ಹೆಗಡೆ ರಾಜಕೀಯ ಕಾಲಜ್ಞಾನಿ
ಗೋವಿಂದ ಕಾರಜೋಳ, ಸಂಸದರು, ಮಾಜಿ ಉಪಮುಖ್ಯಮಂತ್ರಿ
ಕರ್ನಾಟಕ ರಾಜಕೀಯ ಕಂಡ ವಿಭಿನ್ನ, ಜಾತ್ಯತೀತ ರಾಜಕಾರಣಿಗಳ ಸಾಲಿನಲ್ಲಿ ರಾಮಕೃಷ್ಣ ಹೆಗಡೆ ಅವರು ಅಗ್ರಮಾನ್ಯರು ಎಂದರೆ ತಪ್ಪಾಗುವುದಿಲ್ಲ. ಅವರ ಜಾತ್ಯತೀತ ನಿಲುವುಗಳಿಗಿಂತ ಅವರಲ್ಲಿ ನಾನು ಇಷ್ಟ ಪಟ್ಟಿದ್ದು, ಅವರ ದೂರದೃಷ್ಟಿ ಆಲೋಚನೆ. ಒಂದರ್ಥದಲ್ಲಿ ರಾಜಕೀಯದ ಕಾಲಜ್ಞಾನಿ ಎಂದರೂ ಅತಿಶಯೋಕ್ತಿ ಎನಿಸುವುದಿಲ್ಲ.
ಹೌದು, ಮುಂದಿನ ಎರಡು ದಶಕದಲ್ಲಿ ಏನಾಗಬಹುದು ಎನ್ನುವುದನ್ನು ಅವರು ಆಗಲೇ ಊಹೆ ಮಾಡುತ್ತಿದ್ದರು. ರಾಜಕೀಯದಲ್ಲಾಗುವ ಹತ್ತು ಹಲವು ಬದಲಾವಣೆ ಬಗ್ಗೆ ಅವರು ಹಿಂದೆಯೇ ಯೋಚಿಸಿದ್ದರು. ರಾಜಕೀಯದ ಬಗ್ಗೆ ಕಾಲಜ್ಞಾನಿಯ ರೀತಿ ಮುಂದೆ ಏನಾಗುತ್ತದೆ ೨೦ ವರ್ಷದ ಹಿಂದೆಯೇ ಊಹೆ ಮಾಡುವ ಶಕ್ತಿಯಿತ್ತು. ಉದಾಹರಣೆಗೆ, ಸುಮಾರು ಮೂರು ದಶಕದ ಹಿಂದೆ ಮುಂದಿನ ಮುಂದಿನ ೪೦ ವರ್ಷ ಕಾಲ ಸಮ್ಮಿಶ್ರ ಸರಕಾರದ ಸರದಿ ಎಂದು ಭವಿಷ್ಯ ನುಡಿದಿದ್ದರು. ದೇಶದಲ್ಲಿ ಒಂದೇ ಪಕ್ಷ ಆಡಳಿತಕ್ಕೆ ಬರುವುದಿಲ್ಲ. ಸಮ್ಮಿಶ್ರ ಸರಕಾರವೇ ಬರುವುದು ಎಂದು ಹೇಳಿದ್ದರು. ಅದೇ ರೀತಿ ಈಗಿನ ರಾಜಕೀಯ ನಡೆಯುತ್ತಿದೆ.ಅದೃಷ್ಟ ಕೈ ಹಿಡಿಯಲಿಲ್ಲ: ಇನ್ನು ಅವರು ದೇಶದಲ್ಲಿಯೇ ವಿಭಿನ್ನ ಶೈಲಿನ ರಾಜಕಾರಣಯಾಗಿದ್ದರು. ದೇಶದ ಪ್ರಧಾನಿಯಾಗುವ ಅವಕಾಶವೂ ಅವರಿಗೆ ಸಿಗುತ್ತಿತ್ತು. ಆದರೆ ಹೆಗಡೆ ಅವರಿಗೆ ‘ಅದೃಷ್ಟ’ ಎನ್ನುವುದು ಹಿಡಿಯದ ಕಾರಣ ಆ ಸ್ಥಾನವನ್ನು ಅಲಂಕರಿಸಲಿಲ್ಲ.
ಒಂದು ವೇಳೆ ರಾಜೀವ್ ಗಾಂಧಿ ಅವರ ಹತ್ಯೆಯಾಗದಿದ್ದರೆ, ರಾಮಕೃಷ್ಣ ಹೆಗಡೆ ಅವರು ಬಾಗಲಕೋಟೆಯಿಂದ ಗೆಲುವು ಸಾಧಿಸಿ ಸಂಸದರಾಗುತ್ತಿದ್ದರು. ಆದರೆ ಇವರು ಸ್ಪರ್ಧಿಸಿದಾಗ ರಾಜೀವ್ ಗಾಂಧಿ ಹತ್ಯೆಯಿಂದ ದೇಶಾದ್ಯಂತ ಕಾಂಗ್ರೆಸ್ ಪರ ಅಲೆಯಿತ್ತು. ಆದ್ದರಿಂದ ಇವರು ಸೋಲನುಭವಿಸಬೇಕಾಯಿತು. ಒಂದು ವೇಳೆ ಅವರು ಆ ಚುನಾವಣೆಯಲ್ಲಿ ಗೆಲುವು ಸಾಧಿಸಿ, ಪ್ರಧಾನ ಮಂತ್ರಿಯಾಗಿದ್ದರೆ, ದೇಶದ ರಾಜಕಾರಣವೇಬದಲಾಗುತ್ತಿತ್ತು. ಅಷ್ಟು ಅನುಭವಿ ಮತ್ತು ಮುಂದಾಲೋಚನೆಯುಳ್ಳವರು. ಅವರ ಜಾತ್ಯತೀತ ಮನಸ್ಥಿತಿಯ ಬಗ್ಗೆ ಮಾತನಾಡುವುದಾದರೆ, ರಾಜಕೀಯದಲ್ಲಿ ಜಾತಿ ಪ್ರಮುಖ ಪಾತ್ರವಹಿಸುತ್ತದೆ. ಯಾವುದೇ ನಾಯಕ ಇನ್ನೊಬ್ಬರನ್ನು ಬೆಳೆಸಲು ಹಾಗೂ ಯಾವುದೇ ವ್ಯಕ್ತಿಯನನ್ನು ನಾಯಕನನ್ನಾಗಿ ಬೆಳೆಸಲು ಜಾತಿಯೇ ಮಾನದಂಡವಾಗಿರುತ್ತದೆ. ಆದರೆ ಇದನ್ನು ಮೀರಿ ನಿಂತಿದ್ದು ರಾಮಕೃಷ್ಣ ಹೆಗಡೆ ಅವರೆಂದರೆ ತಪ್ಪಾಗುವುದಿಲ್ಲ.ಸಾಮಾಜಿಕ ನ್ಯಾಯಕ್ಕೆ ಕಟಿಬದ್ಧರಾಗಿದ್ದರು: ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ರಾಜ್ಯ ರಾಜಕೀಯದಲ್ಲಿ ಮುನ್ನಲೆಗೆ ಬಂದ ನಾಯಕರನ್ನು ಗಮನಿಸಿದರೆ, ರಾಮಕೃಷ್ಣ ಹೆಗಡೆ ಅವರಲ್ಲಿನ ಜಾತ್ಯತೀತ ಮನಸ್ಥಿತಿಸ್ಪಷ್ಟವಾಗುತ್ತದೆ. ಹೆಗಡೆಯವರು ತಮ್ಮ ಇಡೀ ರಾಜಕೀಯ ಜೀವನವನ್ನು ಸಾಮಾಜಿಕ ನ್ಯಾಯಕ್ಕೆ ಕಟಿ ಬದ್ಧರಾಗಿದ್ದವರು.
ಅವರ ಕಾಲದಲ್ಲಿ ಎಲ್ಲ ವರ್ಗದ ನಾಯಕರು ಬೆಳಕಿಗೆ ಬಂದರು, ಅವರೆನ್ನು ಬೆಳೆಸಿದರು. ಉದಾಹರಣೆಗೆ ನಾನು, ಸೋಮಶೇಖರ್, ಎಂ.ಪಿ ಪ್ರಕಾಶ್, ರಮೇಶ್ ಜಿಗಜಿಣಗಿ, ಪಿ.ಜಿ.ಆರ್ ಸಿಂಧ್ಯಾ ಹೀಗೆ ಅವರ ಗರಡಿಯಲ್ಲಿ ಬೆಳೆದವರಲ್ಲಿ ಬಹುತೇಕರು ಅವರ ಜಾತಿಗೆ ಸೀಮಿತವಾಗಿದ್ದವರಲ್ಲ ಎನ್ನುವುದು ಸ್ಪಷ್ಟ. ಹೆಗಡೆ ಅವರು ಕೊನೆಯವರೆಗೂ ಎಂದಿಗೂ ಜಾತಿ ರಾಜಕಾರಣ ಮಾಡಲಿಲ್ಲ. ತಮ್ಮ ಸ್ವಂತ ಜಾತಿಗೆ ಯಾವತ್ತೂ ಜೋತು ಬೀಳಲಿಲ್ಲ. ಯಾವುದೇ ಜಾತಿಯವರನ್ನು ರಾಜ್ಯದಲ್ಲಿ ಮುಖ್ಯಮಂತ್ರಿ ಮಾಡಬೇಕು, ಲೀಡರ್ ಮಾಡಬೇಕು ಎಂದುಕೊಂಡಿದ್ದರು.
ಮೌಲ್ಯಾಧಾರಿತ ರಾಜಕಾರಣಿ:ರಾಮಕೃಷ್ಣ ಹೆಗಡೆ ಅವರು ಒಬ್ಬ ಮೌಲ್ಯಾಧಾರಿತ ರಾಜಕಾರಣಿಯಾಗಿದ್ದರು. ಅವರು ವಿರುದ್ಧ ಅಥವಾ ಯಾರೇ ವಿರುದ್ಧ ಆರೋಪಗಳು ಕೇಳಿಬಂದರೆ, ಅದನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಅವಕಾಶ ನೀಡುತ್ತಿದ್ದರು. ಉದಾಹರಣೆಗೆ ಅವರ ಮಗನ ವಿರುದ್ಧ ವೈದ್ಯಕೀಯ ಸೀಟು ಹಗರಣ ಕೇಳಿಬಂದ ಕೂಡಲೇ ಆಯೋಗ ನೇಮಿಸಿ ತನಿಖೆ ಮಾಡಿಸಿದರು. ಈ ವಿಷಯದಲ್ಲಿ ಯಾವುದೇ ಮುಲಾಜಿಗೆ ಬೀಳುತ್ತಿರಲಿಲ್ಲ. ಇನ್ನು ಅವರ ವಿರುದ್ಧವೇ ಟೆಲಿ-ನ್ ಕದ್ದಾಲಿಕೆ ಆರೋಪ ಕೇಳಿಬಂದಿತ್ತು. ಈ ಆರೋಪ ಕೇಳಿಬರುತ್ತಿದ್ದಂತೆ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆ ಸಮಯದಲ್ಲಿ ಅವರ ವಿರುದ್ಧ ಯಾವುದೇ ಭ್ರಷ್ಟಾಚಾರದ ಆರೋಪ ಬಂದಿರಲಿಲ್ಲ. ಆದರೆ ಯಾವುದೇ ರೀತಿಯ ಆರೋಪ ಬಂದರೂ, ಮುಕ್ತವಾಗಿ, ಪಾರದರ್ಶಕವಾಗಿ ತನಿಖೆ ಮಾಡಿಸಬೇಕು ಎನ್ನುವುದು ಅವರ ಅಭಿಪ್ರಾಯವಾಗಿತ್ತು.
ಕೊಟ್ಟ ಎಚ್ಚರಿಕೆ ನಿಜವಾಯಿತು:ಅವರು ಸಕ್ರಿಯ ರಾಜಕೀಯದಲ್ಲಿದ್ದ ಸಮಯದಲ್ಲಿ ಎರಡನೇ ಹಂತದ ನಾಯಕರು ಹೊಡೆದಾಡಿಕೊಂಡಿದ್ದರು. ಈ ಸಮಯದಲ್ಲಿ ಎಲ್ಲರನ್ನು ಕರೆಸಿದ ಅವರು, ಯಾರೂಜಗಳ ಮಾಡಿಕೊಳ್ಳಬೇಡಿ. ಎಲ್ಲರೂ ಒಂದಾಗಿದ್ದರೆ ಮುಂದಿನ ೨೦ ವರ್ಷಗಳ ಕಾಲ ಯಾರೂ ನಮ್ಮನ್ನು ಅಲುಗಾಡಿಲು ಸಾಧ್ಯವಿಲ್ಲ. ಒಂದು ವೇಳೆ ಛಿಧ್ರವಾಗಿ ಹೋದರೆ, ಪಕ್ಷಕ್ಕೆ ಸಮಸ್ಯೆಯಾಗುತ್ತದೆ ಎಂದು ಎಚ್ಚರಿಸಿ ದ್ದರು. ಆದರೆ ಅವರ ಎಚ್ಚರಿಕೆಯನ್ನು ಕೇಳದೆ ಇರುವುದರಿಂದ ಇಂದು ನಾವೆಲ್ಲ ಛಿದ್ರ ಛಿದ್ರವಾಗಿ ಹೋಗುವ ಸನ್ನಿವೇಶ ನಿರ್ಮಾಣವಾಗಿದೆ. ಈ ಎಲ್ಲವನ್ನು ಮೀರಿ ಅವರಲ್ಲಿ ಸಾಮಾಜಿಕ ಕಾಳಜಿ, ಕಳಕಳಿ ಹಾಗೂ ಬದ್ಧತೆಯಿತ್ತು ಎಂದರೆ ತಪ್ಪಾಗುವುದಿಲ್ಲ.
ಕೊಟ್ಟ ಮಾತಿಗೆ ಬದ್ಧವಾಗಿದ್ದ ವ್ಯಕ್ತಿತ್ವ:ಇನ್ನು ಅವರೊಂದಿಗೆ ನೂರಾರು ನೆನಪುಗಳಿವೆ. ಆದರೆ ಅವರ ಬದ್ಧತೆಯ ವಿಷಯ ಬಂದಾಗ ಇನ್ಯಾರು ಸಾಟಿಯಿಲ್ಲ. ಈ ಹಿಂದೆ ಮಲ್ಲಣ್ಣ ನಾಡಗೌಡರ ತಂದೆಯವರ ಜತೆ ಒಡನಾಟವಿತ್ತು. ಆದ್ದರಿಂದ ಮಲ್ಲಣ್ಣ ನಾಡಗೌಡರನ್ನು ರಾಜಕೀಯಕ್ಕೆ ತರಬೇಕಿತ್ತು, ಆದ್ದರಿಂದ ಅವರನ್ನು ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯನ್ನಾಗಿ ಮಾಡಿದರು. ಆದರೆ ಅವರು ಸೋಲು ಅನುಭವಿಸಬೇಕಾಯಿತು. ಆದ್ದರಿಂದ ಮಲ್ಲಣ್ಣ ನಾಡಗೌಡರ ಅವರನ್ನು ವಿಧಾನಪರಿಷತ್ ಸದಸ್ಯರನ್ನಾಗಿ ಆಯ್ಕೆಮಾಡಿದರು. ಇಂತಹ ಕಾಳಜಿಯಿದ್ದವರು, ಹೆಗಡೆಯವರು.