ಬೆಟ್ಟಗಳ ಬೋಳಾಗಿಸುತ್ತಿವೆ ಕಲ್ಲು ಕ್ವಾರಿಗಳು
ರಾಜ್ಯದ ಕ್ವಾರಿಗಳಲ್ಲಿ, ೨೫೦೦ಕ್ಕೂ ಹೆಚ್ಚು ಅಕ್ರಮ
ಕಠಿಣ ಕ್ರಮ ಕೈಗೊಳ್ಳಲು ಕಾನೂನೇ ಇಲ್ಲ
ದಂಡ ಕಟ್ಟಿ ಮತ್ತೆ ಅಕ್ರಮ ಮುಂದುವರಿಕೆ
ವಿಶೇಷ ವರದಿ:ಬಾಲಕೃಷ್ಣ ಎನ್. ಬೆಂಗಳೂರು
ರಾಜ್ಯದ ರಾಜ್ಯದ ೨೭ ಜಿಗಳಲ್ಲಿರುವ ೫೩೪೫ ಕ್ಕೂ ಹೆಚ್ಚು ಜಲ್ಲಿ ಮತ್ತು ಎಂ-ಸ್ಯಾಂಡ್ ಉತ್ಪಾದಿಸುವ ಕಲ್ಲು ಕ್ವಾರಿಗಳ ಪೈಕಿ ೨೫೦೦ಕ್ಕೂ ಹೆಚ್ಚುಕ್ವಾರಿಗಳು ಅಕ್ರಮ. ಹೌದು, ಕಲ್ಲು ಕ್ವಾರಿಗಳ ಪೈಕಿ ಪರವಾನಗಿ ಹೊಂದಿರುವ ಕ್ವಾರಿಗಳ ಸಂಖ್ಯೆ ೨೮೦೨.
ಉಳಿದವುಗಳಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಭೂಮಿ ಅಗೆಯಲಾಗುತ್ತಿದೆ. ಆತಂಕದ ಸಂಗತಿ ಎಂದರೆ, ಅತಿ ಹೆಚ್ಚು ಅವಘಡಗಳು, ಸಾವಿ-ನೋವುಗಳು ಸಂಭವಿಸುವುದು ಇವೇ ಅಕ್ರಮ ಕಲ್ಲು ಕ್ವಾರಿಗಳಲ್ಲಿ. ವಿಪರ್ಯಾಸದ ಸಂಗತಿ ಎಂದರೆ, ಅಕ್ರಮ ಕಲ್ಲು ಕ್ವಾರಿಗಳು ನಡೆಯುತ್ತಿರು ವುದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಽಕಾರಿಗಳ ಗಮನಕ್ಕೂ ಬಂದಿದೆ. ಆದರೆ, ಅವುಗಳು ನಡೆಯುತ್ತಿರುವುದು ರಾಜಕಾರಣಿಗಳು ಹಾಗೂಅವರ ಬೆಂಬಲಿಗರ ಕೃಪಾಕಟಾಕ್ಷದಿಂದ ಆಗಿರುವುದರಿಂದ ಆಡಳಿತ ವರ್ಗ ಜಾಣ ಕುರುಡುತನ ಪ್ರದರ್ಶಿಸುತ್ತಿದೆ.
ಹಳ್ಳಿಗಳು, ಗ್ರಾಮೀಣ ಭಾಗದಲ್ಲಿ ಬೆಟ್ಟ ಗುಡ್ಡಗಳನ್ನೆಲ್ಲಾ ನುಂಗಿ ಹಾಕುತ್ತಿರುವ ಕಲ್ಲು ಗಣಿ ಗಾರಿಕೆಯ ಬೇರು ರಾಜ್ಯಾದ್ಯಂತ ವ್ಯಾಪಿಸಿದ್ದು, ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಸಾವಿರಾರು ಅಕ್ರಮ ಗಣಿಗಾರಿಕೆ ಕ್ವಾರಿಗಳು ಪತ್ತೆಯಾಗಿವೆ. ತಪ್ಪಿತಸ್ಥರಿಂದ ಒಂದಷ್ಟು ದಂಡ ವಸೂಲಿ ಮಾಡಿದ್ದನ್ನು ಬಿಟ್ಟರೆ, ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಪ್ರಬಲ ಕಾನೂನಿನ ಅಸ್ತ್ರವೇ ಇಲ್ಲ.
ಹೀಗಾಗಿ ಅಕ್ರಮಕ್ಕೆ ತಡೆಯಿಲ್ಲದಂತಾಗಿದೆ. ಚುನಾವಣೆ ಸಂದರ್ಭದಲ್ಲಿ ಸೋಲು- ಗೆಲವಿನ ಲೆಕ್ಕಾಚಾರದಲ್ಲಿ ಗಣಿ ಮಾಲೀಕರ ಪಾತ್ರ ಪ್ರಮುಖ ವಾಗಿರುತ್ತದೆ. ಹೀಗಾಗಿ ಗಣಿಗಾರಿಕೆಗೆ ಅನುಮತಿ ಕೊಡಿಸುವುದರಲ್ಲಿ ಹಾಗೂ ಅಕ್ರಮ ಗಣಿಗಾರಿಕೆ ನಡೆಸುವುದರಲ್ಲಿ ಸ್ಥಳೀಯ ಮುಖಂಡರ ಕೈವಾಡವಿರುತ್ತದೆ ಎಂಬುದನ್ನು ಇಲಾಖೆ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.
ಎಲ್ಲಿ ಹೆಚ್ಚು?:ಇಲಾಖೆ ಕಾರ್ಯಾಚರಣೆ ವೇಳೆ ಅರಣ್ಯ ಸಂರಕ್ಷಣೆ ಕಾಯಿದೆ ಮತ್ತು ಅರಣ್ಯ ಸಂರಕ್ಷಣಾ ಕಾನೂನು ಉಲ್ಲಂಘಿಸಿ ಗಣಿಗಾರಿಕೆ ನಡೆಸುತ್ತಿರು ವುದು ಪತ್ತೆಯಾಗಿದೆ. ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ರಾಮನಗರ, ಕೊಪ್ಪಳ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೀದರ್, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಇನ್ನಿತರೆ ಜಿಗಳಲ್ಲಿ ಹೆಚ್ಚು ಅಕ್ರಮ ಕಲ್ಲು ಗಣಿಗಾರಿಕೆ ಕ್ವಾರಿಗಳು ಪತ್ತೆಯಾಗಿವೆ.
ಜೈಲು ಶಿಕ್ಷೆಯ ಭಯ ಇಲ್ಲಗಣಿ ಮತ್ತು ಭೂವಿಜ್ಞಾನ ಇಲಾಖೆಯ ಟಾಸ್ಕ್ ಫೋರ್ಸ್ ಕಳೆದ ೫ ವರ್ಷಗಳಲ್ಲಿ ಅಕ್ರಮವಾಗಿ ಕಲ್ಲು ಸಾಗಿಸುತ್ತಿದ್ದ ೭,೮೬೩ ಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಿ ಕೋಟ್ಯಂತರ ರು. ದಂಡ ವಸೂಲಿ ಮಾಡಿದೆ. ಅರಣ್ಯ ಸಂರಕ್ಷಣೆ ಕಾಯಿದೆ ಉಲ್ಲಂಘಿಸಿ ಕಲ್ಲು ಗಣಿಗಾರಿಕೆ ನಡೆಸುತ್ತಿರುವುದು ಪತ್ತೆಯಾದರೂಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಸಾಧ್ಯವಾಗಿಲ್ಲ. ಇಂತಿಷ್ಟು ಸಾವಿರ ಎಂದು ದಂಡ ಕಟ್ಟುವ ಮಾಲೀಕರು ಪುನಃ ಕಲ್ಲು ಗಣಿಗಾರಿಕೆ ಮುಂದು ವರಿಸುತ್ತಾರೆ. ಆರೋಪಿಗಳಿಗೆ ಜೈಲು ಶಿಕ್ಷೆ ಎಂಬುದೇ ಇಲ್ಲ. ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸರಕಾರ ಪ್ರತ್ಯೇಕ ಕಾಯಿದೆ ರೂಪಿಸಬೇಕು ಎಂಬುದು ಪರಿಸರವಾದಿಗಳ ಆಗ್ರಹ.
೧,೫೦೦ ಕೋಟಿ ಆದಾಯರಾಜ್ಯದಲ್ಲಿ ಪ್ರಸ್ತುತ ಗುತ್ತಿಗೆ ಆಧಾರದ ಮೇಲೆ ೨೮೦೨ ಕಲ್ಲು ಗಣಿಗಾರಿಕೆಗಳು ಕಾರ್ಯ ನಿರ್ವಹಿಸುತ್ತಿವೆ. ರಾಜ್ಯ ಸರಕಾರಕ್ಕೆ ೧೫೦೦ ಕೋಟಿ ರು.ವಾರ್ಷಿಕ ಆದಾಯ ಬರುತ್ತಿದೆ. ೧ ಟನ್ ಕಲ್ಲಿಗೆ ೬೫೦ ರು. ನಿಂದ ೭೦೦ ರು. ವರೆಗೆ ದರ ನಿಗದಿ ಮಾಡಲಾಗಿದೆ. ಕಿ.ಮೀ ಆಧಾರದ ಮೇಲೆ ಸಾಗಣೆ ವೆಚ್ಚತೆಗೆದುಕೊಳ್ಳಲಾಗುತ್ತಿದೆ. ೬೦ ರು. ರಾಜಧನ, ೩೦ ರು.
ನಿರ್ವಹಣೆ ನಿಧಿ ಮತ್ತು ಇನ್ನಿತರ ಸೇರಿ ಪ್ರತಿ ಟನ್ ಕಲ್ಲಿಗೆ ಒಟ್ಟು ೧೦೭ ರು. ಶುಲ್ಕವನ್ನು ಸರಕಾರಕ್ಕೆ ಕಟ್ಟಲಾಗುತ್ತಿದೆ. ವಾರ್ಷಿಕ ಸಾವಿರಾರು ಮಿಲಿಯನ್ ಮೆಟ್ರಿಕ್ ಟನ್ ಕಲ್ಲು ತೆಗೆಯಲಾಗುತ್ತಿದೆ.