ಅದೆಷ್ಟು ಯೋಜನೆಗಳಿಗೆ ಕಾಳಿ ಉತ್ತರದಾಯಿಯಾಗಬೇಕು ?
ವಿನುತಾ ಹೆಗಡೆ ಶಿರಸಿ
ಉತ್ತರ ಕನ್ನಡ ಜಿಲ್ಲೆಯ ಜೀವನದಿ ಕಾಳಿಯಿಂದ ಉತ್ತರಕರ್ನಾಟಕದ ಜಿಲ್ಲೆಗಳಿಗೆ ನೀರೊಯ್ಯುವ ಯೋಜನೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈಗಾಗಲೇ ದಾಂಡೇಲಿಯಿಂದ ಧಾರವಾಡದ ಅಳ್ನಾವರಕ್ಕೆ ಕುಡಿಯುವ ನೀರು ಕೊಂಡೊಯ್ಯಲು ಪೈಪ್ ಲೈನ್ಕಾಮಗಾರಿ ನಡೆಯುತ್ತಿದೆ. ಇದರ ನಡುವೆ ಮತ್ತೆ ಉತ್ತರ ಕರ್ನಾಟಕದ ಐದು ಜಿಲ್ಲೆಗಳಿಗೆ ಇದೇ ಕಾಳಿ ನದಿಯಿಂದ ನೀರು ಪೂರೈಸುವ ಯೋಜನೆಯನ್ನು ೨೦೨೨-೨೩ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಿರುವುದು ಉತ್ತರ ಕನ್ನಡ ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣ ವಾಗಿದೆ.
ಜಿಲ್ಲೆಯ ಸಾಕಷ್ಟು ಭಾಗ ಗಳಿಗೆ ಬೇಸಿಗೆಯಲ್ಲಿ ನೀರಿನ ಅಭಾವ ಎದುರಾಗುತ್ತಿದ್ದು, ಕಾಳಿ ನದಿಯಿಂದ ನೀರು ಪೂರೈಕೆ ಮಾಡ ಬೇಕೆನ್ನುವ ಬೇಡಿಕೆಯಿದೆ. ಹೀಗಿರುವಾಗ ಜಿಲ್ಲೆಗೇ ಸಿಗದ ನೀರು ಹೊರ ಜಿಲ್ಲೆಗಳಿಗೆ ನೀಡಲು ಮುಂದಾಗಿರುವುದು ಸರಿಯಲ್ಲ ಎಂದು ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಈ ಕುರಿತು ಪ್ರತಿಕ್ರಿಯಿಸಿದ ಉತ್ತರ ಕನ್ನಡ ಜಿಲ್ಲೆ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಯಾವುದೇ ಯೋಜನೆಗಳು ಬರೋದು ಜನಸಾಮಾನ್ಯರಿಗೆ ಅನುಕೂಲವಾಗಲಿ ಅಂತ. ಸಾಧಕ-ಬಾಧಕಗಳು ಪ್ರತಿಯೊಂದು ಯೋಜನೆಗಳಲ್ಲಿ ಇದ್ದದ್ದೇ. ಯಾರಿಗೂ ತೊಂದರೆಯಾಗದಂತೆ ಪೂರ್ಣ ಪ್ರಮಾಣದಲ್ಲಿ ಜನಹಿತಕ್ಕಾಗಿಯೇ ಕಾರ್ಯಕ್ರಮ ನಡೆಸಲಾಗುತ್ತಿದೆ. ಯಾರನ್ನೂ ಕತ್ತಲೆಯಲ್ಲಿಟ್ಟು ಕೆಲಸ ಮಾಡಲ್ಲ. ಎಲ್ಲರ ಜತೆ ಚರ್ಚೆ ನಡೆಸಿದ ಬಳಿಕವೇ ಕೆಲಸ ಮಾಡ್ತೇವೆ ಎಂದಿದ್ದಾರೆ.
ಜಿಲ್ಲೆಯ ಜೊಯಿಡಾ ತಾಲೂಕಿನ ಡಿಗ್ಗಿಯಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ ಹರಿದು ಕಾರವಾರದಲ್ಲಿ ಅರಬ್ಬೀ ಸಮುದ್ರ ಸೇರುವ ಕಾಳಿ ಜಿಯ ನದಿಗಳಂದಾಗಿದ್ದು, ಜನರ ಜೀವನದಿಯೂ ಹೌದು. ೧೮೪ ಕಿ.ಮೀ. ಉದ್ದದ ಈ ನದಿಯ ಹರಿವಿನುದ್ದಕ್ಕೂ ಸೂಪಾ, ಕೊಡಸಳ್ಳಿ, ಕದ್ರಾಗಳಲ್ಲಿ ಅಣೆಕಟ್ಟುಗಳನ್ನು ಕಟ್ಟಿ ಜಲವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಪಶ್ಚಿಮ ಘಟ್ಟ ಪ್ರದೇಶದಲ್ಲಿಹರಿದುಬರುವ ಈ ಕಾಳಿ ನದಿಯನ್ನು ಲಕ್ಷಾಂತರ ಜನರು ಅವಲಂಬಿಸಿದ್ದು, ಮೀನುಗಾರರ ಮೀನುಗಾರಿಕೆಗೂ ಈ ನದಿ ಆಧಾರ ವಾಗಿದೆ. ಅದೆಷ್ಟೋ ಜಲಚರ, ಜೀವ- ಜಂತುಗಳಿಗೂ ಈ ಕಾಳಿ ಜೀವನಾಡಿ.
ಸರಕಾರದ ನಡೆಗೆ ಆಕ್ರೋಶಉತ್ತರ ಕನ್ನಡದ ತಣ್ಣನೆಯ ಒಡಲಿಗೆ ಸದಾಕಾಲ ಸುಡು ಕೆಂಡ ಕಾಣಿಸುತ್ತಲೇ ಇದೆ. ಉತ್ತರ ಕನ್ನಡ ಜಿಯ ಜೀವನದಿಯಾಗಿರುವ ಕಾಳಿಯಿಂದ ಉತ್ತರ ಕರ್ನಾಟಕಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.
ಉತ್ತರ ಕರ್ನಾಟಕದ ಭಾಗದವರಿಗೆ ಇದು ಸಂತಸದ ವಿಷಯವಾದರೂ ಈ ಯೋಜನೆ ಉತ್ತರ ಕನ್ನಡಿಗರಲ್ಲಿ ಆಕ್ರೋಶ ಮೂಡಿಸಲು ಕಾರಣವಾಗಿದೆ. ಕಾಳಿ ನದಿಯಿಂದ ಇನ್ನೂ ಸರಿಯಾಗಿ ಉತ್ತರ ಕನ್ನಡಕ್ಕೇ ನೀರು ಪೂರೈಕೆಯಾಗುತ್ತಿಲ್ಲ. ಅದರ ನಡುವೆ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ನೀರು ಪೂರೈಸಲು ನಿರ್ಧರಿಸಿರುವ ಈ ಯೋಜನೆಗೆ ಜಿಲ್ಲೆಯಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ.
***
ನಾವು ಈ ಕಾಳಿ ನದಿ ನೀರಿನ ಹಂಚಿಕೆಯನ್ನು ವಿರೋಧಿಸುತ್ತೇವೆ. ಸರಕಾರ ಅವಸರವಾಗಿ ಈ ಯೋಜನೆ ಕೈಗೊಂಡಂತೆ ಕಾಣುತ್ತಿದೆ. ಕಾಳೀ ನದಿಯಲ್ಲಿ ಸಾಕಷ್ಟು ಯೋಜನೆಗಳೂ ಈಗಾಗಲೇ ಇವೆ. ಕಾಳಿ ನದಿಯ ಧಾರಣಾ ಸಾಮರ್ಥ್ಯ ನೋಡಿಮಾಡಬೇಕಿದೆ. ಆದರೆ ಅದಾವುದೂ ಈಗ ನಡೆಯುತ್ತಿಲ್ಲ. ಕಾಳೀ ನದಿಯ ನೀರು ಇಲ್ಲಿಯ ಜನರಿಗೇ ಸಾಕಾಗುತ್ತಿಲ್ಲ. ಅಂಥದ್ದರಲ್ಲಿ ಇಲ್ಲಿನ ನೀರು ಬೇರೆಡೆ ಸಾಗಿಸುವುದು ಸರಿಯಲ್ಲ. ಆದ್ದರಿಂದ ಜನರ ಅಭಿಪ್ರಾಯ ಅಗತ್ಯ. ನಾವು ಕಾಳಿ ನೀರನ್ನೂ ಎಲ್ಲಿಯೂ ಹೋಗಲು ಬಿಡುವುದಿಲ್ಲ.
-ರವಿ ರೇಡ್ಕರ್ ಕಾಳಿ ಬ್ರಿಗೇಡ್ ಅಧ್ಯಕ್ಷ