  : ವಸಂತ್‌, ಈ ಬರಹಕ್ಕೆ ನೀವೇ ಹೆಡ್‌ ಲೈನ್‌ ಹಾಕಿಕೊಳ್ಳಿ !
ವಿಶ್ವೇಶ್ವರ ಭಟ್
ಕನ್ನಡ ಪತ್ರಿಕೆಯ ಸುದ್ದಿ ಮನೆಯ ಕಾಯಂ, ಕರ್ಮಠ, ಕರ್ಮಯೋಗಿಯೊಬ್ಬರು ತಮ್ಮ ಬದುಕಿನ ಎಡಿಷನ್ ಮುಗಿಸಿ, ಇಹ ಲೋಕದಿಂದ ನಿರ್ಗಮಿಸಿದ್ದಾರೆ!
ವಸಂತ ನಾಡಿಗೇರ್ ತಮ್ಮ ವೃತ್ತಿ ಬದುಕಿನ ಉತ್ತುಂಗದಲ್ಲಿದ್ದರು. ಅರವತ್ತು ಸಾಯುವ ವಯಸ್ಸಲ್ಲ. ಅದು ಸಂಪಾದಕ‌ರಾಗುವ ವಯಸ್ಸು. ಆದರೆ ಅವರೊಳಗೇ ಇದ್ದ ಕ್ಯಾನ್ಸರ್ (ಪ್ಯಾಂಕ್ರಿಯಾಟಿಕ್) ಅವರಿಗೆ ಬದುಕಲು ಬಿಡಲಿಲ್ಲ. ತಾವು ಬಾಲ್ಯದಲ್ಲಿ ಮೊದಲು ಓದುತ್ತಿದ್ದ ’ಸಂಯುಕ್ತ ಕರ್ನಾಟಕ’ ಪತ್ರಿಕೆಗೆ, ಎರಡು ವರ್ಷಗಳ ಹಿಂದೆ ಅವರು ಸಂಪಾದಕರಾಗಿ ಸೇರಿದ್ದರು. ಅವರಲ್ಲಿ ಇನ್ನೂ ಸಾಕಷ್ಟು ಪತ್ರಕರ್ತತನ ಉಳಿದಿತ್ತು. ಕಳೆದ ಎರಡು ತಿಂಗಳ ’ಸಂಯುಕ್ತ ಕರ್ನಾಟಕ’ವನ್ನು ಸೂಕ್ಷ್ಮವಾಗಿ ಓದಿದ ವರಿಗೆ, ವಸಂತ್ ಅವರ ಅನುಪಸ್ಥಿತಿ ಗೊತ್ತಾಗುತ್ತಿತ್ತು. ನಾನು ಕೆಲವರಲ್ಲಿ, ‘ವಸಂತಗೆ ಏನಾಗಿದೆ, ಯಾಕೋ ಪತ್ರಿಕೆಯಲ್ಲಿ ಅವರ ಕೈಚಳಕ ಕಾಣುತ್ತಿಲ್ಲವಲ್ಲ’ ಎಂದು ಕೇಳಿದ್ದುಂಟು.
ಅವರು ಕೆಲಸ ಮಾಡಿದ ಯಾವ ಪತ್ರಿಕೆಗಾದರೂ ಹೆಡ್ ಲೈನ್ ಮೂಲಕವೇ ಜೀವ ತುಂಬುವುದರಲ್ಲಿ ನಿಷ್ಣಾತ ರಾಗಿದ್ದ ವಸಂತ್, ಹಾಗೆ ನೋಡಿದರೆ, ತಮ್ಮ ಮೂರೂವರೆ ದಶಕಗಳ ವೃತ್ತಿ ಬದುಕಿನಲ್ಲಿ ಬರೆದಿದ್ದು ಕಮ್ಮಿ. ಆದರೆ ಹೆಚ್ಚು ಬರೆದಿದ್ದು ಹೆಡ್‌ಲೈನ್‌ಗಳನ್ನೇ. ಕಳೆದ ಕಾಲು ಶತಮಾನ ಅವಧಿಯಲ್ಲಿ ಜರುಗಿದ ಪ್ರಮುಖ ಘಟನೆಗಳಿಗೆಲ್ಲ ತಮ್ಮ ಹೆಡ್ ಲೈನ್ ಬರಹಗಳಿಂದಲೇ, ಇಂದಿಗೂ ನೆನಪಿನಲ್ಲಿ ಉಳಿಯುವಂತೆ ಕಟ್ಟಿಕೊಟ್ಟ ಅಗ್ಗಳಿಕೆ ಅವರದ್ದು. ವಸಂತ್ ಯಾವುದೇ ಸುದ್ದಿಮನೆಗಾದರೂ ಭೂಷಣಪ್ರಾಯರು. ಪತ್ರಿಕೆಯೊಂದು ಅರಳುವ ಮತ್ತು ಅದನ್ನು ಸಹಜ ವಾಗಿ ಅರಳಿಸುವ ಬಗೆ ಅವರಿಗೆ ಕರಗತವಾಗಿತ್ತು.
ವಸಂತ್ ಸಂಪಾದಕರ ’ಸುದ್ದಿ ಸಂಪಾದಕ’ರಾಗಿದ್ದರು. ಯಾವುದೇ ಪ್ರಮುಖ ಘಟನೆ ಸಂಭವಿಸಿದಾಗ, ನಾಳಿನಪತ್ರಿಕೆ ಹೀಗೆ ಬರಬೇಕು ಎಂದು ಪ್ರಧಾನ ಸಂಪಾದಕನಾದವನು ಮನಸ್ಸಿನಲ್ಲಿ ಸಂಚಿಕೆಯನ್ನು ಕಲ್ಪಿಸಿಕೊಳ್ಳುತ್ತಾನೆ. ಪ್ರಧಾನ ಸಂಪಾದಕನ ಮನಸ್ಸಿನ ಹೆಜ್ಜೆಯನ್ನು ಗ್ರಹಿಸಿ, ಆ ಪ್ರಕಾರ ನಾಳಿನ ಆವೃತ್ತಿಗೆ ಅಣಿಯಾಗುವುದು ಸುದ್ದಿ ಸಂಪಾದಕನ ಜಾಣ್ಮೆ ಮತ್ತು ಕಸುಬುದಾರಿಕೆಯ ಶ್ರೇಷ್ಠತೆ. ಈ ವಿಷಯದಲ್ಲಿ ವಸಂತ್ ಎಡವಿದ್ದೇ ಇಲ್ಲ. ಸಂಪಾ ದಕೀಯ ಸಭೆಯಲ್ಲಿ ಹತ್ತಾರು ಮಂದಿಯೊಂದಿಗೆ ಚರ್ಚಿಸಿದ್ದಕ್ಕಿಂತ ವಿಭಿನ್ನವಾಗಿ, ಊಹಿಸಿದ್ದಕ್ಕಿಂತ ಅದ್ಭುತವಾಗಿ ಮರುದಿನದ ಪತ್ರಿಕೆ ಆಕರ್ಷಕವಾಗಿ ಮೂಡಿ ಬಂದಿರುತ್ತಿತ್ತು. ವಸಂತ್ ಛಾಪು ಎದ್ದು ಕಾಣುತ್ತಿತ್ತು.
ಪತ್ರಿಕೆಯಲ್ಲಿ ಮುದ್ರಿತವಾಗುವ ಅರ್ಧ ವಿರಾಮ, ಪೂರ್ಣವಿರಾಮ, ಪ್ರಶ್ನಾರ್ಥಕ, ಉದ್ಧರಣ ಚಿಹ್ನೆಗಳಿಂದ ಹಿಡಿದು,Zಠ್ಠಿZಸಂಗತಿಗಳ ಮೇಲೆಲ್ಲ ಅವರ ಹದ್ದಿನ ಕಣ್ಣುಗಳು ನೆಟ್ಟಿರುತ್ತಿದ್ದವು. ಒಮ್ಮೆ ಅವರು ಕಣ್ಣಾಡಿಸಿದರೆ, ಮತ್ತೊಮ್ಮೆ ಯಾರೂ ನೋಡಬೇಕಿರಲಿಲ್ಲ, ನೇರವಾಗಿ ಮುದ್ರಣಕ್ಕೆ ಕಳಿಸಬಹುದಾಗಿತ್ತು.
ಡೆಡ್‌ಲೈನ್ ಮೀರುತ್ತಿದೆ ಎಂದು ಸಹೋದ್ಯೋಗಿಗಳು ಕಿರುಚಿದರೂ, ಪುಟದ ಮೇಲೆ ಒಂದು ಸಲವಾದರೂಕಣ್ಣಾಡಿಸದೇ ಅವರು ಮುದ್ರಣಕ್ಕೆ ಕಳಿಸು ತ್ತಿರಲಿಲ್ಲ. ಅವರಿಗೆ ಒಪ್ಪಿಸಿದ ಕೆಲಸವನ್ನು ಮತ್ತೊಬ್ಬರು ನೋಡ ಬೇಕಾದ, ಕೇಳಿ ವಿಚಾರಿಸಬೇಕಾದ, ಆಗಾಗ ನೆನಪಿಸಬೇಕಾದ ಪ್ರಮೇಯವೇ ಬರುತ್ತಿರಲಿಲ್ಲ. ಅವರ ಶ್ರದ್ಧೆ, ಅಚ್ಚುಕಟ್ಟುತನವನ್ನು ಪರೀಕ್ಷಿಸಬೇಕಾದ ಪ್ರಸಂಗ ನನಗೆ ಒಮ್ಮೆಯೂ ಬರಲಿಲ್ಲ. ವಸಂತ್ ವೃತ್ತಿಬದ್ಧತೆಅಂಥದ್ದು.
ವಸಂತ್ ಹೆಡ್ ಲೈನ್ ಬರೆಯುವುದರಲ್ಲಿ ನಿಸ್ಸೀಮರು. ಸುದ್ದಿ ಬ್ರೇಕ್ ಆಗುತ್ತಿದ್ದಂತೆ, ಯಾವ ಹೆಡ್ ಲೈನ್ ಬರೆಯಬೇಕು ಎಂದು ಯೋಚಿಸಲಾರಂಭಿಸುತ್ತಿದ್ದರು. ಒಂದೇ ಸುದ್ದಿಗೆ ಹತ್ತು ಹೆಡ್ ಲೈನ್ ಬರೆದು ನನಗೆ ಹಿಡಿಯುತ್ತಿದ್ದರು. ಆ ಪೈಕಿ ಎಲ್ಲವೂ ಚೆನ್ನಾಗಿಯೇ ಇರುತ್ತಿದ್ದವು. ಒಮ್ಮೆ ಒಂದೇ ಸುದ್ದಿಗೆ ಪ್ರಯೋಗಾರ್ಥ ವಾಗಿ, ಎಂಟು ಹೆಡ್ ಲೈನ್‌ಗಳನ್ನೂ ಪ್ರಕಟಿಸಿದ್ದೆವು. ಹುಲಿ ಸಂರಕ್ಷಣೆಯಲ್ಲಿ ಕರ್ನಾಟಕ ಮೊದಲ ಸ್ಥಾನ ಪಡೆದ ಸುದ್ದಿಗೆ, ’ಸಂರಕ್ಷಣೆಯಲ್ಲಿ ಕರ್ನಾಟಕವೇ ಹುಲಿ’, ಬ್ರಿಯಾನ್ ಲಾರ ೪೦೦ ರನ್ ಹೊಡೆದಾಗ, ‘ದಾಖಲೆ ಇಲ್ಲದೇ ಇರ’ಲಾರ’, ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸುವುದು ಕಷ್ಟ ಎಂಬ ಸುದ್ದಿಗೆ, ’ಭಾಗ್ಯದ ಲಕ್ಷ್ಮೀ ಭಾರಮ್ಮ’, ಚುನಾ ವಣೆಯ ಅಂಕಿ-ಅಂಶಗಳ ಕುರಿತ ಕಿರು ಅಂಕಣಕ್ಕೆ ’ಮತಮ್ಯಾಟಿಕ್ಸ್’, ಹರಭಜನ್ ಸಿಂಗ್ (ಬಜ್ಜಿ) ಶ್ರೀಶಾಂತ್ ಕೆನ್ನೆಗೆ ಬಾರಿಸಿದಾಗ, ‘ಶ್ರೀಶಾಂತ್ ಕೆನ್ನೆಗೆ ಬಿಸಿ ಬಜ್ಜಿ’ … ಇವೆಲ್ಲ ಟಿಪಿಕಲ್ ವಸಂತ ನಾಡಿಗೇರ್ ಶೀರ್ಷಿಕೆಗಳು.
ಕೆಲವೊಮ್ಮೆ ನಾನು ಪುಟಗಟ್ಟಲೆ ಬರೆದು, ಒಂದು ಸಾಲಿನ ಹೆಡ್ ಲೈನ್‌ಗಾಗಿ ಯೋಚಿಸಿ, ಕೊನೆಗೂ ಅದು ಹೊಳೆಯದೇ, ಕಾಪಿಯನ್ನು ವಸಂತ್ ಮುಂದೆ ಹಿಡಿದಿ ದ್ದುಂಟು. ಅಂಥ ಸಂದರ್ಭಗಳಲ್ಲಿ ಅವರು ನನ್ನನ್ನು ನಿರಾಸೆಗೊಳಿಸಿದ್ದೇ ಇಲ್ಲ. ವಸಂತ್ ವಯಸ್ಸಿನಲ್ಲಿ ನನಗಿಂತ ಎರಡು ವರ್ಷ ಹಿರಿಯರು. ಧಾರವಾಡದ ಕರ್ನಾಟಕ ವಿಶ್ವ ವಿದ್ಯಾ ಲಯದಲ್ಲಿ ಅವರು ಸ್ನಾತಕೋತ್ತರ ಅಂತಿಮ ವರ್ಷದಲ್ಲಿದ್ದಾಗಿನಿಂದ (೧೯೮೭ರಲ್ಲಿ) ನನಗೆ ಅವರ ಪರಿಚಯ ಮತ್ತು ಒಡನಾಟ. ನಾನು ಬೆಂಗಳೂರಿನಲ್ಲಿ ‘ಸಂಯುಕ್ತ ಕರ್ನಾಟಕ’ ಸೇರುವ ಹೊತ್ತಿಗೆ, ಅವರು ಅದೇ ಪತ್ರಿಕೆಯಲ್ಲಿ ಎರಡು ವರ್ಷ ಕೆಲಸ ಮಾಡಿ, ‘ಕನ್ನಡಪ್ರಭ’ ಸೇರಿದ್ದರು.
ನಾನು ‘ಕನ್ನಡ ಪ್ರಭ’ ಸೇರುವ ಹೊತ್ತಿಗೆ ಅವರು ಅಲ್ಲಿ ಹಿರಿಯ ಉಪಸಂಪಾದಕರಾಗಿ, ನಾನು ಬರೆದ ಕಾಪಿಗಳನ್ನು ತಿದ್ದುತ್ತಿದ್ದರು. ನಂತರ ನಾನು ‘ವಿಜಯ ಕರ್ನಾಟಕ’ ಪತ್ರಿಕೆಗೆ ಪ್ರಧಾನ ಸಂಪಾದಕನಾಗಿ ಸೇರಿಕೊಳ್ಳುವ ಹೊತ್ತಿಗೆ ಅವರು ಡೆಪ್ಯುಟಿ ನ್ಯೂಸ್ ಎಡಿಟರ್ ಆಗಿದ್ದರು. ಸುದ್ದಿ ಸಂಪಾದಕ ಹುದ್ದೆ ಖಾಲಿಯಿತ್ತು. ವಸಂತ್ ಅವರಿಗೆ ಬಡ್ತಿ ನೀಡಿ, ಆ ಹುದ್ದೆ ಭರ್ತಿ ಮಾಡಿದೆ.
ಐಎಎಸ್ ಮತ್ತು ಪೊಲೀಸ್ ಇಲಾಖೆಗಳಲ್ಲಿದ್ದಂತೆ, ಪತ್ರಕರ್ತರಲ್ಲೂ ಸೀನಿಯರ್ – ಜೂನಿಯರ್ ಭೇದ-ಭಾವ ಇದ್ದ ದಿನಗಳವು. ’ವಿಜಯ ಕರ್ನಾಟಕ’ಕ್ಕೆ ನಾನು ಸೇರಿಕೊಂಡ ಆರಂಭದ ಒಂದು ದಿನ ವಸಂತ್‌ಗೆ, ‘ನಿಮಗಿಂತ ಜೂನಿಯರ್ ಆದ ನನ್ನನ್ನು ಸಂಪಾದಕನನ್ನಾಗಿ ಒಪ್ಪಿಕೊಂಡು ಜತೆಗೆ ಕೆಲಸ ಮಾಡಲು ನಿಮಗೆ ಯಾವ ಅಭ್ಯಂತರ, ಮುಜುಗರ ಇಲ್ಲ ತಾನೇ?’ ಎಂದು ಕೇಳಿದ್ದೆ. ಇದಕ್ಕೆ ಕಾರಣವೂ ಇತ್ತು. ಕೆಲ ದಿನಗಳ ಹಿಂದಷ್ಟೇ, ‘ಪ್ರಜಾ ವಾಣಿ’ಯಲ್ಲಿ ಸುಮಾರು ಮೂರು ದಶಕಗಳ ಕಾಲ ಕೆಲಸ ನಿರ್ವಹಿಸಿ, ನಾನು ಬರುವ ಮುನ್ನವೇ ‘ವಿಜಯ ಕರ್ನಾಟಕ ಸೇರಿದ್ದ ಹಿರಿಯ ಪತ್ರಕರ್ತೆ ಯೊಬ್ಬರು, ನಾನು ಬರುತ್ತಿದ್ದಂತೆ, ‘ನನಗಿಂತ ಕಿರಿಯನೊಂದಿಗೆ ಕೆಲಸ ಮಾಡುವುದಿಲ್ಲ’ ಎಂದು ರಾಜೀನಾಮೆ ಪತ್ರ ಬಿಸಾಡಿ ಹೋಗಿದ್ದರು.
‘ವಯಸ್ಸಿನಲ್ಲಿ ನೀವು ನನಗಿಂತ ಚಿಕ್ಕವರಿರ ಬಹುದು, ಅನುಭವದಲ್ಲಿ ಅಲ್ಲ. ನೀವೇ ನನ್ನ ಸಂಪಾದಕರು’ಎಂದು ಆಗ ವಸಂತ್ ಹೇಳಿದ್ದರು. ಮುಂದಿನ ಹತ್ತು ವರ್ಷಗಳ ಕಾಲ ಅವರು ನನ್ನೊಂದಿಗೆ ಆ ಪತ್ರಿಕೆಯಲ್ಲಿಜತೆಜತೆಯಾಗಿ ಅದೇ ವಿಶ್ವಾಸದಲ್ಲಿ ನಡೆದರು. ಆ ಅವಧಿಯಲ್ಲಿ ನಾವಿ ಬ್ಬರೂ ನಮ್ಮ-ನಮ್ಮ ಹೆಂಡತಿ-ಮಕ್ಕಳ ಜತೆ ಕಳೆದಿದ್ದಕ್ಕಿಂತ ಹೆಚ್ಚು ಸಮಯವನ್ನು ‘ವಿಕ’ ಸುದ್ದಿಮನೆಯಲ್ಲಿ ಕಳೆದಿದ್ದನ್ನು ಮರೆಯುವಂತೆಯೇಇಲ್ಲ. ನನಗೆ ಅಮೆರಿಕದ ಸಂಸ್ಥೆಯೊಂದು ಆಮಂತ್ರಣ ನೀಡಿದಾಗ, ನಾನು ವಸಂತ್ ಅವರನ್ನೂ ಜತೆಯಲ್ಲಿಹದಿ ನೈದು ದಿನಗಳ ಕಾಲ ಕರೆದುಕೊಂಡು ಹೋಗಿದ್ದೆ.
ಅದು ಅವರಿಗೆ ಮೊದಲ ವಿದೇಶ ಪ್ರವಾಸವಾಗಿತ್ತು. ‘ವಿಜಯ ಕರ್ನಾಟಕ’ದಲ್ಲಿ ನನ್ನ ಜತೆಯಲ್ಲಿದ್ದವರೆಲ್ಲಬರೆಯುತ್ತಿದ್ದರು. ಆದರೆ ವಸಂತ್‌ಗೆ ಬೇರೆ ಯವರು ಬರೆದಿದ್ದನ್ನು ತಿದ್ದುವುದೇ ಕಾಯಕವಾಗಿತ್ತು. ಒಂದುದಿನ ಅವರನ್ನು ಕರೆದು, ಲತಾ ಮಂಗೇಶ್ಕರ್ ಕುರಿತು ನಾಲ್ಕು ಪುಸ್ತಕಗಳನ್ನು ಕೊಟ್ಟು, ಇವನ್ನು ಪೂರ್ತಿ ಓದಿ,ಆ ‘ಸ್ವರ ಸಾಮ್ರಾಜ್ಞಿ’ಯ ಕುರಿತು ಅರವತ್ತು ಕಂತುಗಳ ಧಾರಾವಾಹಿ ಬರೆದುಕೊಡಿ ಎಂದು ಹೇಳಿದೆ. ಅದಕ್ಕೆವಸಂತ್ ಮಾನಸಿಕವಾಗಿ ಸಿದ್ಧರಿರಲಿಲ್ಲ. ನಾನು ಎಡಬಿಡದೇ ಆರು ತಿಂಗಳು ಹಿಂದೆ ಬಿದ್ದೆ.
ನಂತರ ಅವರು ಆ ಧಾರಾವಾಹಿಯನ್ನು ಸೊಗಸಾಗಿ ನಿರೂಪಿಸಿ, ತಾವೊಬ್ಬ ಉತ್ತಮ ಬರಹಗಾರ ಎಂಬುದನ್ನೂ ಸಾಬೀತುಪಡಿಸಿದ್ದರು. ನಂತರ ಅದನ್ನು ಪುಸ್ತಕವಾಗಿ ಪ್ರಕಟಿಸಿ, ಮತ್ತೊಬ್ಬ ‘ಸ್ವರ ಸಾಮ್ರಾಟ’ ಎಸ್.ಪಿ.ಬಾಲಸುಬ್ರಮಣ್ಯ ಅವರಿಂದ ಬಿಡುಗಡೆ ಮಾಡಿಸಿದ್ದನ್ನು ಅನೇಕ ಸಲ ವಸಂತ್ ಅಭಿಮಾನ ಮತ್ತು ಕೃತಜ್ಞತೆಯಿಂದನೆನಪಿಸಿಕೊಂಡಿದ್ದುಂಟು. ನಿಸ್ಸಂದೇಹವಾಗಿ, ‘ವಿಜಯ ಕರ್ನಾಟಕ’ದ ಯಶಸ್ಸಿನಲ್ಲಿ ವಸಂತ್ ಗೂ ಪಾಲುಸಿಗಬೇಕು, ಕ್ರೆಡಿಟ್ಟು ಕೊಡಬೇಕು. ನಾನು ‘ವಿಶ್ವವಾಣಿ’ ಪತ್ರಿಕೆಯನ್ನು ಆರಂಭಿಸಿ, ಐದು ವರ್ಷಗಳ ಬಳಿಕ, ನಾವಿಬ್ಬರೂ ಮತ್ತೊಮ್ಮೆ ಜತೆಯಾಗುತ್ತೇವೆ ಎಂದುಕೊಂಡಿರಲಿಲ್ಲ. ಆ ವೇಳೆಗೆ ಅವರೂ ‘ವಿಜಯ ಕರ್ನಾಟಕ’ ಬಿಟ್ಟಿದ್ದರು. ನಾನು ‘ವಿಶ್ವವಾಣಿ’ಗೆ ಅವರನ್ನು ‘ಕಾರ್ಯನಿರ್ವಾಹಕ ಸಂಪಾದಕ’ ಹೊಣೆಗಾರಿಕೆಯನ್ನು ವಹಿಸಿದೆ.
ವಸಂತ್ ಅವರ ಕಾರ್ಯವೈಖರಿ, ಬದ್ಧತೆಯಲ್ಲಿ ಗುಲಗುಂಜಿಯಷ್ಟೂ ವ್ಯತ್ಯಾಸವಾಗಿರಲಿಲ್ಲ. ಆದರೆ ಕೊನೆಕೊನೆಗೆ ಅವರಲ್ಲಿ ಬಳಲಿಕೆ ಕಾಣುತ್ತಿತ್ತು. ಒಂದು ದಿನ ನನ್ನನ್ನು ಭೇಟಿಯಾಗಿ, ‘ನನ್ನ ಆರೋಗ್ಯದಲ್ಲಿ ಏರುಪೇರಾಗಿದೆ.ಸಕ್ಕರೆ ಕಾಯಿಲೆ ನನ್ನನ್ನು ಕಾಡುತ್ತಿದೆ. ಕಣ್ಣಿನ ಸಮಸ್ಯೆ ಇದೆ. ಹೃದಯ ಪರೀಕ್ಷೆ ಮಾಡಿಸಿಕೊಳ್ಳಬೇಕಿದೆ. ಮೂರು- ನಾಲ್ಕು ತಿಂಗಳಲ್ಲಿ ಸಂಪೂರ್ಣ ಚೆಕ್ ಅಪ್ ಮಾಡಿಸಿಕೊಂಡು, ಆರೋಗ್ಯ ಸುಧಾರಿಸಿಕೊಂಡು ವಾಪಸ್ ಬರುತ್ತೇನೆ. ನನಗೆ ನೀವು ರಜೆ ನೀಡಬೇಕು’ ಎಂದು ಹೇಳಿದರು. ನಾನು ಒಲ್ಲದ ಮನಸ್ಸಿನಿಂದ ಒಪ್ಪಿದೆ.
ಅದಾಗಿ ಆರು ತಿಂಗಳ ಬಳಿಕ ಒಂದು ದಿನ ನನಗೆ ಫೋನ್ ಮಾಡಿ, ‘ನಿಮ್ಮ ಜತೆಗೆ ಕೆಲಸ ಮಾಡುವ ವೇಗ ಮತ್ತು ಓಘ ನನ್ನಲ್ಲಿ ಈಗ ಇಲ್ಲ. ನಾನು ಸಂಯುಕ್ತ ಕರ್ನಾಟಕ ಸೇರುತ್ತೇನೆ. ನಿಮ್ಮ ಒಪ್ಪಿಗೆಯಿದೆ ಎಂದು ಭಾವಿಸುವೆ’ ಎಂದರು. ನಾನು ಆಗಲೂ ಮರು ಮಾತಾಡಲಿಲ್ಲ. ತಮ್ಮಲ್ಲಿ ಕಳೆದು ಹೋದ ಏನನ್ನೋ ವಸಂತ್ ಹುಡುಕುತ್ತಿದ್ದಾರೆ ಎನಿಸು ತ್ತಿತ್ತು. ಐದು ದಿನಗಳ ಹಿಂದಷ್ಟೇ ಅವರು ತಮ್ಮ ಅನಾರೋಗ್ಯದ ತೀವ್ರತೆಯನ್ನು ನನಗೆ ವಾಟ್ಸಾಪ್‌ನಲ್ಲಿ ಸವಿವರವಾಗಿ ನಿವೇದಿಸಿ ಕೊಂಡಾಗಲೇ ಪರಿಸ್ಥಿತಿ ಕೈಮೀರಿ ಹೋಗುತ್ತಿದೆ ಎಂಬುದರ ಸಣ್ಣ ಸುಳಿವು ಸಿಕ್ಕಿದ್ದು.
ಮೂಲತಃ ಸಂಕೋಚದ ಸ್ವಭಾವದವರಾದ ವಸಂತ್, ತಮ್ಮ ಖಾಸಗಿ ವಿಷಯಗಳನ್ನು ಯಾರ ಮುಂದೆಯೂ ಹೇಳಿ ಕೊಂಡಿದ್ದು ಇಲ್ಲವೇ ಇಲ್ಲ. ತಮ್ಮ ಅನಾರೋಗ್ಯವನ್ನೂ ಬಚ್ಚಿಟ್ಟುಬಿಟ್ಟರು. ಸುಮಾರು ಹದಿಮೂರು ವರ್ಷಗಳ ಕಾಲ ಒಟ್ಟಿಗೆ ಕೆಲಸ ಮಾಡಿದ ಸಹೋದ್ಯೋಗಿ, ಮೂವತ್ತೇಳು ವರ್ಷಗಳ ಆಪ್ತ ಸ್ನೇಹಿತ ಈ ರೀತಿ ಸುಮ್ಮನೆ ತಿರುಗಿ ಬಾರದ ಲೋಕಕ್ಕೆ ಎದ್ದು ಹೋಗುವ ನೋವನ್ನು, ಅವರೊಂದಿಗೆ ಕಳೆದ ಸವಿನೆನಪುಗಳೂ ಶಮನ ಮಾಡಲಾರವು. ವಸಂತ್, ನಿಮ್ಮ ಕುರಿತ ಈ ಬರಹಕ್ಕೆ ನೀವೇ ಹೆಡ್ ಲೈನ್ ಹಾಕಿಕೊಳ್ಳಿ!
ಒಮ್ಮೆ ಪತ್ರಿಕೆಯ ಒಂದು ಸಮಾರಂಭದಲ್ಲಿ ನಾನು, ’ಸುದ್ದಿಮನೆಯಲ್ಲಿ ವಸಂತ ನಾಡಿಗೇರರಂಥ ನಾಲ್ಕು ಕರ್ಮಯೋಗಿಗಳಿದ್ದರೆ, ಯಾರು ಬೇಕಾದರೂ ಸಂಪಾದಕರಾಗಬಹುದು’ ಎಂದು ಹೇಳಿದ್ದೆ. ಆ ಮಾತಿನಲ್ಲಿ ಉತ್ಪ್ರೇಕ್ಷೆಇರಲಿಲ್ಲ. ಪತ್ರಿಕೆಯ ಎಲ್ಲ ವಿಭಾಗಗಳ ನಡುವೆ ಸಮನ್ವಯ ಮೂಡಿಸುವ ಸೊಗಸುಗಾರಿಕೆ ಅವರಲ್ಲಿತ್ತು. ವಸಂತ್ ಅವರ ಮೇಲೆ ಒಂದು ವಾರ ನಿರುಮ್ಮಳವಾಗಿ ಪತ್ರಿಕೆಯನ್ನು ಬಿಟ್ಟು ಹೋಗುವಷ್ಟು ಅವರನ್ನು ನಂಬಬಹುದಾಗಿತ್ತುಮತ್ತು ಅವರ ಮೇಲೆ ಆ ಭಾರವನ್ನು ಹಾಕಬಹುದಾಗಿತ್ತು.
ಪತ್ರಿಕೆಯ ಸುದ್ದಿ ಸಂಪಾದಕ (ಘೆಛಿಡಿ ಉbಜಿಠಿಟ್ಟ) ರಾದವರು, ಸಂಪಾದಕರ ಜತೆಯೇ ಹೆಜ್ಜೆ ಹಾಕಬೇಕು. ಅವರು ಬಾಯಿಬಿಟ್ಟು ಹೇಳದೇ ಇರುವುದನ್ನು ಗ್ರಹಿಸಿ, ಹೇಳಿದ್ದನ್ನು ಸರಿಯಾಗಿ ಅರ್ಥ ಮಾಡಿಕೊಂಡು, ಪತ್ರಿಕೆಯ ಪುಟಗಳಲ್ಲಿ ಸಾಕಾರಗೊಳಿಸುವುದು ಸಣ್ಣ ಸಂಗತಿಯಲ್ಲ. ಆದರ್ಶ ಸುದ್ದಿಮನೆಯ ಲಕ್ಷಣಗಳಲ್ಲಿ ಸಂಪಾದಕ ಮತ್ತು ಸುದ್ದಿ ಸಂಪಾದಕನ ಮಧ್ಯೆ ಏರ್ಪಡುವ ಉತ್ತಮ ಕೆಮಿಸ್ಟ್ರಿಯೂ ಒಂದು. ನನ್ನ ಮತ್ತು ವಸಂತ್ ಮಧ್ಯೆ ಅಂಥ ಅದ್ಭುತ ತಾಳ- ಮೇಳವಿತ್ತು. ಒಂದು ಸಲವೂ ನಮ್ಮಿಬ್ಬರ ಮಧ್ಯೆ ಭಿನ್ನಾಭಿಪ್ರಾಯ, ತಪ್ಪು ಕಲ್ಪನೆ, ಏರಿಳಿತಮೂಡಿದ್ದು ಇಲ್ಲವೇ ಇಲ್ಲ. ನಾನೂ ಸಹ ಅವರನ್ನು ಎಂದೂ ಲಘುವಾಗಿ ನಡೆಸಿಕೊಳ್ಳಲಿಲ್ಲ.
ನನಗೆ ಇವೆಲ್ಲಕ್ಕಿಂತ ಮುಖ್ಯವಾಗಿ ವಸಂತ್ ವ್ಯಕ್ತಿತ್ವದಲ್ಲಿ ಕಾಣುವ ಇನ್ನೊಂದು ಪ್ರಮುಖ ಸಂಗತಿ ಅಂದರೆ, ಪತ್ರಿಕೆಯ ನಿತ್ಯ ಕರ್ಮದ ಜತೆಗೆ ತಮ್ಮ ಸರೀಕರನ್ನು, ಕಿರಿಯರನ್ನು ಮತ್ತು ಒಂದೆರಡು ತಲೆಮಾರಿನ ಪತ್ರಕರ್ತರನ್ನು ತಿದ್ದಿದ, ಬರೆಯಿಸಿದ, ಭಾಷೆ ಕಲಿಸಿದ, ಕಸುಬನ್ನು ಹೇಳಿಕೊಟ್ಟ ಗುರು ಅಥವಾ ದೊಡ್ಡಣ್ಣನ ಜವಾಬ್ದಾರಿಯನ್ನು ಅತ್ಯಂತ ನಿಸ್ಪೃಹರಾಗಿ, ನಿರಪೇಕ್ಷಿತರಾಗಿ ನಿರ್ವಹಿಸಿದ್ದು. ಇದು ಸುದ್ದಿ ಮನೆಯ ಹಿರಿಯರು ಮಾಡಲೇಬೇಕಾದ,ಮನೆಯ ಅಜ್ಜ ಮಾಡುವ ಕೆಲಸಕ್ಕೆ ಸಮನಾದ ಜವಾಬ್ದಾರಿ. ಹೀಗಾಗಿ ಇಂದು ಕರ್ನಾಟಕದ ಪತ್ರಿಕೆ-ಟಿವಿ ಚಾನೆಲ್ಲು ಗಳ ಪ್ರತಿ ಸುದ್ದಿಮನೆ ಯಲ್ಲೂ ವಸಂತ್ ಅವರಿಂದ ‘ಪಾಠ’ ಹೇಳಿಸಿಕೊಂಡ ಹಲವಾರು ಪತ್ರಕರ್ತರು ಸಿಗುತ್ತಾರೆ.