ರಾಜ್ಯದಲ್ಲಿ ಆಪರೇಷನ್‌ ಜಿಕೆ
ಸರಕಾರದ ಜತೆ ಪಕ್ಷದಪದಾಧಿಕಾರಿಗಳಲ್ಲೂಭಾರೀ ಬದಲಾವಣೆಸಾಧ್ಯತೆ
ಸಂಪುಟ ಸರ್ಜರಿ ಸಿದ್ಧತೆಯ ಬೆನ್ನಲ್ಲೇ ಮಹತ್ವದ ನಿರ್ಧಾರಕ್ಕೆ ಚಿಂತನೆ
ಗುಜರಾತ್ ಜತೆ ರಾಜ್ಯ ವಿಧಾನಸಭೆಗೂ ಅವಧಿಪೂರ್ವ ಚುನಾವಣೆ?
ಯುವಕರು, ಹೊಸಮುಖಗಳಿಗೆ ಸಂಪುಟದಲ್ಲಿ ಸ್ಥಾನ ಕಲ್ಪಿಸಲು ಯೋಚನೆ
ಪ್ರದೀಪ್ ಕುಮಾರ್ ಎಂ. ಬೆಂಗಳೂರು
ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಯಶಸ್ಸು ಗಳಿಸಿದ ಬೆನ್ನಲ್ಲೇ ರಾಜ್ಯ ಸಂಪುಟಕ್ಕೆ ಮೇಜರ್ ಸರ್ಜರಿ ನಡೆಸುವ ಪ್ರಯತ್ನಗಳು ಒಂದೆಡೆಯಾದರೆ, ‘ಆಪರೇಷನ್ ಜಿಕೆ’ (ಗುಜರಾತ್ ಮತ್ತು ಕರ್ನಾಟಕ) ಮೂಲಕ ರಾಜ್ಯ ವಿಧಾನಸಭೆಗೆ ಅವಧಿ ಪೂರ್ಣ ಚುನಾವಣೆ ನಡೆಸುವ ಬಗ್ಗೆಯೂ ಗಂಭೀರ ಚರ್ಚೆ ಆರಂಭವಾಗಿದೆ.
ಉತ್ತರ ಪ್ರದೇಶ ಸೇರಿದಂತೆ 5 ರಾಜ್ಯಗಳಿಗೆ ನಡೆದ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಹಾಘೂ ಕೇಂದ್ರದ ಅಭಿವೃದ್ಧಿ ಯೋಜನೆಗಳು ಪ್ರಮುಖ ಕಾರಣ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಹೀಗಾಗಿ ಈ ವರ್ಷಾಂತ್ಯದೊಳಗೆ (ಬಹುತೇಕ ನವೆಂಬರ್ ಅಂತ್ಯ) ನರೇಂದ್ರ ಮೋದಿ ಅವರ ತವರು ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲೂ ಚುನಾವಣೆ ನಡೆಸಿದರೆ ಪಕ್ಷಕ್ಕೆ ಹೆಚ್ಚು ಅನುಕೂಲವಾಗ ಬಹುದು ಎಂಬ ಕಾರಣಕ್ಕೆ ಅವಧಿ ಪೂರ್ಣ ಚುನಾವಣೆಗೆ ಹೋಗುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಈ ಹಿನ್ನೆಲೆಯಲ್ಲಿ ಚುನಾವಣೆಗೆ ಹೊಸ ತಂಡವೊಂದನ್ನು ಸಿದ್ಧಪಡಿಸುವ ಉದ್ದೇಶವನ್ನೂ ಪಕ್ಷದ ವರಿಷ್ಠರು ಹೊಂದಿದ್ದಾರೆ. ಅದಕ್ಕಾಗಿ ಸಚಿವ ಸಂಪುಟದಲ್ಲಿ ಪ್ರಮುಖ ಬದಲಾವಣೆ ಮಾಡುವುದರ ಜತೆಗೆ ಬಿಜೆಪಿ ರಾಜ್ಯ ಘಟಕದಲ್ಲೂ ಕೆಲವೊಂದು ಬದಲಾವಣೆ ಇಂಗಿತ ವ್ಯಕ್ತಪಡಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಮಾರ್ಚ್ ಅಂತ್ಯದೊಳಗೆ ಸಂಪುಟ ಪುನಾರಚನೆ ಯಾಗಲಿದ್ದು, ಏಪ್ರಿಲ್‌ನಲ್ಲಿ ರಾಜ್ಯ ಪದಾಧಿಕಾರಿಗಳ ಬದಲಾವಣೆ ಸಾಧ್ಯತೆಯಿದೆ. ಆದರೆ, ಈ ವಿಚಾರದಲ್ಲಿ ನಿರ್ಧಾರವನ್ನು ಸಂಪೂರ್ಣವಾಗಿ ಪಕ್ಷದ ಹೈಕಮಾಂಡ್‌ಗೆ ಬಿಡಲಾಗಿದೆ.
ಯಾಕಾಗಿ ಅವಧಿ ಪೂರ್ವ?:ಒಂದಕ್ಕಿಂತ ಹೆಚ್ಚು ರಾಜ್ಯಗಳಲ್ಲಿ ಏಕಕಾಲದಲ್ಲಿ ಚುನಾವಣೆ ನಡೆದರೆ ಅದರಿಂದ ಪಕ್ಷಕ್ಕೆ ಹೆಚ್ಚು ಲಾಭವಾಗುತ್ತದೆ. ಇದು ಪಂಚ ರಾಜ್ಯಗಳ ಚುನಾವಣೆಯಲ್ಲಿ ಸಾಬೀತಾಗಿದೆ. ಗೆಲುವು ಕಷ್ಟ ಎಂದುಕೊಂಡಿದ್ದ ಗೋವಾ ಮತ್ತು ಮಣಿಪುರದಲ್ಲೂ ಬಿಜೆಪಿ ಅಧಿಕಾರಕ್ಕೆ ಮರಳಿದೆ. ಅದೇ ರೀತಿ ಪ್ರಧಾನಿ ಮೋದಿ ಅವರ ತವರು ರಾಜ್ಯ. ಅಲ್ಲಿ ಮತ್ತೆ ಬಿಜೆಪಿ ಗೆಲ್ಲು ವುದು ಕಷ್ಟವಲ್ಲ. ಇನ್ನೊಂದೆಡೆ ದಕ್ಷಿಣ ದಲ್ಲಿ ಬಿಜೆಪಿ ಇರುವುದು ಕರ್ನಾಟಕದಲ್ಲಿ ಮಾತ್ರ. ಇಲ್ಲಿ ಮೋದಿ ಅವರ ಪ್ರಭಾವಹೆಚ್ಚಿದೆ.
ಹೀಗಾಗಿ ಗುಜರಾತ್ ಜತೆ ಕರ್ನಾಟಕದಲ್ಲೂ ವಿಧಾನಸಭೆ ಚುನಾವಣೆ ನಡೆಸಿದರೆ, ಎರಡೂ ರಾಜ್ಯಗಳಲ್ಲಿ ಬಿಜೆಪಿಗೆ  ಅನುಕೂಲ ವಾಗಬಹುದು ಎಂಬುದು ವರಿಷ್ಠರ ಚಿಂತನೆಯಾ ಗಿದೆ. ಹೀಗಾಗಿ ‘ಆಪರೇಶನ್ ಜಿಕೆ’ ಹೆಸರಿನಲ್ಲಿ ರಾಜ್ಯದಲ್ಲಿ ಅವಧಿ ಪೂರ್ವ ಚುನಾವಣೆ ಬಗ್ಗೆ ಯೋಚಿಸುತ್ತಿದ್ದಾರೆ ಎನ್ನಲಾಗಿದೆ.
ಸಂಪುಟ ಸರ್ಜರಿ ಹೇಗೆ?:ಪಂಚ ರಾಜ್ಯಗಳ ಚುನಾವಣೆ ಬಳಿಕ ರಾಜ್ಯ ಸಚಿವ ಸಂಪುಟ ಪುನಾರಚನೆ ಮಾಡುವ ಬಗ್ಗೆ ಈ ಹಿಂದೆಯೇ ವರಿಷ್ಠರು ಸೂಚನೆ ಕೊಟ್ಟಿದ್ದರು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ರಾಜ್ಯದಲ್ಲಿ ಆಕಾಂಕ್ಷಿಗಳ ಕಡೆಯಿಂದ ಬಿರುಸಿನ ಚಟುವಟಿಕೆಗಳು ಆರಂಭವಾಗಿವೆ. ಆದರೆ, ಯಾವ ರೀತಿ ಸಂಪುಟ ಪುನಾರಚನೆ ಮಾಡಬೇಕು ಎಂಬ ಬಗ್ಗೆ ವರಿಷ್ಠರು ಇನ್ನೂ ತೀರ್ಮಾನ ಕೈಗೊಂಡಿಲ್ಲ.
ಉತ್ತರ ಭಾರತ ಮತ್ತು ಕರ್ನಾಟಕದ ರಾಜಕೀಯ ಪರಿಸ್ಥಿತಿಯಲ್ಲಿ ಸಾಕಷ್ಟು ಭಿನ್ನವಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ವಿಧಾನ ಸಭೆ ಚುನಾವಣೆಯಲ್ಲೂ ವ್ಯಕ್ತಿ ಆಧಾರಿತ ಫಲಿತಾಂಶ ಬರುತ್ತದೆ. ಆದರೆ, ರಾಜ್ಯದಲ್ಲಿ ಸ್ಥಳೀಯ ನಾಯಕತ್ವ ಮತ್ತು ವಿಚಾರ ಆಧಾರಿತ ರಾಜಕಾರಣ ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ಉತ್ತರ ಪ್ರದೇಶ, ಗುಜರಾತ್, ಉತ್ತರಾಖಂಡದಲ್ಲಿ ಕೈಗೊಂಡ ಬದಲಾವಣೆಗಳು ಪಕ್ಷಕ್ಕೆ ನೆರವಾಗಿದೆ. ಆದರೆ, ಅದನ್ನೇ ಮುಂದಿಟ್ಟುಕೊಂಡು ಅದೇ ರೀತಿಯ ಬದಲಾವಣೆಗಳನ್ನು ಕರ್ನಾಟಕ ದಲ್ಲಿ ತಂದರೆ ಯಶಸ್ವಿಯಾಗುತ್ತದೆ ಎನ್ನಲಾಗುವುದಿಲ್ಲ.
ರಾಜ್ಯದಲ್ಲಿ ಯಾವ ರೀತಿ ಸಂಪುಟ ಪುನಾರಚನೆ ಮಾಡಬೇಕು ಎಂಬ ಬಗ್ಗೆ ವರಿಷ್ಠರು ಇನ್ನೂ ಚರ್ಚೆ ಮಾಡುತ್ತಿದ್ದಾರೆ. ಈಗಾಗಲೇಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಸಂಘಟನೆ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ರೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರ ಸಲಹೆಯಂತೆ ಸಂಪುಟ ಪುನಾರಚನೆ ಮಾಡಲಿ ದ್ದಾರೆ ಎಂದು ತಿಳಿದುಬಂದಿದೆ.
ಶೀಘ್ರ ಮುಖ್ಯಮಂತ್ರಿ ದೆಹಲಿಗೆ?ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಯಶಸ್ಸು ಸಾಧಿಸಿರುವುದರಿಂದ ಪಕ್ಷದ ರಾಷ್ಟ್ರೀಯ ನಾಯಕರು ಮತ್ತು ಚುನಾವ ಣೆಯ ಗೆಲುವಿಗೆ ಕಾರಣಕರ್ತರಾದ ಪ್ರಮುಖರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶೀಘ್ರವೇ ದೆಹಲಿಗೆ ತೆರಳುವ ಸಾಧ್ಯತೆ ಇದೆ. ಈ ವೇಳೆ ಸಂಪುಟ ಪುನಾರಚನೆ ಬಗ್ಗೆಯೂ ವರಿಷ್ಠರೊಂದಿಗೆ ಚರ್ಚೆ ನಡೆಸಲಿದ್ದಾರೆ. ಈ ಚರ್ಚೆಯ ಬಳಿಕವೇ ಯಾರನ್ನು ಸಂಪುಟದಿಂದ ಕೈಬಿಡಬೇಕು? ಯಾರನ್ನು ಸೇರಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸ ಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಯುವ, ಹೊಸ ಮುಖಗಳಿಗೆ ಆದ್ಯತೆಉತ್ತರಾಖಾಂಡ್‌ನಲ್ಲಿ ಚುನಾವಣೆಗೆ ಒಂದೂವರೆ ವರ್ಷ ಇರುವಾಗ ಮುಖ್ಯಮಂತ್ರಿ ಬದಲಿಸಲಾಗಿತ್ತು. ಸಂಪುಟದಲ್ಲಿ ಸಾಕಷ್ಟು ಮಾರ್ಪಾಟು ಮಾಡಲಾಗಿತ್ತು. ಗುಜರಾತ್‌ನಲ್ಲೂ ಮುಖ್ಯಮಂತ್ರಿ ಬದಲಾವಣೆ ಜತೆಗೆ ಸಚಿವ ಸಂಪುಟದಲ್ಲೂ ಬದಲಾವಣೆ ಗಳಾಗಿವೆ. ರಾಜ್ಯದಲ್ಲಿ ಮುಖ್ಯಮಂತ್ರಿ ದಲಾವಣೆಯಾದರೂ ಬಹುತೇಕ ಸಚಿವರು ಹಿಂದಿನವರೇ ಇದ್ದಾರೆ. ಹೀಗಾಗಿ ಶೀಘ್ರದಲ್ಲೇ ಸಂಪುಟ ಪುನಾರಚನೆ ಮಾಡಿ ಲವು ಯುವ ಮತ್ತು ಹೊಸ ಮುಖಗಳಿಗೆ ಅವಕಾಶ ಕಲ್ಪಿಸುವ ಬಗ್ಗೆ ಹೈಕಮಾಂಡ್ ಯೋಚಿಸು ತ್ತಿದೆ.
ಕೈನಲ್ಲೂ ಹೊಸ ಕಸಿವಿಸಿಮುಂದೇನಿದ್ದರೂ ನಮ್ಮದೇ ಸರಕಾರ ಎಂದು ತಮ್ಮಲ್ಲೇ ತೀರ್ಮಾನಿಸಿಕೊಂಡಿದ್ದ ಕಾಂಗ್ರೆಸ್ ನಾಯಕರು ಈಗ ಪಂಚರಾಜ್ಯ ಫಲಿತಾಂಶ ಕಂಡು ದಿಕ್ಕೆಟ್ಟು ಹೋಗಿದ್ದಾರೆ. ಒಂದೊಮ್ಮೆ ಬಿಜೆಪಿಯವರು ಅವಧಿ ಪೂರ್ವ ಚುನಾವಣೆಗೆ ಹೋದರೆ ಗತಿ ಏನು ಎನ್ನುವ ಆತಂಕ ಶುರುವಾಗಿದೆ. ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ ಯುದ್ಧೋತ್ಸಹವೂ ಇಲ್ಲ. ಯುದ್ಧೋಪಕರಣಗಳೂ ಇಲ್ಲ.
ಅಷ್ಟೇ ಏಕೆ ಸದ್ಯ ನಡೆಯುತ್ತಿರುವ ವಿಧಾನಮಂಡಲ ಅಧಿವೇಶನದಲ್ಲಿ ಆಡಳಿತ ಪಕ್ಷವನ್ನು ಕಟ್ಟಿ ಹಾಕುವುದಕ್ಕೇ ಕಾಂಗ್ರೆಸ್ ಬತ್ತಳಿಕೆಯಲ್ಲಿ ಅಸುಗಳೇ ಕಾಣುತ್ತಿಲ್ಲ. ಇಂಥ ಸ್ಥಿತಿಯಲ್ಲಿ ಮಹಾಸಮರ ಆರಂಭವಾದರೆ ಏನು ಮಾಡುವುದು ಎಂಬುದು ಪಕ್ಷದೊಳಗಿನ ಹೊಸ ದಿಗಿಲು. ಈತನಕ ರಾಜ್ಯದಲ್ಲಿ ಬಿಜೆಪಿ ಆಡಳಿತ ವಿರೋಧಿ ಅಲೆ ಎದ್ದಿದ್ದು ತನಗೆ ಲಾಭ ಎಂಬ ಲೆಕ್ಕಾಚಾರ ಕಾಂಗ್ರೆಸಿಗರದ್ದಾಗಿತ್ತು.
