ಡೇರ್ ಡೆವಿಲ್ ಮುಸ್ತಫಾ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ
ಬೆಂಗಳೂರು:ಡೇರ್ ಡೆವಿಲ್ ಮುಸ್ತಫಾ ಚಲನಚಿತ್ರಕ್ಕೆ ಕರ್ನಾಟಕ ಸರ್ಕಾರ ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಡೇರ್ ಡೆವಿಲ್ ಮುಸ್ತಫಾ ಚಿತ್ರತಂಡ ತೆರಿಗೆ ವಿನಾಯಿತಿ ನೀಡು ವಂತೆ, ಮತ್ತು ಸಿನಿಮಾ ವೀಕ್ಷಿಸುವಂತೆ ಮಾಡಿಕೊಂಡಿತ್ತು.
ಶಶಾಂಕ್ ಸೋಗಾಲ ನಿರ್ದೇಶನದ ಹೊಸ ಹುಡುಗರ ತಂಡದ ಡೇರ್ ಡೆವಿಲ್ ಮುಸ್ತಫಾ’ ಚಿತ್ರವು ಮೇ 19 ರಂದು ತೆರೆಗೆ ಬಂದಿದ್ದು, ಭರ್ಜರಿ ಪ್ರದರ್ಶನ ಕಾಣುತ್ತಿದೆ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚಿತ್ರದ ಆಶಯ ಏನು, ತೆರಿಗೆ ವಿನಾಯಿತಿ ಏಕೆ ಬೇಕು ಎಂದು ಮನವರಿಕೆ ಮಾಡಿಕೊಡಲಾಗಿತ್ತು.
ಈಗಾಗಲೇ ರಾಜ್ಯಾದ್ಯಂತ ಡೇರ್ ಡೆವಿಲ್ ಮುಸ್ತಫಾ ಚಿತ್ರದ ಟಿಕೆಟ್ ಬೆಲೆಯನ್ನು ಕಡಿಮೆ ಮಾಡಲಾಗಿದೆ. 99 ರೂಪಾಯಿಗೆ ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಬಹುದಾಗಿದೆ. ತೆರಿಗೆ ವಿನಾಯಿತಿ ಸಿಕ್ಕರೆ ಇನ್ನಷ್ಟು ಹೆಚ್ಚಿನ ಜನಕ್ಕೆ ಚಿತ್ರವನ್ನು ತಲುಪಿಸಬಹುದು ಎಂದು ಚಿತ್ರ ತಂಡ ಹೇಳಿಕೊಂಡಿದೆ.
ಖ್ಯಾತ ಬರಹಗಾರ ಪೂರ್ಣಚಂದ್ರ ತೇಜಸ್ವಿ ಅವರ ಕತೆಯನ್ನು ಆಧರಿಸಿ ಈ ಚಿತ್ರವನ್ನು ತಯಾರಿಸಲಾಗಿದೆ. ಚಿತ್ರದ ನಿರ್ದೇಶಕ ಶಶಾಂಕ್ ಸೋಗಾಲ ಅವರು ಅಚ್ಚುಕಟ್ಟಾಗಿ ಚಿತ್ರವನ್ನು ತೆರೆಗೆ ತಂದಿದ್ದು, ಚಿತ್ರ ನೋಡಿದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕಾಶ್ಮೀರ ಫೈಲ್ಸ್ ಚಲನಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿತ್ತು. ಬಿಜೆಪಿ ಅಧಿಕಾರದಲ್ಲಿರುವ ಬಹುತೇಕ ರಾಜ್ಯಗಳಲ್ಲಿ ಕಾಶ್ಮೀರ ಫೈಲ್ಸ್ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿದ್ದರೆ, ದಿ ಕೇರಳ ಸ್ಟೋರಿ ಸಿನಿಮಾಗೂ ಹಲವು ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ಸಿಕ್ಕಿದೆ.