ತಲಕಾವೇರಿಯಲ್ಲಿ ತೀರ್ಥರೂಪಿಣಿಯಾಗಿ ಪ್ರತ್ಯಕ್ಷಳಾದ ಕಾವೇರಿ
ಅನಿಲ್ ಎಚ್.ಟಿ. ತಲಕಾವೇರಿ
ಮಳೆ ಬಂದು ಹೋದ ನಂತರದ ಇಬ್ಬನಿ ಮುಸುಕಿನ ಆಹ್ಲಾದಕರ ವಾತಾವರಣದಲ್ಲಿ ಕೊಡವರ ಕುಲದೇವಿ, ಕನ್ನಡನಾಡಿನ ಭಾಗ್ಯ ನದಿ ಕಾವೇರಿಯು ತನ್ನ ಉಗಮ ಸ್ಥಾನ ಬ್ರಹ್ಮಗಿರಿ ತಪ್ಪಲಿನ ತಲಕಾವೇರಿ ಕ್ಷೇತ್ರದ ಪುಟ್ಟ ಕುಂಡಿಕೆಯಲ್ಲಿ ನಿಗದಿತಮುಹೂರ್ತಕ್ಕಿಂತ ೧ ನಿಮಿಷ ತಡವಾಗಿ ೭ ಗಂಟೆ ೨೨ ನಿಮಿಷಕ್ಕೆ ತೀರ್ಥರೂಪಿಣಿ ಯಾದಳು.
ಕಾವೇರಿ ಪವಿತ್ರ ತೀರ್ಥೋದ್ಭವ ವೀಕ್ಷಿಸಲು ಕೊಡಗು ಜಿಲ್ಲೆ ಮಾತ್ರವಲ್ಲದೇ ರಾಜ್ಯದ ವಿವಿಧೆಡೆಗಳಿಂದಲೂ ಸಾವಿರಾರು ಭಕ್ತರು ಆಗಮಿಸಿದ್ದರು. ಕೋವಿಡ್ ಕಾರಣದಿಂದಾಗಿ ಕಳೆದ ಎರಡು ವರ್ಷಗಳಿಂದ ಕಡಮೆ ಭಕ್ತರ ಸಮ್ಮುಖದಲ್ಲಿ ನಡೆಯುತ್ತಿದ್ದ ತೀರ್ಥೋ ದ್ಭವ ಈ ವರ್ಷ ಮತ್ತೆ ವೈಭವ ಮರಳಿ ಪಡೆದುಕೊಂಡಂತೆ ಸಾವಿರಾರು ಭಕ್ತಾದಿಗಳಿಂದ ಕಾವೇರಿ ಕ್ಷೇತ್ರ ಕಿಕ್ಕಿರಿದ ನೋಟಕ್ಕೆ ಕಾರಣವಾಯಿತು.
ಸೋಮವಾರ ಸಂಜೆ ಮೂಡಣದಲ್ಲಿ ಸೂರ್ಯ ಮರೆಯಾಗುತ್ತಿರುವಂತೆಯೇ ತಲಕಾವೇರಿಯಲ್ಲಿ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಲೇ ಹೋಯಿತು. ಕಾವೇರಿ ಕುಂಡಿಕೆ ಬಳಿ ಪ್ರಧಾನ ಅರ್ಚಕ ಗುರುರಾಜ ಆಚಾರ್ ನೇತೃತ್ವದ ೧೮ ಅರ್ಚಕರು ೫ ಗಂಟೆಯಿಂದಲೇ ಪೂಜೆ ಪ್ರಾರಂಭಿಸಿದ್ದರು. ವೇದ ಮಂತ್ರ ಘೋಷಗಳ ಅನುರಣನದ ನಡುವೆ ಬ್ರಹ್ಮಗಿರಿಯ ತಪ್ಪಲಿನ ತಲಕಾವೇರಿಯ ಪವಿತ್ರ ಬ್ರಹ್ಮಕುಂಡಿಕೆಯಿಂದ ಕಾವೇರಿ ಮಾತೆ ೭ ಗಂಟೆ ೨೨ ನಿಮಿಷಕ್ಕೆ ಮೇಷ ಲಗ್ನದಲ್ಲಿ ಆವಿರ್ಭವಿಸಿದಳು.
ತನ್ನನ್ನು ನಂಬಿದ ಭಕ್ತ ಜನಸಾಗರಕ್ಕೆ ದರ್ಶನ ನೀಡಿದಳು. ಸಹಸ್ರಾರು ಭಕ್ತಾದಿಗಳ ಜೈ ಜೈ ಮಾತಾ ಕಾವೇರಿ ಮಾತಾ ಉದ್ಘೋಷ ಗಳ ನಡುವೆ ಕಾವೇರಿ ಮಾತೆಗೆ ಮಹಾ ಮಂಗಳಾರತಿ ನೆರವೇರಿಸುತ್ತಿರುವಂತೆಯೆ ಜೀವನದಿ ಕಾವೇರಿ ತೀರ್ಥ ರೂಪಿಣಿಯಾಗಿ ಪವಿತ್ರ ಕುಂಡಿಕೆಯಿಂದ ಹೊರಹೊಮ್ಮಿದಳು.
ತಲಕಾವೇರಿ ಕ್ಷೇತ್ರದಲ್ಲಿ ಮಾತೆ ಕಾವೇರಿಯು ತೀರ್ಥ ರೂಪಿಣಿಯಾಗಿ ಆವಿರ್ಭ ವಿಸುವ ಅಪೂರ್ವ ಕ್ಷಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಸಿ.ನಾಗೇಶ್, ಶಾಸಕರಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚುರಂಜನ್, ಎಂ.ಪಿ.ಸುಜಾ ಕುಶಾಲಪ್ಪ, ಎಸ್. ಎಲ್.ಭೋಜೇಗೌಡ, ಸಂಸದರಾದ ಪ್ರತಾಪ್ ಸಿಂಹ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷರಾದ ನಾಪಂಡ ರವಿ ಕಾಳಪ್ಪ, ಭಾಗಮಂಡಲ ಗ್ರಾ.ಪಂ. ಅಧ್ಯಕ್ಷರಾದ ಪೆಮಿತ, ಉಪಾಧ್ಯಕ್ಷ ಹೊಸೂರು ಸತೀಶ್ ಕುಮಾರ್, ಕೊಡಗು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್, ಜಿ.ಪಂ. ಸಿಇಒ ಭಂವರ್ ಸಿಂಗ್ ಮೀನಾ, ಉಪವಿಭಾಗಾಧಿಕಾರಿ ಡಾ.ಯತೀಶ್ ಉಲ್ಲಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎ.ಅಯ್ಯಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ, ಭಗಂಡೇಶ್ವರ ತಲಕಾವೇರಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಂ. ಕೃಷ್ಣಪ್ಪ ಸಾಕ್ಷಿಯಾಗಿದ್ದರು.
ತಲಕಾವೇರಿಗೆ ಭಂಡಾರ:ಸಂಪ್ರದಾಯದಂತೆ ತೀರ್ಥೋದ್ಭವಕ್ಕೆ ಒಂದು ಗಂಟೆ ಮುಂಚಿತವಾಗಿ ಭಾಗಮಂಡಲದ ಶ್ರೀ ಭಗಂಡೇಶ್ವರ ಸನ್ನಿಧಿಯ ತಕ್ಕಮುಖ್ಯಸ್ಥ ಬಳ್ಳಡ್ಕ ಅಪ್ಪಾಜಿ ಮತ್ತು ದೇವಸ್ಥಾನದ ಪ್ರಮುಖರು ಮಂಗಳವಾದ್ಯಗಳೊಂದಿಗೆ, ತಲಕಾವೇರಿಯ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ ಅವರೊಂದಿಗೆ ಭಂಡಾರದೊಂದಿಗೆ ತಲಕಾವೇರಿಗೆ ಆಗಮಿಸಿದರು.
ತೀರ್ಥೋದ್ಭವದ ಬಳಿಕ ಬೆಳ್ಳಿಯ ತಂಬಿಗೆಯಲ್ಲಿ ಕಾವೇರಿಯ ತೀರ್ಥವನ್ನು ಕುಂಡಿಕೆಯಿಂದ ಪ್ರಥಮವಾಗಿ ಸಂಗ್ರಹಿಸಿ ಭಾಗ ಮಂಡಲದ ಶ್ರೀ ಭಗಂಡೇಶ್ವರನಿಗೆ ಅಭಿಷೇಕ ಮಾಡಲು ಕೊಂಡೊಯ್ದ ವಿದ್ಯಮಾನಗಳು ಪ್ರಮುಖವಾಗಿತ್ತು. ಸ್ನಾನಕೊಳದ ಬಳಿ ನೂಕುನುಗ್ಗಲು ತಡೆಯಲು ಪೊಲೀಸ್ ಇಲಾಖೆ ಭದ್ರವಾದ ಬ್ಯಾರಿಕೇಡ್ ವ್ಯವಸ್ಥೆ ಮಾಡಿತ್ತು. ಹೀಗಿದ್ದೂ ಭಕ್ತಾದಿಗಳು ತೀರ್ಥ ಕೊಳಕ್ಕೆ ಧುಮುಕಿ ಕಾವೇರಿ ಮಾತಾಕೀ ಜೈ ಘೋಷಣೆಗಳೊಂದಿಗೆ ತೀರ್ಥೋದ್ಭವದ ಕ್ಷಣಗಳಿಗೆ ಸಾಕ್ಷಿಯಾದರು. ಬಳಿಕ ತೀರ್ಥ ಸ್ವೀಕರಿಸಿ ಕೊಡಗಳಲ್ಲಿ, ಪ್ಲಾಸ್ಟಿಕ್ ಕ್ಯಾನ್‌ಗಳೊಂದಿಗೆ ತೀರ್ಥವನ್ನು ತುಂಬಿಕೊಂಡು ತೆರಳಿದರು.
ಅನ್ನದಾನ:ಕೊಡಗು ಏಕೀಕರಣ ರಂಗ ಸೇರಿದಂತೆ ವಿವಿಧ ಸಂಸ್ಥೆಗಳಿಂದ ಅನ್ನದಾನ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಬೆಳಗ್ಗಿನಿಂದಲೇ ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಅನ್ನ ಸಂತರ್ಪಣೆಯಲ್ಲಿ ಪಾಲ್ಗೊಂಡಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮ:ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಪೊನ್ನಂಪೇಟೆಯ ನಿಸರ್ಗ ಕಲಾತಂಡದ ಗಾಯಕ, ಗಾಯಕಿ ಯರಿಂದ ಭಕ್ತಿಗೀತೆ ಗಾಯನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ತ್ರಿವೇಣಿಯಲ್ಲಿ ಪುಣ್ಯ ಸ್ನಾನ
ತೀರ್ಥೋದ್ಭವದ ಹಿನ್ನೆಲೆ ಸೋಮವಾರ ಬೆಳಗ್ಗಿನಿಂದಲೇ ಜಿಲ್ಲೆ ಮತ್ತು ಹೊರ ಜಿಲ್ಲೆಗಳಿಂದ ಭಕ್ತಾದಿಗಳು ನೂರಾರು ಸಂಖ್ಯೆ ಯಲ್ಲಿ ಕ್ಷೇತ್ರಕ್ಕೆ ಆಗಮಿಸಿದರು. ಭಕ್ತರು ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ, ಭಗಂಡೇಶ್ವರನಿಗೆ ಪೂಜೆ ಸಲ್ಲಿಸಿ ತಲಕಾವೇರಿಯತ್ತ ತೆರಳುತ್ತಿದ್ದುದು ಕಂಡು ಬಂತು. ಸಂಗಮದ ದಡದಲ್ಲಿ ಭಕ್ತಾದಿಗಳು ತಮ್ಮ ಹಿರಿಯರಿಗೆ ಪಿಂಡ ಪ್ರದಾನ, ಕೇಶ ಮುಂಡನ ಕಾರ್ಯಕ್ಕೂ ಅಗತ್ಯ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.