ಕಾಳು ಹಾಕಲು ಹೋದರೆ ಬಾಳು ಹಾಳು
ಕ್ಲಬ್‌ಹೌಸ್‌ ಸಂವಾದ 214
ವಿಶ್ವವಾಣಿ ಕ್ಲಬ್‌ಹೌಸ್‌ನಲ್ಲಿ ಪರಿಶ್ರಮ ನೀಟ್ ಅಕಾಡಮಿ ಸಂಸ್ಥಾಪಕ ಪ್ರದೀಪ್ ಈಶ್ವರ್ ಸಲಹೆ
ಬೆಂಗಳೂರು:ಪ್ರಪಂಚವೇ ಪ್ರೀತಿಯ ದಿನದ ಆಚರಣೆ ಮಾಡುತ್ತದೆ. ಆದರೆ, ಯುವ ಪ್ರೇಮಿಗಳು ಪ್ರೀತಿಯಲ್ಲಿ ಕಳೆದು ಹೋಗಿ ಜೀವನದ ದಾರಿಯನ್ನೇ ಮರೆತುಬಿಡುತ್ತಾರೆ. ಇದರ ನಡುವೆಯೂ ಬಹುತೇಕ ಎಲ್ಲರೂ ತಮ್ಮ ಮೊದಲ ಪ್ರೀತಿಯಲ್ಲಿ ಗೆದ್ದಿದ್ದಾರೆ. ಅದುವೇ ತಾಯಿಯ ಪ್ರೀತಿ. ಇದು ಪರಿಶ್ರಮ ನೀಟ್ ಸಂಸ್ಥೆ ಸಂಸ್ಥಾಪಕ ಹಾಗೂ ಮುಖ್ಯಸ್ಥ ಪ್ರದೀಪ್ ಅವರು ಪ್ರೀತಿಯ ಬಗ್ಗೆ ಹೇಳುವ ಮಾತು.
ಪ್ರೇಮಿಗಳ ದಿನದ ಅಂಗವಾಗಿ ವಿಶ್ವವಾಣಿ ಕ್ಲಬ್ ಹೌಸ್ ಏರ್ಪಡಿಸಿದ್ದ ‘ಪ್ರೀತಿ ಓಕೆ ಆದರೆ ಬುದುಕಿನ ಬಗ್ಗೆ ಜೋಕೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಅನೇಕರು ಟ್ರೂ ಲವ್ ಎಂದರೇನು ಎಂದು ಪ್ರಶ್ನಿಸುತ್ತಾರೆ. ಪದೇ ಪದೆ ಪ್ರೀತಿಸಬೇಕು ಮತ್ತು ಒಬ್ಬರನ್ನೇ ಪ್ರೀತಿಸಬೇಕು. ಅದುವೇ ನಿಜ ವಾದ ಪ್ರೀತಿ. ಆದರೆ, ಯಾವ ಸಮಯ ಮತ್ತು ಯಾವ ವಯಸ್ಸಿನಲ್ಲಿ ಪ್ರೀತಿ ಮಾಡಬೇಕು ಎಂಬುದನ್ನು ಯೋಜಿಸಬೇಕು.
ಯುವಕ- ಯುವತಿಯರಿಗೆ ಪ್ರೀತಿ ಮಾಡುವುದಕ್ಕೆ ಒಂದು ವಯಸ್ಸು ಇದೆ. ಅದರ ಜತೆಗೆ ಅವರ ಜೀವನವೂ ಒಂದು ಹಂತಕ್ಕೆ ಬಂದಿರುತ್ತದೆ. ಹೀಗಾಗಿ, ಪ್ರಾಯದಲ್ಲಿದ್ದಾಗ ಕಾಳು ಹಾಕಲು ಹೋದರೆ, ಬಾಳು ಹಾಳಾಗುತ್ತದೆ. ಯಶಸ್ಸು ಹೋಳಾಗುತ್ತದೆ. ಜೀವನ ಗೋಳಾಗುತ್ತದೆ. ಲೈಫ್ ರೋಲ್ ಆಗುತ್ತದೆ. ಆದ್ದರಿಂದ ಪ್ರೀತಿಯನ್ನು ಯಾವ ವಯಸ್ಸಿನಲ್ಲಿ, ಯಾವ ಹಂತದಲ್ಲಿ ಮಾಡಬೇಕು ಎಂಬ ಸ್ಪಷ್ಟತೆ ಯುವಕ-ಯುವತಿಯರಲ್ಲಿರಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಫಸ್ಟ್ ಲವ್ ಅಂದರೇನು?:ಇನ್ನು ಕೆಲವರು ಫಸ್ಟ್ ಲವ್ ಹೇಗಿರುತ್ತದೆ ಎಂದು ಕೇಳುತ್ತಾರೆ. ಪ್ರತಿಕ್ಷಣ ಯುಗ ದಂತೆ, ಪ್ರತಿ ನಿಮಿಷ ವರ್ಷದಂತೆ, ಏಕಾಂತ ಶಾಪದಂತೆ ಅನ್ನಿಸಿದರೆ, ಒಂಟಿತನ ಮರುಭೂಮಿಯ ರೀತಿ ಯಾದರೆ, ಯೋಚನೆಗಳು ಡಿಸ್ಕೋ ಡ್ಯಾನ್ಸ್ ಮಾಡಿದರೆ, ಭಾವನೆಗಳು ಆಕ್ಸಿಡೆಂಟ್ ಆದರೆ, ಕ್ಲ್ಯಾರಿಟಿಗಿಂತ ಕನ್ ಫ್ಯೂಷನ್ ಹೆಚ್ಚಾದರೆ, ಸೊಮಾಲಿಯ ಸಮುದ್ರ ಕಳ್ಳರಿಗಿಂತಲೂ ತೀವ್ರವಾಗಿ ನೆನಪು ಕಾಡಿದರೆ, ಮೌನಕ್ಕೂ ವಾರ್ನಿಂಗ್ ಕೊಟ್ಟ ಹಾಗಿದ್ದರೆ ಅದನ್ನು ಫಸ್ಟ್ ಲವ್ ಎಂದು ಕರೆಯುತ್ತಾರೆ ಎಂದರು.
ಇಷ್ಟಪಟ್ಟವರನ್ನು ಮದುವೆಯಾಗಬೇಕು ಎಂದು ಎಲ್ಲರಿಗೂ ಆಸೆ ಇರುತ್ತದೆ. ಇಂದಿನ ಯುವಪೀಳಿಗೆಯಲ್ಲಿ ಶೇ.95ರಷ್ಟು ಮಂದಿ ಪ್ರೀತಿಯಲ್ಲಿ ವಿಚಲಿತ ರಾಗುತ್ತಾರೆ. ಆದರೆ, ಅದೇ ಮಂದಿ ಕೊನೆಗೆ ಮನೆ ಯಲ್ಲಿ ತೋರಿಸಿದವರನ್ನೇ ಮದುವೆಯಾಗುತ್ತಾರೆ. ಬಹುತೇಕರಲ್ಲಿ ಐ ಲವ್ ಯು ಎಂದು ಹೇಳುವಾಗ ಕಾಣಿಸಿಕೊಳ್ಳುವ ಧೈರ್ಯ ಮದುವೆಯಾಗುತ್ತೇನೆ ಎಂದು ಹೇಳುವಾಗ ಇರುವುದಿಲ್ಲ. ಅದು ಎಕೆ ಎಂದು ಯಾರು ಕೂಡ ಯೋಚನೆಯನ್ನೂ ಮಾಡುವು ದಿಲ್ಲ ಎಂದು ಅಭಿಪ್ರಾಯಪಟ್ಟರು.
ಹುಡುಗಿಯರು ಪ್ರೀತಿಯ ಬಗ್ಗೆ ಕನಸ್ಸಿನ ಮಹಲ್‌ಗಳನ್ನೇ ಕಟ್ಟಿರುತ್ತಾರೆ. ತಾವು ಪ್ರೀತಿಸಿದ ಹುಡುಗನ ಬಗ್ಗೆ ಹುಚ್ಚು ನಂಬಿಕೆ, ಬರವಸೆ ಇಟ್ಟಿರುತ್ತಾರೆ. ಆದರೆ, ಪ್ರೀತಿ ಕೈಕೊಟ್ಟಾಗ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುತ್ತಾರೆ. ಹುಟ್ಟಿನಿಂದ ಅಲ್ಲಿಯವರೆಗೂ ನೋಡಿಕೊಂಡ ಪೋಷಕರ ನಿಜವಾದ ಪ್ರೀತಿಯನ್ನು ನೆನಪೇ ಮಾಡಿಕೊಳ್ಳದೆ, ಕಾಣದ ಪ್ರೀತಿಗೆ ಜೀವವನ್ನೇ ಕಳೆದುಕೊಳ್ಳುತ್ತಿರುವುದು ಶೋಚನೀಯ ಸಂಗತಿ. ಹೀಗಾದಾಗ ಸಾಮಾಜ ನಡೆದು ಕೊಳ್ಳುವ ರೀತಿಯೂ ಬೇಸರ ತರಿಸುತ್ತದೆ. ಹುಡುಗ-ಹುಡುಗಿ ಸತ್ತರೆ ಅದಕ್ಕೆ ಲವ್ ಫೆಲ್ಯೂರ್ ಕಾರಣ ಎಂದು ಹೇಳುತ್ತಾರೆ. ಪೋಷಕರ ಪರಿಸ್ಥಿತಿ ಬಗ್ಗೆ ಯಾರೂ ಯೋಚನೇ ಮಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇಪ್ಪತ್ತು ಇಪ್ಪತ್ತೆರಡರ ವಯಸ್ಸಿಗೆ ಬಂದವರು, ಇಷ್ಟಪಟ್ಟ ಹುಡುಗ ಅಥವಾ ಹುಡುಗಿ ಸಿಗದಿದ್ದರೆ ನಾನು ಬದುಕುವುದಿಲ್ಲ ಎಂದು ಹೇಳುತ್ತಾರೆ. ಜೀವದಲ್ಲಿ ಒಮ್ಮೆಯಾದರೂ ನಿಮ್ಮನ್ನು ಅಷ್ಟು ವರ್ಷ ಕಪಾಡಿಕೊಂಡು, ಸಾಕಿ, ಸಲುಹಿದ ತಂದೆ- ತಾಯಿ ಎಷ್ಟು ನೋವು ಅನುಭವಿಸುತ್ತಾರೆ ಎಂಬುದನ್ನು ಯೋಚಿಸುವುದಿಲ್ಲ. ತಂದೆ- ತಾಯಿಯರ ಕಷ್ಟವನ್ನು ಗೌರವಿಸಿ. ನಿಮ್ಮ ಪ್ರಾಮಾಣಿಕ ಪ್ರೀತಿಯನ್ನು ಗೌರವಿಸಿ.
ಆದರೆ, ತಂದೆ, ತಾಯಿಯರ ಕಣ್ಣಿನಲ್ಲಿ ನೀರು ಹಾಕಿಸಿ ಪಡೆಯುವ ಪ್ರೀತಿ ನಮಗೆ ಬೇಕೇ ಎಂಬುದನ್ನು ಯೋಚಿಸುವ ಮಟ್ಟಕ್ಕೇ ಪ್ರೇಮಿಗಳು ಬುದ್ಧಿಬಳಸಬೇಕು ಎಂದರು. ಪ್ರೀತಿ ಮಾಡುವಾಗ ಎಲ್ಲವೂ ಚೆನ್ನಾಗಿಯೇ ಇರುತ್ತದೆ. ಆದರೆ ಆ ಪ್ರೀತಿಯನ್ನು ಜೀವನದಲ್ಲಿ ಕೊನೆ ಯವರೆಗೆ ಕಾಪಾಡಿಕೊಳ್ಳುವ ದಾರಿ ಬಗ್ಗೆ ಯಾರೂ ಯೋಚನೆ ಮಾಡುವುದಿಲ್ಲ. ಮೊದಲು ನಾವು ಜೀವ ನದಲ್ಲಿ ಭದ್ರವಾಗಿ ನೆಲೆ ನಿಲ್ಲಬೇಕು. ಇಲ್ಲವಾದರೆ ಯಾವ ಪ್ರೀತಿಯೂ ಕೈಹಿಡಿ ಯುವುದಿಲ್ಲ. ಜೀವನದಲ್ಲಿ ಯೋಗ್ಯತೆ ತುಂಬಾ ಮುಖ್ಯ. ಮೊದಲು ಸಂಪಾದನೆ ಕಡೆಗೆ ಗಮನ ಹರಿಸಿ, ಯಶಸ್ಸಿನ ಹಾದಿಯಲ್ಲಿ ನಡೆಯಿರಿ. ಆಗ ಪ್ರೀತಿ ಯನ್ನು ಆ ಯಶಸ್ಸೇ ಆಹ್ವಾನಿಸುತ್ತದೆ ಎಂದು ಹೇಳಿದರು.
***
ಪ್ರದೀಪ್ ಈಶ್ವರ್ ಜೀವನದಲ್ಲಿ ಪ್ರೀತಿಯನ್ನೂ ಮಾಡಿದವರು ಮತ್ತು ಚಂದವಾದ ಬದುಕನ್ನೂ ಕಟ್ಟಿಕೊಂಡವರು. ಜೀವನದಲ್ಲಿ ಗಟ್ಟಿಯಾಗಿ ನೆಲೆ ನಿಂತ ನಂತರ ಮದುವೆಯಾಗುತ್ತೇನೆ ಎಂದು ಸಂಗಾತಿಗೆ ಮಾತು ನೀಡಿ, ಕೊಟ್ಟ ಮಾತಿನಂತೆ ಜೀವನದಲ್ಲಿ ಭದ್ರವಾಗಿ ನೆಲೆನಿಂತು, ಪ್ರೀತಿ ಮತ್ತು ಬದುಕು ಎರಡೂ ಮುಖ್ಯ ಎಂದು ತೊರಿಸಿದ್ದಾರೆ. ಪ್ರೀತಿ ಕೇವಲ ಭಾವನಾತ್ಮಕ ಸಂಗತಿ ಅಲ್ಲ, ಪ್ರೀತಿಯ ನಂತರ ಬದುಕು ಮುಖ್ಯವಾಗುತ್ತದೆ ಎಂಬುದನ್ನುತೋರಿಸಿಕೊಟ್ಟಿದ್ದಾರೆ.-ವಿಶ್ವೇಶ್ವರ ಭಟ್,ವಿಶ್ವವಾಣಿ ದಿನಪತ್ರಿಕೆ ಪ್ರಧಾನ ಸಂಪಾದಕರು
ವ್ಯಾಲೆಂಟೈಂಸ್ ಡೇ ಬಗ್ಗೆ ಕೆಲವರಿಗೆ ಸಮ್ಮತಿ ಇದೆ. ಇನ್ನು ಕೆಲವರಿಗೆ ಅಸಮ್ಮತಿಯೂ ಇದೆ. ಇದೊಂದು ಪಾಶ್ಚಾತ್ಯ ಆಚರಣೆಯ ದಿನವಾದ್ದರಿಂದ ಇದಕ್ಕೆ ನಾವು ಮಹತ್ವ ನೀಡಬಾರದು ಎಂಬ ವದವೂ ಇದೆ. ಆದರೆ, ಎಲ್ಲಾ ವಾದ ವಿವಾದಗಳ ನಡುವೆ ಅಷ್ಟೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಮಿಗಳ ದಿನವನ್ನು ಆಚರಣೆ ಮಾಡುವ ಮತ್ತು ನಂಬುವ ದೊಡ್ಡ ವರ್ಗ ಇದೆ.– ಪ್ರದೀಪ್ ಈಶ್ವರ್ ಪರಿಶ್ರಮ ಸಂಸ್ಥೆ ಸಂಸ್ಥಾಪಕರು
***
ಯುವಕರಿಗೆ ಟಿಪ್ಸ್ ಪ್ರೀತಿಸಿರುವ ಹುಡುಗಿ ಜೀವನದಲ್ಲಿ ಬರುವ ಮೊದಲು ಯಶಸ್ಸು ಮನೆಗೆ ಬರಲಿ.ಇಂದಿನ ಜನರೇಶನ್‌ಗೆ ಟೆಕ್ಸ್ಟ್ ಬುಕ್‌ಗಿಂತ ಫೇಸ್‌ಬುಕ್ ಹತ್ತಿರವಾಗುತ್ತಿದೆ.ಕೆರಿಯರ್ ಗಮನ ನೀಡಿ. ಅದಕ್ಕಿಂತ ದೊಡ್ಡದು ಯಾವುದೂ ಇಲ್ಲ.ನಿಮ್ಮನ್ನು ಕಡಿಮೆ ನೋವು ಮಾಡುವವರೆಂದರೆ ಅದು ಅಪ್ಪ-ಅಮ್ಮ ಮಾತ್ರ.ಮಾರ್ಕ್ ಜುಕರ್‌ಬರ್ಗ್ ತನ್ನ ಪ್ರೇಯಸಿಗಾಗಿ ಕಂಡುಹಿಡಿದಿದ್ದೇ ಫೇಸ್‌ಬುಕ್.ಹುಡುಗಿ ಅಂದುಕೊಂಡಷ್ಟು ಹುಡುಗ ಜಂಟಲ್‌ಮ್ಯಾನ್ ಆಗಿರುವುದಿಲ್ಲ.
***
ಪ್ರೀತಿಯಲ್ಲಿ ಗೆದ್ದವರು ಪ್ರೀತಿಸಿದವರನ್ನು ಮಾತ್ರ ಗೆಲ್ಲುತ್ತಾರೆ. ಆದರೆ, ಪ್ರೀತಿಯಲ್ಲಿ ಸೋತವರು ಜಗತ್ತನ್ನೇ ಗೆಲ್ಲುತ್ತಾರೆ.ಹುಡುಗಿಯನ್ನು ಪ್ರೀತಿಯಲ್ಲಿ ಬೀಳಿಸುವುದು ಹೀರೊಯಿಸಂ ಅಲ್ಲ. ಆ ಹುಡುಗಿ ಇನ್ನೊಬ್ಬ ಹುಡುಗನ ಪ್ರೀತಿಗೆ ಬೀಳದಂತೆ ನೋಡಿಕೊಳ್ಳುವುದು ನಿಜವಾದ ಹೀರೋಯಿಸಂ.ಪ್ರೀತಿಯನ್ನು ದಾಂಪತ್ಯದ ತನಕ ತೆಗೆದುಕೊಂಡು ಹೋಗುವುದು ಸುಲಭವಲ್ಲ. ಹಲವು ತಿರುವುಗಳನ್ನು ಪಡೆದುಕೊಳ್ಳುತ್ತದೆ.ಆರಾಧನೆ ಪ್ರೀತಿ ಮತ್ತು ಆಕರ್ಷಣೆ ಪ್ರೀತಿ ಬೇರೆ ಬೇರೆ.
ಆರಾಧನೆ ಪ್ರೀತಿ ನಂಬಿಕೆ, ಭರವಸೆಗಳ ಮೇಲಿರುತ್ತದೆ.
ಆಕರ್ಷಣೆ ಪ್ರೀತಿಯಲ್ಲಿ ಕೇವಲ ಅಂದುಕೊಂಡದ್ದನ್ನು ಈಡೇರಿಸಿಕೊಳ್ಳುವ ಯೋಜನೆ ಇರುತ್ತದೆ.