ಸಮತೋಲನದ ಬದುಕಿನಿಂದ ಉಲ್ಲಾಸ
ಕ್ಲಬ್‌ಹೌಸ್ – 216
ವಿಶ್ವವಾಣಿ ಕ್ಲಬ್‌ಹೌಸ್ ಕಾರ್ಯಕ್ರಮದಲ್ಲಿ ಹಾಸ್ಯ ಲೇಖಕ ವೈ.ವಿ.ಗುಂಡೂರಾವ್
ಬೆಂಗಳೂರು:ದೈನಂದಿನ ಜೀವನದಲ್ಲಿ ಮೊದಲು ನಾವು ನಮ್ಮನ್ನು ಅರ್ಥ ಮಾಡಿಕೊಳ್ಳಬೇಕು. ಬಳಿಕ ಇತರರನ್ನು ಅರ್ಥ ಮಾಡಿಕೊಳ್ಳಬೇಕು. ಜತೆಗೆಇತರರೂ ನಮ್ಮನ್ನು ಅರ್ಥ ಮಾಡಿಕೊಳ್ಳುವ ಹಾಗೆ ಬದುಕಬೇಕು. ಈ ರೀತಿಯ ಸಮತೋಲನದಲ್ಲಿ ಬದುಕುವುದರಿಂದ ಜೀವನದಲ್ಲಿ ಉತ್ಸಾಹ, ಉತ್ಸಾಹದೊಂದಿಗೆ ಇರಲು ಸಾಧ್ಯ ಎಂದು ಹಾಸ್ಯ ಲೇಖಕ ವೈ.ವಿ.ಗುಂಡೂರಾವ್ ಹೇಳಿದ್ದಾರೆ.
ವಿಶ್ವವಾಣಿ ಕ್ಲಬ್ ಹೌಸ್ ಎರ್ಪಡಿಸಿದ್ದ ಉತ್ಸಾಹ, ಉಲ್ಲಾಸವೇ ಜೀವನ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿ, ಅರಿವಿನ ಉಪನ್ಯಾಸ ನೀಡಿದ ಅವರು, ಆಟೋದಲ್ಲಿರುವ ಮೂರು ಚಕ್ರಗಳಲ್ಲಿ ಹೇಗೆ ಮುಂದಿನ ಚಕ್ರ ಮುಖ್ಯವೋ ಹಾಗೆಯೇ ನಮ್ಮ ಜೀವನದಲ್ಲೂ ಮೂರು ಚಕ್ರಗಳಿವೆ. ಅದರಲ್ಲಿ ಒಂದು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದು.
ಎರಡನೆಯದ್ದು ನಾವು ಬೇರೆಯವರನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಮೂರನೆಯದ್ದು ಬೇರೆಯವರು ನಮ್ಮನ್ನು ಅರ್ಥ ಮಾಡಿಕೊಳ್ಳುವಂತೆ ಬದುಕುವುದು. ಇದರಲ್ಲಿ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದೇ ಮುಂದಿನ ಚಕ್ರ. ಅಂದರೆ, ಜೀವನ ಸುಗಮವಾಗಿ ಸಾಗಬೇಕಾದರೆ ಮೊದಲು ನಮ್ಮನ್ನು ನಾವು ಅರ್ಥ ಮಾಡಿ ಕೊಳ್ಳಬೇಕು ಎಂದು ಹೇಳಿದರು.
ಮನುಷ್ಯನ ಜೀವನದಲ್ಲಿ ಭಯ ಮತ್ತು ಆತಂಕ ಹೆಚ್ಚು. ಆತಂಕದ ಮಧ್ಯೆಯೇ ಆತ ಜೀವನ ಸಾಗಿಸುತ್ತಾನೆ. ಬದುಕು ಎಂದ ಮೇಲೆ ಏರಿಳಿತ ಸಹಜ. ಜೀವನವೇ ಲಿಫ್ಟ್ ಇದ್ದ ಹಾಗೆ. ಕೆಲವೊಮ್ಮೆ ಏರುತ್ತದೆ, ಕೆಲವೊಮ್ಮೆ ಇಳಿಯುತ್ತದೆ. ಎರಡನ್ನೂ ಉತ್ಸಾಹದಿಂದ ಅನುಭವಿಸಬೇಕು. ನಮ್ಮ ಬಳಿ ಇರುವುದನ್ನು ಸಂತೋಷದಿಂದ ಅನುಭವಿಸುವುದೇ ಉತ್ಸಾಹದ ಜೀವನ. ಇದಕ್ಕೆ ಸಮತೋಲನದ ಜೀವನ ಅಗತ್ಯ ಎಂದರು.
ಆದರೆ, ಇತ್ತೀಚಿನ ದಿನಗಳಲ್ಲಿ ಮನುಷ್ಯನಲ್ಲಿ ಉತ್ಸಾಹ ಕಡಿಮೆಯಾಗುತ್ತಿದೆ. ಪ್ರಕೃತಿಯಲ್ಲಿ ಎಲ್ಲಾ ಜೀವರಾಶಿಗಳು ಉತ್ಸಾಹದಿಂದ ಇರಬೇಕಾದರೆ, ಮನುಷ್ಯರಾದ ನಾವು ಏಕೆ ಇರಲು ಸಾಧ್ಯವಿಲ್ಲ? ಉತ್ಸಾಹಎಂಬುದು ಸದಾ ನಮ್ಮ ಸುತ್ತ ಇರಬೇಕು. ಏನೇ ಸಮಸ್ಯೆ ಬಂದರೂ ಉತ್ಸಾಹ ಕಳೆದುಕೊಳ್ಳ ಬಾರದು ಎಂದು ಅಭಿಪ್ರಾಯಪಟ್ಟರು.
ಮಾನವನ ವರ್ತನೆ ಹೇಗಿರಬೇಕು? ಎಂಬುದು ಮುಖ್ಯವಾಗುತ್ತದೆ. ಸಹಜವಾಗಿ ಮನುಷ್ಯನ ವರ್ತನೆಯನ್ನು ಎರಡು ಭಾಗವಾಗಿ ವಿಗಂಡಿಸಲಾಗಿದೆ. ಧನಾತ್ಮಕ ಮತ್ತು ಋಣಾತ್ಮಕ ಎಂದು. ಇವೆರಡನ್ನೂ ಹೊರತುಪಡಿಸಿ ತಟಸ್ಥ ವರ್ತನೆ ಎಂಬುದೂ ಇದೆ. ಜೀವನದಲ್ಲಿ ನಾವು ಏನನ್ನೂ ಸಾಧನೆ ಮಾಡಲಿಕ್ಕೆ ಸಾಧ್ಯವಾಗದಿರಲು ಈ ಮೂರನೇ ವರ್ತನೆಯೇ ಮುಖ್ಯ ಕಾರಣ. ಆದ್ದರಿಂದ ಜೀವನದಲ್ಲಿ ನಾವು ಸದಾ ಧನಾತ್ಮಕ ವರ್ತನೆಯಲ್ಲಿರಬೇಕು. ಧನಾತ್ಮಕವಾಗಿರಲು ಜೀವನದಲ್ಲಿ ಆಲೋಚನೆ, ಚಿಂತನೆ, ಭಾವನೆ, ವರ್ತನೆ ಮತ್ತು ಸಂಭಾಷಣೆ ಎಂಬ ಐದು ‘ನೆ’ಗಳನ್ನು ಪಾಲಿಸಬೇಕು ಎಂದರು.
ಮನಸ್ಸಿಗೆ ಬರುವ ಎಲ್ಲಾ ಆಲೋಚನೆ ತೆಗೆದುಕೊಂಡು ಚಿಂತನೆ ಮಾಡಬೇಕು. ನಮ್ಮ ಚಿಂತನೆಯಂತೆ ಭಾವನೆ ಇರುತ್ತದೆ. ಚಿಂತನೆ ಮತ್ತು ಭಾವನೆಗೆ ಅನುಗುಣವಾಗಿ ನಮ್ಮ ವರ್ತನೆ ಇರುತ್ತದೆ. ಈ ವರ್ತನೆಯಂತೆ ನಮ್ಮ ಸಂಭಾಷಣೆ ಇರುತ್ತದೆ. ಸಂಭಾಷಣೆ ಹೇಳುವ ನಾಲಿಗೆ, ಮನೆಯ ಹೊಸ್ತಿಲಿನಲ್ಲಿಟ್ಟಿ ರುವ ದೀಪದಂತೆ. ಅದು ಮನೆಯ ಒಳಗೂ, ಹೊರಗೂ ಬೆಳಕು ನೀಡುತ್ತದೆ ಎಂದು ತಿಳಿಸಿದರು.
ಜೀವನದ ಗುರಿ ಮುಟ್ಟುವದಲ್ಲ, ಮೆಟ್ಟಬೇಕು:ಜೀವನದಲ್ಲಿ ಗುರಿಯನ್ನು ಮುಟ್ಟಬಾರದು, ಮೆಟ್ಟಬೇಕು. ಆದರೆ, ಅದು ಅಷ್ಟು ಸುಲಭವಲ್ಲ. ಜೀವನ ಪಯಣದ ಗುರಿ ಮುಟ್ಟುವ ಹಾದಿಯಲ್ಲಿ ಮನುಷ್ಯನಿಗೆ ಐದು ರೀತಿಯ ಭಯ ಎದುರಾಗುತ್ತದೆ.
ನಗು, ಅಳು ರಸಪಾಕಗಳುನಗುವೊಂದು ರಸಪಾಕ. ಅಳು ಇನ್ನೊಂದು ರಸಪಾಕ. ನಗುವಾತ್ಮ ಪರಿಮಳವ ಪಸರಿಸುವ ಕುಸುಮ. ದುಗುಡ ಆತ್ಮವ ಕಡೆದು ಸತ್ವವೆತ್ತುವ ಮಂಥು. ಭಗೆದೆರಡನುಂ ಬುಜಿಸು ಮಂಕುತಿಮ್ಮ ಎಂದು ಡಿ.ವಿ.ಜಿ ತಿಳಿಸಿದ ಹಾಗೆ, ಜೀವನ ಸದಾ ಕೇಸರಿಬಾತ್ ಆಗಿರುವುದಿಲ್ಲ ಅಥವಾ ಖಾರಾ ಬಾತ್ ಆಗಿರುವು ದಿಲ್ಲ. ಎರಡು ಬೆರೆತ ಚೌಚೌ ಬಾತ್ ಆಗಿರುತ್ತದೆ. ಅದನ್ನು ನಾವು ಸ್ವೀಕಾರಬಾತ್ ಮಾಡಬೇಕು. ಕೇವಲ ಹಾಸ್ಯ ಪ್ರಜ್ಞೆಯಿಂದ ಮಾತ್ರ ಇದು ಸಾಧ್ಯ. ಜೀವನದ ಪ್ರತಿ ಸಂದರ್ಭದಲ್ಲೂ ಉತ್ಸಾಹ ಇರಬೇಕು, ಜೀವನದಲ್ಲಿ ನಷ್ಟ ಇದ್ದರೂ ಉಲ್ಲಾಸಮಯವಾದ ಬದುಕು ನಮ್ಮದಾಗಬೇಕು. ಆಗಲೇ ಜೀವನ ಸಾರ್ಥಕವಾಗುತ್ತದೆ ಎಂದು ವೈ.ವಿ.ಗುಂಡೂರಾವ್ ಅಭಿಪ್ರಾಯಪಟ್ಟರು.
***
? ಉತ್ಸಾಹ ಉಲ್ಲಾಸ ಜೀವನದಾ ಪ್ರತೀಕ್ಷಣದಲ್ಲೂ ಇರಬೇಕು.? ಜೀವನದಲ್ಲಿ ಲಾಸ್ ಆದರೂ ಉಲ್ಲಾಸ ಇರಬೇಕು.? ಒತ್ತಡ ಮತ್ತು ಖಿನ್ನತೆಗೆ ಪರಿಹಾರವೇ ಉತ್ಸಾಹ ಮತ್ತು ಉಲ್ಲಾಸ? ಪ್ರಭೋಧ, ಪ್ರಮೋದ ಮತ್ತು ಪ್ರಮಾದ ಸಾಹಿತ್ಯ ರೂಪಗಳಿವೆ? ನಮ್ಮ ದೇಶ ಪ್ರಜಾಪ್ರಭುತ್ವ. ನಮ್ಮ ದೇಹ ಮಜಾ ಪ್ರಭುತ್ವ
***
ಸಾವಿನ ಭಯ, ಆದನ್ನು ಯಾರೂ ಗೆಲ್ಲಲು ಸಾಧ್ಯವಿಲ್ಲ.ಅಭದ್ರತೆಯ ಭಯ. ಇದನ್ನು ಹಿಮೆಟ್ಟಿಸಿ ಬರುವ ದಾರಿ ವೆಲ್ತ್ ಮತ್ತು ಹೆಲ್ತ್.ತಿರಸ್ಕಾರದ ಭಯ, ಸಮಾಜದಲ್ಲಿ ತಿರಸ್ಕಾರಕ್ಕೆ ಒಳಗಾದಾಗ ನಾವು ಕಾವ್ಯ, ಶಾಸ್ತ್ರ ಮತ್ತು ವಿನೋದದಲ್ಲಿ ತೊಡಗಿ ಹೊರಬರಹುದು.ಟೀಕೆಯ ಭಯ, ಬೇರೆಯವರ ಜತೆ ಹೋಲಿಕೆ ಮಾಡಿಕೊಳ್ಳದೆ ನಮ್ಮನ್ನು ನಾವೇ ಶ್ರೇಷ್ಠ ಎಂದು ಭಾವಿಸಿಕೊಂಡು ಈ ಭಯದಿಂದ ಮುಕ್ತರಾಗಬಹುದು.ನಾಲ್ಕು ಜನರ ಮುಂದೇ ಮತನಾಡಲು ಭಯ, ಅಂತಹ ಸಂದರ್ಭದಲ್ಲಿ ಉದ್ವೇಗದಿಂದ ಮಾತನಾಡದೆ ಸಮಾಧಾನವಾಗಿ ಮಾತನಾಡುವುದರ ಮೂಲಕ ಈ ಭಯ ಹಿಮ್ಮೆಟ್ಟಿಸಬಹುದು ಎಂದು ವೈ.ವಿ.ಗುಂಡೂರಾವ್ ಹೇಳಿದರು.
***
ಸಂದರ್ಭಕ್ಕೆ ತಕ್ಕಹಾಗೆ ಹಾಸ್ಯ ಸೃಷ್ಟಿಸುವುದು ತುಂಬಾ ಕಷ್ಟ. ಕೇವಲ ಜೋಕ್ ಹೇಳುವುದಲ್ಲ, ಸ್ವತಹ ಸೃಷ್ಟಿ ಮಾಡುವುದು ವೈ.ವಿ ಗುಂಡೂರಾವ್ ಅವರ ವೈಶಿಷ್ಠ್ಯ ಎಂದು ವೈ.ಎನ್.ಕೆ. ಪ್ರಶಂಸಿಸುತ್ತಿದ್ದರು. ವಾಕ್ ಚಾತುರ್ಯದಿಂದ ಕನ್ನಡಿಗರ ಮನಸ್ಸು ಗೆದ್ದಿದ್ದಾರೆ ವೈ.ವಿ.ಗುಂಡೂರಾವ. ಸಣಕಲುಶರೀರ ಹೊಂದಿದ್ದರೂ ಉತ್ತಮ ಶಾರೀರವನ್ನು ಹೊಂದಿದ್ದಾರೆ. ೨೦೦ ನಾಟಕದಲ್ಲಿ ಅಭಿನಯ ಹಾಗೂ ನಿರ್ದೇಶನ ಕೂಡ ಮಾಡಿದ್ದಾರೆ. ನೂರಾರು ಭಾಷಣಗಳನ್ನು ನೀಡಿದ್ದಾರೆ. ಕೈಲಾಸಂ ನಟಕ ಇವರಿಗೆ ಅಚ್ಚುಮೆಚ್ಚು . ಈ ನಾಟಕದಲ್ಲಿ ಪ್ರಮುಖ ಪಾತ್ರಮಾಡಿದ್ದಾರೆ.
-ವಿಶ್ವೇಶ್ವರ ಭಟ್, ಪ್ರದಾನ ಸಂಪಾದಕರು, ವಿಶ್ವವಾಣಿ ದಿನಪತ್ರಿಕೆ