ರಾಜ್ಯದಲ್ಲಿ ಅಕ್ಕಿ ಉಚಿತ, ಬಿಪಿಎಲ್‌ ಕಾರ್ಡ್‌ ಸ್ಥಗಿತ
ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿ, ಕಾರ್ಡ್ ಮಾತ್ರ ಕೇಳಬೇಡಿ
3.11 ಲಕ್ಷ ಅರ್ಜಿದಾರರಿಗೆ ಇನ್ನೂ ಕಾರ್ಡ್ ಸಿಕ್ಕಿಲ್ಲ
ಶಿವಕುಮಾರ್ ಬೆಳ್ಳಿತಟ್ಟೆ ಬೆಂಗಳೂರು
ರಾಜ್ಯದಲ್ಲಿ ಜನತೆಗೆ ಅನ್ನಭಾಗ್ಯವಿರಲಿ ಬಿಪಿಎಲ್ ಕಾರ್ಡ್ ಭಾಗ್ಯ ಕೂಡ ಲಭಿಸುತ್ತಿಲ್ಲ. ಕಳೆದೊಂದು ವರ್ಷದಿಂದ ಪಡಿತರ ಚೀಟಿ ವ್ಯವಸ್ಥೆಯ ಪರಿಸ್ಥಿತಿ ಹೇಗಿದೆ ಎಂದರೆ ಹೊಸ ಕಾರ್ಡಿಗೆ ಅರ್ಜಿ ಸಲ್ಲಿಸಬಹುದು. ಆದರೆ ಕಾರ್ಡ್ ಮಾತ್ರ ಕೇಳಬೇಡಿ ಎನ್ನುವಂತಾ ಗಿದೆ.
ಏಕೆಂದರೆ ರಾಜ್ಯದಲ್ಲಿ ಈತನಕ 3.11 ಲಕ್ಷ ಅರ್ಜಿದಾರರಿಗೆ ಸರಕಾರ ಇನ್ನು ಕಾರ್ಡ್‌ಗಳನ್ನೇ ವಿತರಿಸಿಲ್ಲ. ಪರಿಣಾಮ ಬಡವರು ಮತ್ತು ಕೂಲಿಕಾರರು ಸರಕಾರದ ಅನೇಕ ಸೌಲಭ್ಯ ಗಳನ್ನು ಪಡೆಯಲು ಬಿಪಿಎಲ್ ಕಾರ್ಡ್ ಇಲ್ಲದೆ ವಂಚಿತರಾಗುತ್ತಿದ್ದಾರೆ. ಇದೆಲ್ಲ ಕ್ಕಿಂತ ಮುಖ್ಯವಾಗಿ ಉಚಿತ ಚಿಕಿತ್ಸೆಗಾಗಿ ಅತ್ಯಗತ್ಯವಾಗಿರುವ ಬಿಪಿಎಲ್ ಕಾರ್ಡ್ ಇಲ್ಲದೆ ಖಾಸಗಿ ಆಸ್ಪತ್ರೆಗಳಲ್ಲಿ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ಪಡೆಯಲು ಕೂಡ ಜನತೆ ಪರದಾಡು ವಂತಾಗಿದೆ.
ಈ ಮಧ್ಯೆ, ಇತ್ತೀಚೆಗೆ ಬೀದಿ ವ್ಯಾಪಾರಿಗಳು ಪಡೆದಿದ್ದ ಬಿಪಿಎಲ್ ಕಾರ್ಡ್‌ಗಳನ್ನು ಹುಡುಕಿ ರದ್ದುಗೊಳಿಸಲಾಗುತ್ತಿದೆ. ಅಂದರೆ, ವ್ಯಾಪಾರಕ್ಕಾಗಿ ಬಳಕೆಯಾಗಿರುವ ಮಿನಿ ವ್ಯಾನ್ ಗಳು ಮತ್ತು ಕಾರುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ವ್ಯಾಪಾರ ಮಾಡುತ್ತಿರು ವವರನ್ನು ಬಡವರಲ್ಲ ಎಂದು ಕಾರ್ಡ್ ಗಳನ್ನು ರದ್ದುಪಡಿಸಲಾಗುತ್ತಿದೆ. ಈ ಬಗ್ಗೆ ಇತ್ತೀಚೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆದಿತ್ತಲ್ಲದೆ ಸಚಿವ ಸಂಪುಟ ಸಭೆಯಲ್ಲೂ ಪ್ರಸ್ತಾಪ ವಾಗಿತ್ತು. ಆದರೆ ಈ ಸಮಸ್ಯೆಗಳನ್ನು ಪರಿಹರಿಸಲು ಈಗ ಯಾವುದೇ ಸಚಿವರಿಲ್ಲ.
ಈ ಸಮಸ್ಯೆ ಮುಖ್ಯಮಂತ್ರಿ ಅವರಿಗೆ ಸರಿಯಾಗಿ ತಿಳಿಯುತ್ತಿಲ್ಲ. ಇಲಾಖೆ ಅಧಿಕಾರಿಗಳು ಕೂಡ ವಾಸ್ತವ ತಿಳಿಸುತ್ತಿಲ್ಲ. ಹೀಗಾಗಿ ಸಮಸ್ಯೆಗೆ ಪರಿಹಾರ ಸಿಗದಂತಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ಹೊಸ ಕಾರ್ಡ್ ಕೊಡುತ್ತಿಲ್ಲ ಏಕೆ?:ರಾಜ್ಯ ಸರಕಾರದ ಲೆಕ್ಕದ ಪ್ರಕಾರ, ರಾಜ್ಯದಲ್ಲಿ 1.26ಕೋಟಿ ಬಿಪಿಎಲ್ ಕಾರ್ಡ್‌ಗಳಿವೆ.ಆದರೆ ಕೇಂದ್ರ ಸರಕಾರದ ಲೆಕ್ಕದ ಪ್ರಕಾರ ರಾಜ್ಯದಲ್ಲಿ 1.14 ಕೋಟಿ ಬಿಪಿಎಲ್ ಕಾರ್ಡ್‌ಗಳು ಮಾತ್ರ ಇವೆ. ಇದರ ವ್ಯತ್ಯಾಸ. ಸುಮಾರು 11.75 ಲಕ್ಷ ಕಾರ್ಡ್‌ಗಳು ಹೆಚ್ಚುವರಿಯಾಗಿ ರಾಜ್ಯ ಸರಕಾರದ ಲೆಕ್ಕದಲ್ಲಿ ಕಂಡು ಬರುತ್ತಿವೆ.
ಕೋವಿಡ್ ನಂತರದಲ್ಲಿ ರಾಜ್ಯ ಸರಕಾರ ಒಬ್ಬರಿಗೆ ತಲಾ ೫ ಕೆಜಿಯಂತೆ ಅಕ್ಕಿ ನೀಡುತ್ತಿದ್ದು, ಇದು ಇನ್ನೂ ಮುಂದುವರಿದಿದೆ. ಇದರೊಂದಿಗೆ ಸರಕಾರ ಕೆ.ಜಿ.ಗೆ 3 ರು.ನಂತೆ ಕೇಂದ್ರ ಸರಕಾರದಿಂದ ಖರೀದಿಸಿ ವಿತರಿಸುತ್ತಿದೆ. ಇದರಿಂದ ಸರಕಾರ ಕೇಂದ್ರ ಉಚಿತ ಅಕ್ಕಿ ನೀಡುವಾಗಲೂ ಹೆಚ್ಚುವರಿ ಕಾರ್ಡ್‌ಗಳಿಗೆ ಹೆಚ್ಚುವರಿ ಅಕ್ಕಿ ಖರೀದಿಸಿ ವಿತರಿಸಬೇಕಿದೆ. ಹಾಗೆಯೇ ತನ್ನ ಪಾಲಿನ ಅಕ್ಕಿ ವಿತರಿಸುವಾಗಲೂ ಹೆಚ್ಚುವರಿ ಕಾರ್ಡ್‌ಗಳಿಗೆ ಅಕ್ಕಿ ಖರೀದಿಸಿ ವಿತರಿಸಬೇಕಿದೆ. ಇದಕ್ಕೆ ಸುಮಾರು ೮೨ ಕೋಟಿ ರು. ವೆಚ್ಚ ವಾಗುತ್ತಿದ್ದು, ಇದಕ್ಕೆ ಹಣಕಾಸು ಇಲಾಖೆ ಸಾಕಷ್ಟು ಬಾರಿ ಆಕ್ಷೇಪ ಎತ್ತಿದೆ. ಆದರೂ ಸರಕಾರ ಇದಕ್ಕೊಂದು ಪರಿಹಾರಹುಡುಕುವ ಬದಲು ಹೊಸ ಕಾರ್ಡ್‌ಗಳ ವಿತರಣೆ ನಿಲ್ಲಿಸಿದೆ.
ಹೀಗಾಗಿ 2019-20ನೇ ಸಾಲಿನಲ್ಲಿ ಸಲ್ಲಿಕೆಯಾಗಿರುವ ಸುಮಾರು 10 ಸಾವಿರ ಅರ್ಜಿಗಳು ಇನ್ನೂ ವಿಲೇವಾರಿಯಾಗಿಲ್ಲ. ಹಾಗೆಯೇ 2021ರ ಸಾಲಿನಲ್ಲಿ ಸಲ್ಲಿಕೆಯಾಗಿರುವ ಸುಮಾರು 3.11 ಲಕ್ಷ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಇನ್ನು ಸರಕಾರ ರಾಗಿ, ಜೋಳ, ಬೇಳೆ, ಎಣ್ಣೆ, ಸಕ್ಕರೆ, ತೊಗರಿ ಬೇಳೆ, ಉಪ್ಪು ಎಲ್ಲವನ್ನೂ ಸ್ಥಗಿತಗೊಳಿಸಿ ೭ ವರ್ಷಗಳೇ ಆಗಿದೆ. ಆದರೆ ಕೇರಳ ಮತ್ತು ಆಂಧ್ರ ಪ್ರದೇಶದಲ್ಲಿ ಮಾತ್ರ ಇನ್ನೂ ಮುಂದುವರಿಸಲಾಗುತ್ತಿದೆ.
ಆದರೆ ಅಲ್ಲಿ ಸಂಪೂರ್ಣ ಉಚಿತವಲ್ಲ. ಬದಲಾಗಿ ಅತ್ಯಂತ ಕಡಿಮೆ ದರದಲ್ಲಿ ನೀಡಲಾಗುತ್ತಿದೆ.
***
ಹೊಸ ಕಾರ್ಡ್‌ಗಳನ್ನು ವಿತರಿಸುವ ಬಗ್ಗೆ ನಾವು ಸರಕಾರದ ಅನುಮತಿಗೆ ಕಾಯುತ್ತಿದ್ದೇವೆ. ಸದ್ಯಕ್ಕೆ ಯಾವುದೇ ತೀರ್ಮಾನ ಮಾಡಿಲ್ಲ. ಆದರೆ ಹೊಸ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು.-ಡಾ.ಎಂ.ಟಿ.ರೇಜು ಆಹಾರ ಇಲಾಖೆ ಕಾರ್ಯದರ್ಶಿ