ರಾಜ್ಯ ಕಾಂಗ್ರೆಸಿಗರಲ್ಲಿ ಮತ್ತೆ ಒಡಕು ರಾಗಾ
ರಂಜಿತ್ ಎಚ್. ಅಶ್ವತ್ಥ ಬೆಂಗಳೂರು
ತಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಸಾಮೂಹಿಕ ನಾಯಕತ್ವದಲ್ಲಿಯೇ ಮುಂದಿನ ಚುನಾವಣೆ ಎಂಬ ಭರವಸೆಯ ಮಾತುಗಳನ್ನು ಆಡಿದ್ದ ಕಾಂಗ್ರೆಸ್ ನಾಯಕರು, ಪಕ್ಷದ ವರಿಷ್ಠ ರಾಹುಲ್ ಗಾಂಧಿಯ ಎದುರಲ್ಲಿಯೇ ಒಡಕು ಪ್ರದರ್ಶಿಸುವ ಮೂಲಕ ರಾಜ್ಯ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಾಗಿಲ್ಲ ಎನ್ನುವುದನ್ನು ಪುನಃ ಸಾಬೀತುಪಡಿಸಿದ್ದಾರೆ.
ರಾಜ್ಯ ಪ್ರವಾಸದಲ್ಲಿರುವ ರಾಹುಲ್, ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಪ್ರಮುಖ ನಾಯಕರೊಂದಿಗೆ ಸಭೆ ನಡೆಸಿದರು. ಈ ವೇಳೆ ಅವರ ಸಮ್ಮುಖದಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಒಬ್ಬರ ಮೇಲೊಬ್ಬರು ಜಿದ್ದಿಗೆ ಬಿದ್ದಂತೆ ಪರೋಕ್ಷ ಟಾಂಗ್ ಕೊಟ್ಟುಕೊಂಡರು.
ಆರಂಭದಲ್ಲಿ ಡಿಕೆಶಿ, ತಮ್ಮ ನೇತೃತ್ವದಲ್ಲಿ ೬೦ ಲಕ್ಷ ಸದಸ್ಯರ ನೋಂದಣಿ ಕಾರ್ಯ ಪೂರ್ಣಗೊಂಡಿರುವ ಬಗ್ಗೆ ತಿಳಿಸಿದ್ದು ಬಿಟ್ಟರೆ ಹಿಂದುತ್ವದ ವಿಷಯದಲ್ಲಿ ಯಾವುದೇ ಸ್ಪಷ್ಟ ತೀರ್ಮಾನ ತಗೆದುಕೊಳ್ಳುವ ರೀತಿ ಮಾತನಾಡಲಿಲ್ಲ. ಆದರೆ ಬಳಿಕ ಮಾತನಾಡಿದ ಸಿದ್ದು ಹಾಗೂ ಖರ್ಗೆ ಇಬ್ಬರೂ, ಡಿಕೆಶಿಗೆ ಟಾಂಗ್ ನೀಡುವಂತೆಯೇ ಮಾತನಾಡಿದ್ದು, ಸಮನ್ವಯತೆಯ ಕೊರತೆ ಯನ್ನು ಸ್ಪಷ್ಟಪಡಿಸಿತು. ಸದಸ್ಯತ್ವ ನೋಂದಣಿ ಬಗ್ಗೆ ಡಿಕೆಶಿ ಹೇಳುತ್ತಿದ್ದಂತೆ, ‘ಕೇವಲ ನೋಂದಣಿ ಮಾಡಿದರೆ ಚುನಾವಣೆ ಗೆದ್ದಂತೆ ಅಲ್ಲ. ನೋಂದಾ ಯಿತ ೬೦ ಲಕ್ಷದಲ್ಲಿ ಒಬ್ಬೊಬ್ಬ ಸದಸ್ಯ ಮೂರು ಮತಗಳನ್ನು ತಗೆದುಕೊಂಡು ಬಂದರೂ ೧.೮೦ ಕೋಟಿ ಮತಗಳು ಆಗಲಿವೆ.
ಚುನಾವಣೆಯಲ್ಲಿ ಗೆಲ್ಲುವುದಕ್ಕೆ ಯೋಚಿಸಲೇಬೇಕಿಲ್ಲ. ಆದರೆ, ಈ ಸಂಖ್ಯೆ ಮತವಾಗಿ ಪರಿವರ್ತಿಸುವಂತೆ ಮಾಡುವುದು ನಮ್ಮ ಕರ್ತವ್ಯ’ ಎನ್ನುವ ಮೂಲಕ ವೇದಿಕೆಯಲ್ಲೇ ಖರ್ಗೆಯವರು ಕಾಲೆಳೆದರು. ಇನ್ನು ಹಿಂದು-ಮುಸ್ಲಿಂ ನಡುವಿನ ತಿಕ್ಕಾಟದ ವಿಷಯಪ್ರಸ್ತಾಪಿಸಲು ಹೋಗದೇ ‘ಕೆಲ ವಿಷಯಗಳನ್ನು ಮಾತನಾಡಿದರೆ ವಿವಾದವಾಗುತ್ತದೆ’ ಎಂದು ಖರ್ಗೆಗೆ ಟಾಂಗ್ ಕೊಟ್ಟ ಸಿದ್ದರಾ ಮಯ್ಯ, ‘ಯಾರು ಏನೋ ಅಂದುಕೊಳ್ಳುತ್ತಾರೆ ಎಂದು ಅಲ್ಪಸಂಖ್ಯಾತರ, ದಮನಿತರ ಪರವಾಗಿ ಧ್ವನಿಯಾಗದೇ ಇರಲು ಸಾಧ್ಯ ವಿಲ್ಲ. ಅವರ ಪರವಾಗಿ ನಿಲ್ಲಬೇಕು’ ಎಂದರು.
ಕಾಣದ ಸಮನ್ವಯತೆರಾಜ್ಯ ಕಾಂಗ್ರೆಸ್‌ಗೆ ಪೂರಕ ವಾತಾವರಣವಿದ್ದರೂ, ಸಮನ್ವಯತೆಯ ಕೊರತೆಯ ಸಮಸ್ಯೆಯಿತ್ತು. ಇದು ಕೇವಲ ಸಂಘಟನೆ ಯಲ್ಲಿ ಮಾತ್ರವಲ್ಲದೆ, ರಾಹುಲ್ ಗಾಂಧಿ ಅವರ ಎದುರಲ್ಲಿಯೂ ಬಹಿರಂಗವಾಗಿತ್ತು. ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಸಂಘಟನೆಯಾಗಿದ್ದರೂ, ಭಾಷಣದಲ್ಲಿ ಸಮನ್ವಯತೆಯೇ ಮರೆಯಾಗಿತ್ತು.
ನೋಂದಣಿ ಬಗೆಗೂ ಒಡಕು ಮಾತುಹೆಚ್ಚು ಸದಸ್ಯತ್ವ ನೋಂದಣಿ ಮಾಡಿಸಿರುವ ಸದಸ್ಯರಿಗೆ ಅಭಿನಂದಿಸುವ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಮಾಜಿ ಶಾಸಕ ಶಿವರಾಜ್ ತಂಗಡಗಿ ಅವರು ಕ್ಷೇತ್ರವಾರು ಅತಿಹೆಚ್ಚು ಸದಸ್ಯತ್ವ ನೋಂದಣಿ ಮಾಡಿಸಿದ್ದಾರೆ. ಅವರು ನಮ್ಮ ಭಾಗದವರು ಎಂದು ಹೇಳಿದರು. ಅವರ ಮಾತು ಮುಗಿಯುವ ಮೊದಲೇ, ಡಿಕೆಶಿ, ಇಷ್ಟು ದಿನ ಇಕ್ಬಾಲ್ ಅನ್ಸಾರಿ ಮುಂದಿದ್ದರು. ಇದೀಗ ತಂಗಡಗಿ ಬಂದಿರಬಹುದು. ಮುಂದಿನ ದಿನದಲ್ಲಿ ಪುನಃ ಅನ್ಸಾರಿ ಹೆಚ್ಚು ನೋಂದಣಿ ಮಾಡಿಸಲಿದ್ದಾರೆ ಎನ್ನುವ ಮೂಲಕ ಅಲ್ಲಿಯೂ ಒಡಕು ಧ್ವನಿ ಕೇಳಿ ಬಂದಂತಾಯಿತು.