ರಂಗಕರ್ಮಿ ಕಟ್ಟೆ ರಾಮಚಂದ್ರ ವಿಧಿವಶ
ಬೆಂಗಳೂರು:ಹಿರಿಯ ನಿರ್ದೇಶಕ ಹಾಗೂ ರಂಗಕರ್ಮಿ ಕಟ್ಟೆ ರಾಮಚಂದ್ರ ಶುಕ್ರವಾರ ವಿಧಿವಶರಾಗಿದ್ದಾರೆ.
ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕನಾಗಿ, ನಟನಾಗಿ, ನಿರ್ಮಾಪಕನಾಗಿ ಮತ್ತು ರಂಗಕರ್ಮಿಯಾಗಿ ಜನಮಾನಸ ದಲ್ಲಿ ಗುರುತಿಸಿಕೊಂಡಿದ್ದ ಕಟ್ಟೆ ಅವರಿಗೆ 74 ವರ್ಷ ವಯಸ್ಸಾಗಿತ್ತು.
ಹಲವಾರು ವರ್ಷಗಳಿಂದ ವಯೋಸಹಜ ಕಾಯಲೆಯಿಂದ ಬಳಲುತ್ತಿದ್ದ ಅವರಿಗೆ ಹೃದಯಾಘಾತವಾಗಿದೆ‌. ಕೂಡಲೇ ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೇ ಒಂದು ಗಂಟೆ ಬಳಿಕ ವಿಧಿವಶರಾಗಿ ದ್ದಾರೆ.
ರಾಮಚಂದ್ರ ನಿರ್ದೇಶನದ ‘ಅರಿವು’ ಎಂಬ ಸಿನಿಮಾಕ್ಕೆ ರಾಷ್ಟ್ರ ಪ್ರಶಸ್ತಿ ಹಾಗೂ ರಾಜ್ಯ ಪ್ರಶಸ್ತಿ ಲಭಿಸಿತ್ತು. ಇದರ ಜತೆಗೆ ‘ಮಹಾಲಕ್ಷ್ಮಿ’ ಎಂಬ ಸಿನಿಮಾ ನಿರ್ಮಾಣ ಮಾಡಿದ್ದರು. ನಿರ್ದೇಶನ ಹಾಗೂ ನಿರ್ಮಾಣದ ಜತೆಗೆ ಸಾಕಷ್ಟು ಸಿನಿಮಾಗಳಲ್ಲಿ ಇವರು ಅಭಿನಯಿಸಿದ್ದರು. ಸಾಹಸ ಸಿಂಹ ವಿಷ್ಣುವರ್ಧನ್ ನಟನೆಯ ‘ವೈಶಾಖದ ದಿನಗಳು’ ಎಂಬ ಚಿತ್ರಕ್ಕೆ ಆಯಕ್ಷನ್ ಕಟ್ ಹೇಳಿದ್ದರು. ಸಿನಿಮಾ ಅಲ್ಲದೇ ಸಾಕಷ್ಟು ಕಿರುಚಿತ್ರ ಹಾಗೂ ಕಿರುತೆರೆ ಧಾರಾವಾಹಿಗಳನ್ನ ನಿರ್ದೇಶನ ಮಾಡಿದ್ದಾರೆ.
ಇವರ ಪತ್ನಿ ಸುಧಾಮಣಿ ಕಳೆದ ಭಾನುವಾರ ನಿಧನರಾಗಿದ್ದರು. ಬೆಂಗಳೂರಿನ ಚಾಮರಾಜ ಪೇಟೆ ವಿದ್ಯುತ್ ಚಿತಾಗಾರದಲ್ಲಿ ಅವರ ಅಂತ್ಯ ಸಂಸ್ಕಾರ ಮಾಡಲು ಕುಟುಂಬ ವರ್ಗ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.