ಪಂತ್‌ ವರ್ಗಕ್ಕೆ ಪೊಲೀಸರಲ್ಲೇ ಒತ್ತಡ !
ಉಮೇಶ್, ಅಲೋಕ್ ಕುಮಾರ್, ಹರಿಶೇಖರನ್ ನಡುವೆ ತೀವ್ರ ಪೈಪೋಟಿ
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ರಾಜಧಾನಿ ಬೆಂಗಳೂರು ಮಹಾನಗರದ ಪೊಲೀಸ್ ಆಯುಕ್ತ ಕಮಲ್ ಪಂತ್ ವರ್ಗಾವಣೆಗೆ ಇಲಾಖೆಯಲ್ಲೇ ಒತ್ತಡ ಆರಂಭ ವಾಗಿದೆ. ಕಮಲ್ ಪಂತ್ ಅವರು ಆಯಕ್ತರಾಗಿ ಮುಂದುವರಿದಷ್ಟೂ ಸುಮಾರು ೧೮ ಮಂದಿ ಎಡಿಜಿ ಶ್ರೇಣಿಯ ಅಧಿಕಾರಿಗಳಿಗೆಅನ್ಯಾಯವಾಗುವ ಸಾಧ್ಯತೆ ಇದೆ.
ಹೀಗಾಗಿ ಇವರನ್ನು ಕೂಡಲೇ ವರ್ಗಾವಣೆ ಮಾಡಬೇಕೆನ್ನುವ ಪರೋಕ್ಷ ಹಕ್ಕೋತ್ತಾಯ ಇಲಾಖೆ ಒಳಗೇ ಶುರುವಾಗಿದೆ. ಈ ಒತ್ತಾಯ ಬರೀ ಗೃಹ ಸಚಿವರು ಮಾತ್ರವಲ್ಲದೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನೂ ಮುಟ್ಟಿದೆ. ಈ ಮಧ್ಯೆ, ರಾಜ್ಯದಲ್ಲಿ ಹಿಜಾಬ್ ನಂತರ ಉಂಟಾದ ಮತೀಯ ಗಲಭೆಗಳ ನಿರ್ವಹಣೆಯಲ್ಲಿ ಆಗಿರುವ ವೈಫಲ್ಯ ಮತ್ತು ಚಂದ್ರು ಕೊಲೆ ವಿಚಾರದಲ್ಲಿ ಪಂತ್ ಅವರು ಗೃಹ ಸಚಿವರಿಗೆ ವಿರುದ್ಧವಾಗಿ ಹೇಳಿಕೆ ನೀಡಿದ್ದು, ನಂತರ ಸರಕಾರ ಅನುಭವಿಸಿದ್ದ ಮುಜುಗರ ಪಂತ್ ಎತ್ತಂಗಡಿ ಕೂಗಿಗೆ ತುಪ್ಪ ಸುರಿದಿದೆ. ಅದರಲ್ಲೂ ಚಂದ್ರು ಪ್ರಕಣದಲ್ಲಿ ಪಂತ್ ಅವರ ವಿರುದ್ಧ ಬಿಜೆಪಿ ನಾಯಕರೇ ಕಿಡಿಕಾರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ ವಾರದ ಆರಂಭ ದಲ್ಲೇ ಆಯುಕ್ತರ ವರ್ಗಾವಣೆ ಸಾಧ್ಯತೆ ನಿಚ್ಚಳವಾಗಿದೆ.
ಮುಂದುವರಿದರೆ ಸಮಸ್ಯೆ !ವಾಡಿಕೆಯ ಪ್ರಕಾರ ಬೆಂಗಳೂರು ಪೊಲೀಸ್ ಆಯುಕ್ತರ ಅವಧಿ ಒಂದೇ ವರ್ಷ. ಗಲಭೆ ಮತ್ತು ಇತರ ಕಾರಣಗಳಿಂದಾಗಿ ಈ ಹಿಂದೆ ಶಂಕರ್ ಬಿದಿರಿ ಮತ್ತು ಅಜಯ್ ಕುಮಾರ್ ಸಿಂಗ್ ಅವರು ಹೆಚ್ಚುವರಿ ಎರಡು ತಿಂಗಳು ಹುದ್ದೆಯಲ್ಲಿದ್ದರು. ಇವರನ್ನು ಬಿಟ್ಟರೆ ಅತಿ ಹೆಚ್ಚಿನ ಅವಧಿಗೆ (ಒಂದು ವರ್ಷ ಎಂಟು ತಿಂಗಳು) ಆಯುಕ್ತರಾಗಿರುವವರು ಕಮಲ್ ಪಂತ್. ಇವರು ಬರೀ ಎಡಿಜಿ ಆಗಿಯೇ ಉಳಿದಿದ್ದರೆ ಪ್ರಶ್ನೆ ಉದ್ಭವಿಸುತ್ತಿರಲಿಲ್ಲ.
ಆದರೆ ಅವರು ಬಡ್ತಿ ಪಡೆದು ಡಿಜಿ ಶ್ರೇಣಿಯ ಅಧಿಕಾರಿಯಾಗಿದ್ದಾರೆ. ಹೀಗಾಗಿ ಇವರಿಗೆ ಡಿಜಿಗೆ ಸಮಾನ ಹುದ್ದೆಯನ್ನೇ ನೀಡಬೇಕೇ ವಿನಃ ಡಿಜಿ ಶ್ರೇಣಿಯನ್ನು ಕೆಳಹಂತಕ್ಕೆ ಇಳಿಸಿ ಕೊಡುವುದಕ್ಕೆ ಕಾನೂನು ಒಪ್ಪುವುದು ಕಷ್ಟ. ಏಕೆಂದರೆ ಡಿಜಿ ಶ್ರೇಣಿಯ ಅಧಿಕಾರಿ ಯನ್ನು ಕೆಳ ಹಂತದ ಹುದ್ದೆಯಲ್ಲಿ ಮುಂದುವರಿಸಿದರೆ ಅದಕ್ಕೆ ಯುಪಿಎಸ್‌ಸಿ ಮತ್ತು ಕೇಂದ್ರ ಸರಕಾರದ ಅನುಮತಿ ಬೇಕಾಗ ಬಹುದು. ಹಾಗೆಯೇ ಎಜಿ (ಮಹಾಲೇಖಪಾಲ) ಕೂಡ ಆಕ್ಷೇಪ ವ್ಯಕ್ತಪಡಿಸಬಹುದು. ಇದನ್ನು ಸರಕಾರ ಹೇಗೆ ಸರಿಪಡಿಸಿಕೊಳ್ಳುತ್ತ ದೆಯೇ ನೋಡಬೇಕಿದೆ.
ವರ್ಗಕ್ಕೆ ಒತ್ತಡವೇಕೆ ?ಪೊಲೀಸ್ ಆಯುಕ್ತರ ಹುದ್ದೆಯನ್ನು ಸಾಮಾನ್ಯ ಎಡಿಜಿ ಶ್ರೇಣಿಯ ಅಧಿಕಾರಿಗಳಿಗೆ ನೀಡಲಾಗುತ್ತದೆ. ಇದರಲ್ಲಿ ಸೇವಾ ಹಿರಿತನ ಕ್ಕಿಂತ ದಕ್ಷತೆ ಸೇರಿದಂತೆ ನಾನಾ ವಿಚಾರ ಗಳಿಗೆ ಆದ್ಯತೆ. ಇಂಥ ಎಡಿಜಿ ಶ್ರೇಣಿಯ ಅಧಿಕಾರಿಗಳು ರಾಜ್ಯದಲ್ಲಿ ೧೮ ಮಂದಿ ಇದ್ದು, ಆಯುಕ್ತರ ಹುದ್ದೆ ಆಕಾಂಕ್ಷಿಗಳಾಗಿದ್ದಾರೆ. ಪಂತ್ ಅವರನ್ನು ವರ್ಷದ ಹಿಂದೆಯೇ ವರ್ಗಾವಣೆ ಮಾಡಿದ್ದರೆ, ಇಷ್ಟೊತ್ತಿಗಾಗಲೇ ಇವರಲ್ಲಿ ಕೆಲವರಿಗೆ ಅವಕಾಶ ಸಿಗುತ್ತಿತ್ತು. ಗೋಜಲು ನಿವಾರಣೆಯಾಗದ ಹೊರತು, ಸರಕಾರ ಎಡಿಜಿಗಳಿಗೆ ಬಡ್ತಿಯನ್ನೂ ನೀಡು ತ್ತಿಲ್ಲ. ವರ್ಗವನ್ನೂ ಮಾಡುತ್ತಿಲ್ಲ ಎಂದು ತಿಳಿದುಬಂದಿದೆ.
ಯಾರೆಲ್ಲ ರೇಸ್‌ನಲ್ಲಿದ್ದಾರೆ ?ಪೊಲೀಸ್ ಆಯುಕ್ತರ ಹುದ್ದೆಯ ರೇಸ್‌ನಲ್ಲಿ ಸದ್ಯ ಎಡಿಜಿಗಳಾದ ಉಮೇಶ್, ಅಲೋಕ್ ಕುಮಾರ್, ಹರಿಶೇಖರನ್ ಹಾಗೂದಯಾನಂದ್ ಹೆಸರು ಬಲವಾಗಿ ಕೇಳಿಬರುತ್ತಿದೆ. ಇವರಲ್ಲಿ ಉಮೇಶ್ ಅವರಿಗೆ ರಾಜ್ಯಪಾಲರೊಬ್ಬರ ಕೃಪೆ ಇರುವ ಕಾರಣ ಅವರ ಹೆಸರು ಪಕ್ಷದೊಳಗೂ ಕೇಳಿಬರುತ್ತಿದೆ. ಇನ್ನು ಹಿಂದಿನ ಕೇಸುಗಳನ್ನು ಪರಿಗಣಿಸುವುದು ಬೇಡ ಎಂದರೆ ಅಲೋಕ್ ಕುಮಾರ್ ಅವರಿಗೆ ಆಯುಕ್ತ ಹುದ್ದೆ ಅಥವಾ ರಾಜ್ಯ ಕಾನೂನು ಸುವ್ಯವಸ್ಥೆ ಎಡಿಜಿ ಹುದ್ದೆ ನೀಡುವ ಚಿಂತನೆ ಇದೆ. ಇದರ ಮಧ್ಯೆ, ಚುನಾ ವಣೆ, ಮತೀಯ ಗಲಭೆ ತಡೆಯುವ ನಿಟ್ಟಿನಲ್ಲಿ ಕಠಿಣ ಅಧಿಕಾರಿಗಳು ಎನ್ನುವ ಕಾರಣಕ್ಕೆ ಹರೀಶೇಖರನ್ ಹಾಗೂ ದಯಾನಂದ್ ಹೆಸರೂ ಚಾಲ್ತಿಯಲ್ಲಿದೆ ಎಂದು ಉನ್ನತ ಮೂಲಗಳು ಹೇಳಿವೆ.
***
ಆಯುಕ್ತರ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಏನು ಹೇಳುವುದು ಸರಿಯಲ್ಲ. ಇಂಥ ನಿರ್ಧಾರಗಳನ್ನು ಮುಖ್ಯ ಮಂತ್ರಿ ಅವರು ಕೈಗೊಳ್ಳುತ್ತಾರೆ. ಅವರು ಏನು ಮಾಡುತ್ತಾರೋ ನೋಡೋಣ.
-ರವಿಕುಮಾರ್ವಿಧಾನ ಪರಿಷತ್ ಸದಸ್ಯ