ರಾಷ್ಟ್ರಪತಿಗಳಿಂದ ನಾಳೆ ನಾಡಹಬ್ಬಕ್ಕೆ ಚಾಲನೆ
ಸಿಎಂ, ಕೇಂದ್ರ ಹಾಗೂ ರಾಜ್ಯ ಸಚಿವರ ಉಪಸ್ಥಿತಿ
ದಿನವಿಡೀ ಸರಣಿ ಕಾರ್ಯಕ್ರಮಕ್ಕೆ ಚಾಲನೆ
ಝಗಮಗಿಸುತ್ತಿರುವ ಸಾಂಸ್ಕೃತಿಕ ನಗರಿ
ಕೆ.ಜೆ. ಲೋಕೇಶ್ ಬಾಬು ಮೈಸೂರು
ನಾಡಹಬ್ಬ, ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ನಾಂದಿ ಹಾಡಲು ಕ್ಷಣಗಣನೆ ಆರಂಭವಾಗಿದೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೆ.೨೬ರ ಸೋಮವಾರ ಬೆಳಗ್ಗೆ ೯.೪೫ರಿಂದ ೧೦.೦೫ರೊಳಗೆ ಸಲ್ಲುವ ಶುಭ ವೃಶ್ಚಿಕ ಲಗ್ನದಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ತಾಯಿ ಚಾಮುಂಡೇಶ್ವರಿ ದೇವಿಯ ಅಗ್ರಪೂಜೆಯೊಂದಿಗೆ ೨೦೨೨ನೇ ಸಾಲಿನ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ.
ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್, ಪ್ರಹ್ಲಾದ್ ಜೋಷಿ, ರಾಜೀವ್ ಚಂದ್ರ ಶೇಖರ್, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ, ಭಗವಂತ ಖೂಬಾ,ರಾಜ್ಯ ಸಚಿವರಾದ ಎಸ್.ಟಿ. ಸೋಮಶೇಖರ್, ಸುನೀಲ್ ಕುಮಾರ್, ಆನಂದಸಿಂಗ್, ಶಶಿಕಲಾ ಜೊಲ್ಲೆ ಅಣ್ಣಾ ಸಾಹೇಬ್, ಮೇಯರ್ ಶಿವಕುಮಾರ್, ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಇನ್ನಿತರೆ ಗಣ್ಯರು ನಾಡಹಬ್ಬ ನಾಂದಿ ಕಾರ್ಯಕ್ರಮವನ್ನು ಸಾಕ್ಷೀಕರಿಸ ಲಿದ್ದಾರೆ.
ದಸರಾ ಕಾರ್ಯಕ್ರಮ ಉದ್ಘಾಟನೆ ಬಳಿಕ ವಿವಿಧ ಕಾರ್ಯಕ್ರಮಗಳ ಉದ್ಘಾಟನಾ ಕಾರ್ಯ ವಿವಿಧ ವೇದಿಕೆಯಲ್ಲಿ ಪ್ರತ್ಯೇಕವಾಗಿ ನಡೆಯಲಿವೆ.
ಮೊದಲ ದಿನ: ಸೆ.೨೬, ಸೋಮವಾರ ಮಧ್ಯಾಹ್ನ ೧೨ಕ್ಕೆ ಕೈಗಾರಿಕಾ ವಿಚಾರ ಸಂಕಿರಣವು ವಿಜ್ಞಾನ ಭವನದಲ್ಲಿ ನಡೆಯಲಿದ್ದು, ಸಚಿವ ಮುರುಗೇಶ್ ಆರ್. ನಿರಾಣಿ ಚಾಲನೆ ನೀಡಲಿದ್ದಾರೆ.
ಮಧ್ಯಾಹ್ನ ೧೨:೩೦ಕ್ಕೆ ಕರ್ನಾಟಕ ಕಲಾಮಂದಿರದಲ್ಲಿ ನಟ ಡಾ.ಶಿವರಾಜ್‌ಕುಮಾರ್ ಅವರು ಚಲನಚಿತ್ರೋತ್ಸವಕ್ಕೆ ಚಾಲನೆ ನೀಡುವರು. ಮಧ್ಯಾಹ್ನ ೧೨:೩೦ಕ್ಕೆ ಕುಪ್ಪಣ್ಣ ಪಾರ್ಕಿನಲ್ಲಿ ಫಲಪುಷ್ಪ ಪ್ರದರ್ಶನವನ್ನು ಸಚಿವ ಮುನಿರತ್ನ ಉದ್ಘಾಟಿಸಲಿದ್ದಾರೆ.
ಮಧ್ಯಾಹ್ನ ೧ ಗಂಟೆಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಆಹಾರ ಮೇಳಕ್ಕೆ ಎಸ್.ಟಿ. ಸೋಮಶೇಖರ್ ಚಾಲನೆನೀಡುವರು. ಮಧ್ಯಾಹ್ನ ೩:೩೦ಕ್ಕೆ ಶ್ರೀ ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ದಸರಾ ಕುಸ್ತಿ ಪಂದ್ಯಾವಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರೆ, ಮಧ್ಯಾಹ್ನ ೩:೩೦ಕ್ಕೆ ದಸರಾ ವಸ್ತು ಪ್ರದರ್ಶನಕ್ಕೆ ಆನಂದ ಸಿಂಗ್ ಚಾಲನೆ ನೀಡಲಿದ್ದಾರೆ.
ಸಂಜೆ ೫ಕ್ಕೆ ಮೈಸೂರು ವಿಶ್ವವಿದ್ಯಾನಿಲಯದ ಓವಲ್ ಮೈದಾನದಲ್ಲಿ ಯೋಗ ದಸರಾಗೆ ಸಚಿವ ಎಸ್.ಟಿ. ಸೋಮಶೇಖರ್ ಚಾಲನೆ ನೀಡಿದರೆ, ಸಂಜೆ ೫:೩೦ಕ್ಕೆ ಭಾರತ ಸ್ವಾತಂತ್ರದ ಅಮೃತ ಮಹೋತ್ಸವದ ಅಂಗವಾಗಿ ಅರಮನೆ ಮೈದಾನದಲ್ಲಿ ಯೋಜಿಸ ಲಾಗಿರುವ ಫಲಪುಷ್ಪ ಪ್ರದರ್ಶನವನ್ನು ಸಚಿವ ಎಸ್.ಟಿ. ಸೋಮಶೇಖರ್ ಉದ್ಘಾಟಿಸುವರು.
ಸಂಜೆ ೫:೩೦ಕ್ಕೆ ಕಲಾಮಂದಿರದಲ್ಲಿ ರಾಜ್ಯಮಟ್ಟದ ಶಿಲ್ಪ ಚಿತ್ರ ಕಲೆ ಪ್ರದರ್ಶನಕ್ಕೆ ಹಾಗೂ ಸಂಜೆ ೬:೩೦ಕ್ಕೆ ಸಯ್ಯಾಜಿರಾವ್ ರಸ್ತೆಯಲ್ಲಿನ ಹಸಿರು ಮಂಟಪದಲ್ಲಿ ವಿದ್ಯುತ್ ದೀಪಾಲಂಕಾರಕ್ಕೆ ಸಚಿವ ವಿ. ಸುನೀಲ್ ಕುಮಾರ್ ಚಾಲನೆ ನೀಡುವರು.