ಪಿಟಿಸಿಎಲ್‌ ಕಾಯಿದೆಗೆ ಇಲಾಖೆಯೇ ಕಂಟಕ
ಕಂದಾಯ ಇಲಾಖೆ ನಿಧಾನ ದ್ರೋಹ: ಭೂ ವಂಚಿತ ೩ ಲಕ್ಷ ಕುಟುಂಬ: ಸಚಿವರ ಜಾಣ ಮೌನ
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ಬಡ ದಲಿತರ ಬದುಕಿಗೆ ಆಧಾರವಾದ ಪಿಟಿಸಿಎಲ್ ತಿದ್ದುಪಡಿ ಕಾಯಿದೆಗೆ ರಾಜ್ಯ ಸರಕಾರದ ಕಂದಾಯ ಇಲಾಖೆಯೇ ಕಂಟಕವಾಗಿದೆ. ೩ ಲಕ್ಷಕ್ಕೂ ಅಧಿಕ ಕುಟುಂಬಗಳು ಸುಮಾರು ೫ಲಕ್ಷ ಎಕರೆಗೂ ಹೆಚ್ಚು ಭೂಮಿ ಕಳೆದುಕೊಳ್ಳುವ ಅಪಾಯ ತಪ್ಪಿಸಲು ಕಾಯಿದೆಗೆ ತಿದ್ದುಪಡಿ ತರಲು ಸರಕಾರ ಒಪ್ಪಿದರೂ ಇಲಾಖೆ ಒಪ್ಪಿಗೆ ನೀಡುತ್ತಿಲ್ಲ.
ಇದರೊಂದಿಗೆ ಪರಿಶಿಷ್ಟಜಾತಿ, ವರ್ಗಗಳ ಭೂಮಿ ಖರೀದಿಗೆ ಸಂಬಂಧಿಸಿದ ಪಿಟಿಸಿಎಲ್ ತಿದ್ದುಪಡಿ ಕಾಯ್ದೆ (ಎಸ್ಸಿ ಎಸ್ಟಿ ಭೂ ಪರಭಾರೆ ನಿಷೇಧ ಕಾಯ್ದೆ) ವಿಚಾರವಾಗಿ ದೇವರು ಕೊಟ್ಟರೂ ಪೂಜಾರಿ ಕೊಡುವುದಿಲ್ಲ ಎನ್ನುವ ಸಮಸ್ಯೆ ಎದುರಾಗಿದೆ. ಅಂದರೆ ಪಿಟಿಸಿಎಲ್ ಕಾಯಿದೆಗೆ ವಿರುದ್ಧವಾಗಿ ಭೂಮಿ ಪರಭಾರೆ ಮಾಡಿರುವುದನ್ನು ಪ್ರಶ್ನಿಸಿ ಕೇಸು ದಾಖಲಿಸಲು ಸರಕಾರ ಕಂದಾಯ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಕಾಲಮಿತಿ ಹೇರುತ್ತಿzರೆ. ಇದಕ್ಕೆ ಅವರು ಸುಪ್ರೀಂ ಕೋರ್ಟ್‌ನ ತೀರ್ಪೊಂದನ್ನು ಉಲ್ಲೇಖಿಸುತ್ತಿದ್ದಾರೆ.
ಆದರೆ ಇದು ದಲಿತರ ಭೂಮಿ ರಕ್ಷಿಸುವ ವಿಶೇಷ ಕಾಯ್ದೆಯಾದ ಕಾರಣ ಅಕ್ರಮಗಳನ್ನು ಪ್ರಶ್ನಿಸಲು ಕಾಲಮಿತಿ ಅಗತ್ಯವಿಲ್ಲ ಎಂದು ನ್ಯಾಯಾಲಯಗಳ ತೀರ್ಪುಗಳೇ ಹೇಳಿವೆ ಎಂದು ಎಂದು ಹೋರಾಟಗಾರರು ವಾದಿಸಿದ್ದಾರೆ. ಅಷ್ಟೇ ಅಲ್ಲ. ಸತತ ಹೋರಾಟ ನಡೆಸುತ್ತ, ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರ ಮನೆಗಳಿಗೆ ಮುತ್ತಿಗೆಯನ್ನೂ ಹಾಕಿ ಪ್ರತಿಭಟಿಸುತ್ತಿದ್ದಾರೆ.
ಇದರಿಂದ ಒತ್ತಡಕ್ಕೆ ಮಣಿದ ಮುಖ್ಯಮಂತ್ರಿ ಅವರು ಕಾನೂನು ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳ ಸಭೆ ಕಾಯಿದೆ ತಿದ್ದು ಪಡಿಗೆ ನಿರ್ಧರಿಸಿದ್ದಾರೆ. ಇದಕ್ಕೆ ಸಮ್ಮತಿಸಿದ ಕಾನೂನು ಇಲಾಖೆ, ಕಾಯಿದೆಗೆ ಅಗತ್ಯ ತಿದ್ದುಪಡಿ ತರುವಂತೆ ಸಲಹೆಯನ್ನೂ ನೀಡಿದೆ.
೫ ಲಕ್ಷ ಎಕರೆ ವಂಚನೆರಾಜ್ಯದಲ್ಲಿ ಈತನಕ ೯೦೦೦ಕ್ಕೂ ಅಧಿಕ ಪಿಟಿಸಿಎಲ್ ಕಾಯಿದೆ ಅಡಿ ಸಲ್ಲಿಸಿರುವ ಕೇಸ್‌ಗಳನ್ನು ಕಾಲಮಿತಿಯೊಳಗೆ ಪ್ರಶ್ನೆ ಮಾಡಿಲ್ಲ ಎಂದು ವಜಾ ಮಾಡಲಾಗಿದೆ. ಇದೇ ರೀತಿ ಸುಮಾರು ೧೪ ಸಾವಿರಕ್ಕೂ ಹೆಚ್ಚು ಕೇಸುಗಳು ಇತ್ಯರ್ಥವಾಗದೆ ಬಾಕಿಉಳಿದುಕೊಂಡಿವೆ. ಹೀಗಾಗಿ ರಾಜ್ಯದಲ್ಲಿ ಸುಮಾರು ಒಟ್ಟಾರೆ ೨೩,೦೦೦ಕ್ಕೂ ಹೆಚ್ಚು ಪ್ರಕರಣಗಳಲ್ಲಿ ೨.೫೦ ಲಕ್ಷಕ್ಕೂ ಅಧಿಕ ಕುಟುಂಬಗಳು ಸುಮಾರು ೫ ಲಕ್ಷ ಎಕರೆಗಳಿಗೂ ಹೆಚ್ಚಿನ ಭೂಮಿ ಕಳೆದುಕೊಳ್ಳುತ್ತಿದ್ದಾರೆ.
ಅದರಲ್ಲೂ ಬೆಂಗಳೂರು ಒಂದರಲ್ಲಿ ತಲಾ ಎರಡು ಎಕರೆ ಜಮೀನು ಹೊಂದಿರುವ ೩೦೦೦ಕ್ಕೂ ಹೆಚ್ಚು ಕುಟುಂಬಗಳು ಸುಮಾರು ೫೦೦೦ ಎಕರೆಗೂ ಅಧಿಕ ಜಮೀನು ಕಳೆದುಕೊಳ್ಳುತ್ತಿದ್ದಾರೆ. ಈ ಬಗ್ಗೆ ವಿಧಾನಮಂಡಲ ಎಸ್ಸಿಎಸ್ಟಿ ಕಲ್ಯಾಣ ಸಮಿತಿಸಭೆ ಯಲ್ಲೂ ಗಂಭೀರ ಚರ್ಚೆಗಳು ನಡೆದಿವೆ.
***
ಪಿಟಿಸಿಎಲ್ ಕಾಯಿದೆ ತಿದ್ದುಪಡಿಗೆ ಕಾನೂನು ಇಲಾಖೆ ಸಹಮತ ವ್ಯಕ್ತಪಡಿಸಿದೆ. ಇದು ಕಂದಾಯ ಇಲಾಖೆ ಪರಿಶೀಲನೆಯಲ್ಲಿದ್ದು,ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಸುತ್ತೇವೆ.– ಎನ್. ಮಹೇಶ್ ಬಿಜೆಪಿ ಶಾಸಕ
ಪಿಟಿಸಿಎಲ್ ತಿದ್ದುಪಡಿ ಕಾಯಿದೆ ಕುರಿತು ಸರಕಾರ ಕೂಡಲೇ ಸುಗ್ರೀವಾ ತರಬೇಕು. ರದ್ದಾಗಿರುವ ಕೇಸುಗಳನ್ನು ಮರು ಪರಿಶೀಲಿಸಿ ಭೂಮಿ ಕಳೆದುಕೊಂಡವರಿಗೆ ಮರು ಮಂಜೂರಾತಿ ಮಾಡಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ಮುಂದುವರಿಯಲಿದೆ.– ಮಾವಳ್ಳಿ ಶಂಕರ್ ದಲಿತ ಪರ ಹಿರಿಯ ಹೋರಾಟಗಾರ
***ಆದರೆ ಇದಕ್ಕೆ ಸಂಬಂಧಿಸಿದ ಕಡತ ಇನ್ನೂ ಕಂದಾಯ ಇಲಾಖೆಯ ಕೊಳೆಯುತ್ತಿದ್ದು, ಸಚಿವ ಅಶೋಕ್ ಸ್ಪಷ್ಟ ನಿರ್ಧಾರ ಕೈಗೊಳ್ಳದೆ ವಿಳಂಬ ದ್ರೋಹ ಮಾಡುತ್ತಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದ್ದಾರೆ. ಇದರಿಂದ ಸಾವಿರಾರು ದಲಿತ ಕುಟುಂಬಗಳ ಜಮೀನುಗಳು ಬಲಾಢ್ಯರ ಪಾಲಾಗುವಂತೆ ಮಾಡುತ್ತಿದ್ದಾರೆ ಎಂದು ಅವರು ದೂರಿದ್ದಾರೆ.
ಏನಿದು ಕಾಯಿದೆ, ಏಕೆ ವಿವಾದ ?:೧೯೭೮ರಲ್ಲಿ ಡಿ. ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಭೂಮಿ ರಕ್ಷಣೆಗಾಗಿ ಎಸ್ಸಿ ಎಸ್ಟಿ ಭೂ ಪರಭಾರೆ ನಿಷೇಧ ಕಾಯಿದೆ ಜಾರಿಗೊಳಿಸಲಾಗಿತ್ತು. ಇದರನ್ವಯ ಭೂ ಮಂಜೂರಾತಿ ಪಡೆದಿದ್ದ ದಲಿತರಿಂದ ಭೂಮಿ ಖರೀದಿಸಿದರೆ ಅಪರಾಧ. ಹಾಗೊಂದು ವೇಳೆ ಭೂಮಿ ಹೊರಬಾರೆ ಮಾಡಬೇಕಾದರೆ ಅನೇಕ ಶರತ್ತುಗಳನ್ನು ಪಾಲಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಕಾಯಿದೆ ಉಲ್ಲಂಘನೆಯಾದರೆ ಅದನ್ನುಯಾವುದೇ ಸಂದರ್ಭದಲ್ಲೂ ಕೋರ್ಟ್‌ನಲ್ಲಿ ಪ್ರಶ್ನಿಸಬಹುದು.
ಇದನ್ನು ೧೯೮೪ರಲ್ಲಿ ಮಂಚೇಗೌಡ ಮತ್ತು ರಾಜ್ಯ ಸರಕಾರದ ನಡುವಿನ ಪ್ರಕರಣದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದತೀರ್ಪಿನಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹಾಗೆಯೇ ಈ ಬಗ್ಗೆ ಕೇಸು ದಾಖಲಿಸಲು ಯಾವುದೇ ಕಾಲಮಿತಿ ಹೇರುವಂತಿಲ್ಲ ಎಂದು ಕೂಡ ಕೋರ್ಟ್ ಹೇಳಿತ್ತು. ಇದು ೨೦೧೭ರವರೆಗೂ ಸರಿಯಾಗಿ ಪಾಲನೆಯಾಗಿತ್ತು. ಆದರೆ ನಂತರ ನೆಕ್ಕಂಟಿ ರಾಜಲಕ್ಷ್ಮೀ ಮತ್ತು ಕರ್ನಾಟಕ ಸರಕಾರದ ನಡುವಿನ ಕೇಸ್ ನಲ್ಲಿ ಸುಪ್ರೀಂ ಕೋರ್ಟ್‌ನ ಏಕ ಸದಸ್ಯ ಪೀಠ ಈ ಬಗ್ಗೆ ಕೇಸು ದಾಖಲಿಸಲು ಕಾಲಮಿತಿ ಹೇರಿದೆ.
ಅಂದರೆ ಇಂತಿಷ್ಟೇ ವರ್ಷಗಳ ಒಳಗೆ ಕಾಯಿದೆ ಉಲ್ಲಂಘನೆ ಪ್ರಶ್ನಿಸಬೇಕೆಂದಿದೆ. ಕಾಯಿದೆಯ ಸೆ.೧೧ರ ಪ್ರಕಾರ ಕಾಲಮಿತಿ ಇಲ್ಲದ ಕಾರಣ ಸರಕಾರ ಈ ಬಗ್ಗೆ ಕೋರ್ಟ್‌ನಲ್ಲಿ ಮರು ಪರಿಶೀಲನಾ ಅರ್ಜಿ ಸಲ್ಲಿಸಬೇಕಿತ್ತು. ಆದರೆ ಆ ನಿಟ್ಟಿನಲ್ಲಿ ಯಾವುದೇ ಪ್ರಯತ್ನ ವನ್ನೇ ಮಾಡದೆ ಜಾಣ ಮೌನ ವಹಿಸಿತ್ತು. ಹೀಗಾಗಿ ಕಾಯಿದೆ ಉಲ್ಲಂಘನೆಗೆ ನಿಗದಿಯಾಗಿರುವ ಕಾಲಮಿತಿ ತೆರವುಗೊಳಿಸಲು ತಿದ್ದಪಡಿ ತರಬೇಕಿದೆ.