಗುತ್ತಿದೆ ಆಧಾರದ ಮೇಲೆ ನೇಮಕಾತಿಗೆ ಸರಕಾರ ಆದ್ಯತೆ ನೀಡಿದೆ. ಆದರೆ, ಇವರಿಗೆ ಜವಾಬ್ದಾರಿ ನಿಗ ದಿಮಾಡಲು ಸಾಧ್ಯವಾಗದೇ ಇರುವುದರಿಂದ ಯೋಜನೆಗಳ ಅನುಷ್ಠಾನದಲ್ಲಿ ಸಾಕಷ್ಟು ಲೋಪಗಳಾಗುತ್ತಿವೆ. ಸರಕಾರದ ನೂರಾರು ಕೋಟಿ ರು. ಅಭಿವೃದ್ಧಿ ಅನುದಾನ ಸದ್ಬಳಕೆಯಾಗುತ್ತಿಲ್ಲ ಎಂಬ ಆರೋಪವಿದೆ.
ಆದಾಯ ಸೋರಿಕೆ:ಸ್ಥಳೀಯ ಸಂಸ್ಥೆಗಳಲ್ಲಿ ನೀರಿನ ಸಂಗ್ರಹ, ವಾಣಿಜ್ಯ ತೆರಿಗೆ ಸೇರಿ ಮತ್ತಿತರರ ಆದಾಯ ಮೂಲಗಳಿಂದ ಕೋಟ್ಯಂತರ ಆದಾಯವು ಸರಕಾರದ ಬೊಕ್ಕಸಕ್ಕೆ ಹರಿದು ಬರುತ್ತದೆ. ಸಿಬ್ಬಂದಿ ಕೊರತೆಯಿಂದ ಸಮರ್ಪಕವಾಗಿ ತೆರಿಗೆ ಸಂಗ್ರಹ ಗುರಿ ತಲುಪಲು ಸಾಧ್ಯವಾಗು ತ್ತಿಲ್ಲ. ಆದರೂ ಕೆಲ ಸ್ಥಳೀಯ ಸಂಸ್ಥೆಗಳ ಪ್ರಮುಖ ಹುದ್ದೆಗಳಲ್ಲಿ ಗುತ್ತಿಗೆ ನೌಕರರು ಕಾರ್ಯನಿರ್ವ ಹಿಸುತ್ತಿರುವ ಹಿನ್ನೆಲೆಯಲ್ಲಿ ನೇಮಕ ವಿಚಾರದಲ್ಲಿ ಸರಕಾರ ತೋರುತ್ತಿರುವ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಕಾಯಂ ನೌಕರರಗಿಂತ ಗುತ್ತಿಗೆ ಆಧಾರದ ಮೇಲೆ ನೌಕರರು ಅಧಿಕ ಪ್ರಮಾಣದಲ್ಲಿ ಇರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಸಂಗ್ರಹಿಸುವ ಕಾರ್ಯ ಆಗುತ್ತಿಲ್ಲ. ವರ್ಷದಿಂದ ವರ್ಷಕ್ಕೆ ಆದಾಯ ಸೋರಿಕೆ ಪ್ರಮಾಣ ಹೆಚ್ಚಾಗುತ್ತಿರುವ ಬಗ್ಗೆ ಗಂಭೀರ ಆರೋಪಗಳಿವೆ. ಕೆಲ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳು ಮಂಜೂರಾದ ಹುದ್ದೆಗಳಿಗಿಂತ ಹೆಚ್ಚುವರಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪ್ರಮುಖ ಯೋಜನೆಗಳಿಗೆ ಹಿನ್ನಡೆನಿಗದಿತ ಪ್ರಮಾಣದಲ್ಲಿ ಅನುದಾನವಿದ್ದರೂ ರಾಜೀವ್ ಆವಾಸ್ ಯೋಜನೆ, ಒಳಚರಂಡ, ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಮೂಲಸೌಲಭ್ಯ ಅಭಿವೃದ್ಧಿ ಯೋಜನೆ, ಕುಡಿಯುವ ನೀರು ಸರಬರಾಜು, ಮುಖ್ಯಮಂತ್ರಿ ನಗರೋತ್ಥಾನ ಹಾಗೂ ಅಮೃತ ನಗರ ಯೋಜನೆ ಸೇರಿ ಇನ್ನಿತರ ಯೋಜನೆಗಳು ನಿರೀಕ್ಷಿತ ಮಟ್ಟದಲ್ಲಿ ಪರಿಣಾಮಕಾರಿ ಅನುಷ್ಠಾನಕ್ಕೆ ಆಗುತ್ತಿಲ್ಲ. ಹಾಲಿ ಇರುವ ಸಿಬ್ಬಂದಿಯಿಂದಲೇ ಕಚೇರಿ ಕೆಲಸಗಳಿಗೆ ತೊಂದರೆಯಾಗದಂತೆ ಕ್ರಮ ವಹಿಸಲಾಗಿದೆ ಎಂದು ಸರಕಾರ ಮೊಂಡುವಾದ ಮಾಡುತ್ತಿದೆ. ಆದರೆ, ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ತಿಂಗಳುಗಟ್ಟಲೇ ಅಲೆಯುವಂತಾಗಿದೆ.