: ಪೂರ್ಣಗೊಳ್ಳದ ಕಾಮಗಾರಿ: ಸಾರ್ವಜನಿಕರಲ್ಲಿ ಆತಂಕ
ಅಪರ್ಣಾ ಎ.ಎಸ್. ಬೆಂಗಳೂರು
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿಯೇ ಅಪಾಯಕ್ಕೆ ಆಹ್ವಾನ
ಸ್ವಲ್ಪ ಯಾಮಾರಿದರೂ ವಾಹನ ಸವಾರರ ಜೀವನಕ್ಕೆ ಕುತ್ತು
ಇಲಾಖೆಗಳ ನಡುವಿನ ಸಮನ್ವಯ ಕೊರತೆಯಿಂದಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಲ್ಲಿಪ್ರಮುಖ ಕಾಮಗಾರಿ ಪೂರ್ಣಗೊಳ್ಳದೇ, ಕಬ್ಬಿಣದ ಸರಳು ವಾಹನ ಸವಾರರ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದ್ದು, ಸ್ವಲ್ಪ ಯಾಮಾರಿದರೂ ಜೀವಕ್ಕೆ ಆಪತ್ತು ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ನಗರದ ಕೋಗಿಲು ಕ್ರಾಸ್‌ನಲ್ಲಿ ಒಳಚರಂಡಿ ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದು, ಇದರಿಂದಾಗಿ ಈ ಕಾಮಗಾರಿ ಗೆಂದು ಅಳವಡಿಸಲಾಗಿರುವ ಕಬ್ಬಿಣದ ರಾಡ್‌ಗಳು ಬಾಯ್ತೆರೆದು ನಿಂತಿದ್ದರೆ, ರಸ್ತೆಯ ಪಕ್ಕದಲ್ಲಿಯೇ ಬೃಹತ್ ಗುಂಡಿಗಳಿವೆ. ರಾತ್ರಿ ವೇಳೆ ಅಥವಾ ಮಳೆ ಬಂದಾಗ ಸಾರ್ವಜನಿಕರು ಕೊಂಚ ಯಾಮಾರಿದರೂ ಜೀವಕ್ಕೆ ಅಪಾಯ ಎನ್ನುವ ಆತಂಕ ನಿರ್ಮಾಣವಾಗಿದೆ.
ಬೆಂಗಳೂರು ಹಾಗೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆಯ ಪಕ್ಕದ ಒಳಚರಂಡಿ ವ್ಯವಸ್ಥೆಯ ಕಾಮಗಾರಿಯು ನಡೆಯುತ್ತಿದ್ದು, ಕಾರಣಾಂತರಗಳಿಂದಾಗಿ ಈ ಕಾಮಗಾರಿಯನ್ನು ಪಾಲಿಕೆಯ ಅಧಿಕಾರಿಗಳು ಅರ್ಧಕ್ಕೆ ಸ್ಥಗಿತಗೊಳಿಸಿದ್ದಾರೆ.
ಇದು ಬೆಂಗಳೂರಿನಿಂದ ನೇರವಾಗಿ ದೇವನಹಳ್ಳಿಗೆ ಸಂಪರ್ಕವನ್ನು ಕಲ್ಪಿಸುವ ರಸ್ತೆಯಾಗಿದ್ದು, ರಸ್ತೆಯ ಪಕ್ಕದಲ್ಲಿ ಒಳಚರಂಡಿ ವ್ಯವಸ್ಥೆಯ ಕಾಮಗಾರಿಯನ್ನು ನಡೆಸಲಾಗುತ್ತಿದ್ದು, ಈಗ ಸ್ಥಗಿತ ಗೊಳಿಸಿರುವುದರಿಂದ ಕಂಬಿಗಳು, ಸರಳುಗಳು ಹೊರಬಂದು ಭಾರೀ ಸಮಸ್ಯೆ ಉಂಟು ಮಾಡುತ್ತಿದೆ.
2 ವರ್ಷವಾದರೂ ಪೂರ್ಣಗೊಳ್ಳದ ಕಾಮಗಾರಿ:ಏರ್‌ಪೋರ್ಟ್‌ಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ಸುಮಾರು ಎರಡು ವರ್ಷಗಳ ಹಿಂದೆ ಈ ಯೋಜನೆಯನ್ನು ಆರಂಭಿಸಲಾಗಿತ್ತು. ಒಳ ಚರಂಡಿ ಕಾಮಗಾರಿಯನ್ನು ಪ್ರಾರಂಭ ಮಾಡಲಾಗಿತ್ತಾದರೂ ಬಳಿಕ ವಿವಿಧ ಕಾರಣಗಳಿಗೆ ಕಾಮಗಾರಿಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ರಸ್ತೆಯ ಕಡೆಗೆ ಸರಳು ಗಳು ಚಾಚಿಕೊಂಡಿದ್ದು, ಅಪಾಯಕ್ಕೆ ಆಹ್ವಾನ ನೀಡಿದೆ.
ಇತ್ತೀಚೆಗೆ ಗೋವಿಂದಪುರದಲ್ಲಿ ಬಾಲಕನೊಬ್ಬ ಅರ್ಧಕ್ಕೆ ಸ್ಥಗಿತಗೊಳಿಸಿದ್ದ ಕಾಮಗಾರಿಗೆ ಬಿದ್ದು ಸಾವನ್ನಪ್ಪಿದ ಘಟನೆಯ ಬಳಿಕವೂ ಅಧಿಕಾರಿಗಳು ಎಚ್ಚೆತ್ತುಕೊಳ್ಳದೇ ಇರುವುದು ಸ್ಥಳೀಯ ಸಾರ್ವಜನಿಕರ ಆತಂಕಕ್ಕೆ ಕಾರಣ ವಾಗಿದ್ದು, ಕೂಡಲೇ ಈ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳನ್ನು ಆಗ್ರಹಿಸುತ್ತಿದ್ದಾರೆ. ಈ ರಸ್ತೆಯೂ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರಸ್ತೆಯಿಂದ ಯಲಹಂಕ ಒಳಭಾಗಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದ್ದು, ಈ ರಸ್ತೆಯಲ್ಲಿ ರಾತ್ರಿ ವೇಳೆ ಸಂಚರಿಸುವವರು ಸ್ವಲ್ಪ ಎಚ್ಚರ ತಪ್ಪಿದರೂ ರಾಜಕಾಲುವೆಗೆ ಬೀಳುವ ಸಾಧ್ಯತೆ ಯಿದೆ. ಇನ್ನು ಇಲ್ಲಿನ ನಿವಾಸಿಗಳು ಈ ಕಾಮಗಾರಿಯಿಂದ ಭಾರೀ ಸಮಸ್ಯೆಯನ್ನು ಅನುಭವಿಸು ತ್ತಿದ್ದು, ಪ್ರಯಾಣಿಸುವಾಗ ಮೈತುಂಬಾ ಕಣ್ಣಾಗಿಸಿಕೊಂಡು ಸಂಚವರಿಸುವಂತಾಗಿದೆ.
*
ಎರಡು ವರ್ಷದ ಹಿಂದೆ ಈ ಒಳಚರಂಡಿ ವ್ಯವಸ್ಥೆಯ ಕಾಮಗಾರಿಯನ್ನು ಆರಂಭಿಸಲಾಗಿದ್ದು, ಬಳಿಕ ಅರ್ಧದಲ್ಲೇ ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ. ಇದರಿಂದ ಹೊರ ಚಾಚಿಕೊಂಡಿರುವ ಸರಳುಗಳ ಭಯದಿಂದಲೇ ಸಂಚಾರ ನಡೆಸುವಂತಾಗಿದೆ. ಮಕ್ಕಳು ಎಲ್ಲಾ ಇಲ್ಲೆ ಅಡ್ಡಾಡುತ್ತಿರುತ್ತಾರೆ ಆದರೂ ಈ ಕುರಿತು ಯಾವ ಅಧಿಕಾರಿಗಳೂ ಗಮನ ಹರಿಸಿಲ್ಲ. ಪ್ರತಿದಿನ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವಂತಾಗಿದೆ.
–ರಮೇಶ, ನಿವಾಸಿ
ಇದನ್ನೂ ಓದಿ:   : ಡಬಲ್‌ ಡೆಕ್ಕರ್‌ ಕೈಬಿಟ್ಟ ಬಿಎಂಟಿಸಿ