ಗುರೂಜಿ ಕೊಲೆಗೆ ಬೇನಾಮಿ ಆಸ್ತಿಯೇ ಕಾರಣ
ಗುರೂಜಿಯ ಎಲ್ಲ ವ್ಯವಹಾರಗಳನ್ನೂ ತಿಳಿದಿದ್ದ ಆರೋಪಿಗಳು
ಹಣ ವಾಪಸ್ ಕೇಳಿದ್ದಕ್ಕೆ ಹತ್ಯೆಗೆ ಸ್ಕೆಚ್
*
ಚಂದ್ರಕಾಂತ್ ಬಾರಕೇರ ಹುಬ್ಬಳ್ಳಿ
ಸರಳ ವಾಸ್ತು ತಜ್ಞ ಚಂದ್ರಶೇಖರ ಗುರೂಜಿ ಹತ್ಯೆಗೆ ಬೇನಾಮಿ ಆಸ್ತಿಯೇ ಪ್ರಮುಖ ಎಂಬ ಸಂಗತಿ ಪೊಲೀಸರ ಆರಂಭಿಕ ತನಿಖೆಯಿಂದ ಸ್ಪಷ್ಟವಾಗಿದೆ.
ಮಹಾಂತೇಶ ಮತ್ತು ಮಂಜುನಾಥ ಇಬ್ಬರೂ ಗುರೂಜಿ ಅವರ ಸರಳ ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿಗಳು. ಅಲ್ಲಿಯೇ ಉದ್ಯೋಗ ಮಾಡುತ್ತಿದ್ದ ವನಜಾಕ್ಷಿ ಜತೆ ಮಹಾಂತೇಶ ಮದುವೆಯಾಗಿದ್ದ. ಗುರೂಜಿ ಅವರ ಎಲ್ಲ ವ್ಯವಹಾರಗಳು ಮೂವರಿಗೂ ತಿಳಿದಿತ್ತು. ಅಲ್ಲದೆ, ವನಜಾಕ್ಷಿ ಗುರೂಜಿಗೆ ಆಪ್ತಳಾಗಿದ್ದು, ಅವರ ಹೆಸರಿನಲ್ಲಿ ಗೋಕುಲ ರಸ್ತೆಯ ಗುರೂಜಿ ಅಪಾರ್ಟ್‌ಮೆಂಟ್ ಸೇರಿದಂತೆ ಹಲವು ಆಸ್ತಿ ಗಳನ್ನು ನೋಂದಣಿ ಮಾಡಿಸಿದ್ದರು.
ಆಸ್ತಿಯನ್ನು ಬೇರೆಯವರಿಗೆ ಮಾರಾಟ ಮಾಡಿರುವ ಕುರಿತು ಪ್ರಶ್ನಿಸಿದಾಗ ಭಿನ್ನಾಭಿಪ್ರಾಯ ಏರ್ಪಟ್ಟಿತ್ತು. ಅಲ್ಲದೆ, ಮಹಾಂತೇಶ ಹೆಸರಿನಲ್ಲಿದ್ದ ಇನ್ನುಳಿದ ಆಸ್ತಿಯನ್ನು ತಮ್ಮ ಹೆಸರಿಗೆ ಹಸ್ತಾಂತರಿಸುವಂತೆ ಗುರೂಜಿ ಒತ್ತಡ ಹೇರುತ್ತಿದ್ದರು. ಆಸ್ತಿ ಮರಳಿಸಿದರೆ ಬದುಕುವುದು ಕಷ್ಟ. ಹೀಗಾಗಿ ಗುರೂಜಿಯನ್ನೇ ಹತ್ಯೆಗೈದರೆ ಆಸ್ತಿಯನ್ನು ಕೇಳುವವರು ಯಾರು ಎಂಬ ಕಾರಣಕ್ಕೆ ಹತ್ಯೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.
ಅವ್ಯವಹಾರ ನಡೆಸಿದ್ದ ಮಹಾಂತೇಶ, ಮಂಜುನಾಥ:ಮಹಾಂತೇಶ ಮತ್ತು ಮಂಜು ನಾಥ ಇಬ್ಬರೂ ಸರಳ ವಾಸ್ತು ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದಾಗ ಹಣಕಾಸಿನ ವಿಷಯ ದಲ್ಲಿ ಅವ್ಯವಹಾರ ನಡೆಸಿದ್ದರು. ಇದರಿಂದ ಗುರೂಜಿ ಅವರನ್ನು ಕೆಲಸದಿಂದ ತೆಗೆದು ಹಾಕಿ, ಹಣ ಮರಳಿಸುವಂತೆ ಹೇಳಿದ್ದರು. ಅಲ್ಲದೆ, ಸರಳ ವಾಸ್ತು ಸಂಸ್ಥೆ ತೊರೆದ ಬಳಿಕ ಈ ಇಬ್ಬರೂ ಸಾಕಷ್ಟು ಸಾಲ ಮಾಡಿಕೊಂಡಿದ್ದರು.
೫ ಕೋಟಿ ರು.ಗೆ ಆಸ್ತಿ ಮಾರಾಟ:ಮುಂಬೈ ನಲ್ಲಿರುವ ಗುರೂಜಿಯವರ ಆಸ್ತಿಯೊಂದನ್ನು ಐದು ಕೋಟಿಗೆ ಮಾರಾಟ ಮಾಡಲಾಗಿತ್ತು. ಆ ಹಣ ಮಹಾಂತೇಶ ಶಿರೂರ ಬಳಿ ಇತ್ತು. ಅದನ್ನು ಮರಳಿ ಕೊಡುವಂತೆ ಗುರೂಜಿ ಅವರು ಪದೇ ಪದೆ ಒತ್ತಡ ಹಾಕಿದ್ದರು. ಇದರಿಂದ ಕೆರಳಿದ್ದ ಮಹಾಂತೇಶ, ತನ್ನ ಸ್ನೇಹಿತ ಮಂಜುನಾಥ ಜತೆ ಹತ್ಯೆಗೆ ಸ್ಕೆಚ್ ಹಾಕಿದ್ದ.
ಗುರೂಜಿ ಹತ್ಯೆಗೆ ವ್ಯವಸ್ಥೆಯ ಲೋಪ ಕಾರಣವಲ್ಲ: ಸಿಎಂಬೆಂಗಳೂರು: ಹುಬ್ಬಳ್ಳಿಯಲ್ಲಿ ಚಂದ್ರಶೇಖರ ಗುರೂಜಿ ಕೊಲೆಗೆ ಕಾನೂನು ಸುವ್ಯವಸ್ಥೆ ಲೋಪ ಕಾರಣವಲ್ಲ. ವೈಯಕ್ತಿಕ ದ್ವೇಷ ದಿಂದ ಕೊಲೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಇಂತಹ ಹತ್ಯೆಗಳಿಗೆ ವ್ಯವಸ್ಥೆಯ ಲೋಪ ಎಂಬ ಕಾರಣ ಹೇಳುವುದು ಸರಿಯಲ್ಲ. ಹಗೆತನ, ದ್ವೇಷ ಸಮಾಜದಲ್ಲಿ ಹೆಚ್ಚಾಗಿದೆ. ಅದರಲ್ಲೂ ಯುವಕರಲ್ಲಿ ಈ ರೀತಿಯ ಪ್ರವೃತ್ತಿ ಹೆಚ್ಚಾಗಿದೆ. ಅದು ಬದಲಾಗಬೇಕು. ಎಲ್ಲರೂಸೇರಿ ಇದನ್ನು ದಮನ ಮಾಡಬೇಕು. ಕಾನೂನನ್ನು ಇನ್ನಷ್ಟು ಬಿಗಿ ಮಾಡಬೇಕು ಎಂದರು.
***
ಚಂದ್ರಶೇಖರ ಗುರೂಜಿ ಅವರು ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ಅವರಿಗೆ ಉದ್ಯೋಗ ನೀಡಿ ಆಶ್ರಯನೀಡಿದ್ದಲ್ಲದೆ, ಸಾಕಷ್ಟು ನಂಬಿಕೆ, ವಿಶ್ವಾಸವನ್ನಿಟ್ಟುಕೊಂಡಿದ್ದರು. ಅಲ್ಲದೆ, ಸಾಕಷ್ಟು ಅನುಕೂಲ ಮಾಡಿದ್ದರು. ಆದರೆನಂಬಿಕೆ ದ್ರೋಹಿಗಳು ಅಂತ ಅನಿಸಿದಾಗ, ಉದ್ಯೋಗದಿಂದ ತೆಗೆದು ಹಾಕಿದ್ದರು. ಗುರೂಜಿಯವರನ್ನು ಭೀಕರವಾಗಿ ಹತ್ಯೆಗೈಯುವ ಮೂಲಕ ಉಂಡ ಮನೆಗೆ ದ್ರೋಹ ಬಗೆದಿದ್ದಾರೆ.
-ಸಂಜಯ ಅಂಗಡಿ ಗುರೂಜಿ ಸಹೋದರ
ಚಂದ್ರಶೇಖರ ಗುರೂಜಿ ನಮ್ಮ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ. ಆ ಆಸ್ತಿಯನ್ನು ಮಾರಾಟ ಮಾಡಿದ ಬಳಿಕ ಸಾಲವೆಲ್ಲ ತೀರುತ್ತದೆ. ಅಲ್ಲಿಯವರೆಗೆ ಸ್ವಲ್ಪ ಕಷ್ಟವಾಗುತ್ತದೆ ಎಂದು ಸಹೋದರ ಮಂಜುನಾಥ ಕುಟುಂಬಸ್ಥರಿಗೆ ತಿಳಿಸಿದ್ದ. ಮಂಜುನಾಥ ಮಾಡಿ ಕೊಂಡಿದ್ದ ಸಾಲದ ಬಗ್ಗೆ ಕುಟುಂಬಸ್ಥರೆಲ್ಲರೂ ಸೇರಿ ವಿಚಾರಿಸಿದಾಗ ಈ ಮಾತುಗಳನ್ನಾಡಿದ್ದ. ಆದರೆ, ಗುರೂಜಿ ಹತ್ಯೆ ಮಾಡಿ ರುವ ವಿಚಾರ ಮಾಧ್ಯಮಗಳಲ್ಲಿ ನೋಡಿಯೇ ತಿಳಿದುಕೊಂಡಿದ್ದೇವೆ.
-ಸೋಮಲಿಂಗಪ್ಪ ಮರೇವಾಡ ಕೊಲೆಗಾರ,ಮಂಜುನಾಥನ ಸಹೋದರ
ಹಂತಕರ ವಿಚಾರಣೆ ತೀವ್ರಗೊಳಿಸಲಾಗಿದೆ. ಎಲ್ಲ ಆಯಾಮಗಳಲ್ಲಿಯೂ ವಿಚಾರಣೆ ನಡೆಸಲಾಗುತ್ತಿದೆ. ಯಾವ ಕಾರಣಕ್ಕೆ ಗುರೂಜಿ ಅವರನ್ನು ಹತ್ಯೆಗೈಯಲಾಗಿದೆ. ಇದರ ಹಿಂದೆ ಇನ್ಯಾರ‍್ಯಾರು ಇದ್ದಾರೆ. ಯಾವ ಕಾರಣಕ್ಕೆ ಕೊಲೆ ಮಾಡಲಾಗಿದೆ ಎಂಬಿತ್ಯಾದಿ ವಿಚಾರಗಳ ಕುರಿತು ವಿಚಾರಣೆ ನಡೆಸಲಾಗುತ್ತಿದೆ.
-ಲಾಬೂರಾಮ್ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ
ನಾನು 2005ರಲ್ಲಿ ಸರಳ ಜೀವನ ಸಂಸ್ಥೆ ಸೇರಿಕೊಂಡಿದ್ದೆ. 2019ರಲ್ಲಿ ಮುಂಬೈಗೆ ವರ್ಗಾವಣೆ ಮಾಡಿದ ಹಿನ್ನೆಲೆಯಲ್ಲಿರಾಜೀನಾಮೆ ನೀಡಿದ್ದೆ. ನನ್ನ ಪತಿ ಕೂಡ 2016ರಲ್ಲಿ ಕೆಲಸ ಬಿಟ್ಟಿದ್ದರು. ಯಾಕೆ ಬಿಟ್ಟಿದ್ದರು ಎಂಬುದು ಗೊತ್ತಿಲ್ಲ. ಪತಿಹೆಸರಿನಲ್ಲಿ ಗುರೂಜಿ ಆಸ್ತಿ ಮಾಡಿರುವ ಬಗ್ಗೆ ನನಗೆ ಗೊತ್ತಿಲ್ಲ.
-ವನಜಾಕ್ಷಿ ಕೊಲೆ ಆರೋಪಿಮಹಾಂತೇಶನ ಪತ್ನಿ