ನಾಟಕದಂತೆ ಬದುಕು: ಯಾವಾಗಲೂ ಯಶಸ್ವಿಯಾಗುವುದಿಲ್ಲ
ವಿಶ್ವವಾಣಿ ಕ್ಲಬ್ ಹೌಸ್ 229
‘ನಾಟಕ ಮತ್ತು ಜೀವನ’ ಕಾರ್ಯಕ್ರಮದಲ್ಲಿ ರಂಗಕರ್ಮಿ ಯಶವಂತ ಸರದೇಶಪಾಂಡೆ ಅರಿವಿನ ಉಪನ್ಯಾಸ
ಬೆಂಗಳೂರು:ನಾಟಕ ನಿಜ ಜೀವನದ ವಿಸ್ತರಣೆ ಅಷ್ಟೇ. ಜೀವನದಲ್ಲಿ ಎಲ್ಲಾ ಸನ್ನಿವೇಶಗಳೂ ಪೂರ್ವ ನಿರ್ಧರಿತವಾಗಿರುವು ದಿಲ್ಲ. ಆದರೆ, ನಾಟಕದಲ್ಲಿ ಎಲ್ಲವೂ ಪೂರ್ವ ತಯಾರಿಯಾಗಿರುತ್ತದೆ.
ಬದುಕಿನಲ್ಲಿ ಯಾವುದೇ ಪ್ಲಾನಿಂಗ್ ರಿಹರ್ಸಲ್ ಇರುವುದಿಲ್ಲ; ಆದರೆ, ನಾಟಕದಲ್ಲಿ ಎಲ್ಲಾ ಪ್ಲಾನಿಂಗ್ ರಿಹರ್ಸಲ್ ಆಗಿರುತ್ತದೆ.ಎಲ್ಲಾ ನಾಟಕವೂ ಯಶಸ್ವಿಯಾಗುವುದಿಲ್ಲ. ಹಾಗೆಯೇ, ಬದುಕೂ ಬಹಳ ಬಾರಿ ಯಶಸ್ವಿ ಯಾಗುವುದಿಲ್ಲ. ನಾಟಕ ಮತ್ತು ಬದುಕಿಗೆ ಇದೇ ವ್ಯತ್ಯಾಸ.
ವಿಶ್ವವಾಣಿ ಕ್ಲಬ್ ಹೌಸ್ ಏರ್ಪಡಿಸಿದ್ದ ‘ನಾಟಕ ಮತ್ತು ಜೀವನ’  ಕಾರ್ಯಕ್ರಮದಲ್ಲಿ ರಂಗಕರ್ಮಿ ಯಶವಂತ ಸರದೇಶಪಾಂಡೆ ಅರಿವಿನ ಉಪನ್ಯಾಸ ನೀಡಿದ್ದು ಹೀಗೆ. ಪ್ರೇಕ್ಷಕ ಕಾಲ ಕಾಲಕ್ಕೆ ಸಂಕುಚಿತನಾಗುತ್ತಿರುವುದು ನಾಟಕ ಹಿಂದುಳಿಯಲು ಮುಖ್ಯ ಕಾರಣ ವಾಗಿದೆ. ೬೦-೭೦ರ ದಶಕದಲ್ಲಿ ಒಂದು ಊರಿನಲ್ಲಿ ವರ್ಷಕ್ಕೆ ಒಂದೋ ಎರಡೋ ನಾಟಕ ಬರುತ್ತಿತ್ತು. ಆದರೆ ಊರಿ ಗೊಂದೇ ತಂಡ ಇದ್ದ ಕಾರಣ ಎಲ್ಲಾ ಮಂದಿ ಒಂದೆಡೆ ಬರು ತ್ತಿದ್ದರು. ಕ್ರಮೇಣ ತಂಡಗಳು ಹೆಚ್ಚಾದವು, ಬರುವ ಪ್ರೇಕ್ಷಕರೂ ಹಂಚಿ ಹೋಗುವಂತಾ ಯಿತು. ಕಾಲಾನಂತರ ರಂಗಭೂಮಿಯಿಂದ ಸಿನಿಮಾ ಬಂದು, ಕುಳಿತು ನಾಟಕ ನೋಡುತಿದ್ದ ೫ ಸಾವಿರ ಮಂದಿ ಕ್ರಮೇಣ, ಚಿತ್ರಮಂದಿರಗಳು ಹೆಚ್ಚು ಬಂದ ಮೇಲೆ ಜನ ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟಿಗೆ ಕುಳಿತು ನೋಡುವುದೇ ಮರೆ ಯಾಗುತ್ತಿದೆ.
ಹೊಸತರಲ್ಲಿ ಓಣಿಗೊಂದೇ ಟಿವಿ ಇದ್ದದ್ದರಿಂದ ಓಣಿಯ ಎಲ್ಲಾ ಮನೆಯವರು ಒಂದೇ ಜಾಗದಲ್ಲಿ ಕುಳಿತು ನೊಡುತ್ತಿದ್ದರು. ಕ್ರಮೇಣ ಎಲ್ಲರ ಮನೆಯಲ್ಲಿ ಟಿವಿ ಬಂದ ಮೇಲೆ ಅವರವರ ಮನೆಯಲ್ಲೇ ನೋಡು ವಂತಾಯಿತು. ಮೊಬೈಲ್ ಬಂದ ಮೇಲೆ ಒಂದು ಮನೆಯಲ್ಲೇ ನಾಲ್ಕು ಮಂದಿ ನಾಲ್ಕು ಮೂಲೆಯಲ್ಲಿ ಕುಳಿತು ನೋಡು ವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಹಿಂದಿನ ಕಾಲದಲ್ಲಿ ನಾಟಕದ ಸೆಟ್‌ನಲ್ಲೇ ಚಿತ್ರಕಲೆ, ಶಿಲ್ಪಕಲೆ, ಸಂಗೀತ, ಕಾವ್ಯ, ಹಾಡು ಎಲ್ಲವನ್ನೂ ರಚಿಸಲಾಗುತಿತ್ತು. ಆದರೆ ಈಗ ಎಲ್ಲಾ ಕಲೆಗಳು ವೈಯಕ್ತಿಕವಾಗಿ ಹೋಗಿದೆ. ಹೀಗಾಗಿ ಪ್ರೇಕ್ಷಕ ರಂಗಭೂಮಿಯಿಂದ ದೂರ ಆಗುತ್ತಿದ್ದಾನೆ. ಇದಕ್ಕೆ ರಂಗ ಕಲಾವಿದ ಎಷ್ಟು ಕಾರಣನೋ, ಪ್ರೇಕ್ಷಕರೂ ಅಷ್ಟೇ ಕಾರಣರಾಗುತ್ತಾರೆ ಎಂದರು.
ನಿಮ್ಮ ಪ್ರದರ್ಶನಕ್ಕೆ ಸಿನಿಮಾದಲ್ಲಿ ಒಂದೇ ಅವಕಾಶ. ಆದರೆ, ನಾಟಕದಲ್ಲಿ ಹಾಗಲ್ಲ. ಒಮ್ಮೆ ಸರಿಯಾಗಿ ಪ್ರದರ್ಶನ ನೀಡದಿದ್ದರೆ ಅದನ್ನು ಸರಿಪಡಿಸಿಕೊಂಡು ಮತ್ತೊಂದು ಪ್ರದರ್ಶನ ನೀಡಬಹುದಾಗಿದೆ. ಬದುಕಿನಲ್ಲೂ ಮಾಡಿದ ತಪ್ಪನ್ನು ಸರಿಪಡಿಸಿ ಕೊಂಡು, ಮತ್ತೆ ಬದುಕು ನಡೆಸಲು ಅವಕಾಶವಿದೆ. ಹೀಗಾಗಿಯೇ ಬದುಕು ಮತ್ತು ನಾಟಕ ಎರಡಕ್ಕೂ ಹತ್ತಿರದ ಸಂಬಂಧ ಇದೆ. ರಂಗಭೂಮಿ ವಿಭಜನೆಗೊಂಡಿದೆ. ಮಕ್ಕಳ ರಂಗಭೂಮಿ, ಗ್ರಾಮೀಣ, ಸಾಮಾಜಿಕ, ಐತಿಹಾಸಿಕ ರಂಗಭೂಮಿ ಹೀಗೆ ಅನೇಕ ರೀತಿಯ ರಂಗಭೂಮಿಗಳು ಹುಟ್ಟಿಕೊಂಡಿವೆ. ಯಾಕೆ ಎಂದು ತಿಳಿದಿಲ್ಲ. ವಿಭಜನೆಗೊಂಡ ರಂಗಭೂಮಿಯಲ್ಲಿ ಹವ್ಯಾಸಿ ರಂಗ ಭೂಮಿಯೂ ಒಂದಾಗಿದೆ.
ಇದನ್ನು ಏಕೆ ತಲೆ ಮೇಲೆ ಹೊತ್ತು ಅಡ್ಡಾಡುತ್ತಾರೆ ಎಂದು ಗೊತ್ತಿಲ್ಲ. ಹವ್ಯಾಸಿ ಅಂದ ಮೇಲೆ ರೊಕ್ಕ ಯಾಕೆ ಕೇಳುತ್ತಾರೆ? ಸರಕಾರ ದಿಂದ ಅನುದಾನ, ಪುರಸ್ಕಾರ ಏಕೆ ಬಯಸುತ್ತಾರೆ? ನನಗೆ ತಿಳಿದಿಲ್ಲ. ಸಿಹಿಕಹಿ ಚಂದ್ರು ಅವರ ಯದ್ವಾತದ್ವಾ ಧಾರಾವಾಹಿಯಲ್ಲಿ ಮೊದಲ ಅವಕಾಶ ಸಿಕ್ಕಿತು. ನಟ ರಮೇಶ್ ಅರವಿಂದ್ ‘ರಾಮಶಾಮ ಭಾಮ’ ಚಿತ್ರದಲ್ಲಿ ಕಮಲಹಾಸನ್ ಅವರಿಗೆ ಕನ್ನಡ ಕಲಿಸುವ ಅವಕಾಶ ನೀಡಿದರು. ನಾಟಕದಿಂದ ಹಲವಾರು ದೇಶಗಳನ್ನು ಸುತ್ತುವ ಅವಕಾಶ ಒದಗಿಬಂತು. ನಾಟಕವನ್ನೇ ಜೀವನ ಮಾಡಿಕೊಂಡು ಬಂದಿದ್ದೇನೆ ಎಂದು ಅಭಿಮಾನಪೂರ್ವಕವಾಗಿ ಹೇಳಿದರು.
ಪಕ್ಕದ ರಾಜ್ಯ ನಮಗೆಅನುಕರಣೀಯ !ಪಕ್ಕದ ರಾಜ್ಯವೊಂದರಲ್ಲಿ ನಾಟಕಕ್ಕೆ ಹೆಚ್ಚು ಒತ್ತು ನೀಡಿದ್ದಾರೆ. ೬-೭ ವರ್ಷದವರು ೩ ತಾಸು ಕುಳಿತು ನೋಡುವ ತಾಳ್ಮೆ ಕಲಿಸುತ್ತಾರೆ. ೮೦-೧೦೦ ನಾಟಕ ಪ್ರೊಡ್ಯೂಸ್ ಮಾಡುತ್ತಾರೆ. ಅದಕ್ಕೆ ಒಂದು ಪ್ರತ್ಯೇಕ ಸೆನ್ಸಾರ್ ಬೋರ್ಡ್ ಕೂಡ ಇದೆ. ನಾಟಕ ಕ್ಕಾಗಿಯೇ ೧೦-೧೫ ಲಕ್ಷ ಹೂಡಿಕೆ ಮಾಡುತ್ತಾರೆ. ನಾಟಕ ಪ್ರದರ್ಶನ ಆಗಿ ಜನರಿಗೆ ಮುಟ್ಟಬೇಕು ಎಂಬುದು ಅವರ ಮುಖ್ಯ ಉದ್ದೇಶ. ಅದರಲ್ಲಿ ಕೆಲಸ ಮಾಡುವವರಿಗೆಲ್ಲಾ ಸಂಬಳವೂ ನೀಡುತ್ತಾರೆ. ಆದ್ದರಿಂದ ಅವರ ಕೆಲಸವನ್ನು ನಿಷ್ಠೆಯಿಂದ ಶ್ರಮವಹಿಸಿ ಮಾಡುತ್ತಾರೆ. ರಂಗಭೂಮಿಯನ್ನು ಉಳಿಸಿ ಬೆಳೆಸುವ ವಿಚಾರದಲ್ಲಿ ಇದು ಅನುಕರಣೀಯ ಎಂದು ಯಶವಂತ ಸರದೇಶಪಾಂಡೆ ಹೇಳಿದರು.
***
ಯಶವಂತ ಸರದೇಶಪಾಂಡೆ ತಮ್ಮ ಜೀವನವನ್ನು ನಾಟಕಕ್ಕೆ ಮುಡಿಪಾಗಿಟ್ಟಿದ್ದಾರೆ. ರಾಶಿಚಕ್ರ, ಆಲ್ ದಿ ಬೆಸ್ಟ್, ದಿಲ್ ಮಾಂಗೆ ಮೋರ್ ಸೇರಿದಂತೆ ಇವರ ಅನೇಕ ನಾಟಕಗಳು ಹೊರ ನಾಡು ಮತ್ತು ಹೊರ ದೇಶಗಳಲ್ಲಿ ಸುಮಾರು ೫,೫೦೦ ಪ್ರದರ್ಶನ ಕಂಡಿವೆ. ಆಲ್ ದಿ ಬೆಸ್ಟ್ ನಾಟಕವಂತೂ ಸರ್ವತ್ರ ಮನ್ನಣೆಗೆ ಪಾತ್ರವಾಗಿತ್ತು. ಇವರು ೪ ಸಿನಿಮಾ ನಿರ್ದೇಶಿಸಿ, ನಿರ್ಮಿಸಿದ್ದಾರೆ. ಬೇಂದ್ರೆ ಅವರ ೧೪ ನಾಟಕಗಳನ್ನು ನಿರ್ದೇಶಿಸಿ ನಟಿಸಿದ್ದಾರೆ. ೪೦೦ಕ್ಕೂ ಹೆಚ್ಚು ಸೀರಿಯಲ್ ಮಾಡಿದ್ದಾರೆ. ಹುಬ್ಬಳ್ಳಿಯಲ್ಲಿ ಆದಿರಂಗ ಥಿಯೇಟರ್ ಸ್ಥಾಪಿಸಿ, ಮುಂದಿನ ಜೀವನವನ್ನು ಅಲ್ಲೇ ಕಳೆಯುವುದಾಗಿ ನಿರ್ಧಾರ ಮಾಡಿರುವುದು ನಾಟಕದ ಬಗ್ಗೆ ಅವರ ಬದ್ಧತೆಯನ್ನು ತೋರುತ್ತದೆ.
-ವಿಶ್ವೇಶ್ವರ ಭಟ್,ಪ್ರಧಾನ ಸಂಪಾದಕರು, ‘ವಿಶ್ವವಾಣಿ’ ಪತ್ರಿಕೆ
ನಾಟಕ ಮಾಡುವುದು ಎಲ್ಲರಿಗೂ ಸಾಧ್ಯವಿಲ್ಲ. ನಾವು ನೋಡಿದಷ್ಟು ಸುಲಭವಲ್ಲ. ಆಸ್ಟ್ರೇಲಿಯಾದಲ್ಲಿ ನಾಟಕಕ್ಕೆ ತುಂಬಾ ಆದ್ಯತೆ ನೀಡಿದ್ದಾರೆ. ತುಂಬಾ ಪ್ರಬುದ್ಧವಾಗಿ ಮಾಡುತ್ತಾರೆ. ನಾಟಕ ಜೀವನದ ಅವಿಭಾಜ್ಯ ಅಂಗವಾಗಬೇಕು. ದುರ್ದೈವವೆಂದರೆ ಇದು ಕಣ್ಮರೆಯಾಗುತ್ತಿದ್ದು, ಉಳಿಸುವ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗಬೇಕು.
-ವಿಜಯಲಕ್ಷ್ಮಿ ಪುಟ್ಟಿ, ಜಾನಪದ ಕಲಾವಿದ
***
ಮುಖ್ಯಾಂಶಗಳುನಾಟಕ ಮದರ್ ಆಫ್ ಆಲ್ ಆರ್ಟ್ಸ್.
ಸಂಗೀತ ಹುಟ್ಟಿದ್ದೇ ನಾಟಕದಿಂದ.
ಹೊಸ ನಾಟಕಗಳ ರಚನೆಯೇ ಆಗುತ್ತಿಲ್ಲ.ರಂಗಭೂಮಿಯಿಂದ ಪ್ರೇಕ್ಷಕ ವಿಮುಖನಾಗುತ್ತಿದ್ದಾನೆ.
ನಾಟಕವು ವೇದಿಕೆ ಏರಿದಾಗ ಮಾತ್ರ ಪರಿಪೂರ್ಣವಾಗುತ್ತದೆ. ೭೦-೮೦ ಇದ್ದ ನಾಟಕ ಕಂಪನಿಗಳು ಈಗ ೮ಕ್ಕೆ ಇಳಿದಿದೆ !
ಇಡೀ ನಾಟಕವನ್ನು ಒಬ್ಬ ಕಲಾವಿದ ಹೊತ್ತಿಕೊಳ್ಳುತ್ತಾನೆ.
ನಾವು ವಿದ್ಯಾಭ್ಯಾಸ ಮಾಡುತ್ತಿದ್ದಾಗ ಪಠ್ಯಪುಸ್ತಕದಲ್ಲಿ ನಾಟಕದ ಬಗ್ಗೆ ಒಂದು ಪಾಠ ಇರುತ್ತಿತ್ತು, ಈಗ ಅದು ಕಾಣೆಯಾಗಿದೆ.
ರಂಗಭೂಮಿ ಕಲೆ ಬೆಳೆಸಬೇಕು ಎಂದು ಯಾರೂ ಬರುವುದಿಲ್ಲ; ಹೀರೊ ಆಗಬೇಕು ಎಂದು ಬರುತ್ತಾರೆ.