ಗಡ್ಡಧಾರಿಗಳ ಅಪಹಾಸ್ಯ: ಭಾರ್ತಿ ಸಿಂಗ್‌ ವಿರುದ್ಧ ಎಫ್‌ಐಆರ್‌
ಜಲಂಧರ್‌:ಗಡ್ಡಧಾರಿಗಳ ಕುರಿತು ಅಪಹಾಸ್ಯ ಮಾಡಿದ ಆರೋಪದ ಮೇಲೆ ನಟಿ ಭಾರ್ತಿ ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.
‘ರವಿದಾಸ್‌ ಟೈಗರ್‌ ಫೋರ್ಸ್‌’ನ ಮುಖ್ಯಸ್ಥ ಜಸ್ಸಿ ತಲ್ಲಾನ್ ಅವರು ಜಲಂಧರ್‌ನ ಅದಂಪುರ ಪೊಲೀಸ್‌ ಠಾಣೆಯಲ್ಲಿ ನೀಡಿರುವ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾಗಿದೆ.
ಭಾರ್ತಿ ಅವರು ಹಳೇ ವಿಡಿಯೊವೊಂದರಲ್ಲಿ ಸಿಖ್ಖರ ಮೀಸೆ ಮತ್ತು ಗಡ್ಡದ ಕುರಿತು ಅಪಹಾಸ್ಯ ಮಾಡಿದ್ದಾರೆ. ಆ ಮೂಲಕ ಸಿಖ್‌ ಸಮುದಾಯದವರ ಭಾವನೆಗಳಿಗೆ ಧಕ್ಕೆ ಉಂಟುಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅಮೃತಸರದಲ್ಲಿರುವ ‘ಶಿರೋಮಣಿ ಗುರುದ್ವಾರ ಪರ್ಬಂಧಕ್‌ ಸಮಿತಿ’ಯೂ ದೂರು ದಾಖಲಿಸಿದೆ ಎಂದು ವರದಿಯಾಗಿದೆ.
ವಿವಾದ ಸೃಷ್ಟಿ ಬಳಿಕ ಭಾರ್ತಿ ಅವರ ಹಳೇ ವಿಡಿಯೊ ವೈರಲ್‌ ಆಗಿದೆ. ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಭಾರ್ತಿ, ಕ್ಷಮೆ ಯಾಚಿಸಿ ಮತ್ತೊಂದು ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಯಾವುದೇ ಸಮುದಾಯದವರಿಗೆ ನೋವುಂಟು ಮಾಡುವುದು ತಮ್ಮ ಉದ್ದೇಶವಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.